ಆನ್‌ಲೈನ್ ಬೆಟ್ಟಿಂಗ್, ಬಾಲ್ಯವಿವಾಹಕ್ಕೆ ಕಾನೂನಿನ ನಿಯಂತ್ರಣ

ಆನ್‌ಲೈನ್ ಬೆಟ್ಟಿಂಗ್, ಬಾಲ್ಯವಿವಾಹಕ್ಕೆ ಕಾನೂನಿನ ನಿಯಂತ್ರಣ

ಆನ್‌ಲೈನ್ ಬೆಟ್ಟಿಂಗ್, ಜೂಜು ಹಾಗೂ ಬಾಲ್ಯವಿವಾಹ ಇಂಥವೆಲ್ಲ ಸಾಮಾಜಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಅಪಸವ್ಯಗಳು. ಹೀಗಾಗಿ, ಉಜ್ವಲ ಭವಿಷ್ಯ ಕಂಡು ಬಾಳಿಬದುಕಬೇಕಾದ ಯುವಜನರ ಜೀವನ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಇದರಿಂದ ಆಯಾ ಕುಟುಂಬಕ್ಕೆ ಮಾತ್ರವಲ್ಲ, ಒಟ್ಟಾರೆ ಸಮಾಜಕ್ಕೂ ತೊಂದರೆ ತಪ್ಪಿದ್ದಲ್ಲ. ಈ ಸಮಸ್ಯೆಗೆ ಕಾಯ್ದೆಯ ಮೂಲಕ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇಟ್ಟಿರುವುದು ಆಶಾದಾಯಕ ಬೆಳವಣಿಗೆ. ಆನ್‌ಲೈನ್ ಬೆಟ್ಟಿಂಗ್, ಜೂಜು ದಂಧೆ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕಾಯ್ದೆ ತರಲು ಸಜ್ಜಾಗಿ ಈ ಕುರಿತ ಮಸೂದೆ ಸಿದ್ಧಪಡಿಸಿದೆ. ಅನಧಿಕೃತ ವೇದಿಕೆಯಡಿ ಆನ್‌ಲೈನ್ ಬೆಟ್ಟಿಂಗ್ ನಿರ್ವಹಿಸುವವರಿಗೆ ಮೂರು ವರ್ಷಕ್ಕೆ ಕಡಿಮೆ ಇಲ್ಲದಂತೆ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಅಂಶ ಇದರಲ್ಲಿದೆ. ಇದೇ ರೀತಿ, ಜಾಹೀರಾತು ಮತ್ತಿತರ ಮಾರ್ಗಗಳ ಮೂಲಕ ಅಕ್ರಮ ಜೂಜಿಗೆ ಪ್ರಚೋದಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಇದೆ. ಇದೇ ವೇಳೆ, ಅಧಿಕೃತ ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ, ಅದೃಷ್ಟದಾಟ (ಗೇಮ್ ಆಫ್ ಚಾನ್ಸ್) ಹಾಗೂ ನೈಪುಣ್ಯದಾಟ (ಗೇಮ್ ಆಫ್ ಸ್ಕಿಲ್) ಎಂದು ಎರಡು ಸ್ಪಷ್ಟ ವಿಭಾಗ ಮಾಡಿ, ಪರಿಣತರ ನೇತೃತ್ವದಲ್ಲಿ ನಿಯಂತ್ರಣ ಪ್ರಾಧಿಕಾರ ರಚಿಸುವ ಉದ್ದೇಶವೂ ಸರ್ಕಾರಕ್ಕಿದೆ. ಆನ್‌ಲೈನ್ ಬೆಟ್ಟಿಂಗ್ ಗೀಳಿಗೆ ಹೆಚ್ಚಿನದಾಗಿ ಯುವಜನರೇ ಒಳಗಾಗುತ್ತಿರುವುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.

ಇನ್ನು, ಈಗಾಗಲೇ ಬಾಲ್ಯ ವಿವಾಹ ನಿಷೇಧವಾಗಿದ್ದರೂ, ರಾಜ್ಯದಲ್ಲಿ ಅಲ್ಲಲ್ಲಿ ಈ ಪಿಡುಗು ಮುಂದುವರಿದಿರುವುದು ಚಿಂತೆಗೆ ಕಾರಣವಾಗಿದೆ. ಬಾಲ್ಯವಿವಾಹದಿಂದ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಸಿದಂತಾಗುತ್ತದೆಯಲ್ಲದೆ, ಚಿಕ್ಕ ವಯಸ್ಸಿನಲ್ಲಿ ಗರ್ಭಧರಿಸಿದರೆ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಸಿಇಒಗಳ ಸಭೆ ನಡೆಸಿದ್ದರು. ಆ ವೇಳೆ ಅವರು ಇತರ ವಿಷಯಗಳ ಜೊತೆಗೆ ಬಾಲ್ಯವಿವಾಹದ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ರಾಜ್ಯದಲ್ಲಿ ಬಾಲ್ಯವಿವಾಹ ನಿಷೇಧವಾಗಿದ್ದರೂ, ೨೦೨೪-೨೫ರಲ್ಲಿ ೭೦೦ ಬಾಲ್ಯವಿವಾಹಗಳು ನಡೆದಿರುವುದರ ಬಗ್ಗೆ ಗಮನಸೆಳೆದು, ಇದನ್ನು ತಡೆಯಲು ಅಗತ್ಯಬಿದ್ದರೆ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ತರುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು 'ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೫ನ್ನು ಸಿದ್ಧಪಡಿಸಿದೆ. ಈ ಕಾಯ್ದೆಗೆ ಹೊಸದಾಗಿ ಸೇರಿಸಿದ ಸೆಕ್ಷನ್‌ಗಳ ಪ್ರಕಾರ, ಬಾಲ್ಯ ವಿವಾಹದ ನಿಶ್ಚಿತಾರ್ಥ, ಸಿದ್ಧತೆಯೂ ಅಪರಾಧವಾಗುತ್ತದೆ. ಹಾಗೇ, ಬಾಲ್ಯ ವಿವಾಹವನ್ನು ಆಯೋಜಿಸಿದವರು, ಅನುಕೂಲ ಕಲ್ಪಿಸಿದವರು ಮತ್ತು ಬಾಲ್ಯವಿವಾಹದ ಶಾಸ್ತ್ರ ನೆರವೇರಿಸಿದವರು ಕೂಡ ತಪ್ಪಿತಸ್ಥರಾಗುತ್ತಾರೆ. ಈ ಕಾಯ್ದೆಯಡಿ ಎರಡು ವರ್ಷಕ್ಕೆ ಕಡಿಮೆ ಇಲ್ಲದಂತೆ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶವಿರಲಿದೆ. ಸಾಮಾಜಿಕ ಅಪಸವ್ಯಗಳನ್ನು ತಡೆಗಟ್ಟಲು ಕಾನೂನಿನ ಬೆಂಬಲ ಬೇಕೇ ಬೇಕು. ಅದರೊಟ್ಟಿಗೆ, ಜನರು ಕೂಡ ಒಟ್ಟಾರೆ ಸಮಾಜದ ಹಿತಕ್ಕೆ ಪೂರಕವಾಗಿ, ಹೊಣೆಗಾರಿಕೆ ಅರಿತು ವ್ಯವಹರಿಸಿದರೆ ಆರೋಗ್ಯಕರ ಸಮಾಜದತ್ತ ಹೆಜ್ಜೆಹಾಕಬಹುದು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೮-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ