ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ

ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ

ಬರಹ

ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ' ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ' ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು.

ದಿನನಾಲ್ಕು ವಾರಗಳು ಕಳೆಯುವಾಗ ಯಾವುದೋ ಕಾರ್ಯಕ್ರಮದಲ್ಲಿ ಕನ್ನಡ ಸಿನೆಮಾಗಳಲ್ಲಿ ಪದೇಪದೇ ಬರುವ ಮರ ಸುತ್ತುವ ಸೀನಿನಂತೆ ಇವನ ಕಣ್ಣಿಗೂ ಕಣ್ಸೆಳೆವ ಕನ್ಯಾಮಣಿ ಬಿದ್ದಳು. ತನಗೂ ಒಬ್ಬ ಗೆಳೆಯ ಬೇಕೂ ಎಂಬ ತರುಣಿಯರಿಗಿಂತ ತೀರ ಸಾಂಪ್ರಾದಯಕ ವ್ಯಕ್ತಿತ್ವದ ಹುಡುಗಿ ಈ ವಿಚಾರಶೀಲ ಹುಡುಗನಿಗೆ ಮೆಚ್ಚುಗೆಯಾದದ್ದು ಹೇಗೋ ದೇವರೆ ಬಲ್ಲ. ಅಂತು ಇಂತು ಇಬ್ಬರ ನಡುವೆ ಪ್ರೀತಿ ಬಂತು. ಅಲ್ಲಲ್ಲಿ ಗುಸುಗುಸು ಸುದ್ದಿ ಇಡಿ ಕ್ಯಾಂಪಸ್ಸಿ ಹರಡಿತು. ಇವರೇನು ಕಡಿಮೆಯೇ? ಗೊಡ್ಡು ಸಂಪ್ರದಾಯವಾದಿಗಳ ಮಾತಿಗೆ ಹೆದರಿ ತಮ್ಮ ಪ್ರೀತಿಯನ್ನೇನೂ ಬಲಿಕೊಡಲಿಲ್ಲ. ಈ ಸುಭಗನಿಗೋ ಯಾವಾಗಾಲೂ ತನ್ನ ಹುಡುಗಿಯದ್ದೇ ಚಿಂತೆ. ಇದರಿಂದ ಮೊಬೈಲ್ ಅಂಗಡಿಯವ ದುಂಡಗಾದ. ಅವನ ಲೆಕ್ಕಾಚಾರದ ಹಣ ಬಳಕೆಯು ಎಂದೋ ಹಾದಿ ಬಿಟ್ಟಿತು. ತರಗತಿಗಳಲ್ಲೂ ಅದೇ ಅಲೋಚನೆ. ಯಾವುದರಲ್ಲೂ ಆಸಕ್ತಿ ಇಲ್ಲದವನಂತೆ ಕಾಣುತ್ತಿದ್ದ. ಮೊದಲ ವರ್ಷ ಪಾಸಾದದ್ದೇ ಕಷ್ಟದಲ್ಲಿ.

ಹೀಗೆ ದಿನ ಕಳೆಯುವಾಗ ವಿಭಾಗಕ್ಕೆ ಆ ಹುಡುಗಿಯ ಮನೆಯವರಿಂದ ದೂರು ಬಂತು. ಅಧ್ಯಕ್ಷರು ಅತನನ್ನು ಕರೆಸಿ ಬುದ್ಧಿ ಹೇಳಿದರು. ಇವರಗೆ ತನ್ನ ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದ ಉಪನ್ಯಾಸಕರು ತನಗೂ ಅಧ್ಯಕ್ಷರಿಗೂ ಅಗುವುದಿಲ್ಲವೆಂಬ ಕಾರಣ ನೀಡಿ ಇಡೀ ಪ್ರಸಂಗದಿಂದ ಹೊರಗುಳಿದರು. ಇದರಿಂದ ಸುಭಗನು ಅಗಾಗ್ಗೆ ಭೂಮಿಗೆ ಬೀಳುವ ಮಿಗ್ ವಿಮಾನದಂತೆ ನೆಲಕ್ಕೆ ಕುಸಿದನು. ವಿಭಾಗದಲ್ಲಿ ನೋಟ್ ಅಗಿರುವ ಇವನ ಸಂಗಡ ಇದ್ದರೆ ತಮಗೆಲ್ಲಿ ಅಪಾಯವೋ ಎಂದು ಗೆಳೆಯರು ಅವಾಯಿಡ್ ಮಾಡತೊಡಗಿದರು.

ಹೀಗೆ ಕಡೆಗೆ ಏನೋ ಪಾಸಾದರೂ ಆತನಿಗೆ ಉದ್ಯೋಗ ಸಿಗುವ ಮಾರ್ಕುಗಳಿರಲಿಲ್ಲ. ಇತ್ತ ಪ್ರಿಯತಮೆಯು ಫಸ್ಟ್ ರಾಂಕ್ ಪಡೆದಿದ್ದಳು ಎಂದು ಹೇಳಿ ಕಥೆ ಮುಗಿಸಿದ ಬೇತಾಳವು, ವಿಕ್ರಮನೇ ಅರವತ್ತ ನಾಲ್ಕು ವಿದ್ಯೆಗಳಲ್ಲೂ ಪರಿಣಿತನಾದ ನೀನು ಈ ಸಮಸ್ಯೆಯ ಕಾರಣವನ್ನು ಬಿಡಿಸು. ಸುಭಗನ ಸೋಲಿನ ಹಿಂದೆ ಅವನ ಪ್ರಿಯತಮೆ ಕಾರಣವೋ, ಹೊಣೆಗೇಡಿ ಉಪನ್ಯಾಸಕ ಕಾರಣನೋ ಇಲ್ಲ ಸಮಾಜ ಕಾರಣವೋ ಹೇಳು. ಇಲ್ಲವಾದಲ್ಲಿ ದೀಪಾವಳಿ ಸಮಯದಲ್ಲಿ ಸಿಡಿಯುವ ಲಕ್ಷ್ಮಿ ಪಟಾಕಿಯಂತೆ ನಿನ್ನ ತಲೆ ಸಾವಿರ ಹೋಳಾಗುವುದು ಎಂದಿತು.

ಆಗ ವಿಕ್ರಮ ಮಹಾರಾಜನು ತುಸುನಕ್ಕು ಬೇತಾಳವೇ ನಿನ್ನ ಯೋಗ್ಯತೆಗೆ ತಕ್ಕ ಉತ್ತರವನ್ನೇ ನೀಡಿರುವೆ. ನಿನಗೆ ಗೊತ್ತಿಲ್ಲದ ವಿಚಾರವೊಂದನ್ನು ನಾನು ಹೇಳುತ್ತೇನೆ. ಆ ಹುಡುಗಿಯು ಈತನ ಉಪನ್ಯಾಸಕನ ಸಂಬಂಧಿ. ಆದರಿಂದ ಆತನು ಇವನಿಗೆ ಯಾವುದೇ ಸಹಾಯ ಮಾಡಲು ಆಗಲಿಲ್ಲ. ಅಲ್ಲದೇ ವಿಭಾಗಕ್ಕೆ ದೂರು ಬಂದ ನಂತರ ಬುದ್ಧಿಹೇಳುವುದು ಅನಿವಾರ್ಯ. ತನ್ನ ಓದನ್ನು ಬಿಟ್ಟು ಕೇವಲ ಪ್ರೀತಿ ಪ್ರೇಮವೆಂದು ತಿರುಗುವ ಈತನ ಗುಣ ಅರಿತ ಹುಡುಗಿ ತನ್ನ ಕೆಲಸದಲ್ಲಿ ಮಗ್ನಳಾದಳು. ಚೆನ್ನಾಗಿ ಓದಿ ಪಾಸಾದಳು. ಇಲ್ಲಿ ಸುಭಗನದ್ದೇ ತಪ್ಪು ಎಂದು ಹೇಳಿದನು.

ಆಗ ವಿಕ್ರಮನು ವ್ರತ ಮುರಿದ ಎಂಬ ಕಾರಣಕ್ಕಿಂತ ಇತನಿಗೆ ತನ್ನ ಕಥೆ ಹೇಗೆ ಗೊತ್ತಾಯಿತು ಎಂದು ತಲೆ ಬಿಸಿ ಮಾಡಿಕೊಳ್ಳುತ್ತಾ ಲೇಡಿಸ್ ಹಾಸ್ಟೆಲ್ ನ ಎದುರಿಗಿರುವ ಹುಣಸೆ ಮರಕ್ಕೆ ಹಾರಿ ಜೋತಾಡತೊಡಗಿತು.