ಆನೆ ಲದ್ದಿಯಿಂದ ಪೇಪರ್!
ಆನೆ ಲದ್ದಿಯಾ? ಎಂದು ಮೂಗು ಮುಚ್ಚಿಕೊಳ್ಳದಿರಿ. ಲದ್ದಿಯಿಂದ ತಯಾರಿಸಿದ ಪೇಪರ್ ಗೆ ಏನು ಕೆಟ್ಟ ವಾಸನೆ ಇರುತ್ತೋ? ಎಂದು ಗಾಬರಿ ಪಡ ಬೇಡಿ. ನಾನಿಂದು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಾಗ ಈ ಬಗ್ಗೆ ಒಂದು ವಿಡಿಯೋ ನೋಡಿದೆ. ಅದರ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಳ್ಳುವ ಎಂದು ಮನಸ್ಸಾಯಿತು.
ನೀವು ಈ ಪೇಪರ್ ಮಾಡುವುದನ್ನು ನೋಡಬೇಕಾದರೆ ಮಾತ್ರ ಶ್ರೀಲಂಕಾ ದೇಶಕ್ಕೆ ಹೋಗಬೇಕು. ಏಕೆಂದರೆ ಇದರ ಯೋಚನೆ ಬಂದದ್ದು ಶ್ರೀಲಂಕಾದ ಓರ್ವ ಉದ್ಯಮಿಗೆ. ಇವರ ಹೆಸರು ತುಷಿತ (Tushitha). ಇವರು ಈಗ ಆನೆಯ ಲದ್ದಿಯಿಂದ ಪೇಪರ್ ತಯಾರಿಸುವ ಹೊಸ ಉದ್ದಿಮೆಯನ್ನೇ ಪ್ರಾರಂಭಿಸಿದ್ದಾರೆ ಮತ್ತು ಯಶಸ್ಸನ್ನು ಕಾಣುತ್ತಿದ್ದಾರೆ. ಇವರ ಈ ಉದ್ದಿಮೆಯಿಂದ ಪರಿಸರ ಸಂರಕ್ಷಣೆಯಾಗುತ್ತಿದೆ ಎಂದರೆ ಹಲವಾರು ಮಂದಿಗೆ ಅಚ್ಚರಿಯಾದೀತು. ಯಾಕೆ ಎಂದು ಹೇಳುವ ಮೊದಲು ನಿಮಗೆ ಪೇಪರ್ ಹೇಗೆ ತಯಾರಿಸಲಾಗುತ್ತದೆ ಎಂದು ಹೇಳಿ ಬಿಡುತ್ತೇನೆ. ನಮ್ಮಲ್ಲೂ ಮರವಲ್ಲದೇ ಬೇರೆ ಬೇರೆ ವಸ್ತುಗಳಿಂದ ಪೇಪರ್ ತಯಾರಿಕೆಯ ಕಾರ್ಯಗಳು ನಡೆಯುತ್ತಿವೆ.
ಪೇಪರ್ ತಯಾರಿಕೆಗೆ ಬೇಕಾಗುವ ಮುಖ್ಯ ವಸ್ತು ಎಂದರೆ ಮರದ ನಾರು ಅರ್ಥಾತ್ ಫೈಬರ್. ಇದನ್ನು ಪಡೆಯಲು ನಾವು ವಾರ್ಷಿಕವಾಗಿ ೧೫ ಬಿಲಿಯನ್ ಮರಗಳನ್ನು ಕಡಿಯುತ್ತೇವೆ. ೪೦% ದಷ್ಟು ಮರಗಳ ಭಾಗಗಳು ಪೇಪರ್ ತಯಾರಿಕೆಗೇ ಬಳಕೆಯಾಗುತ್ತವೆ. ಇದರಿಂದಾಗಿ ನಾವಿಂದು ಅರಣ್ಯ ನಾಶ, ಪರಿಸರದ ಹಾನಿ, ವಾಯು ಮಾಲಿನ್ಯ, ಕಲುಷಿತ ಗಾಳಿ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಗಳ ನಡುವೆ ಬದುಕಿ ನಮ್ಮ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಏನು ಪರಿಹಾರ? ಮರವನ್ನು ಕಡಿಯುವುದರ ಪ್ರಮುಖ ಕಾರಣ ಈ ಮೊದಲೇ ಅಂದಂತೆ ಪೇಪರ್ ತಯಾರಿಕೆ. ಪೇಪರ್ ತಯಾರಿಕೆಗೆ ಬೇಕಾಗುವುದು ಮರಗಳಲ್ಲಿನ ನಾರಿನಂಶ. ಈ ನಾರನ್ನು ಪಡೆಯುವ ಬೇರೆ ಬೇರೆ ದಾರಿಗಳನ್ನು ನಾವಿಂದು ಹುಡುಕಬೇಕಿದೆ.
ಇದೇ ವಿಚಾರ ತುಷಿತ ಅವರ ಮನಸ್ಸಿಗೆ ಬಂತು. ಅದಕೋಸ್ಕರವೇ ಅವರು ಆನೆಯ ಲದ್ದಿಯನ್ನು ತಮ್ಮ ಪ್ರಯೋಗಕ್ಕಾಗಿ ಬಳಸಿಕೊಂಡರು.ಇದರಿಂದ ತಯಾರಿಸಲಾಗುವ ಪೇಪರ್ ನಮ್ಮ ಮಾಮೂಲಿ ಪೇಪರ್ ನಂತೆಯೇ ಇರುತ್ತದೆ. ಅದರ ಮೇಲೆ ಬರೆಯಬಹುದು, ಚಿತ್ರ ಮಾಡಬಹುದು, ಹರಿಯಲೂ ಬಹುದು. ಬೆಂಕಿಗೆ ಹಾಕಿದರೆ ಸುಟ್ಟು ಹೋಗುತ್ತದೆ.
ಇವರು ಆನೆಯ ಲದ್ದಿಯನ್ನೇ ಏಕೆ ಬಳಸಿಕೊಂಡರು ಎಂದರೆ ಆನೆಯು ಕೇವಲ ಸಸ್ಯಾಹಾರವನ್ನೇ ಸೇವಿಸುತ್ತದೆ. ಮರ ಗಿಡಗಳ ಎಲೆಯನ್ನೇ ತಿನ್ನುತ್ತವೆ. ಇದರ ಹೊಟ್ಟೆಗೆ ಹೋದ ಸೊಪ್ಪುಗಳು ಜೀರ್ಣವಾಗಿ ಉಳಿದ ವಿಸರ್ಜನೆಗಳು ಲದ್ದಿ ಮೂಲಕ ಹೊರಗೆ ಬಂದಾಗ ಅದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನಾರಿನ ಅಂಶಗಳು ಇರುತ್ತವೆ. ಈ ನಾರಿನ ಅಂಶವನ್ನೇ ಸಂಸ್ಕರಣೆ ಮಾಡಿ ತುಷಿತ್ ಅವರು ಪೇಪರ್ ತಯಾರಿಸುತ್ತಾರೆ. ಒಂದು ಪ್ರೌಢ ಆನೆಯು ದಿನಕ್ಕೆ ಸುಮಾರು ೧೫ ಸಲ ಲದ್ದಿಯನ್ನು ವಿಸರ್ಜಿಸುತ್ತದೆ. ೧೨ ಆನೆಗಳು ಸೇರಿದರೆ ಒಂದು ಟನ್ ಲದ್ದಿಯು ಒಂದು ದಿನದಲ್ಲಿ ಸಿಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡೇ ತುಷಿತ್ ಆನೆಯ ಸಂರಕ್ಷಣೆಯ ತಾಣದಿಂದ ಲದ್ದಿಯನ್ನು ಸಂಗ್ರಹಿಸುತ್ತಾರೆ. ಅದನ್ನು ಮೊದಲಿಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ೨೦೦ ಡಿಗ್ರಿ ತಾಪಮಾನದಲ್ಲಿ ಬೇಯಿಸುತ್ತಾರೆ. ಅದನ್ನು ದೊಡ್ಡ ಪಾತ್ರೆಯಲ್ಲಿನ ನೀರಿನಲ್ಲಿ ಬೆರೆಸಿ, ಅದನ್ನು ಪೇಸ್ಟ್ ನಂತೆ ಮಾಡಿ ಅಚ್ಚಿಗೆ ಹಾಕಿ ಸಂಸ್ಕರಿಸಿ ಪೇಪರ್ ತಯಾರಿಸುತ್ತಾರೆ. ಈ ಪೇಪರ್ ನಿಂದ ಪುಸ್ತಕಗಳನ್ನು ಹಾಗೂ ಇನ್ನಿತರ ಬರವಣಿಗೆಯ ಸಾಮಾಗ್ರಿಗಳನ್ನು ತಯಾರಿಸುತ್ತಾರೆ. ಈ ಪುಸ್ತಕಕ್ಕೆ ಯಾವುದೇ ಕೆಟ್ಟ ವಾಸನೆ ಇರುವುದಿಲ್ಲ ಎನ್ನುವುದೇ ವಿಶೇಷ.
ಈ ಆನೆಗಳು ವಿಸರ್ಜಿಸುವ ಲದ್ದಿಯಿಂದ ವಾರ್ಷಿಕವಾಗಿ ಸುಮಾರು ೫೦ ಮಿಲಿಯನ್ A4 ಗಾತ್ರದ ಪೇಪರ್ ಗಳನ್ನು ತಯಾರಿಸಬಹುದು. ಇದೊಂದು ಅದ್ಭುತ ಯೋಚನೆಯಲ್ಲವೇ? ಇವರು ತಮ್ಮ ಉದ್ದಿಮೆಯನ್ನು ಪ್ರಾರಂಭಿಸುವಾಗ ಇವರ ಬಳಿ 7 ಮಂದಿ ಉದ್ಯೋಗಿಗಳಿದ್ದರು. ಆದರಿಂದು ಇವರ ಬಳಿ ೮೦ ಮಂದಿ ಉದ್ಯೋಗಿಗಳು ಇದ್ದಾರೆ. ಬಹುತೇಕ ಮಂದಿ ಮಹಿಳೆಯರು ಈ ಉದ್ದಿಮೆಯಲ್ಲಿ ಕೆಲಸ ಮಾಡಿ, ಅವರು ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಬಹಳಷ್ಟು ಉದ್ದಿಮೆಗಳು ಅಧಿಕಾಂಶವಾಗಿ ಪರಿಸರಕ್ಕೆ ಹಾನಿ ಮಾಡುತ್ತವೆ ಆದರೆ ಇವರ ಉದ್ಯಮವು ಪರಿಸರ ಸ್ನೇಹಿ ಮತ್ತು ಆನೆಗಳನ್ನೂ ಸಂರಕ್ಷಿಸುತ್ತದೆ. ಆನೆಯ ಲದ್ದಿಯಿಂದ ಆನೆಗಳಿಗೆ ಬೆಲೆ ಬಂದಿದೆ ಎನ್ನುತ್ತಾರೆ ತುಷಿತ. ಆನೆಯ ಸಂರಕ್ಷಣಾ ತಾಣಗಳು ಆನೆಗಳನ್ನು ಈಗ ಬಹಳಷ್ಟು ಮುತುವರ್ಜಿಯಿಂದ ಕಾಪಾಡುತ್ತಿವೆ. ತುಷಿತ ಅವರೇ ಸುಮಾರು ೧೬ ಆನೆಗಳನ್ನು ದತ್ತಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಆನೆಗಳ ಸಂರಕ್ಷಣೆಯೂ ಆಯಿತು, ಉದ್ದಿಮೆಯೂ ಬೆಳೆಯಿತು.
ತುಷಿತ ಅವರ ಪ್ರಕಾರ ನಾವು ಸಾಧ್ಯವಾದಷ್ಟು ದಿನ ಬಳಕೆಯ ವಸ್ತುಗಳನ್ನು ಪುನರ್ ಬಳಕೆ ಮಾಡಬೇಕು. ಇದರಿಂದ ಪರಿಸರ ಸಂರಕ್ಷಣೆ ಜೊತೆ ನಮ್ಮ ಭೂಮಿಯೂ ಕೆಡದೆ ಉಳಿಯುತ್ತದೆ. ತುಷಿತ ಈಗ ಆನೆಯ ಲದ್ದಿ ಪೇಪರ್ ಗಳನ್ನು ಸುಮಾರು ೩೦ ದೇಶಗಳಿಗೆ ಮಾರುತ್ತಾರೆ. ಇದಕ್ಕೆ ಎಲಿಫೆಂಟ್ ಪೂಪ್ ಪೇಪರ್ (Elephant poop paper) ಎನ್ನುತ್ತಾರೆ.
ತುಷಿತ ಅವರ ಮಾತುಗಳಲ್ಲೇ ಹೇಳುವುದಾದರೆ ‘ನಾನು ಮಾಡಿದ ಈ ಕೆಲಸವು ಒಂದು ಮರವನ್ನು ಕಡಿಯದೆ ಉಳಿಸಿತೆಂದರೆ, ನನ್ನ ಜೀವನ ಸಾರ್ಥಕವಾಯಿತೆಂದು ತಿಳಿಯುತ್ತೇನೆ'. ಸತ್ಯ ಸಂಗತಿ ಎಂದರೆ ತುಷಿತ ಅವರ ಕಾರ್ಯದಿಂದ ಸಾವಿರಾರು ಮರಗಳು ಉಳಿದಿವೆ. ಆ ಕಾರಣದಿಂದ ಇವರು ನಿಜಕ್ಕೂ ‘ಪ್ಲಾನೆಟ್ ವಾರಿಯರ್' ಆಗಿದ್ದಾರೆ. ಅಲ್ಲವೇ?'
ಚಿತ್ರ ವಿವರ:೧. ಆನೆಯ ಲದ್ದಿಯಿಂದ ತಯಾರಿಸಿದ ಪುಸ್ತಕದ ಜೊತೆ ತುಷಿತ
೨. ಆನೆಯ ಲದ್ದಿ
೩. ದತ್ತಕ್ಕೆ ತೆಗೆದುಕೊಂಡ ಆನೆ ಜೊತೆ ತುಷಿತ
ಮಾಹಿತಿ ಮತ್ತು ಚಿತ್ರಗಳು: ನಾಸ್ ಡೈಲಿ ಅಂತರ್ಜಾಲ ತಾಣ.