ಆದೀತೆ ನವ ಉದಯ ??

ಆದೀತೆ ನವ ಉದಯ ??

ಕವನ

ಕೆಸರ ರಾಡಿಯ ರಾಜಕೀಯದಾಟದಿ ಪೈಸೆ
ಯೊಸರ ಮೂಲವ ಕಂಡು ಹಿಡಿವವನಿಗಾಸೆ
ಮೊಸರ ಪಾತ್ರದಿ ಹಾಲ ಹುಡುಕೊದೇತಕೆ  ಕೂಸೆ
ಹೊಸವರುಷ  ಬರುತಿಹುದು ಮರೆ ಸಮಸ್ಯೆ

ಅವನಿವನ ಇವನವನ ಬೈದು  ಭಂಗಿಸಿದರೂ
ಅವನಿಬಯಕೆಯಲಿ ಮಾತ್ರೊ೦ದೆಲ್ಲರೂ
ಅವನಿಜೆಯ ಕರಪಿಡಿದ ದೇವ ರಘುರಾಯರೀ
ಗವನತಿಯ ನೋಡಿ ಕಣ್ ಕಣ್ ಬಿಟ್ಟರೂ

ನವಭಾರತದ ಕನಸು ನನಸಾಗುವದು ಸುಳ್ಳು
ನವವಿಧದ ನಾಯಕರ ಮಾತು ಪೊಳ್ಳು
ನವನವೀನತೆಯ ಕಾಂಚನವ ದಕ್ಕಿಸೊ ಮರುಳು  
ನವವರುಷ ಬಂದರೂ ತಲೆಯೆ ಹಾಳು

ಕಳೆ  ತುಂಬಿ ಮಂಕಾಗಿ ಧರಣಿದೇವಿಯ ಕಾಂತಿ
ಮಳೆ ಬಂದು ಕೊಳೆ ಕಳೆದರಾದೀತು ಶಾಂತಿ
ಇಳೆಯ ಪಾಲಕರಿ೦ಗೆ ಧನಸ೦ಗ್ರಹದ  ಭ್ರಾ೦ತಿ
ಬೆಳೆದು ನಿಲ್ಲುವ ಮೊದಲೆ ಕೊಡಿ ವಿಶ್ರಾಂತಿ



ದಿಶೆ ತಪ್ಪಿ ಕಿಶೆ ತುಂಬಿ ಉಲ್ಬಣಿಸಿತನ್ಯಾಯ
ನಶೆ ಇಳಿಯದೀ ಧರೆಯ ಹರಣ ಗೆಳೆಯಾ
ನಿಶೆ ಕಳೆದು ಉಷೆ ಇಳಿದು ಆದೀತೆ ನವ ಉದಯ
ದಶಶಿರನ ತರಿದವಗೆ ಕರವ ಮುಗಿಯಾ

Comments