ಆನೆಯ ತೂಕ
ಒಂದಾನೊಂದು ಕಾಲದಲ್ಲಿ ಒಬ್ಬ ವಿಚಿತ್ರ ಸ್ವಭಾವದ ರಾಜನಿದ್ದ. ರಾಣಿ ಮತ್ತು ರಾಜನ ಅಸ್ಥಾನದವರ ಸಹಿತ ಆ ರಾಜ್ಯದ ಎಲ್ಲರಿಗೂ ರಾಜನ ವಿಚಿತ್ರ ಸ್ವಭಾವದ ಬಗ್ಗೆ ವಿಪರೀತ ಭಯ. ಯಾವ ಕ್ಷಣದಲ್ಲಿ ರಾಜ ಏನು ಮಾಡುತ್ತಾನೆಂದು ಯಾರೂ ಊಹಿಸುವಂತಿರಲಿಲ್ಲ.
ಅದೊಂದು ದಿನ ಗಜಸೇನ ಎಂಬ ಮಾವುತನನ್ನು ಆಸ್ಥಾನಕ್ಕೆ ಕರೆಸಿದ ರಾಜ. ಗಜಸೇನ ಬಂದು ಕೈಮುಗಿದು ನಿಂತಾಗ ರಾಜ ಆದೇಶಿಸಿದ, “ಗಜಸೇನಾ, ನನಗೆ ನನ್ನ ಆನೆಯ ತೂಕ ಎಷ್ಟೆಂದು ತಿಳಿಯಬೇಕಾಗಿದೆ. ನಾಳೆ ಸಂಜೆಯೊಳಗೆ ನನ್ನ ಆನೆಯ ತೂಕ ಎಷ್ಟೆಂದು ನೀನು ಹೇಳದಿದ್ದರೆ ನಿನ್ನನ್ನು ಗಲ್ಲಿಗೇರಿಸುತ್ತೇನೆ.”
ರಾಜನ ಆದೇಶ ಕೇಳಿದ ಗಜಸೇನ ನಡುಗಿ ಹೋದ. ಹಾಗೆಲ್ಲ ತೂಕ ಮಾಡಲಿಕ್ಕೆ ಆನೆ ಅಂದರೆ ಅದೇನು ಬಾಳೆ ಹಣ್ಣೇ? ಗಜಸೇನ ಮನೆಗೆ ಬಂದು ಚಿಂತೆಯಿಂದ ಮಲಗಿಕೊಂಡ. ಅವನಿಗೆ ಅನಾರೋಗ್ಯ ಆಗಿರಬಹುದೆಂದು ಅವನ ಪತ್ನಿ ಮಾತನಾಡಿಸಲಿಲ್ಲ.
ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಗಜಸೇನನ ಪತ್ನಿ ಅವನನ್ನು ಊಟಕ್ಕೆ ಕರೆದಳು. ಆದರೆ ಆತ ಉತ್ತರಿಸಲಿಲ್ಲ. ಆಗ ಅವನ ಚಿಂತೆಗೆ ಕಾರಣವೇನೆಂದು ಪತ್ನಿ ಕೇಳಿದಳು. ಗಜಸೇನ ರಾಜನ ಆದೇಶವನ್ನು ತಿಳಿಸಿದ. ಈಗ ಪತ್ನಿಗೂ ಚಿಂತೆಯಾಯಿತು.
ಮರುದಿನ ಮುಂಜಾನೆ ಅವರ ಮನೆಗೆ ಒಬ್ಬ ತಪಸ್ವಿ ಬಂದು ಭಿಕ್ಷೆ ಕೇಳಿದ. ಚಿಂತೆಯಲ್ಲಿ ಮುಳುಗಿದ್ದ ಗಜಸೇನನ ಪತ್ನಿಯನ್ನು ಕಂಡು ಚಿಂತೆಗೆ ಕಾರಣವೇನೆಂದು ತಪಸ್ವಿ ವಿಚಾರಿಸಿದ. ಅವಳು ತನ್ನ ಸಂಕಟವನ್ನೆಲ್ಲ ಹೇಳಿಕೊಂಡಳು. ತಪಸ್ವಿ ಹೇಳಿದ, “ನೀನೇನೂ ಚಿಂತೆ ಮಾಡಬೇಡ. ನಿನ್ನ ಗಂಡನನ್ನು ಬರಹೇಳು.”
ಗಜಸೇನ ಮನೆಯಿಂದ ಹೊರಬಂದಾಗ ತಪಸ್ವಿ ಅವನನ್ನು ಸಮಾಧಾನ ಪಡಿಸುತ್ತಾ ಹೇಳಿದ, “ಮಾವುತನೇ, ರಾಜನ ಆನೆಯೊಂದಿಗೆ ನದಿ ದಡಕ್ಕೆ ಬಾ. ನಾನು ಅಲ್ಲಿನ ದೇವಸ್ಥಾನದ ಎದುರು ನಿನಗಾಗಿ ಕಾದಿರುತ್ತೇನೆ.”
ಗಜಸೇನ ಆನೆಯೊಂದಿಗೆ ನದಿದಡಕ್ಕೆ ಹೋದಾಗ, ಅಲ್ಲಿ ನದಿಯಲ್ಲಿದ್ದ ದೋಣಿಯೊಂದನ್ನು ತಪಸ್ವಿ ತೋರಿಸಿದ; ಆ ದೋಣಿಯೊಳಗೆ ಆನೆಯನ್ನು ನಿಲ್ಲಿಸಬೇಕೆಂದು ಹೇಳಿದ. ಗಜಸೇನ ಹಾಗೆಯೇ ಮಾಡಿದ.
ಆನೆಯ ತೂಕದಿಂದಾಗಿ ನದಿ ನೀರಿನಲ್ಲಿ ದೋಣಿ ತುಸು ಆಳಕ್ಕೆ ಜಗ್ಗಿತು. ಆಗ ತಪಸ್ವಿ ಗಜಸೇನನಿಗೆ ಹೇಳಿದ, "ಈಗ ಆನೆ ದೋಣಿಯ ಮಧ್ಯದಲ್ಲಿ ನಿಲ್ಲುವಂತೆ ಮಾಡು. ದೋಣಿ ನೀರಿನಲ್ಲಿ ಯಾವ ಮಟ್ಟಕ್ಕೆ ಮುಳುಗುತ್ತದೆಯೋ ಆ ಮಟ್ಟವನ್ನು ದೋಣಿಯಲ್ಲಿ ಗುರುತಿಸಿಕೋ.” ಗಜಸೇನ ಹಾಗೆಯೇ ಮಾಡಿದ. ಆಗ, ಆನೆಯನ್ನು ದೋಣಿಯಿಂದ ಹೊರಗೆ ತರಬೇಕೆಂದು ತಪಸ್ವಿ ಸೂಚಿಸಿದ. ಅನಂತರ, ಆನೆಯಿದ್ದಾಗ ದೋಣಿ ನೀರಿನಲ್ಲಿ ಯಾವ ಮಟ್ಟಕ್ಕೆ ಮುಳುಗಿತ್ತೋ ಆ ಮಟ್ಟಕ್ಕೆ ಮುಳುಗುವಷ್ಟು ಅದರಲ್ಲಿ ಮರಳು ತುಂಬಿಸಬೇಕೆಂದು ತಪಸ್ವಿ ಉಪಾಯ ತಿಳಿಸಿದ.
ಗಜಸೇನ ಹಾಗೆಯೇ ಮಾಡಿದಾಗ ತಪಸ್ವಿ ಮುಗುಳ್ನಗುತ್ತಾ ಹೇಳಿದ, “ಮಾವುತನೇ, ದೋಣಿಯಲ್ಲಿರುವ ಮರಳಿನ ತೂಕ ಆನೆಯ ತೂಕಕ್ಕೆ ಸಮ. ಮರಳನ್ನು ತೂಕ ಮಾಡಿಸಿ, ಅದನ್ನು ರಾಜನಿಗೆ ತಿಳಿಸು.” ಗಜಸೇನ ತಪಸ್ವಿಯ ಕಾಲುಗಳಿಗೆ ಎರಗಿದ.
ಸಂಜೆಯ ಹೊತ್ತಿಗೆ ಅರಮನೆಗೆ ಬಂದ ಗಜಸೇನ, ರಾಜನಿಗೆ ಆನೆಯ ತೂಕವನ್ನು ತಿಳಿಸಿದನಲ್ಲದೆ, ತಾನು ಹೇಗೆ ಆನೆಯನ್ನು ತೂಕ ಮಾಡಿದೆನೆಂದೂ ತಿಳಿಸಿದ. ಗಜಸೇನನನ್ನು ಮೆಚ್ಚಿಕೊಂಡ ರಾಜ, ಆತನಿಗೆ ಉಡುಗೊರೆಯನ್ನಿತ್ತು ಸನ್ಮಾನಿಸಿದ.
ಚಿತ್ರ ಕೃಪೆ: “ವಿಸ್-ಡಮ್ ಟೇಲ್ಸ್” ಪುಸ್ತಕ