ಆನ್ ಲೈನ್ ಗೇಮಿಂಗ್…!
ಯುವ ಶಕ್ತಿಯ ಅಂತಃಸತ್ವಕ್ಕೆ ಕೊಳ್ಳಿಯಿಡುತ್ತಿರುವ ಅಪಾಯಕಾರಿ ಆಟ. ಮಾದಕ ದ್ರವ್ಯಗಳು ಈಗಾಗಲೇ ಸಾಕಷ್ಟು ಹಾನಿ ಮಾಡುತ್ತಿರುವಾಗ ಅದಕ್ಕಿಂತ ಅಪಾಯಕಾರಿಯಾಗಿ ಗ್ರಾಮೀಣ ಭಾಗಗಳಿಗೂ ದಾಳಿ ಇಟ್ಟು ಅಧೀಕೃತವಾಗಿಯೇ ಸಾರ್ವಜನಿಕ ಬದುಕನ್ನು ನಾಶ ಮಾಡಲು ಲೈಸೆನ್ಸ್ ಪಡೆದು ಪ್ರವೇಶಿಸಿರುವ ಜೂಜು ಕಟ್ಟೆಗಳು. ಕೇವಲ 25-30 ವರ್ಷಗಳ ಹಿಂದಿನವರೆಗೂ ಜೂಜು ಎಂಬುದನ್ನು ಪುರುಷ ವೇಶ್ಯಾ ವೃತ್ತಿ ಎಂದೇ ಪರಿಗಣಿಸಲಾಗಿತ್ತು. ಜೂಜುಕೋರನನ್ನು ದರೋಡೆಕೋರರಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಜೂಜುಕೋರನ ಮನೆಗೆ ಹೆಣ್ಣು ಕೊಡಲು ಸ್ವತಃ ಗಂಡಿನ ಮನೆಯವರೆ ಒಪ್ಪುತ್ತಿರಲಿಲ್ಲ. ಪಾಪ ಇವನಿಂದ ಆ ಹೆಣ್ಣು ಮಗುವಿನ ಬಾಳು ಹಾಳಾಗುವುದು ಬೇಡ ಎಂಬ ಕಾರಣಕ್ಕಾಗಿ.
ಆದರೆ ಈಗ ಸರ್ಕಾರಗಳೇ ಆನ್ ಲೈನ್ ಜೂಜುಗಳಿಗೆ ಅನುಮತಿ ನೀಡುತ್ತಿವೆ. ನಮ್ಮ ಸೂಪರ್ ಮ್ಯಾನ್ ಗಳಾದ ಕೆಲವು ಮನೆಹಾಳ ಸಿನಿಮಾ ನಟರು ಮತ್ತು ಕ್ರೀಡಾಪಟುಗಳು ಎಕ್ಸ್ ಟ್ರಾ ಹಣಕ್ಕಾಗಿ ತಮ್ಮನ್ನೇ ಮಾರಿಕೊಂಡು ಜೂಜಿನ ಜಾಹೀರಾತುಗಳಲ್ಲಿ ನಾಚಿಕೆ ಮಾನ ಮರ್ಯಾದೆ ಇಲ್ಲದೇ ಅತ್ಯಂತ ಹೇಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಮನೆಯಲ್ಲಿ ಕೇವಲ ಒಬ್ಬ ಈ ಜೂಜಿನ ಚಟಕ್ಕೆ ಬಲಿಯಾದರೆ ಇಡೀ ಕುಟುಂಬವೇ ನಾಶವಾದಂತೆ. ಭಾರತೀಯ ಸಂಸ್ಕೃತಿಯಲ್ಲಿ ರಕ್ತ ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ಆ ಸಂಬಂಧದ ಎಲ್ಲರೂ ಮಾನಸಿಕ ಅವಮಾನ ಮತ್ತು ಆಘಾತದಿಂದ ತತ್ತರಿಸುತ್ತಾರೆ. ಮೊಬೈಲ್ ಇಂಟರ್ನೆಟ್ ಯುಗದಲ್ಲಿ ಇದು ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಹಬ್ಬುತ್ತಿದೆ.
ಜೊತೆಗೆ ಈ ಮನೆಹಾಳ ಆನ್ ಲೈನ್ ಗೇಮಿಂಗ್ ನವರು ಆಕರ್ಷಣೆ ಮಾಡಲು ಉಚಿತವಾಗಿ ಪ್ರಾರಂಭದಲ್ಲಿ ಎಷ್ಟೋ ದೊಡ್ಡ ಮೊತ್ತದ ಹಣವನ್ನು ಪಾಯಿಂಟುಗಳ ರೂಪದಲ್ಲಿ ನೀಡಿ ಮನಸ್ಸು ಚಂಚಲಗೊಳ್ಳುವಂತೆ ಮಾಡುತ್ತಾರೆ. ಈ ಆಧುನಿಕ ಕಾಲದಲ್ಲಿ ಮೊದಲೇ ಯುವಕರು ಏನೇನೋ ಮಾನಸಿಕ ಒತ್ತಡಕ್ಕೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅದರ ಸಂಪೂರ್ಣ ದುಷ್ಟ ಲಾಭವನ್ನು ಈ ಗೇಮಿಂಗ್ ನವರು ಪಡೆಯುತ್ತಾರೆ.
ಆನ್ ಲೈನ್ ಗೇಮಿಂಗ್ ವ್ಯವಹಾರ ಸಾವಿರಾರು ಕೋಟೆಗಳನ್ನು ದಾಟಿ ಮುನ್ನಡೆಯುತ್ತಿದೆ. ಈ ಧೋನಿ - ರೋಹಿತ್ ಶರ್ಮಾ ಸೇರಿ ಅನೇಕ ಕ್ರಿಕೆಟ್ ಮತ್ತು ಇತರ ಕ್ರೀಡಾ ಪಟುಗಳು ತಮ್ಮ ತಮ್ಮ ವೃತ್ತಿಯಲ್ಲಿ ಅಪಾರ ಹಣ ಗಳಿಸುತ್ತಾರೆ, ಜಾಹೀರಾತುಗಳು ಮೂಲಕ ಮತ್ತಷ್ಟು ಹಣ ಜೊತೆಗೆ ಇತರ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಿ ಅಲ್ಲಿಯೂ ಹಣ. ಇಷ್ಟರ ನಂತರವೂ ಈ ಮನೆಹಾಳ ಜೂಜಿನ ಜಾಹೀರಾತುಗಳಲ್ಲಿ ಭಾಗವಹಿಸಿ ಹಣ ಮಾಡಲು ಬಯಸಿ ಇಡೀ ಭಾರತೀಯ ಯುವ ಸಮೂಹ ದಾರಿ ತಪ್ಪಲು ಹಾದಿ ತೋರಿಸುತ್ತಾರೆ. ಇವರನ್ನು ತಲೆ ಹಿಡುಕರು ಎನ್ನಲು ಸಂಕೋಚ ಪಡಬೇಕೆ ಯೋಚಿಸಿ.
ಈಗಿನ ನಮ್ಮ ದೇಶದ ಮಹತ್ವಾಕಾಂಕ್ಷೆಯ ಪ್ರಧಾನಿಯವರು ಭಾರತದ್ದು ಅಮೃತ ಕಾಲ. ಇದನ್ನು ವಿಶ್ವ ಗುರು ಮಾಡುವುದಾಗಿ ಪ್ರತಿ ಭಾಷಣದಲ್ಲೂ ಹೇಳುತ್ತಾರೆ. ಭಾರತದ ಆರ್ಥಿಕತೆಯನ್ನು ಇನ್ನೂ ಬೃಹತ್ ಮಾಡುವ ಕನಸನ್ನು ಹೊಂದಿದ್ದಾರೆ. ಬುಲೆಟ್ ಟ್ರೈನುಗಳು, ವಿಮಾನ ನಿಲ್ದಾಣಗಳು, ಸ್ಮಾರ್ಟ್ ಸಿಟಿಗಳು, ದಶಪಥ ರಸ್ತೆಗಳು, ಭವ್ಯ ಪಾರ್ಲಿಮೆಂಟ್ ಹೌಸ್ ಹೀಗೆ ವೈಭವೋಪೇತ ಅಭಿವೃದ್ಧಿ ಮಾಡಬೇಕಿದೆ. ಅದಕ್ಕಾಗಿ ಅವರಿಗೆ ತುಂಬಾ ತುಂಬಾ ದುಡ್ಡು ಬೇಕಾಗಿದೆ. ಯಾವ ಯಾವ ಮೂಲೆಗಳಿಂದ ಹಣ ಬಂದರೂ ಬಿಡುವುದಿಲ್ಲ. ಅದರಲ್ಲೂ ಅತಿಹೆಚ್ಚಿನ ತೆರಿಗೆ ಬರುವ ಆನ್ ಲೈನ್ ಗೇಮಿಂಗ್ ಉದ್ಯಮದ ಆದಾಯವನ್ನು ಕಳೆದುಕೊಳ್ಳಲು ಅವರು ಸಿದ್ದರಿಲ್ಲ. ಪ್ರತಿ ತಿಂಗಳೂ ಜಿಎಸ್ಟಿ ಆದಾಯ ಹೆಚ್ಚಾಗುತ್ತಲೇ ಇರಬೇಕು. ಅವರ ಮುಖ್ಯ ಗುರಿ ಅದೇ ಆಗಿದೆ. ಭಾಷಣದಲ್ಲಿ ಹೇಳುವುದು ಮಾತ್ರ ಧರ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರ. ಆದರೆ ಅನುಮತಿ ಕೊಟ್ಟು ವ್ಯವಹಾರ ನಡೆಸುವುದು ಜೂಜು ಕೇಂದ್ರಗಳಿಂದ.
ಆನ್ ಲೈನ್ ಗೇಮಿಂಗ್ ಚಟಕ್ಕೂ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಏನು ಸಂಬಂಧ ಎಂದು ಕೆಲವರು ಕೇಳಬಹುದು. ಖಂಡಿತ ನೇರ ಸಂಬಂಧವಿದೆ. ಮನೆಯ ಯಜಮಾನ ಪ್ರಾಮಾಣಿಕ ದುಡಿಮೆಯಿಂದ ಸತ್ಯದ ಮಾರ್ಗದಲ್ಲಿ ಬೆಳೆದರೆ ಮಕ್ಕಳು ಸಹ ಹಾದಿ ತಪ್ಪುವ ಸಾಧ್ಯತೆಗಳು ಕಡಿಮೆ ಮತ್ತು ಸಂಪಾದಿಸಿದ ಹಣವನ್ನು ಸಂಸ್ಕಾರಯುತವಾಗಿ ಉಳಿಸಿ ಬೆಳೆಸುತ್ತಾರೆ. ಇಲ್ಲದಿದ್ದರೆ ಕೆಟ್ಟ ದುಷ್ಟ ಸಂಪಾದನೆಯ ಹಣವನ್ನು ಜೂಜು ಮುಂತಾದ ದುಶ್ವಟಗಳಲ್ಲಿ ಎಲ್ಲವನ್ನೂ ಕಳೆಯುತ್ತಾರೆ. ಇತಿಹಾಸದ ಅನುಭವದಿಂದ ಇದು ಈಗಾಗಲೇ ಖಚಿತಪಟ್ಟಿದೆ.
ಪ್ರತಿಯೊಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಇದು ಅತ್ಯಂತ ವೇಗವಾಗಿ ಹರಡುತ್ತಿದೆ. ಚುಟುಕು ಕ್ರಿಕೆಟ್ ಇದಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಡುತ್ತಿದೆ. ಆನ್ ಲೈನ್ ಗೇಮಿಂಗ್ ಒಡೆಯರು ಈಗಾಗಲೇ ಕೋಟ್ಯಾಧಿಪತಿಗಳಾಗಿ ಭ್ರಷ್ಟ ಮಾರ್ಗದ ಮೂಲಕ ಸರ್ಕಾರಗಳ ಮೇಲೆಯೇ ನಿಯಂತ್ರಣ ಸಾಧಿಸುವ ಮಟ್ಟಕ್ಕೆ ಬೆಳಿದಿದ್ದಾರೆ. ಇದು ಇನ್ನೂ ಹೆಚ್ಚಾದರೆ ತುಂಬಾ ಕಷ್ಟ. ಕ್ರಿಕೆಟ್ ಬೆಟ್ಟಗ್ ನಿಂದ ದಾವೂದ್ ಇಬ್ರಾಹಿಂ ನಂತ ನಟೋರಿಯಸ್ ಕ್ರಿಮಿನಲ್ ಸೃಷ್ಟಿಯಾದ ಇತಿಹಾಸ ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ಕ್ರಿಮಿನಲ್ ಗಳು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಏನು ಮಾಡಲು ಹೇಸುವುದಿಲ್ಲ.
ಆನ್ ಲೈನ್ ಗೇಮಿಂಗ್ ನಿಂದ ಬರುವ ತೆರಿಗೆ ಆದಾಯ ಅಸಹ್ಯಕ್ಕೆ ಸಮಾನ ಎಂದು ಯಾರಾದರೂ ಈ ದೇಶದ ಮೌಲ್ಯಗಳನ್ನು - ಸಂಸ್ಕಾರಗಳನ್ನು ಕಾಪಾಡಬೇಕು ಎನ್ನುವವರು ದಯವಿಟ್ಟು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಿ. ಹೇಗಿದ್ದರೂ ಅನೇಕ ನಿಷೇಧಗಳನ್ನು ಮಾಡುವುದರಲ್ಲಿ ಈ ಪ್ರಧಾನಿಗಳು ಪರಿಣಿತರು. ಈ ಯುವ ಜನತೆಯ ಅತ್ಯಂತ ಮಾರಕ ಆನ್ ಲೈನ್ ಜೂಜು ಸಹ ನಿಷೇಧಕ್ಕೆ ಒಳಗಾಗಲಿ. ಈ ನಿಷೇಧದ ವಿರುದ್ಧ ಬಹುಶಃ ಕೆಲವೇ ಕೆಲವು ದುಷ್ಟ ಶಕ್ತಿಗಳು ಹೊರತುಪಡಿಸಿ ಯಾವ ಭಾರತೀಯರು ಪ್ರತಿಭಟನೆ ನಡೆಸುವುದಿಲ್ಲ. ಬದಲಾಗಿ ಇದರಿಂದ ಸಂತ್ರಸ್ತವಾದ ಸಾವಿರಾರು ಕುಟುಂಬಗಳು ಪ್ರಧಾನಿಗಳಿಗೆ ಹೃದಯ ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತಾರೆ.
ಈ ಕ್ಷಣದಲ್ಲಿ ಈ ಲೇಖನ ಬರೆಯುತ್ತಿರುವುದರಿಂದ ಈಗಿನ ಪ್ರಧಾನಿಗಳನ್ನು ಹೊಣೆ ಮಾಡಲಾಗಿದೆ. ವಾಸ್ತವವಾಗಿ ಅವರು ಮಾತ್ರವಲ್ಲ. ಹಿಂದಿನ ಮತ್ತು ಈಗಿನ ಎಲ್ಲಾ ರಾಜಕೀಯ ಪಕ್ಷಗಳ ಎಲ್ಲಾ ನಾಯಕರಿಗು ಈ ವಿಷಯದಲ್ಲಿ ಛೀಮಾರಿ ಹಾಕಬೇಕಿದೆ. ಆ ಆಧೋಗತಿಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗವೂ ಸೇರಿ ಅನೇಕರ ಬೇಜವಾಬ್ದಾರಿ ಇದೆ. ಒಳ್ಳೆಯದನ್ನು ಕೇವಲ ಮಾತಿಗೆ ಸೀಮಿತಗೊಳಿಸಿ ಕೆಟ್ಟದ್ದನ್ನು ಮಾತ್ರ ಅನುಮತಿ ನೀಡಿ ಬಹಿರಂಗವಾಗಿ ಪ್ರೋತ್ಸಾಹಿಸುವ ಈ ಗೋಮುಖ ವ್ಯಾಘ್ರತನವನ್ನು ಎಲ್ಲಾ ಸಂಸ್ಕಾರವಂತ ಜನ ಪಕ್ಷಾತೀತವಾಗಿ ವಿರೋಧಿಸಬೇಕಿದೆ. ಜೂಜು ತೊಲಗಲಿ - ಕ್ರೀಡೆ ಬೆಳೆಯಲಿ - ದೇಶ ಉಳಿಯಲಿ....ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿಯವರಿಗೆ ತಲುಪಿಸುವ ಕೆಲಸವನ್ನು ಎಲ್ಲರೂ ಮಾಡೋಣ. ಈ ಜೂಜಿನ ಆದಾಯಕ್ಕೆ ಪರ್ಯಾಯವಾಗಿ ಮತ್ತೆ ಏನಾದರೂ ಶ್ರಮದಾಯಕ, ಪ್ರಾಮಾಣಿಕ ಮತ್ತು ಹಾನಿಕಾರಕವಲ್ಲದ ಸಂಸ್ಕಾರಯುತ ಮೂಲಗಳು ಸೃಷ್ಟಿಯಾಗಲಿ.
-ವಿವೇಕಾನಂದ ಎಚ್ ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ