ಆಧುನಿಕ ಕಬೀರ ಸಂತ - ಇಬ್ರಾಹಿಂ ಸುತಾರ

ಆಧುನಿಕ ಕಬೀರ ಸಂತ - ಇಬ್ರಾಹಿಂ ಸುತಾರ

ಶಿರವಸ್ತ್ರ ಮತ್ತು ಕೊರಳ ಶಲ್ಯವೆಂಬ ಬಣ್ಣಬಣ್ಣದ ತುಂಡು ಬಟ್ಟೆಗಾಗಿ ಕಚ್ಚಾಡುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಭಾತೃತ್ವದ ರಾಯಭಾರಿಯಾಗಿ ಸುತಾರ ಇಬ್ರಾಹಿಂ ಅವರ ನಿಧನ ಈ ಹೊತ್ತಿಗೆ ಸಾಹಿತ್ಯ- ಸಾಂಸ್ಕೃತಿಕ - ಭಾವೈಕ್ಯತೆಯ ಜಗತ್ತಿಗೆ ಅತಿ ದೊಡ್ಡದಾದ ನಷ್ಟವಾಗುವುದರ ಜೊತೆಗೆ ಒಂದು ನಿರ್ವಾತವನ್ನು ಸೃಷ್ಟಿಸಿದೆ. ದೇವರು ಧರ್ಮ, ಆಚಾರ-ವಿಚಾರ  ಆಚರಿಸುವ ವಿಧಾನ ಬೇರೆಬೇರೆಯಾದರು ಸತ್ಯ ಒಂದೇ ಎಂಬ ಸಂಗತಿಯನ್ನು ಅರಿತು ಗೆದ್ದವರು ಈ ಸತ್ಪುರುಷ ಸುತಾರ ಇಬ್ರಾಹಿಂ ಅವರು, ಹುಟ್ಟಿದ್ದು ಮುಸಲ್ಮಾನ್ ಧರ್ಮದಲಾದರೂ ಮೂಲತಹ ಅವರ ಕುಲಕಸುಬು ಬಡಗಿ ಕೆಲಸ, ಆದರೆ ಬದುಕಿಗಾಗಿ ಆಯ್ದುಕೊಂಡಿದ್ದು ನೇಕಾರಿಕೆ ವೃತ್ತಿ, ಓದಿದ್ದು ಮೂರನೇ ತರಗತಿವರೆಗೆ ಮಾತ್ರ, ಆದರೆ ಅರಿತಿದ್ದು ಪ್ರಾಚೀನ ಕಾಲದ ಮೂರು ವಿಶ್ವವಿದ್ಯಾನಿಲಯಗಳಿಗೆ ಮೀರಿದ್ದು, ಧರ್ಮವನ್ನು ದಾಟಿ ದಯೆಯ ಮೇಲೆ ನಿಂತುಕೊಂಡು ಬದುಕಿನುದ್ದಕ್ಕೂ ಈಜಾಡಿದ್ದು ಮನಸ್ಸೆಂಬ  ಮನುಷ್ಯತ್ವದ ಮಾನಸಸರೋವರದಲ್ಲಿ,

ಕಬೀರರ ಅನುಯಾಯಿಯಾಗಿ, 12ನೇ ಶತಮಾನದ ಬಸವಾದಿ ಶಿವಶರಣರ  ವಾರಸುದಾರರಾಗಿ, ಸಂತ ಶಿಶುನಾಳ ಶರೀಫರ ಪ್ರತಿನಿಧಿಯಾಗಿ, ವೈದಿಕ, ವಚನ, ಪ್ರವಚನದೊಂದಿಗೆ, ಕುರಾನ್ ಅಧ್ಯಯನ ಮಾಡಿ, ಭಗವದ್ಗೀತೆ ಅರಿತು, ಸೂಫಿ ಸಂತರ ಸಂಸ್ಕೃತಿ ತಿಳಿದು, ಎಲ್ಲ ಸಾರದೊಂದಿಗೆ ವೈಚಾರಿಕತೆಯ ಲೇಪನವನ್ನು  ಮುನ್ನೆಲೆಗೆ ತಂದು ಭಾವೈಕ್ಯತೆಯನ್ನು ನೆಲವನ್ನು ಸರ್ವಧರ್ಮ ಸಹಿಷ್ಣುತೆ ಎಂಬ ಈ ಭಾರತೀಯ ಭೂಮಾತೆಯನ್ನು ಅಪ್ಪಿಕೊಂಡಿದ್ದು ಮನುಷ್ಯ ಕುಲ ತಾನೊಂದೇ ವಲಂ ಎಂಬ ಆದಿಕವಿ ಪಂಪನ ಭಾಷ್ಯದೊಂದಿಗೆ,ಬದುಕನ್ನು ಒಂದು ಸಿನಿಕತನಕ್ಕೆ ಬಲಿಕೊಡದೆ, ಒದಗಿಬಂದ ಈ ಬದುಕಿಗೆ ಒಂದು ಸಾರ್ಥಕತೆಯನ್ನು ಕೊಡುವ ನಿಟ್ಟಿನಲ್ಲಿ, ಈ ದೇಹ ಸತ್ತ ಮೇಲೂ ಬಾಳಿ ಬದುಕುವ ರೀತಿ, ನಮ್ಮ ಸಮಾಧಿ ಕೇವಲ ಮಣ್ಣಿನ ಗೋರಿ ಯಾಗಲು ಬಿಡದೆ, ಪ್ರತಿ ಮನುಷ್ಯ ಸಮಾಧಿಯು ಮಾನವತೆಯನ್ನು ಮಿಡಿಯುವ ಹೃದಯ ವಾಗಬೇಕು ಎಂದು ಹಂಬಲ  ಮತ್ತು ನೂರಾರು ಆಶಯದೊಂದಿಗೆ ವಿವಿಧ ಧರ್ಮಗಳಲ್ಲಿರುವ ಸತ್ಯದ ಸಮಾನ ಅಂಶಗಳನ್ನು ಗುರುತಿಸಿ, ಅವುಗಳನ್ನು  ಅತ್ಯಂತ ಸರಳವಾಗಿ ಮನಮುಟ್ಟುವ ಹಾಗೆ ತಿಳಿಸಿ, ಈ ನೆಲದ ರಾಯಭಾರಿಯಂತೆ ಬದುಕಿ ನಿರ್ಗಮಿಸಿರುವ ಸುತಾರ ಇಬ್ರಾಹಿಂ ಅವರ ಇಡೀ ಬದುಕು  ಭಾರತಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಮಾದರಿಯಾಗಿದೆ.

ಇಂತಹ ಮೇರು ಸತ್ಪುರುಷರ ಅಗಲಿಕೆ ನಮಗೆಲ್ಲ ಒಂದು ಮಾನವೀಯತೆಯ ಪಾಠವಾಗಲಿ, ಭಾವೈಕ್ಯತೆಯ ಧ್ವಜವಾಗಿ ಮನುಷ್ಯ ಸಂಕುಲದ ಮನಸ್ಸಿನಲ್ಲಿ ಸದಾಕಾಲ ಹಾರಾಡುತ್ತಿರಲಿ, ಹೋಗಿ ಬನ್ನಿ, ನೀವು ಹಚ್ಚಿಟ್ಟು ಹೋದ ಭಾವೈಕ್ಯತೆಯ ಅ ಮಣ್ಣಿನ ಹಣತೆಗೆ ಜಾತಿ ಮತ ಕುಲ ಧರ್ಮದ ಹೊರತಾದ ಎಣ್ಣೆ ಬತ್ತಿಯನ್ನು ಹಾಕಿ ಆರದಂತೆ ನೋಡಿಕೊಳ್ಳುತ್ತೇವೆ. ಈ ವಾಗ್ದಾನದೊಂದಿಗೆ ನಿಮ್ಮನ್ನು ಅತ್ಯಂತ ಭಾವಪೂರ್ಣವಾಗಿ, ಮನುಷ್ಯ ಪ್ರೀತಿಯ ಪರವಾಗಿ, ಸಕಲ ಜೀವಕೋಟಿಯ ಸಾಕ್ಷಿಯಾಗಿ ಬೀಳ್ಕೊಡುತ್ತಿದ್ದೇವೆ. ಸತ್ಪುರುಷ ಸುತಾರ ಇಬ್ರಾಹಿಂ ಅವರ ಆದರ್ಶ ಚಿರಾಯುವಾಗಲಿ...

-ಡಿ.ಎಂ. ಮಂಜುನಾಥಸ್ವಾಮಿ, ಚಿಕ್ಕಮಗಳೂರು

ಚಿತ್ರ ಕೃಪೆ: ಪ್ರಜಾವಾಣಿ ಜಾಲ ತಾಣದಿಂದ