ಆನಂದ ಬಾಷ್ಪ...

ಆನಂದ ಬಾಷ್ಪ...

ಕವನ

ದೇವ ರಘಪತಿ ರಾಮಚಂದ್ರನೆ

ನೋವು ಕಳೆಯಿತು ಕಂಡು ನಿನ್ನನು

ಭಾವವುಕ್ಕಿದೆ ತಾಳಲಾರದೆ ಬಂದ ಕಣ್ಣೀರು

ಕಾವ ದೇವನೆ ನಿನ್ನ ಜನ್ಮದ

ತಾವಲೀದಿನ ಕಾಣಲೆನ್ನುತ

ಜಾವದಲ್ಲಿಯೆ ಬಂದು ಕುಳಿತೆನು ಬಿಗಿದು ನನ್ನುಸಿರು

 

ಕನ್ನ ಕೊರೆಯಲು ಬಂದರನ್ಯರು

ತನ್ನದಲ್ಲದ ಜಾಗ ಹಿಡಿದರು

ನಿನ್ನ ಮಂದಿರ ಕೆಡವಿ ಬಿಟ್ಟರು ತುಚ್ಛ ಮನಸಿನೊಳು

ಎನ್ನ ಮನದಲಿ ಸತತ ಸಂಕಟ

ಚೆನ್ನ ರಾಮಗೆ ಸಿಗದೆ ದೇಗುಲ

ನಿನ್ನ ಮಂದಿರ ಮರಳಿ ಕಟ್ಟಲು ಬಂದ ತೊಡಕುಗಳು

 

ದೂಡಲೆಂತದು ಮನದ ದುಗುಡವ

ಬಾಡಿ ಮುದುಡಿದ ಮನದಲಿದ್ದೆನು

ಮಾಡಲೇನನು ಮಾಡಿ ಬಿಟ್ಟಿಹೆ ನನ್ನ ಚಿರಂಜೀವಿ

ಕಾಡಿ ಸಂಕಟ ಸತತ ನನ್ನನು

ನೋಡುತಿಲ್ಲಿನ ಕೆಲವು ಮನುಜರ

ಕೂಡಿ ಬಾಳದೆ ನಿನ್ನ ಮರೆತಿಹ ಹಲವು ನರ ಜೀವಿ

 

ಇಂದು ಸಾರ್ಥಕವಾಯ್ತು ಬಾಳಿದು

ಬಂದು ನೋಡಲು ನಿನ್ನ ಚರಣವ

ಕುಂದು ಕಾಣದ ತರದೆ ನಿರ್ಮಿತ ಭವ್ಯ ಮಂದಿರವು

ಬಂದ ಭಕ್ತರ ಮೊಗದಿ ಸಂತಸ

ನಿಂದು ನೋಡಲು ಹರ್ಷವೆನಿಸಿತು

ಚಂದದಿಂದಲಿ ನೋಡಿ ಪುಳಕಿತಗೊಂಡಿತೀ ಮನವು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್