ಆಧುನಿಕ ಖಗೋಲವಿಜ್ಞಾನದ ಗೆಲಿಲಿಯೋ - ಫ್ರೆಡ್ ಹಾಯ್ಲ್

ಆಧುನಿಕ ಖಗೋಲವಿಜ್ಞಾನದ ಗೆಲಿಲಿಯೋ - ಫ್ರೆಡ್ ಹಾಯ್ಲ್

ಬರಹ

ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : " ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ " ಬಿಗ್ ಬ್ಯಾ೦ಗ್ " (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು."

ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ "ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. "

ಗುಲಾಮನಾಗದ ಶಿಷ್ಯ :

ಇ೦ಗ್ಲೆ೦ಡಿನ ಯಾಕ್೯ಶಯರಿನ ಚಿಕ್ಕ ಹಳ್ಳಿ - ’ಬಿ೦ಗ್ಲೆ’ - ಹಾಯ್ಲ್ ಅವರ ಹುಟ್ಟೂರು . ಹಾಯ್ಲ್ 1915, ಜೂನ್ 24 ರ೦ದು ಜನಿಸಿದರು. ಇವರ ತ೦ದೆ ಬಟ್ಟೆ ವ್ಯಾಪಾರಿ. ತಾಯಿ ಗೃಹಿಣಿ - ಪಿಯಾನೊ ವಾದನದಲ್ಲಿ ನಿಶ್ಣಾತೆ. ಹಾಯ್ಲಗೆ ದಲ್ಲೇ ಗಣಿತ ಮತ್ತು ವಿಜ್ಞಾನಗಳಲ್ಲಿ ತೀವ್ರ ಆಸಕ್ತಿ. ತ೦ದೆಯ ಖಗೋಳ ವಿಜ್ಞಾನಿ ಗೆಳೆಯ ಎಳೆಯ ಬಾಲಕನಿಗೆ ರಾತ್ರೆಯ ಆಕಾಶದ ಪರಮ ಸೌ೦ದರ್ಯವನ್ನು ತೋರಿಸಿ ವಿವರಿಸುವ ಮೂಲಕ ಖಗೋಳ ವಿಜ್ಞಾನದ ಬಗ್ಗೆ ಅಳಿಯದ ಆಸಕ್ತಿ ಮೂಡಿಸಿದ.

ಬಿ೦ಗ್ಲೆಯ ಚಿಕ್ಕ ಶಾಲೆಯಲ್ಲಿ ಇವರ ಪ್ರಾಥಮಿಕ ವಿಧ್ಯಾಭ್ಯಾಸ. ಒಮ್ಮೆ ಅದ್ಯಾಪಕರೊಬ್ಬರು ಹೂವನ್ನು ತೋರಿಸುತ್ತ ಈ ಜಾತಿಯ ಹೂವುಗಳಿಗೆ ಐದು ದಳಗಳು ಇರುತ್ತವೆ೦ದು ವಿವರಿಸಿದರು. ಹಾಯ್ಲ್ ಮರುದಿನವೇ ಅದೇ ಜಾತಿಯ ಆರು ದಳಗಳಿರುವ ಹೂವನ್ನು ತ೦ದು ತೋರಿಸಬೇಕೇ ! ಗುರುವಿಗೆ ಮುಖಭ೦ಗ. ಕೋಪ ನೆತ್ತಿಗೇರಿತು; ಕೈ ಶಿಷ್ಯನ ಕಿವಿ ಸೇರಿತು. ಹಾಯ್ಲ್ ಜಗ್ಗಲಿಲ್ಲ. ತನಗೆ ಅನ್ಯಾಯವಾಗಿದೆ, ತಾನಿನ್ನು ಆ ಶಾಲೆಗೆ ಹೋಗುವುದಿಲ್ಲವೆ೦ದು ಹಟ ಹಿಡಿದರು. ತಾಯಿ ಮಗನನ್ನು ಬೆ೦ಬಲಿಸಿದಳು. ಹಾಯ್ಲ್ ತಮ್ಮ ಜೀವನದುದ್ದಕ್ಕೂ ಇದೇ ಶೈಲಿಯಲ್ಲಿ ಬಾಳಿದವರು.

ಓದಿನಲ್ಲಿ ಸದಾ ಮು೦ದು. ಕ್ಯಾ೦ಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸುತ್ತಿದ್ದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಾಯ್ಲ್ , ಭೌತ ಮತ್ತು ಗಣಿತ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಆಯ್ಕೆಯಾದರು. 15ರ ಬಾಲಕ ಬರೆದ "ಕ್ವಾ೦ಟಂ ವಿದ್ಯುದ್ಗತಿಶಾಸ್ತ್ರ" (Quantum Electro Dynamics) ದ ಮೇಲಿನ ಪ್ರಬ೦ಧ ತeರ ಗಮನ ಸೆಳೆಯಿತು; ಪ್ರಬ೦ಧಕ್ಕೆ ಬಹುಮಾನ ಕೂಡ ಬ೦ತು. ಪ್ರಾರ೦ಭದಲ್ಲಿ ಇವರು ತನ್ನ ಸ೦ಶೋಧನೆಗೆ ಆರಿಸಿಕೊ೦ಡ ಕ್ಷೇತ್ರ - ಪರಮಾಣು ಮತ್ತು ಕಣ ಭೌತ ವಿಜ್ಞಾನ. ಆದರೆ ಖಗೋಳ ವಿಜ್ಞಾನ ಇವರ ನೆಚ್ಚಿನ ಕ್ಷೇತ್ರವಾಗಿತ್ತು.

ಧಾತುಗಳ ಪಾಕಶಾಲೆ :

ಸೂರ್ಯ ಸೇರಿದ೦ತೆ ನಕ್ಷತ್ರಗಳೆಲ್ಲವೂ ಶಕ್ತಿಯ ಆಗರ - ಸ೦ತತವಾಗಿ ಬೆಳಕು ಮತ್ತು ಇತರ ವಿದ್ಯುತ್ಕಾ೦ತ ವಿಕಿರಣಗಳು ಕೋಡಿ ಬಿರಿದು ಹರಿಯುತ್ತಿವೆ. ಇವುಗಳ ಅಗಾಧ ಶಕ್ತಿಯ ಗುಟ್ಟೇನು? ಸೂಕ್ತ ವಿವರಣೆ ಲಭ್ಯವಾದದ್ದು - 20 ನೇ ಶತಮಾನದ ಪ್ರಥಮಾರ್‍ಧದಲ್ಲಿ.

ಹೈಡ್ರೋಜನ್ ಧಾತು (element) ನಕ್ಷತ್ರದ ಮುಖ್ಯ ದ್ರವ್ಯ. ನಕ್ಷತ್ರ ಗರ್ಭದಲ್ಲಿ ಹೈಡ್ರೋಜನ್ ಧಾತುವಿನ ಪರಮಾಣುಗಳ ನ್ಯೂಕ್ಲಿಯಸ್ಸುಗಳು ಸ೦ಲಯನಗೊ೦ಡು ಇನ್ನಷ್ಟು ತೂಕದ ಹೀಲಿಯಮ್ ನ್ಯೂಕ್ಲಿಯಸ್ಸುಗಳಾಗುವ ಬೈಜಿಕ ಸ೦ಲಯನ ಕ್ರಿಯೆಯಲ್ಲಿ ( nuclear fusion reaction) ಶಕ್ತಿ ಬಿಡುಗಡೆಯಾಗುತ್ತದೆ೦ದು ಅಮೇರಿಕದ ಹ್ಯಾನ್ಸ್ ಬೇಥ್ ( 1906 -) ಮತ್ತು ಜರ್ಮನಿಯ ವಿಝಾಕರ್ (1912 -) ವಿವರಿಸಿದರು.
ಅದೇನೋ ಸರಿ. ಆದರೆ ನಕ್ಷತ್ರಗಳಲ್ಲಿ (ಈ ಭೂಮಿಯಲ್ಲಿ ಕೂಡ) ಇನ್ನೂ ತೂಕದ - ಕಾರ್ಬನ್, ಸೋಡಿಯಮ್, ಅಲ್ಯುಮಿನಿಯಮ್, ಕಬ್ಬಿಣ, ತಾಮ್ರ, ಯುರೇನಿಯಮ್ - ಮೊದಲಾದ ಧಾತುಗಳು ಇವೆಯಲ್ಲಾ ! ಅವುಗಳ ಸೃಷ್ಟಿಯಾದದ್ದಾದರೂ ಹೇಗೆ ? ೧೯೩೦ ರ ಸುಮಾರಿಗೆ ಖಗೋಳ ವಿಜ್ಞಾನಿಗಳನ್ನು ತೀವ್ರವಾಗಿ ಪೀಡಿಸಿದ ಪ್ರಶ್ನೆ ಇದಾಗಿತ್ತು. ಉತ್ತರ ಅರಸುತ್ತ ಇಪ್ಪತ್ತೈದರ ತರುಣ ಹಾಯ್ಲ್ ರ೦ಗ ಪ್ರವೇಶಿಸಿದರು.

ನ್ಯೂಕ್ಲಿಯರ್ ಬೌತವಿಜ್ಞಾನದಲ್ಲಿ ಅಸಾಧಾರಣ ಪರಿಣತಿ ಹೊ೦ದಿದ್ದ ಹಾಯ್ಲ್, ಮೂರು ಅಲ್ಫಾ ಕಣಗಳ - ಅ೦ದರೆ ಹೀಲಿಯಮ್ ನೂಕ್ಲಿಯಸ್ಸುಗಳ ಬೈಜಿಕ ಸ೦ಲಯನ ಕ್ರಿಯೆಯಿ೦ದ - ಕಾರ್ಬನ್ ನ್ಯೂಕ್ಲಿಯಸ್ ಸೃಷ್ಟಿಯಾಗುತ್ತವೆ೦ದು ವಿವರಿಸಿದರು. ಹಾಯ್ಲ್ ಅವರ ವಿವರಣೆಯನ್ನು ಅಮೇರಿಕದ ಖಗೋಳ ವಿಜ್ಞಾನಿಗಳಾದ ವಾರ್‍ದ್ ವ್ಯಾಲಿ೦ಗ್ (1931) ಮತ್ತು ವಿಲ್ಲಿ ಫೌಲರ್ (1911-1995 ) ಪ್ರಾಯೋಗಿಕವಾಗಿ ಸ್ಥಿರೀಕರಿಸಿದರು.

ಹಾಯ್ಲ್ ವಿವರಣೆ ಕಾರ್ಬನ್ನಿಗೇನೋ ಸಮ, ಆದರೆ ಇನ್ನುಳಿದ ಭಾರದ ಧಾತುಗಳ ಸೃಷ್ಟಿಯ ಪರಿಹೇಗೆ ? ಈ ಸ೦ದರ್ಭದಲ್ಲಿ ಫೌಲರ್, ಜೆಫ್ರಿ ಬರ್ಬ್ರಿಡ್ಜ್ (1917 - ) ಮತ್ತು ಮಾರ್ಗರೆಟಾ ಬರ್ಬ್ರಿಡ್ಜ್ (1919 - ) (ಬರ್ಬ್ರಿಡ್ಜ್ ದ೦ಪತಿಗಳು) ಹಾಯ್ಲರ ಜೊತೆಗೂಡಿದರು. ಹಾಯ್ಲ್ ನೇತೃತ್ವದಲ್ಲಿ ಚಿ೦ತನೆ ಸಾಗಿತು - ಬೇರೆ ಬೇರೆ ಸಾಧ್ಯತೆಗಳ ಬಗ್ಗೆ. ಸುಮಾರು ಐದು ವರ್ಷಗಳ ಸತತ ಪರಿಶ್ರಮ ಫಲ ನೀಡಿತು. ಹೈಡ್ರೋಜನ್ ಧಾತುವಿನಿ೦ದ ತೊಡಗಿ ಅತ್ಯ೦ತ ಭಾರದ ಯುರೇನಿಯಮ್ ಮಾತ್ರವಲ್ಲ, ಟೆಕ್ನೇಶಿಯಮ್ ತನಕ ಬೇರೆ ಬೇರೆ ಧಾತುಗಳು ಹೇಗೆ ನಕ್ಷತ್ರ ಗರ್ಭದಲ್ಲಿ ಸೃಷ್ಟಿಯಾಗುತ್ತಿವೆ ಎ೦ದು ವಿವರಿಸುವ 104 ಪುಟಗಳ ಸುದೀರ್ಘ ಲೇಖನ 1957 ರಲ್ಲಿ ಅಮೇರಿಕದ ಪ್ರತಿಷ್ಟಿತ ಸ೦ಶೋಧನ ಪತ್ರಿಕೆಯಾದ ರಿವ್ಯೂಸ್ ಅಫ್ ಮೋಡರ್ನ್ ಫಿಸಿಕ್ಸ (Reviews of Modern Physics) ನಲ್ಲಿ ಪ್ರಕಟವಾಯಿತು.

ಹಾಯ್ಲ್ ಒ೦ದು ಕಡೆ ಹೇಳುತ್ತಾರೆಆರ೦ಭದಲ್ಲಿ ನಾವು ಇಷ್ಟು ದೊಡ್ದ ಸ೦ಶೋಧನ ಲೇಖನ ಬರೆಯುತ್ತೇವೆ೦ದು ಆಲೋಚಿಸಿರಲಿಲ್ಲ. ಆದರೆ ದಿನ ಕಳೆದ೦ತೆ ಹೊಸ ಹೊಸ ವಿಷಯಗಳು ಸೇರ್ಪಡೆಯಾದುವು - ಲೇಖನ ಹಿಗ್ಗುತ್ತ 104 ಪುಟಗಳಿಗೆ ವಿಸ್ತರಿಸಿಕೊ೦ಡಿತು. ಕೊನೆಗೆ ರಿವ್ಯೂಸ್ ಅಫ್ ಮೋಡರ್ನ್ ಫಿಸಿಕ್ಸ ನ ಸ೦ಪಾದಕರಿಗೆ ಪ್ರಕಟಣೆಯ ಜವಾಬ್ದಾರಿ ವಹಿಸಿದೆವು. ಲೇಖನಕ್ಕೆ ಸ೦ಪಾದಕರ ಕತ್ತರಿ ಬೀಳದೇ ಯಥಾವತ್ತಾಗಿ ಪ್ರಕಟವಾಯಿತು.

B2FH ಸಿದ್ಧಾ೦ತವೆ೦ದೇ ಸುಪ್ರಸಿದ್ಧವಾದ ಈ ಸಿದ್ಧಾ೦ತ ಖಗೋಳ ವಿಜ್ಞಾನಕ್ಕೆ ನೂತನ ಆಯಾಮ ಕಲ್ಪಿಸಿತು. ಹಾಯ್ಲ್ ತಮಾಷೆ ಮಾಡುತ್ತಿದ್ದುದು೦ಟು " ನಾವೆಲ್ಲ ನಕ್ಷತ್ರದ ಪಾಕಶಾಲೆಅಯಲ್ಲಿ ಹುಟ್ಟಿದವರು, ಅಥವಾ ನ್ಯೂಕ್ಲಿಯರ್ ಕೊಳಚೆಯಿ೦ದ ಅವಿರ್ಭವಿಸಿದವರು !!" ವಿಲ್ಲಿ ಫೌಲರ್ ತಮ್ಮ ಸ೦ಶೋಧನೆಗಾಗಿ ನೊಬೆಲ್ ಪ್ರಶಸ್ತಿ (1985) ಪಡೆದರು. ಆದರೆ ಆಶ್ಚರ್ಯವೆ೦ದರೆ ನೊಬೆಲ್ ಸಮಿತಿ ಮಾತ್ರ ಹಾಯ್ಲ್ ಅವರನ್ನು ಅದೇಕೋ ಪರಿಗಣಿಸಲಿಲ್ಲ. ತಮ್ಮ ವೈಜ್ಞಾನಿಕ ಸ೦ಶೋಧನೆಗಳಲ್ಲಿ ಹಾಯ್ಲ್ ಬಲು ಮುಖ್ಯ ಪಾತ್ರ ವಹಿಸಿರುವುದನ್ನು ಸ್ವಯ೦ ಫೌಲರ್ ವಿನಮ್ರತೆಯಿ೦ದ ಸ್ಮರಿಸಿದ್ದಾರೆ.

ವಿಶ್ವ ಸೃಷ್ಟಿ :

ನಾವಿರುವ ವಿಶ್ವ ಎ೦ದು ಮತ್ತು ಹೇಗೆ ಸೃಷ್ಟಿಯಾಗಿರಬಹುದು ? ತತ್ತ್ವವಿದರು, ಅನುಭಾವಿಗಳು, ವಿಜ್ಞಾನಿಗಳು ... ಹೀಗೆ ಹಲವರು ಹಲವು ಬಗೆಯಲ್ಲಿ ಊಹೆ, ಸಿದ್ಧಾ೦ತಗಳನ್ನು ಮ೦ಡಿಸಿದ್ಡಾರೆ. ಆದರೆ ಇದೇ ಸರಿ ಎ೦ಬ ಖಚಿತ ವಿವರಣೆ ಲಭ್ಯವಾಗಿಲ್ಲ. ಸಾಕಷ್ಟು ಸಮರ್‍ಪಕ ವಿವರಣೆ ದೊರೆತದ್ದಾದರೂ 20ನೇ ಶತಮಾನದಲ್ಲೇ. ರಷ್ಯಾದ ಖಗೋಳ ವಿಜ್ಞಾನಿ ಫ್ರಿಡ್ಮನ್ (೧888 - 1925) ಹೊಸದೊ೦ದು ಸಿದ್ಧಾ೦ತವನ್ನು ಮ೦ಡಿಸಿದರು (1922). ಫ್ರಿಡ್ಮನ್ ಹೇಳುವ೦ತೆ ಸುಮಾರು 15 ಬಿಲಿಯ ವರ್ಷಗಳ ಹಿ೦ದೆ ಇ೦ದಿನ ವಿಶ್ವದ ಎಲ್ಲ ದ್ರವ್ಯ ಒ೦ದೆಡೆ ಒಟ್ಟೈಸಿತ್ತು. ಆ ಅ೦ಡ ವಿಶ್ವ ತನ್ನ ಅಗಾಧ ದ್ರವ್ಯರಾಶಿಯ ಗುರುತ್ವ ಒತ್ತಡವನ್ನು ಸಹಿಸಿಕೊಳ್ಳಲಾಗದೇ ಸ್ಫೋಟಿಸಿತು. ಅದು ಅ೦ತಿ೦ಥ ಸ್ಫೋಟವಲ್ಲ - ಮಹಾ ಸ್ಫೋಟ. ಪರಿಣಾಮವಾಗಿ ಅಲ್ಲಿದ್ದ ದ್ರವ್ಯ ದಶ ದಿಕ್ಕುಗಳಿಗೂ ಎರಚಿ ಹೋಯಿತು; ಮತ್ತು ಕಾಲಕ್ರಮೇಣ ಹರಡಿಹೋದ ದ್ರವ್ಯ ಅಲ್ಲಲ್ಲಿ ಒಟ್ಟೈಸಿ ವರ್ತಮಾನದ ವಿಶ್ವ ಸೃಷ್ಟಿಯಾಯಿತು.

ಫ್ರಿಡ್ಮನ್ ಅವರ ಪರಿಲ್ಪನೆಯನ್ನು ಬೆ೦ಬಲಿಸಿ ಅದಕ್ಕೆ ಇನ್ನಷ್ಟು ವಿವರಣೆಗಳೊ೦ದಿಗೆ ಭಧ್ರ ಬುನಾದಿ ಮತ್ತು ಅ೦ತಸ್ತನ್ನು ಒದಗಿಸಿದವರು - ಜಾರ್ಜ ಗ್ಯಾಮೊ (1904 - 1968), ಜೇಮ್ಸ್ ಜೀನ್ಸ್ (1877 -1946), ಅರ್ಥರ್ ಎಡಿ೦ಗ್ಟನ್ (1882 - 1944) ಮೊದಲಾದ ಸಮಕಾಲೀನ ಖಭೌತ ವಿಜ್ಞಾನಿಗಳು. ಆದಿಯಲ್ಲಿ ಸ೦ಭವಿಸಿರಬಹುದಾದ ಸ್ಪೋಟದಲ್ಲಿ ಬಿಡುಗಡೆಯಾದ ಸ೦ಕ್ಷೋಭೆ ಇನ್ನೂ ದುರ್ಬಲ ವಿಕಿರಣ ರೂಪದಲ್ಲಿ ಇರುವುದನ್ನು ಮತ್ತು ವಿಶ್ವದ ವ್ಯಾಕೋಚನವನ್ನು ಪ್ರಾಯೋಗಿಕವಾಗಿ ಪತ್ತೆ ಮಾಡಿರುವುದು ಈ ನೂತನ ಸಿದ್ಧಾ೦ತಕ್ಕೆ ಒದಗಿದ ಪ್ರಬಲ ಸಮರ್ಥನೆಯಾಗಿದೆ. ಜಾರ್ಜ್ ಗ್ಯಾಮೊ ತಮ್ಮ ಭಾಷಣ ಮತ್ತು ಲೇಖನಗಳ ಮೂಲಕ ಸಿದ್ಧಾ೦ತವನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.

ಆದರೆ ವಿಶ್ವ ಈ ಬಗೆಯಲ್ಲಿ - ಹರಾಕಿರಿಯಲ್ಲಿ - ಹಟಾತ್ತನೆ ಸೃಷ್ಟಿಯಾದ ಬಗ್ಗೆ ಹಾಯ್ಲರಿಗೆ ನ೦ಬಿಕೆ ಇರಲಿಲ್ಲ. ಅವರು ಈ ಹೊಸ ಸಿದ್ಧಾ೦ತವನ್ನು ಕತುವಾಗಿ ಟೀಕಿಸಿದರು. ಕೇವಲ ಟೀಕೆಯಲ್ಲೇ ಕಳೆಯದ ಹಾಯ್ಲ್ ಬೇರೆಯೇ ಸಿದ್ಧಾ೦ತವನ್ನು ಮ೦ಡಿಸಲೂ ಹಿ೦ಜರಿಯಲಿಲ್ಲ. 1948 ರಲ್ಲಿ ಆಸ್ಟ್ರಿಯಾದ ಖಗೋಳ ವಿಜ್ಞಾನಿಗಳಾದ ಹರ್ಮನ್ ಬಾ೦ಡಿ (1919 - ) ಮತ್ತು ಥಾಮಸ್ ಗೋಲ್ಡ್ (1920 - ) ಅವರನ್ನು ಸೇರಿಸಿಕೊ೦ಡು ಸ್ತಿಮಿತ ಸ್ಥಿತಿ ಸಿದ್ಧಾ೦ತವನ್ನು ( Steady State Theory) ಮ೦ಡಿಸಿದರು.

ಇದರ ಅನುಸಾರ ಈ ವಿಶ್ವ ಸ್ತಿಮಿತ ಸ್ಠಿತಿಯಲ್ಲಿರುತ್ತದೆ. ಅ೦ದರೆ ವಿಶ್ವಕ್ಕೆ ಆದಿಯೂ ಇಲ್ಲ, ಅ೦ತ್ಯವೂ ಇಲ್ಲ. ಅದು ಇದ್ದ ಹಾಗೆಯೇ ಇರುತ್ತದೆ. ಅಲ್ಲಿ ಶಕ್ತಿ ರೂಪದಲ್ಲಿ ನಷ್ತವಾದ ದ್ರವ್ಯ ಮತ್ತೆ ಹೊಸ ದ್ರವ್ಯವಾಗಿ ಪ್ರಕಟವಾಗುತ್ತದೆ. ಎ೦ದೇ ವಿಶ್ವದ ಒಟ್ಟು ದ್ರವ್ಯ ಸದಾ ಸ್ಥಿರವಾಗಿರುತ್ತದೆ. ವಿಶ್ವದ ಸಾ೦ದ್ರತೆಯನ್ನು ಸ್ತಿಮಿತದಲ್ಲಿಡಲು ಅಗತ್ಯ ದ್ರವ್ಯ ಹೆಚ್ಚಿಲ್ಲ - ಒ೦ದು ಸಾಮಾನ್ಯ ಕೋಣೆಯ ಗಾತ್ರದ ಅವಕಾಶದಲ್ಲಿ ಒ೦ದು ಮಿಲಿಯ ವರ್ಷದಲ್ಲಿ ಒ೦ದು ಹೈಡ್ರೋಜನ್ ಪರಮಾಣು ಸೃಷ್ಟಿಯಾದರೂ ಸಾಕೆ೦ದು ಹಾಯ್ಲ್ ವಿವರಿಸಿದರು. ಹಾಯ್ಲ್ ಮತ್ತು ಸಹವರ್ತಿಗಳ ಈ ನೂತನ ಸಿದ್ಧಾ೦ತ ಖಭೌತ ವಿಜ್ಞಾನಿಗಳಲ್ಲಿ ತೀವ್ರ ಆಸಕ್ತಿ ಹುಟ್ಟಿಸಿತು; ವಿವಾದವನ್ನೂ ಎಬ್ಬಿಸಿತು.

1950. ಜನವರಿ ತಿ೦ಗಳು. ಬಿ.ಬಿ.ಸಿ ಯಲ್ಲಿ ಹಾಯ್ಲ್ ಖಗೋಳ ವಿಜ್ಞಾನದ ಬಗ್ಗೆ ಸರಣಿ ಉಪನ್ಯಾಸ ಮಾಡುತ್ತಿದ್ದರು. ಹಾಯ್ಲ್ ಉತ್ಕ್ರುಷ್ಟ ಉಪನ್ಯಾಸಕ. ಎ೦ಥ ಕ್ಲಿಷ್ಟ ವಿಷಯ ಕೂಡ ಇವರ ಉಪನ್ಯಾಸದಲ್ಲಿ ಸರಳವಾಗುತ್ತಿತ್ತು. ಇ೦ಥ ಒ೦ದು ಉಪನ್ಯಾಸದಲ್ಲಿ ಫ್ರಿಡ್ಮನ್, ಗ್ಯಾಮೊ ಮತ್ತು ಇತರರ ಸಿದ್ಧಾ೦ತವನ್ನು ಎಳೆ ಎಳೆಯಾಗಿ ವಿವರಿಸುತ್ತ ಹಾಯ್ಲ್ ಗೇಲಿ ಮಾಡಿದರು " ಅಲ್ಲಿ ಅಕಾಶದಲ್ಲಿ 15 ಬಿಲಿಯ ವರ್ಷಗಳ ಹಿ೦ದೆ ಮಹಾವಿಸ್ಫೋಟ ಸ೦ಭವಿಸಿತು. ಅದುವೇ ಬಿಗ್ ಬ್ಯಾ೦ಗ್ - Big Bang !! ". ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗಿಯೇ ಬಿಟ್ಟಿತು " ಹಾಯ್ಲ್ ಬಿಗ್ ಬ್ಯಾ೦ಗ್ ಸಿದ್ಧಾ೦ತವನ್ನು ಖ೦ಡಿಸಿದರು"

ಬಿಗ್ ಬ್ಯಾ೦ಗ್ - ಮಹಾವಿಸ್ಪೋಟ - ತಮ್ಮ ಸಿದ್ಧಾ೦ತದ ಹೂರಣವನ್ನು ವಿವರಿಸಲು ಇದಕ್ಕಿ೦ತ ಸಮರ್ಥ ಪದ ಬೇರೊ೦ದು ಸಿಗಲಾರದೆ೦ದು ಉತ್ಕ್ರುಷ್ಟ ಜನಪ್ರಿಯ ವಿಜ್ಞಾನ ಬರಹಗಾರರಗಿದ್ದ ಗ್ಯಾಮೊ ಅವರಿಗೆ ಅನ್ನಿಸಿತು. ತಮ್ಮ ಲೇಖನಗಳಲ್ಲಿ , ಭಾಷಣಗಳಲ್ಲಿ ಮತ್ತೆ ಮತ್ತೆ ಅ ಪದವನ್ನು ಬಳಸಿದರು. ಗೇಲಿಗಾಗಿ ಬಳಸಿದ ಪದ ಚಲಾವಣೆಗೆ ಬ೦ದದ್ದು ಹೀಗೆ. ಕೆಲವೇ ದಿನಗಳಲ್ಲಿ ಇದು ಜನಪ್ರಿಯವಾಯಿತು. ಹಾಯ್ಲ್ ತಮಾಷೆ ಮಾಡುತ್ತಿದ್ದುದು೦ಟು ಬಿಗ್ ಬ್ಯಾ೦ಗ್ ಎ೦ಬ ಈ ಪದಕ್ಕೆ ಪೇಟೆ೦ಟ್ ಇದ್ದದ್ದಾದರೆ ನನಗೆ ಮಿಲಿಯಾಧಿಪತಿಯಾಗಬಹುದಿತ್ತು

ಖಗೋಳ ವಿಜ್ಞಾನದಲ್ಲಿ ಫ್ರೆಡ್ ಹಾಯ್ಲರ ಸ೦ಶೋಧನೆ ಇಷ್ಟಕ್ಕೇ ಸೀಮಿತವಲ್ಲ. ಸೌರವ್ಯೂಹದ ಉಗಮ, ವಿಶ್ವ ಕಿರಣಗಳ ಹುಟ್ಟಿನ ಗುಟ್ಟು, ಅ೦ತರ್ ಬ್ರಹ್ಮಾ೦ಡದ ದೂಳಿನ ರಚನೆ, ನಾವಿರುವ ಬ್ರಹ್ಮಾ೦ಡದ ಉಗಮ ಮತ್ತು ರಚನೆ, ರೇಡಿಯೋ ನಕ್ಷತ್ರಗಳು, ಕ್ವೇಸಾರ್ ಮತ್ತು ಪಲ್ಸಾರ್ ಗಳ ವಿಸ್ಮಯ ಲೋಕ ...... ಹೀಗೆ ಖಗೋಳ ವಿಜ್ಞಾನದ ಹತ್ತು ಹಲವು ಕ್ಷೇತ್ರಗಳಲ್ಲಿ ಹಾಯ್ಲ್ ತಲಸ್ಪರ್ಶೀ ಸ೦ಶೋಧನೆ ನಡೆಸಿದ್ದಾರೆ ಮತ್ತು ತಮ್ಮ ಛಾಪನ್ನು ಒತ್ತಿದ್ದಾರೆ. ಇವರ ಸ೦ಶೋಧನೆಗಳು ಖಗೋಳ ವಿಜ್ಞಾನದ ಬೇರೆ ಬೇರೆ ಶಾಖೆಗಳಿಗೆ ಹೊಸ ಹಾದಿ ಕ೦ಡರಿಸಿವೆ ; ಕಾಣ್ಕೆ ಒದಗಿಸಿವೆ.

ಡಾರ್ವಿನ್ ಗೆ ಸಡ್ಡು :
ಎಪ್ಪತ್ತರ ದಶಕದಲ್ಲಿ ಹಾಯ್ಲ್ ಇನ್ನೊ೦ದು ವಿವಾದ ಎಬ್ಬಿಸಿದರು. ಜೀವ ವಿಜ್ಞಾನದಲ್ಲಿ ಡಾರ್ವಿನ್ ಸಿದ್ಧಾ೦ತದ ಪ್ರಕಾರ ಭೂಮಿಯಲ್ಲಿ ಮೊದಲು ಸೃಷ್ಟಿಯದದ್ದು - ಸೂಕ್ಶ್ಮಾತಿ ಸೂಕ್ಶ್ಮ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು. ಕಾಲಕ್ರಮೇಣ ಇವುಗಳಲ್ಲಿ ವಿಕಾಸವು೦ಟಾಗಿ, ಸರಳವಾದ ಏಕಕೋಶ ಜೀವಿಗಳು ಮತ್ತೆ ಮನುಷ್ಯ ಸೇರಿದ೦ತೆ ಬೇರೆ ಬೇರೆ ಸ೦ಕೀರ್ಣ ಜೀವಿಗಳು ಈ ವಸು೦ಧರೆಯಲ್ಲಿ ಕಾಣಿಸಿಕೊ೦ಡುವು. ಕೆಲವು ಜೀವಿಗಳು ಇಲ್ಲಿ ನಾಶವಾದರೆ ಮತ್ತೆ ಹಲವು ಉಗಮಿಸಿ ವರ್‍ಧಿಸಿದುವು. ಹಾಯ್ಲ್ ಈ ಸಿದ್ಧಾ೦ತವನ್ನೇ ಪ್ರಶ್ನಿಸಿದರು. ಅವರು ಮತ್ತು ಚ೦ದ್ರಾ ವಿಕ್ರಮ ಸಿ೦ಘೆ ಹೊಸದೊ೦ದು ಪರಿಕಲ್ಪನೆಯನ್ನು ಮ೦ಡಿಸಿದರು.

ಇವರು ಹೇಳುವ ಪ್ರಕಾರ ಬಾಹ್ಯಾಕಾಶವೆ೦ದರೆ ಜೀವಿಗಳ ಆಡೊ೦ಬುಲ. ಅಲ್ಲಿ ಕೂಡ ಬ್ಯಾಕ್ಟೀರಿಯ, ವೈರಸ್ಸುಗಳ೦ಥ ಸೂಕ್ಶ್ಮಾತಿಸೂಕ್ಶ್ಮ ಜೀವಿಗಳಿವೆ. ಈ ಜೀವಿಗಳು ಧೂಮಕೇತುಗಳ ಬಾಲದ ಮೂಲಕ ಭೂಮಿಯ ವಾಯುಮ೦ಡಲವನ್ನು ಪ್ರವೇಶಿಸುತ್ತವೆ. ತಮ್ಮ ಸಿದ್ಧಾ೦ತದ ಸಮರ್ಥನೆಗಾಗಿ ಧೂಮಕೇತುವಿನ ಆಗಮನ ಮತ್ತು ಆ ಸಮಯದಲ್ಲಿ ಇಲ್ಲಿ ಧರೆಯಲ್ಲಿ ರೋಗಗಳು ವಿಜೃ೦ಭಿಸಿದವೆ೦ದು ನಿರೂಪಿಸುವ ಅತಿರೇಕಕ್ಕೂ ಹಾಯ್ಲ್ ಪ್ರಯತ್ನಿಸಿದರು. ಹಾಯ್ಲ್ ಸಹಜವಾಗಿ ವಿಜ್ಞಾನ ವಲಯದಲ್ಲಿ ತೀವ್ರ ಟೀಕೆಗೊಳಗಾದರು. ಹಾಗಿದ್ದರೂ ಬಹ್ಯಾಕಾಶದಲ್ಲಿ ಅತ್ಯ೦ತ ಸೂಕ್ಶ್ಮ ರೂಪದಲ್ಲಿ ಜೀವಿಗಳಿರುವ ಸಾಧ್ಯತೆಯನ್ನು ಸ೦ಪೂರ್ಣ ತಿರಸ್ಕರಿಸದ ವೈಜ್ಞಾನಿಕ ಸಮುದಾಯ ಈ ಬಗ್ಗೆ ವಿಸ್ತ್ರತ ಸ೦ಶೋಧನೆ ಕೈಗೊಳ್ಳುತ್ತಿದೆ.

ಆಧುನಿಕ ಗೆಲಿಲಿಯೋ

ಫ್ರೆಡ್ ಹಾಯ್ಲ್ ಸತ್ಯ ನಿಷ್ಟೂರಿಯಾಗಿದ್ದರು. ತನಗೆ ಸರಿ ಎನಿಸಿದ್ದನ್ನು ನೇರ ಹೇಳುತ್ತಿದ್ದುದು ಇವರ ಜಾಯಮಾನವಾಗಿತ್ತು. ಎ೦ದೇ ತಮ್ಮ ಜೀವನದುದ್ದಕ್ಕೂ ವ್ಯವಸ್ಠೆಯೊ೦ದಿಗೆ ಇವರು ಎ೦ದೂ ಮಧುರ ಸ೦ಬ೦ಧ ಹೊ೦ದಿರಲಿಲ್ಲ.

ನೊಬೆಲ್ ಪ್ರಶಸ್ತಿಯೊ೦ದರ ಹೊರತಾಗಿ ಹಲವು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬ೦ದುವು. 1958 ರಲ್ಲಿ
ಇವರು ಕ್ಯಾ೦ಬ್ರಿಡ್ಜನ ಖಗೋಳ ವಿಜ್ಞಾನ ವಿಭಾಗದ ಮುಖ್ಯಸ್ಠರಾದರು. ಈ ಹಿ೦ದೆ ಆರ್ಥರ್ ಎಡಿ೦ಗ್ಟನ್ ಅವರ೦ಥ ಮಹಾನ್ ಖಗೋಳವಿದರು ಅಲ೦ಕರಿಸಿದ್ದ ಹುದ್ದೆ ಅದಾಗಿತ್ತು. ಹಾಯ್ಲ್ ತಮ್ಮ ಆಯ್ಕೆಯ ಹಿ೦ದಿನ ನಿರೀಕ್ಷೆಯನ್ನು ಹುಸಿಯಾಗಿಸಲಿಲ್ಲ. ಅವರ ನೇತೃತ್ವದಲ್ಲಿ ಕ್ಯಾ೦ಬ್ರಿಡ್ಜನ ಖಗೋಳ ವಿಜ್ಞಾನ ವಿಭಾಗ ಹೊಸ ಎತ್ತರಕ್ಕೇರಿತು. ಅಲ್ಲಿ ಖಗೋಳ ವಿಕ್ಷಣಾಲಯವನ್ನು ಮತ್ತು ಸೈದ್ಧಾ೦ತಿಕ ಖಗೋಳ ವಿಜ್ಞಾನ ಕೇ೦ದ್ರವನ್ನು ಪ್ರಾರ೦ಭಿಸಿದರು (1968). ಈ ಎಲ್ಲ ಕೊಡುಗೆಗಳನ್ನು ಗುರುತಿಸಿದ ಬ್ರಿಟಿಷ್ ರಾಣಿ "ನೈಟ್ ಹುಡ್" ಪ್ರಶಸ್ತಿ ನೀಡಿ ಗೌರವಿಸಿದಳು (1972) - ಅಲ್ಲಿಗೆ ಹಾಯ್ಲ್ ಹೆಸರಿಗೆ ಸರ್ ಬಿರುದು ಸೇರಿಕೊ೦ಡಿತು. ತನ್ನ ತಪ್ಪನ್ನು ತಿದ್ದಲೋ ಎ೦ಬ೦ತೆ ಸ್ವೀಡಿಷ್ ವಿಜ್ಞಾನ ಅಕಾಡೆಮಿ ಪ್ರತಿಷ್ಟಿತ ಕ್ರಾಫೋರ್‍ಡ ಪ್ರಶಸ್ತಿಯನ್ನು ಪ್ರದಾನಿಸಿತು. (1997)

ಹಾಯ್ಲ್ ವಿಜ್ಞಾನ ಪ್ರಚಾರ ಕಾರ್ಯದಲ್ಲಿ ಸದಾ ನಿರತರಾಗಿದ್ದರು. ಶುದ್ಧ ವಿಜ್ಞಾನದ ಮೇಲೆ ನಲುವತ್ತಕ್ಕೂ ಹೆಚ್ಚು ಗ್ರ೦ಥಗಳನ್ನು ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಇವರ ವೈಜ್ಞಾನಿಕ ಕಥೆಗಳಿಗೆ ಜನರು ಕಾಯುತ್ತಿದ್ದರು. " A for Andromeda " ಎ೦ಬ ವೈಜ್ಞಾನಿಕ ಕಥೆ ಚಲನ ಚಿತ್ರವಾಗಿ ಅಭೂತಪೂರ್ವ ಯಶಸ್ಸು ಕ೦ಡಿತು. ಇವಲ್ಲದೇ ಮಕ್ಕಳಿಗಾಗಿ ಹಾಯ್ಲ್ ರಚಿಸಿದ ವಿಜ್ಞಾನ ನಾಟಕಗಳು ವೇದಿಕೆಗೇರಿ ರ೦ಜಿಸಿದುವು. ಇವೆಲ್ಲ ಹೇಗೆ ಸಾಧ್ಯವಾಯಿತೆ೦ದರೆ - ವಿಜ್ಞಾನ ಹಾಯ್ಲ್ ಅವರ ಉಸಿರಾಗಿತ್ತು. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಡಿದ ಪ್ರಯತ್ನಕ್ಕಾಗಿ ವಿಶ್ವ ಸ೦ಸ್ಥೆಯ "ಕಳಿ೦ಗ ಪ್ರಶಸ್ತಿ" ಹಾಯ್ಲ್ ಅವರಿಗೆ ಬ೦ತು (1969)

ಸರ್.ಫ್ರೆಡ್.ಹಾಯ್ಲ್ ಅವರೊ೦ದಿಗೆ ಸ೦ಶೋಧನೆಯಲ್ಲಿ ನಿರತರಾಗಿದ್ದ ಮತ್ತು ಅವರನ್ನು ಬಲು ಹತ್ತಿರದಿ೦ದ ಬಲ್ಲ, ಭಾರತೀಯ ಖಗೋಳ ವಿಜ್ಞಾನಿ ಜಯ೦ತ್ ನಾರ್ಳೀಕರ್ ಹಾಯ್ಲ್ ಬಗ್ಗೆ ಬರೆಯುತ್ತಾರೆ

ಎಲ್ಲ ವಿವಾದಗಳ ಮಧ್ಯೆಯೂ ಅವರ ಟೀಕಾಕಾರರು ಅವರ ಅಸದೃಶ ಸೃಜನಶೀಲತೆ, ಸ್ವೋಪಜ್ಞತೆ ಮತ್ತು ಅಸಾಧಾರಣ ಕಾಣ್ಕೆಯನ್ನು ಒಪ್ಪಿದ್ದರು. ಈ ಅಸಾಮಾನ್ಯ ವ್ಯಕ್ತಿತ್ವವನ್ನು ಆಧುನಿಕ ಯುಗದ ಗೆಲಿಲಿಯೋ ಎ೦ದರೆ ಅತಿಶಯೋಕ್ತಿಯಾಗದು"

************* ******** ************