ಆಪರೇಶನ್ ಸಿಂದೂರ: ಪಾಕ್‌ ದುಷ್ಟತನಕ್ಕೆ ಪ್ರತೀಕಾರ

ಆಪರೇಶನ್ ಸಿಂದೂರ: ಪಾಕ್‌ ದುಷ್ಟತನಕ್ಕೆ ಪ್ರತೀಕಾರ

ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ, ಭಯೋತ್ಪಾದನ ತರಬೇತಿ ಕೇಂದ್ರಗಳ ಮೇಲೆ ಡೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದೆ. ೮೦ಕ್ಕೂ ಅಧಿಕ ಭಯೋತ್ಪಾದಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ- ಮೊಹಮ್ಮದ್, ಲಷ್ಕರ್- ಇ-ತೊಯ್ಬಾದ ಕೇಂದ್ರಗಳನ್ನೇ ಪ್ರಮುಖ ಗುರಿಯಾಗಿಸಲಾಗಿದೆ. ಒಟ್ಟು ೯ ಕಡೆಗಳಲ್ಲಿನ ೨೧ ಭಯೋತ್ಪಾದಕ ನೆಲೆಗಳನ್ನು ನೆಲಸಮಗೊಳಿಸಲಾಗಿದೆ ಇವುಗಳಲ್ಲಿ ಕೆಲವಂತೂ ಭಯೋತ್ಪಾದಕರನ್ನು ತಯಾರಿಸುವಲ್ಲಿ ಪ್ರಮುಖ ಕೇಂದ್ರಗಳಾಗಿದ್ದವು. ಮುರಿಡೈಯಲ್ಲಿರುವ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಮುಖ್ಯ ಕಚೇರಿ ಹಾಗೂ ಲಷ್ಕರ್ ನ ಮುಖ್ಯಸ್ಥ ಮಸೂದ್ ಅಜರ್‌ನ ತವರು ನೆಲವಾದ ಬಾವಲ್‌ಪುರದ ಶಿಬಿರಗಳನ್ನು ಕೂಡಾ ನಾಶಪಡಿಸಲಾಗಿದೆ. ಮುರಿಡೈಯ ತರಬೇತಿ ಕೇಂದ್ರದಲ್ಲೇ ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಜಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ತರಬೇತಿ ಪಡೆದಿದ್ದರೆಂಬುದು ಉಲ್ಲೇಖನೀಯ, ಜೈಶ್ ಇ ಮೊಹಮ್ಮದ್‌ ನ ಮುಖಂಡ ಮಸೂದ್ ಆಜರ್‌ನ ಕುಟುಂಬ ಸದಸ್ಯರು ಕೂಡಾ ಭಾರತದ ದಾಳಿಯಲ್ಲಿ ಸಾವಿಗೀಡಾಗಿದ್ದು, ಭಾರತದಲ್ಲಿ ಹಲವು ಕುಟುಂಬಗಳನ್ನು ನಾಶಗೈದಾತನಿಗೆ ತಕ್ಕ ಶಾಸ್ತಿಯಾಗಿದೆ. ಜಮ್ಮುವಿನೊಳಕ್ಕೆ ಉಗ್ರರನ್ನು ನುಗ್ಗಿಸುವಲ್ಲಿ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಯಾಲ್‌ಕೋಟ್ ಮೇಲೂ ದಾಳಿ ನಡೆಸಲಾಗಿದೆ. ವಿಶೇಷವೆಂದರೆ ಈ ದಾಳಿಯಲ್ಲಿ ಪಾಕಿಸ್ತಾನದ ವಾಯು ಗಡಿಯನ್ನು ಉಲ್ಲಂಘಿಸುವ ಪ್ರಯತ್ನಕ್ಕೆ ಹೋಗದೆ ಭಾರತದ ನೆಲದಿಂದಲೇ ಕರಾರುವಾಕ್ಕಾಗಿ ದಾಳಿ ನಡೆಸಲಾಗಿದೆ. ಇದು ಭಾರತದ ರಕ್ಷಣಾ ಪಡೆಯ ದಕ್ಷತೆ. ಕ್ಷಮತೆ, ತಂತ್ರಜ್ಞಾನ ಪ್ರಗತಿ, ವ್ಯವಸ್ಥಿತ ಯೋಜನೆಯ ದ್ಯೋತಕವಾಗಿ ಮೂಡಿಬಂದಿದೆ.

ಭಾರತದ ಈ ದಾಳಿಯು ಮತ್ತೊಂದು ವಿಧದಲ್ಲೂ ಮಹತ್ವದ್ದಾಗಿದೆ. ಭಾರತವು ಪಾಕಿಸ್ತಾನದ ಹೃದಯ ಭಾಗಕ್ಕೇ ಈ ದಾಳಿಯನ್ನು ನಡೆಸಿವೆ. ಈ ದಾಳಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದನಾಲ್ಕು ತಾಣಗಳನ್ನೂ ಗುರಿಯಾಗಿಸಲಾಗಿದ್ದು, ಪಂಜಾಬ್ ಪ್ರಾಂತ್ಯವು ಪಾಕಿಸ್ತಾನದ ಕೇಂದ್ರ ಭಾಗವಾಗಿದೆ. ಸೇನಾಧಿಕಾರಿಗಳ ಮತ್ತು ಪ್ರಮುಖ ರಾಜಕಾರಣಿಗಳ ನಿವಾಸಗಳಿರುವುದು ಇಲ್ಲಿಯೆ. ಅಲ್ಲಿಗೇ ದಾಳಿ ನಡೆಸುವ ಮೂಲಕ 'ನಿಮ್ಮ ಎದೆಯನ್ನೇ ಮೆಟ್ಟಬಲ್ಲೆವು' ಎಂಬ ಸಂದೇಶವನ್ನು ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಕಳಿಸಿದೆ. (ಹಿಂದಿನ ಉರಿ ಪ್ರತಿಕಾರ ಮತ್ತು ಬಾಲಾಕೋಟ್ ದಾಳಿಗಳನ್ನು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಖೈಬರ್ ಫನ್ಸೂನ್‌ ಕ್ಯಾಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಮಾತ್ರ ನಡೆಸಲಾಗಿತ್ತು)

ಭಾರತವು ಈ ಪ್ರತೀಕಾರದ ದಾಳಿಗೆ ನೀಡಿರುವ 'ಅಪರೇಷನ್ ಸಿಂದೂರ' ಎಂಬ ಸಂಕೇತ ನಾಮ ಕೂಡಾ ಅನ್ವರ್ಥವಾಗಿದೆ. ಪಹಲ್ಟಾಮ್‌ನಲ್ಲಿ ಪುರುಷರನ್ನಷ್ಟೆ ಹತ್ಯೆಗೈಯುವ ಮೂಲಕ ಹಲವರ ಸಿಂಧೂರವನ್ನು ಅಳಿಸಲಾಗಿತ್ತು. ಇದೀಗ ಆ ದಾಳಿಗೆ ನ್ಯಾಯ ಒದಗಿಸಲಾಗಿದೆ ಎಂಬುದಾಗಿ ಸೇನೆಯು ಘೋಷಿಸಿದೆ. ಭಾರತದ ದಾಳಿಯ ವಿವರವನ್ನು ಮಾಧ್ಯಮಗಳಿಗೆ ನೀಡಲು ಕೂಡಾ ಇಬ್ಬರು ಮಹಿಳಾ ಸೇನಾಧಿಕಾರಿಗಳನ್ನ ಬಳಸಿಕೊಂಡಿರುವುದು ಮತ್ತು ಅವರಿಬ್ಬರೂ ಹಿಂದೂ ಮತ್ತು ಮುಸ್ಲಿಮರಾಗಿರುವುದು ಕೂಡಾ ಸಾಂಕೇತಿಕ ಮಹತ್ವ ಪಡೆದಿದೆ. 'ಹಿಂದೂ ಮುಸ್ಲಿಮರೆಂದೂ ಜತೆಯಾಗಿ ಬಾಳಲಾರರು' ಎಂದು ಕೆಲದಿನಗಳ ಹಿಂದಷ್ಟೆ ನುಡಿದಿದ್ದ ಪಾಕ್ ಸೇನಾ ಮುಖ್ಯಸ್ಥನಿಗೆ 'ಭಾರತದಲ್ಲಿ ಅಂತಹ ಏಕತೆ ಸಾಧ್ಯವಿದೆ' ಎಂಬುದನ್ನು ತಪರಾಕಿ ನೀಡಿ ಸಾರಲಾಗಿದೆ. ಮೋದಿ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಗಡಿಯಾಚೆಯಿಂದ ನಡೆಯುವ ಭಯೋತ್ಪಾದಕ ಕೃತ್ಯಗಳನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈ ಮೊದಲೇ ರವಾನಿಸಿಯಾಗಿದೆ. ಉರಿ ದಾಳಿಗೆ ಪ್ರತಿಯಾಗಿ ನಡೆಸಿದ ಸರ್ಜಿಕಲ್ ದಾಳಿ ಹಾಗೂ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ಮೇಲೆ ಸರ್ಜಿಕಲ್ ದಾಳಿ ನಡೆಸಲಾಗಿತ್ತು. ಹಾಗಿದ್ದೂ ದುಷ್ಟ ಪಾಕಿಸ್ತಾನ ಮತ್ತು ಅಲ್ಲಿನ ಕುಟಿಲ ಸೇನೆಯು ಪಾಠ ಕಲಿತಿಲ್ಲ. ಇದೀಗ ಮತ್ತೊಮ್ಮೆ ಇಂತಹುದೇ ಪಾಠ ಕಲಿಸಲಾಗಿದೆ. ಜತೆಗೇ ದೀರ್ಘಾವಧಿ ಪಾಠ ಕಲಿಸುವ ಯೋಜನೆಯನ್ನೂ ಭಾರತವು ಹಾಕಿಕೊಂಡಿದೆ.

ಸಿಂಧೂ ನದಿ ನೀರು ಒಪ್ಪಂದ ರದ್ದತಿ, ಅವಶ್ಯಕ ವಸ್ತುಗಳ ರಫ್ತು ರದ್ದು ಮತ್ತು ಪಾಕಿಸ್ತಾನದಿಂದಾಗುವ ಆಮದಿನ ಮೇಲೆ ನಿರ್ಬಂಧ ಮೊದಲಾದವು ಈಗಾಗಲೆ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಪಾಕಿಸ್ತಾನದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿರುವುದು ಖಂಡಿತ. ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದುಕೊಂಡು ನಿಂತಿರುವ ಪಾಕಿಸ್ತಾನದ ಕುರಿತಂತೆ ಜಗತ್ತಿಗೂ ಈಗ ಸದಭಿಪ್ರಾಯವಿಲ್ಲ. ತನ್ನ ದಾರಿ ತಿದ್ದಿಕೊಳ್ಳುವುದೊಂದೇ ಅದಕ್ಕಿರುವ ದಾರಿ, ಪಾಕಿಸ್ತಾನ ತನ್ನ ದಾರಿ ತಿದ್ದಿಕೊಳ್ಳದಿದ್ದರೆ ಅವಸಾನವೇ ಅದರ ಗತಿ ಎಂಬುದಂತೂ ನಿಶ್ಚಿತ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೮-೦೫-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ