ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು

ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು

ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು

 

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಆನ್‍ಲೈನ್ ಆವೃತ್ತಿ ಈಗ ಉಚಿತವಲ್ಲ.ಮಾಸಿಕ ಶುಲ್ಕ ಹದಿನೈದರಿಂದ ಮೂವತ್ತೈದು ಡಾಲರುಗಳ ವಿವಿಧ ಪ್ಯಾಕೆಜುಗಳಲ್ಲಿ ಲಭ್ಯ.ಯಾವ ಸಾಧನದ ಮೂಲಕ ಪತ್ರಿಕೆ ಓದುತ್ತಾರೋ ಅನ್ನುವುದರ ಮೆಲೆ,ಈ ಶುಲ್ಕ ನಿಗದಿಯಾಗುತ್ತದೆ.ಐಫೋನ್ ಮೂಲಕ ಪತ್ರಿಕೆ ಓದುವವರ ಸಂಖ್ಯೆ ದೊಡ್ದದು.ಜೂನ್ ತಿಂಗಳ ನಂತರ ಆಪಲ್ ಜತೆ ಚಂದಾದಾರಿಕೆಯ ಶುಲ್ಕವನ್ನು ಹಂಚಿಕೊಳ್ಳುವ ಒಪ್ಪಂದ ಏರ್ಪಟ್ಟಿದೆ.ಸುದ್ದಿಯನ್ನು ಹಣತೆತ್ತು ಒದುವವರ ಸಂಖ್ಯೆ ದೊಡ್ದದಿಲ್ಲ ಎನ್ನುವ ಕೂಗಿನ ನಡುವೆಯೇ,ಒಂದೇ ತಿಂಗಳಲ್ಲಿ ಲಕ್ಷ ಚಂದಾದಾರರನ್ನು ಬಗಲಿಗೆ ಹಾಕಿಕೊಂಡು ನ್ಯೂಯಾರ್ಕ್ ಟೈಮ್ಸ್,ಹೊಸ ಪೀಳಿಗೆ ಹಣದ ಮುಖವನ್ನೇ ನೋಡದೆ ಗುಣಮಟ್ಟಕ್ಕೂ ಬೆಲೆ ಕೊಡುತ್ತದೆ ಎನ್ನುವ ಆಶಾವಾದವನ್ನು ಚಿಗುರಿಸಿದೆ.ಆದರೆ ಚಂದಾದಾರರ ಸಂಖ್ಯೆ ಇನ್ನಷ್ಟು ಏರಬೇಕು.ಅದು ನಿಜಕ್ಕೂ ಸವಾಲೇ ಸರಿ.
----------------------------------------
ಗೂಗಲ್ ಮ್ಯಾಪ್:ಜನರ ಸಹಭಾಗಿತ್ವ
ಗೂಗಲ್ ಮ್ಯಾಪಿನ ರಸ್ತೆಗಳ ನಕ್ಷೆಯನ್ನು ಮಾರ್ಪಡಿಸಲು ಜನರಿಗೇ ಅವಕಾಶ ಸಿಗುತ್ತಿದೆ.ಹಲವೆಡೆ ಇದರ ಮೂಲಕ ಜನರಿಗೆ ಮ್ಯಾಪ್ ಬಳಕೆ ಹೆಚ್ಚು ಅರ್ಥಪೂರ್ಣವಾಗುತ್ತದೆ.ಏಕಪಥ ರಸ್ತೆಗಳು,ಬೈಕ್‌ಗಾಗಿ ಮೀಸಲಿರಿಸಿದ ರಸ್ತೆಗಳು,ಮುಖ್ಯ ರಸ್ತೆ ಗುರುತುಗಳು ಇವುಗಳು ಸ್ಥಳೀಯರಿಗೆ ಅಥವಾ ರಸ್ತೆ ಬಳಕೆದಾರರಿಗೇ ಚೆನ್ನಾಗಿ ಗೊತ್ತಿರುತ್ತದೆ.ಅದನ್ನು ನಕ್ಷೆಯಲ್ಲಿ ಪಡಿಮೂಡಿಸಿದರೆ,ಅದು ಬಳಕೆದಾರರಿಗೆ ಹೆಚ್ಚು ಅನುಕೂಲ ಒದಗಿಸುತ್ತದೆ.ಈ ದೃಷ್ಟಿಯಿಂದ ಮ್ಯಾಪುಗಳಲ್ಲಿ ಮಾಹಿತಿಗಳನ್ನು ಸೇರಿಸಲು ನೋಂದಾಯಿತ ಬಳಕೆದಾರರಿಗೆ ಅವಕಾಶ ಸಿಗುತ್ತದೆ.ಆದರೆ,ಮಾಡಿದ ಬದಲಾವಣೆಗಳನ್ನು ಉಳಿಸುವ ಅಥವಾ ತಿರಸ್ಕರಿಸಲು ನಿರ್ವಾಹಕರು ಇರುತ್ತಾರೆ.ಈಗ ಅಮೆರಿಕಾದ ಪೂರ್ತಿ ನಕ್ಷೆಯೂ ಇದೇ ರೀತಿ,ಜನರಿಗೆ ಮುಕ್ತವಾಗಿ ತೆರೆದಿದೆ.
------------------------------------------
ಸ್ಯಾಮ್‌ಸಂಗ್ ಮತ್ತು ಅಪಲ್:ವಿವಾದ
 
ಕಂಪೆನಿಗಳು ತಮ್ಮ ಉತ್ಪನ್ನವನ್ನು ಬೇರೆ ಕಂಪೆನಿಗಳು ನಕಲಿ ಮಾಡುವ ಬಗ್ಗೆ ಆರೋಪ ಮಾಡುವುದು ಹೊಸತೇನಲ್ಲ.ಆಪಲ್ ಮತ್ತು ಸ್ಯಾಮ್‍೬ಸಂಗ್ ಕಂಪೆನಿಗಳೂ ಪರಸ್ಪರ ದೂಷಿಸಿಕೊಂಡು,ಕೋರ್ಟಿನ ಮೆಟ್ಟಿಲೂ ಏರಿವೆ.ಆಪಲ್ ಟ್ಯಾಬ್ಲೆಟ್ ಸಾಧನವನ್ನು ಸ್ಯಾಮ್‍ಸಂಗ್ ಕಂಪೆನಿಯ ಗ್ಯಾಲಕ್ಸಿ ಹೋಲುತ್ತದೆ ಎನ್ನುವುದು ಆಪಲ್‌ ಕಂಪೆನಿಯ ಅರೋಪ.ಹಲವು ಪೇಟೆಂಟುಗಳಿರುವ ವಿನ್ಯಾಸಗಳನ್ನು ತನ್ನ ಪ್ರತಿಸ್ಪರ್ಧಿ ನಕಲಿ ಮಾಡಿದೆ ಎಂದು ಅಮೆರಿಕಾದಲ್ಲಿ ಆಪಲ್ ವ್ಯಾಜ್ಯ ಹೂಡಿದೆ.ಸ್ಯಾಮ್‍ಸಂಗ್ ಕಂಪೆನಿಯೂ ಸುಮ್ಮನೆ ಕುಳಿತಿಲ್ಲ.ಸಂಪರ್ಕ ಮತ್ತು ಮೊಬೈಲ್ ಫೋನುಗಳನ್ನು ಪಿಸಿಗಳಿಗೆ ಸಂಪರ್ಕಿಸುವ ವಿಧಾನಗಳನ್ನು ಆಪಲ್ ನಕಲಿ ಮಾಡಿ,ತನ್ನ ಹಕ್ಕುಸ್ವಾಮ್ಯವನ್ನು ಮುರಿದಿದೆ ಎಂದು ಸ್ಯಾಮ್‌ಸಂಗ್ ಆರೋಪಿಸಿದೆ.ಈ ವ್ಯಾಜ್ಯವನ್ನದು ಕೊರಿಯಾದ ನ್ಯಾಯಾಲಯದಲ್ಲಿ ಹೂಡಿದೆ.ಆಪಲ್ ಕಂಪೆನಿಯು ಸ್ಯಾಮ್‍ಸಂಗ್ ಕಂಪೆನಿಯ ಮೇಲೆ ಒತ್ತಡ ಹೇರಲು ಈ ಮಾರ್ಗ ಹಿಡಿದಿದೆ ಎಂದು ಗುಮಾನಿ.ಆಪಲ್ ತನ್ನ ಸಾಧನಗಳಲ್ಲಿ ಸ್ಯಾಮ್‌ಸಂಗ್ ಕಂಪೆನಿಯು ಪೂರೈಸಿದ ಬಿಡಿಭಾಗಗಳನ್ನು ಬಳಸುತ್ತಿದೆ.ಸ್ಯಾಮ್‌ಸಂಗ್ ಕಂಪೆನಿಯು,ತನ್ನ ಗ್ರಾಹಕನನ್ನು ಕಳೆದುಕೊಳ್ಳುವ ಅಪಾಯ ಇದ್ದರೂ,ಆರೋಪವನ್ನು ಧೈರ್ಯವಾಗಿ ಎದುರಿಸದೆ ಸುಮ್ಮನಿದ್ದರೆ,ತನ್ನ ಉತ್ಪನ್ನಗಳ ಸಾಚಾತನದ ಬಗ್ಗೆ ಖಾತರಿ ಹೊಂದಿಲ್ಲ ಎನ್ನುವ ಆರೋಪವನ್ನೂ ಎದುರಿಸಬೇಕಿತ್ತು.
------------------------------------------------------------------------------------------
ಬ್ಯಾಂಕ್:ಆನ್‌ಲೈನ್ ಬಳಕೆ ಹೆಚ್ಚಳ
ಭಾರತದ ಏಳು ಕೋಟಿ ಅಂತರ್ಜಾಲ ಬಳಕೆದಾರರ ಪೈಕಿ ಕಾಲು ಭಾಗದಷ್ಟು ಅಂದರೆ ಸುಮಾರು 1.85 ಕೋಟಿ ಬಳಕೆದಾರರು ಬ್ಯಾಂಕು ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯುತ್ತಿದ್ದಾರೆ.ಸ್ಟೇಟ್‌ಬ್ಯಾಂಕ್,ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕುಗಳಿಗೆ ಹೆಚ್ಚು ಆನ್‌ಲೈನ್ ಗ್ರಾಹಕರಿದ್ದಾರೆ.ಮಾರ್ಚಿನಲ್ಲಿ ಈ ಸಂಖ್ಯೆ ಕ್ರಮವಾಗಿ 46.5,59.5ಮತ್ತು 57.1ಲಕ್ಷಗಳು.ಇನ್ನೊಂದು ಕುತೂಹಲದ ವಿಷಯವೆಂದರೆ ಕೊನೆಗೂ ಭಾರತದ ಮಹಾನಗರಗಳಲ್ಲಿ ವಾಸಿಸದ ಗ್ರಾಹಕರೂ ಅಂತರ್ಜಾಲ ಬ್ಯಾಂಕಿಂಗ್ ಸೇವೆಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಈಗ ಮಹಾನಗರವಾಸಿಗಳು ಮತ್ತು ಉಳಿದೆಡೆಯ ಗ್ರಾಹಕರ ಸಂಖ್ಯೆ ಬಹುತೇಕ ಸಮ ಸಮವಾಗಿದೆ.ಉದಾಹರಣೆಗೆ ಐಸಿಐಸಿಐ ಬ್ಯಾಂಕಿನ ಬಳಕೆದಾರರಲ್ಲಿ ಅರ್ಧಾಂಶ ಜನ ದೆಹಲಿ,ಚೆನ್ನೈ,ಮುಂಬೈ,ಕೊಲ್ಕಟಾ ಮತ್ತು ಬೆಂಗಳೂರಿನವರಾದರೆ ಉಳಿದವರು ಇತರ ನಗರ ಪಟ್ಟಣಗಳವರು.ಬ್ಯಾಂಕು ಸೇವೆಯನ್ನು ಇನ್ನಷ್ಟು ಜನಪ್ರಿಯವಾಗಿಸಲು,ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗಿಗೆ ಪ್ರಾಧಾನ್ಯ ನೀಡಲಾರಂಭಿಸಿವೆ.ತಂತ್ರಾಂಶವನ್ನಿಳಿಸಿಕೊಂಡು,ಅದನ್ನು ಹ್ಯಾಂಡ್‌ಸೆಟ್ಟಿನಲ್ಲಿ ಸ್ಥಾಪಿಸಿ,ಅದರ ಮೂಲಕ ಬ್ಯಾಂಕಿನಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸಿ ಎಂಎಮೈಡಿ ನಂಬರ್ ಪಡೆದರೆ, ಅಂತರಬ್ಯಾಂಕ್ ನಡುವೆ ಹಣ ವರ್ಗಾವಣೆಯ ಸೇವೆ ಪಡೆಯುವುದು ಸಾಧ್ಯ.
--------------------------------
ಆಂಡ್ರಾಯಿಡ್ ಫೋನಿನಲ್ಲಿ ಕನ್ನಡ
ಆಂಡ್ರಾಯಿಡ್ ಫೋನಿನಲ್ಲಿ ಕನ್ನಡ ಅಂತರ್ಜಾಲ ಪುಟಗಳನ್ನು ಓದುವ ಸಮಸ್ಯೆಗೆ ಸುಲಭ ಪರಿಹಾರವನ್ನು ಅಂಕಣದ ಓದುಗ ,ತಂತ್ರಜ್ಞ ಓಂಶಿವಪ್ರಕಾಶ್ ಅವರು ತಮ್ಮ ಬ್ಲಾಗಿನಲ್ಲಿ http://platonic.techfiz.infoನಲ್ಲಿ ಸೂಚಿಸಿದ್ದಾರೆ.ಒಪೆರಾ ಮಿನಿ ಬ್ರೌಸರ್ ಅನ್ನು ಆಂಡ್ರಾಯಿಡ್ ಮಾರುಕಟ್ಟೆಯಿಂದ ಇಳಿಸಿ ಸ್ಥಾಪಿಸಿಕೊಂಡು,ಬ್ರೌಸರಿನ ವಿಳಾಸ ಪಟ್ಟಿಯಲ್ಲಿ about:config ಎಂದು ಟೈಪಿಸಿ,ಬರುವ ಆಯ್ಕೆಗಳಲ್ಲಿ,ಸಂಕೀರ್ಣ ಸ್ಕ್ರಿಪ್ಟ್‌ಗಳಿಗೆ ಬಿಟ್‌ಮ್ಯಾಪ್ ಫಾಂಟ್ ಬಳಸಲೇ ಎನ್ನುವುದಕ್ಕೆ ಹೌದು ಎಂಬ ಆಯ್ಕೆಯನ್ನು ಬದಲಾಯಿಸುವುದೇ ಈ ಪರಿಹಾರ.
------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS28 ನಮೂದಿಸಿ.)
*CAD ಎಂದರೇನು?
*ಮೆಕಾನಿಕಲ್ ವಿಭಾಗವಲ್ಲದೆ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲೂ CAD ಯಾಕೆ ಬಳಕೆಯಾಗುತ್ತದೆ?
ಕಳೆದ ವಾರದ ಸರಿಯುತ್ತರಗಳು:
*ಭಾರತದ ಅತಿ ದೊಡ್ಡ ಐಟಿ ಕಂಪೆನಿ ಟಿಸಿಎಸ್.
*ಲೀನಕ್ಸ್‌ನಲ್ಲಿ ಲಭ್ಯವಿರುವ ಎರಡು ಡೆಸ್ಕ್‌ಟಾಪ್ ಆಯ್ಕೆಗಳು:ಜಿನೋಮ್ ಮತ್ತು ಕೆಡಿಇ. ಬಹುಮಾನ ಗೆದ್ದವರು ಜಾಯ್‌ಸನ್ ಸಲ್ದಾನಾ,ಪಕ್ಷಿಕೆರೆ. ಅಭಿನಂದನೆಗಳು.
----------------
ಚಿದಂಬರ ಕಾಕತ್ಕರ್ ಅವರ ಪಾಡ್‌ಕಾಸ್ಟು
ಪಾಡ್‌ಕಾಸ್ಟ್ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವವರ ಸಂಖ್ಯೆ ಕನ್ನಡದಲ್ಲಿ ಹೆಚ್ಚಿಲ್ಲ. ಹಾಗೆ ಮಾಡುತ್ತಿರುವವರಲ್ಲಿ ಚಿದಂಬರ್ ಕಾಕತ್ಕರ್ ಅವರು ಒಬ್ಬರು.ಕಂಪ್ಯೂಟರ್ ತಂತ್ರಾಂಶ,ಕೊಳಲು ವಾದನ,ತಂತ್ರಜ್ಞಾನದಲ್ಲಿ ಪ್ರಯೋಗಶೀಲರಾದ ಚಿದಂಬರ್ ಕಾಕತ್ಕರ್ ಅವರು,ಹಳೆಯ ಚಲನಚಿತ್ರಗೀತೆಗಳ ಸಂಗ್ರಾಹಕರಾಗಿಯೂ ಪ್ರಸಿದ್ಧರು.ಹಾಡುಗಳ ಸಾಹಿತ್ಯವೂ ಅವರ ಸಂಗ್ರಹದಲ್ಲಿ ಸಿಗುತ್ತದೆ.ತಮ್ಮ ಪಾಡ್‌ಕಾಸ್ಟಿನಲ್ಲೂ,ಕೊಳಲುವಾದನ,ಹಳೆಯ ಚಿತ್ರಗೀತೆಗಳು ಇವೆಲ್ಲವನ್ನೂ ಹಚಿಕೊಂಡಿದ್ದಾರೆ.ಆಕಾಶವಾಣಿಯು ಪ್ರಸಾರ ಮಾಡಿದ ಅವರ ಸಂದರ್ಶನದ ಧ್ವನಿಮುದ್ರಣವನ್ನೂ ಇಲ್ಲಿ ಕೇಳಿಸಿದ್ದಾರೆ.http://cbkmr.podbean.comನಲ್ಲಿದು ಲಭ್ಯ.
*ಅಶೋಕ್‌ಕುಮಾರ್ ಎ