ಆನೆಗಳು - ಮನುಷ್ಯರ ಸಂಘರ್ಷ ತಗ್ಗಿಸಲಿಕ್ಕಾಗಿ ಗಜಮಿತ್ರರು
ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆನೆಗಳ ಸಂಖ್ಯೆ 17. ಅಂದರೆ ವಿದ್ಯುತ್ ಆಘಾತ, ಗುಂಡೇಟು ಇತ್ಯಾದಿ ಕಾರಣಗಳಿಂದಾದ ಸಾವು. ಇದು ಅರಣ್ಯ ಇಲಾಖೆ ನೀಡಿರುವ ಮಾಹಿತಿ.
ಅರಣ್ಯ ನಾಶದಿಂದಾಗಿ ಆನೆಗಳ ವಾಸಪ್ರದೇಶದ ವ್ಯಾಪ್ತಿ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ. ಅವುಗಳ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಈ ಕಾರಣಗಳಿಂದಾಗಿ ಅವು ತೋಟ ಹಾಗೂ ಹೊಲಗಳಿಗೆ ನುಗ್ಗುತ್ತಿವೆ. ಹಾಗಾಗಿ ಆನೆಗಳು - ಮನುಷ್ಯರ ಸಂಘರ್ಷ ಜಾಸ್ತಿಯಾಗುತ್ತಿದೆ. ಇದರಿಂದಾಗಿ 2017-18ರಲ್ಲಿ ಕರ್ನಾಟಕದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 20. ಅದಲ್ಲದೆ 15 ಜನರು ಅಂಗವಿಕಲರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆನಾಶವೂ ಆಗಿದೆ.
ಆನೆಗಳು ಮನುಷ್ಯರ ವಾಸಸ್ಥಳಗಳತ್ತ ನುಗ್ಗುವುದನ್ನು ತಡೆಯುವುದಕ್ಕಾಗಿ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ: ಆನೆಗಳು ದಾಟಲಾಗದ ಕಂದಕಗಳನ್ನು ತೋಡುವುದು; ಸೌರಶಕ್ತಿಯ ಬೇಲಿಗಳ ನಿರ್ಮಾಣ; ರೈಲ್ವೇ ಹಳಿಗಳ ತಡೆಬೇಲಿ ನಿರ್ಮಾಣ. ಜೊತೆಗೆ, ಆನೆಗಳ ವಾಸಪ್ರದೇಶಗಳ ಹತ್ತಿರದ ಹಳ್ಳಿಗರಿಗೆ ಆನೆ ಹಿಂಡುಗಳ ಸಂಚಾರದ ಮಾಹಿತಿ ನೀಡಲಿಕ್ಕಾಗಿ 24 ೱ 7 ಮಾಹಿತಿ ಕೇಂದ್ರ ಸ್ಥಾಪಿಸಿದೆ.
ಈ ನಿಟ್ಟಿನಲ್ಲಿ ಚತ್ತಿಸ್ಘರ್ ರಾಜ್ಯದ ಅರಣ್ಯ ಇಲಾಖೆಯ "ಆನೆಮಿತ್ರ” ಯೋಜನೆ ಗಮನಾರ್ಹ. ಕಳೆದ ಹತ್ತು ವರುಷಗಳಿಂದ ಈ ಯೋಜನೆ ಚಾಲ್ತಿಯಲ್ಲಿದೆ. ಆನೆಮಿತ್ರರು ಆನೆಹಿಂಡುಗಳ ಸಂಚಾರ ಪತ್ತೆ ಮಾಡಿ, ಅದನ್ನು ಹತ್ತಿರದ ಹಳ್ಳಿಗಳ ಸಮುದಾಯಗಳಿಗೆ ವಾಟ್ಸಾಪ್ ಗುಂಪು ಮೂಲಕ ತಿಳಿಸುತ್ತಿದ್ದಾರೆ. ಸ್ಥಳೀಯರೇ ಆಗಿರುವ ಆನೆಮಿತ್ರರಿಗೆ ಅಲ್ಲಿನ ಅರಣ್ಯ ಇಲಾಖೆ ತಿಂಗಳಿಗೆ ರೂ. 8,000 - 9,000 ವೇತನ ಪಾವತಿಸುತ್ತಿದೆ.
ಚತ್ತಿಸ್ಘರ್ ನಲ್ಲಿ ಸುಮಾರು 300 ಆನೆಗಳಿವೆ. ಅವು 40,000 ಚದರ ಕಿಮೀ ಪ್ರದೇಶದಲ್ಲಿ ಸಂಚರಿಸುತ್ತಿವೆ. ಇಷ್ಟು ವಿಸ್ತಾರ ಪ್ರದೇಶದ ಮೇಲುಸ್ತುವಾರಿ ಸುಲಭವಲ್ಲ. ಆನೆಗಳು ಕತ್ತಲಾದ ನಂತರ ಆಹಾರ ಹುಡುಕುತ್ತಾ ಸಂಚಾರ ಹೊರಡುತ್ತವೆ. ಅವುಗಳ ಹೆಜ್ಜೆ ಗುರುತು ಮತ್ತು ಸೆಗಣಿಯ ಆಧಾರದಿಂದ ಅವುಗಳ ಸಂಚಾರದ ದಿಕ್ಕನ್ನು ತಿಳಿದುಕೊಳ್ಳಲು ಸಾಧ್ಯ. ಈ ಬಗ್ಗೆ ಆನೆಮಿತ್ರರಿಗೆ ತರಬೇತಿ ನೀಡಲಾಗಿದೆ.
ಅಲ್ಲಿಯೂ ಆನೆಗಳು - ಮನುಷ್ಯರ ಸಂಘರ್ಷಗಳಿಂದಾಗಿ ಸಾವುನೋವುಗಳು ಸಂಭವಿಸುತ್ತಲೇ ಇವೆ. 2020-21ರಲ್ಲಿ 15 ಜನರು ಸಾವಿಗೀಡಾಗಿದ್ದು, ಆರು ಜನರು ಅಂಗವಿಕಲರಾಗಿದ್ದಾರೆ. ಆದ್ದರಿಂದ, ಆನೆಗಳ ಉಪಟಳ ಕಡಿಮೆ ಮಾಡುವ ಬಗ್ಗೆ ಆನೆಮಿತ್ರರು ಹಳ್ಳಿಗಳಲ್ಲಿ ಜಾಗೃತಾ ಕಾರ್ಯಕ್ರಮಗಳನ್ನು ಜರಗಿಸುತ್ತಾರೆ. ಉದಾಹರಣೆಗೆ, ಈ ಸಂಘರ್ಷ ಹೆಚ್ಚಾಗಲು ಒಂದು ಕಾರಣ: ಆನೆಗಳ ಹತ್ತಿರ ಹೋಗಿ ಮೊಬೈಲ್ ಫೋನಿನಲ್ಲಿ ಸೆಲ್ಫಿ ತೆಗೆಯುವ ಕೆಲವರ ಹುಚ್ಚು ವರ್ತನೆ. ಇದರಿಂದ ಆನೆಗಳಿಗೆ ಕಿರಿಕಿರಿ ಅಥವಾ ಗಾಬರಿ ಆಗುತ್ತದೆಂದು ಆನೆಮಿತ್ರರು ಹಳ್ಳಿಗರನ್ನು ಎಚ್ಚರಿಸಿದ ನಂತರ ಈ ವರ್ತನೆ ಬಹಳ ಕಡಿಮೆಯಾಗಿದೆ.
ಚತ್ತಿಸ್ಘರ್ ರಾಜ್ಯದ ಮಹಾಸಮುಂದ್ ಜಿಲ್ಲೆಯ ತೆಂಡುವಾಹಿಯ ಆನೆಮಿತ್ರ ಸಂದೀಪ್ ಕುಮಾರ್ ಅವರದು ಹತ್ತು ವರುಷಗಳ ಅನುಭವ. ಆನೆಮಿತ್ರರಿಗೂ ಆನೆಗಳಿಂದ ಅಪಾಯ ಇದ್ದೇ ಇದೆ. ಉದಾಹರಣೆಗೆ, 2017ರಲ್ಲಿ ಆನೆಮಿತ್ರರೊಬ್ಬರ ಮಗ ಆನೆಗಳ ಹಿಂಡು ದಾಳಿ ಮಾಡಿದಾಗ ಪ್ರಾಣ ಕಳೆದುಕೊಂಡ. ಆ ದಾಳಿಯಲ್ಲಿ ಅವನ ಪತ್ನಿಗೆ ಗಾಯಗಳಾದವು.
ಅಂತೂ ಆನೆಗಳು ತಮ್ಮ ವಾಸಪ್ರದೇಶ ತೊರೆದು ಹೋಗೋದಿಲ್ಲ. ಅವುಗಳ ವಾಸಪ್ರದೇಶದ ಹತ್ತಿರದ ಹಳ್ಳಿಗಳಲ್ಲಿ ವಾಸವಿರುವ ಸ್ಥಳೀಯ ಸಮುದಾಯಗಳ ಜನರು ಅರಣ್ಯದ ಉಪ-ಉತ್ಪನ್ನಗಳನ್ನು ಸಂಗ್ರಹಿಸಲಿಕ್ಕಾಗಿ ಅರಣ್ಯದೊಳಗೆ ಹೋಗಲೇ ಬೇಕಾಗುತ್ತದೆ. ಆದ್ದರಿಂದ, ಅವರು ಆನೆಗಳೊಂದಿಗೆ ಬದುಕಲು ಕಲಿಯುವುದು ಅನಿವಾರ್ಯ.
ಫೋಟೋ : ತೋಟಕ್ಕೆ ನುಗ್ಗಿರುವ ಆನೆಹಿಂಡು …. ಕೃಪೆ: ವಲ್ಡ್ ವೈಲ್ಡ್ ಲೈಫ್.ಆರ್ಗ್
ಫೋಟೋ : ಆನೆಹಿಂಡು ಮತ್ತು ಜೀಪ್ …. ಕೃಪೆ: ಪಿಕ್ಸ್ ಹಿಯರ್.ಕೋಮ್