ಆನ್ ಲೈನ್ ಕೋರ್ಸ್ ವರದಾನ

ಆನ್ ಲೈನ್ ಕೋರ್ಸ್ ವರದಾನ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಚೇತರಿಕೆ ಹಳಿಗೆ ತರಲು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ಕಾಲ ಕಾಲಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿವೆ. ಸರಕಾರಗಳು ನೀಡುವ ಅನುದಾನ ವಿವಿಗಳ ಅಭಿವೃದ್ಧಿಗೆ ಸಾಲದು ಎಂಬ ವಾದಗಳೂ ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಏತನ್ಮಧ್ಯೆ, ಯುಜಿಸಿಯು ರಾಜ್ಯದ ೯ ವಿವಿಗಳಿಗೆ ಆನ್ ಲೈನ್ ಕೋರ್ಸ್ ಆರಂಭಿಸಲು ಅನುಮತಿ ನೀಡಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.

ಆನ್ ಲೈನ್ ಕೋರ್ಸ್ ಗೆ ನೀಡಿರುವ ಈ ಅನುಮತಿಗೆ ಯುಜಿಸಿ ಅನುಸರಿಸಿರುವ ಮಾನದಂಡವೇ ಪ್ರೇರಣಾದಾಯಕ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ ನಿಂದ (ನ್ಯಾಕ್) ಉತ್ತಮ ರಾಂಕ್ (೩.೨೬ಗಿಂತ ಹೆಚ್ಚು ಅಂಕ -ಸಿಜೆಪಿಎ) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್ ವರ್ಕ್ (ಎನ್ ಐ ಆರ್ ಎಫ್) ೧ ರಿಂದ ೧೦೦ರೊಳಗೆ ರಾಂಕ್ ಪಡೆದಿರುವ ವಿವಿಗಳು ಮಾತ್ರವೇ ಈ ಕೋರ್ಸನ್ನು ಆರಂಭಿಸಬಹುದು ಎಂದು ಸ್ಪಷ್ಟ ಪಡಿಸಿದೆ. ಆರ್ಥಿಕ ಒಳಿತಿನ ದೃಷ್ಟಿಯಿಂದ ಆನ್ ಲೈನ್ ಕೋರ್ಸ್ ಬಯಸುವಂಥ ವಿವಿಗಳಿಗೆ ಇದು ಆರೋಗ್ಯಕರ ಪೈಪೋಟಿ ನೀಡಲು ಸ್ಪೂರ್ತಿಯಾಗುವ ನಿರೀಕ್ಷೆಯೂ ಇದೆ.

ಎಲ್ಲಕ್ಕಿಂತ ಮಿಗಿಲಾಗಿ, ಆನ್ ಲೈನ್ ಕೋರ್ಸ್ ಈ ತಲೆಮಾರಿನ ಶೈಕ್ಷಣಿಕ ಅಭ್ಯಾಸ. ಕೊರೋನೋತ್ತರ ಕಾಲಘಟ್ಟದಲ್ಲಿ ಆನ್ ಲೈನ್ ಶಿಕ್ಷಣ ಹೆಚ್ಚು ರೂಢಿಗತವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದೇಶಿ ವಿಶ್ವವಿದ್ಯಾನಿಲಯಗಳು ಇದನ್ನು ಮುಂದುವರೆಸಿ ಇನ್ನಷ್ಟು ಜನಪ್ರಿಯಗೊಳಿಸಿವೆ. ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಅನುಪಾತ ಶೇ ೨೭.೧ ರಷ್ಟಿದೆ. ದ್ವಿತೀಯ ಪಿಯುಸಿವರೆಗೆ ಪ್ರವಾಹದಂತೆ ಬರುವ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಹಂತಕ್ಕೆ ಬರುವಾಗ ದಾಖಲಾತಿ ಸಂಖ್ಯೆ ಭಾರೀ ಕುಸಿತ ಕಂಡಿರುತ್ತದೆ. ಉನ್ನತ ಶಿಕ್ಷಣ ವಂಚಿತ ವರ್ಗಗಳನ್ನು ಸೆಳೆಯಲು ದೂರ ಶಿಕ್ಷಣ ಇಲ್ಲವೇ ಆನ್ ಲೈನ್ ಕೋರ್ಸ್ ಅತ್ಯಗತ್ಯ.

ಆನ್ ಲೈನ್ ಶಿಕ್ಷಣದ ಹೆಚ್ಚಿನ ಫಲಾನುಭವಿಗಳು ೨೧ ವರ್ಷ ಮೇಲ್ಪಟ್ಟವರು ಎಂದರೆ, ದುಡಿಯುವ ವರ್ಗದವರೇ ಆಗಿರುತ್ತಾರೆ. ಉದ್ಯೋಗದ ಭವಿಷ್ಯ, ಬಡ್ತಿ, ಹೆಚ್ಚು ಸಂಭಾವನೆಯ ದೃಷ್ಟಿಯಿಂದ ಇವರಿಗೆ ಪದವಿ, ಉನ್ನತ ಪದವಿ ಪೂರೈಸಿಕೊಳ್ಳುವುದು ಅನಿವಾರ್ಯ. ಈ ಕಾರಣದಿಂದ ರೆಗ್ಯುಲರ್ ಕಾಲೇಜಿನ ಪ್ರವೇಶಾತಿ ಶುಲ್ಕಕ್ಕಿಂತ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದ ಶುಲ್ಕವನ್ನು ವಿಧಿಸಲಾಗುತ್ತದೆ. ದಾಖಲಾತಿ ಶುಲ್ಕವನ್ನೇ ಬಂಡವಾಳವಾಗಿರಿಸಿಕೊಂಡಿರುವ ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ಶಿಕ್ಷಣ ತಂದುಕೊಡುವ ಹೆಚ್ಚುವರಿ ಶುಲ್ಕ ವರದಾನವೇ ಸರಿ.

ಸರಕಾರಿ ವ್ಯವಸ್ಥೆಯಲ್ಲಿ ಕೆಲವು ಇಲಾಖೆಗಳಿಗೆ ಸಾಕಷ್ಟು ಜಮೀನು, ಕಟ್ಟಡಗಳಿವೆ. ಇವುಗಳಿಂದಲೂ ಇಲಾಖೆಗಳು ವರಮಾನ ಪಡೆಯುತ್ತಿರುತ್ತದೆ. ಆದರೆ, ವಿವಿಗಳಿಗೆ ಇಂಥಾ ಅವಕಾಶವಿಲ್ಲ. ಆಸ್ತಿ ಇದ್ದರೂ, ವಿವಿಗಳು ಅದನ್ನು ವಾಣಿಜ್ಯಿಕ ಚಟುವಟಿಕೆಗೆ ದುಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೂ ಆನ್ ಲೈನ್ ಶಿಕ್ಷಣಕ್ಕೆ ನೀಡಿರುವ ಒಪ್ಪಿಗೆ ವಿವಿಗಳಿಗೆ ನಿಶ್ಚಿತವಾಗಿಯೂ ಅನುಕೂಲ ಕಲ್ಪಿಸಲಿದೆ. ಈ ಪ್ರಯೋಜನವನ್ನು ಪದವಿ, ಉನ್ನತ ಶಿಕ್ಷಣ ವಂಚಿತ ವರ್ಗವೂ ಪಡೆದುಕೊಂಡಾಗ ಯುಜಿಸಿಯ ಆಲೋಚನೆ ಸಾರ್ಥಕತೆ ಪಡೆಯುತ್ತದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೦೮-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ