ಆಧುನಿಕ ನೀತಿ ಕಥೆಗಳು

ಆಧುನಿಕ ನೀತಿ ಕಥೆಗಳು

ಬರಹ

ಅತಿಯಾಸೆಯ ಫಲ
ಒಂದು ಊರಿನಲ್ಲಿ ನಾಯಿಯಿತ್ತು. ಒಮ್ಮೆ ಅದಕ್ಕೆ ದಾರಿಯಲ್ಲಿ ಒಂದು ರೊಟ್ಟಿ ಸಿಕ್ಕಿತು. ರೊಟ್ಟಿಯನ್ನು ಬಾಯಲ್ಲಿ ಕಚ್ಚಿಕೊಂಡು ಮನೆಯತ್ತ ಹೊರಟಿತು. ದಾರಿಯಲ್ಲಿ ಒಂದು ಕಾಲುವೆಯನ್ನು ದಾಟಬೇಕಾಗಿತ್ತು. ಅದನ್ನು ದಾಟಲು ಮರದಿ ದಿಮ್ಮಿಯ ಮೇಲೆ ನಡೆಯಬೇಕಾಗಿತ್ತು. ತನ್ನ ಪೂರ್ವಜನೊಬ್ಬ ಕಾಲುವೆಯ ದಾಟಲು ಹೋದಾಗ ನೀರಿನಲ್ಲಿ ನಾಯಿಯೊಂದನ್ನು ಕಂಡು ಬೊಗಳಲು ಹೋಗಿ ರೊಟ್ಟಿಯನ್ನು ನೀರುಪಾಲು ಮಾಡಿದ್ದನ್ನು ಈ ನಾಯಿ ತನ್ನ ತಾಯಿಯಿಂದ ಕೇಳಿತ್ತು. ಅದಕ್ಕಾಗಿ ಈ ನಾಯಿ ಕಾಲುವೆ ದಾಟುವ ಮೊದಲೇ ರೊಟ್ಟಿಯನ್ನು ತಿಂದಿತು. ನಂತರ ಹಾಯಾಗಿ ಕಾಲುವೆಯನ್ನು ದಾಟಿತು(ನೀರಿನಲ್ಲಿ ತನ್ನ ಬಿಂಬವನ್ನೇ ನೋಡುತ್ತ!)
ನೀತಿ: ಮುಂದಿನ ಆಪತ್ತಿಗಾಗಿ ಈಗಲೇ ಬುದ್ಧಿಯೋಡಿಸು.

ಮೋಸಗಾರ ನರಿ
ಕಾಗೆಯೊಂದು ಕಟುಕನ ಅಂಗದಿಯಿಂದ ಮಾಂಸದ ತುಂಡನ್ನು ಅಪಹರಿಸಿ ತಂದಿತು. ಮರದ ಕೊಂಬೆಯ ಮೇಲೆ ಕುಳಿತು ಕೊಕ್ಕಿನೊಳಗಿನ ಮಾಂಸದ ತುಂಡನ್ನು ಗತ್ತಿನಿಂದ ನೋಡತೊಡಗಿತು. ಹಸಿವಿನಿಂದ ಬಳಲುತ್ತಿದ್ದ ನರಿಯೊಂದು ಹೊರಟಿತ್ತು. ಕಾಗೆಯ ಕೊಕ್ಕಿನಲ್ಲಿನ ಮಾಂಸದ ತುಂಡನ್ನು ಅಪಹರಿಸಲು ನಿರ್ಧರಿಸಿ, ಮೊದಲಿನಂತೆಯೇ ಒಂದು ಉಪಾಯ ಯೋಚಿಸಿತು. ’ಏನ್ ಕಾಗಣ್ಣ ಚೆನ್ನಾಗಿದ್ದಿಯಾ? ಏನು ನಿನ್ನ ಸುಂದರ ಕೊಕ್ಕು, ಕೊರಳ ಗತ್ತು, ಮೈಬಣ್ಣ, ರೆಕ್ಕೆಗಳೋ ಬಹು ಸುಂದರ’ ಎಂದು ವರ್ಣಿಸಿತು. ’ನಿನ್ನ ದನಿಯಂತೂ ಅಪ್ಪಟ ಕೋಗಿಲೆಯ ಧ್ವನಿ, ಒಂದು ಹಾಡನ್ನಾದರೂ ಹಾಡಬಾರದೇ?’ ಎಂದು ಕಾಗೆಯ ಬಾಯಿ ಬಿಡಿಸಲು ಪ್ರಯತ್ನಿಸಿತು. ಹೊಗಳಿಕೆಯಿಂದ ಉಬ್ಬಿದ ಕಾಗೆ ಇನ್ನೇನು ಹಾಡಬೇಕು ಎನ್ನುವುದರಲ್ಲಿ ತನ್ನ ಕೊಕ್ಕಿನಲ್ಲಿದ್ದ ಮಾಂಸದ ತುಂಡು ಕಾಣಿಸಿತು. ನರಿಯ ಉಪಾಯ ತಕ್ಶಣವೇ ಗೊತ್ತಾಯ್ತು. ಮಾಂಸದ ತುಂಡನ್ನು ತನ್ನ ಕಾಲುಗಳ ಮಧ್ಯೆ ಇರಿಸಿಕೊಂಡು, ’ಆಗಲಿ ನರಿಯಣ್ಣ ಕೇಳು ನನ್ನ ಹಾಡು’ ಎಂದು ಕರ್ಕಶವಾಗಿ ಹಾಡಲು ತೊಡಗಿತು. ಹೊಟ್ಟೆಯ ಹಸಿವು, ಕಾಗೆಯ ಕರ್ಕಶ ಧ್ವನಿ ಕೇಳಲಾಗದೆ ನರಿ ಪೆಚ್ಚುಮೋರೆ ಮಾಡಿಕೊಂಡು ಓಡಿತು. ಕಾಗೆ ಮನದಲ್ಲಿಯೇ ನಗುತ್ತ ಮಾಂಸದ ತುಂಡನ್ನು ಮನಸಾರೆ ತಿಂದಿತು ಎಂದು ಬೇರೆ ಹೇಳಬೇಕೆ?
ನೀತಿ: ಅಪರೂಪದ ಹೊಗಳಿಕೆಗೆ ಉಬ್ಬಿದರೂ ಎಚ್ಚರದಿಂದಿರಬೇಕು.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.