ಆಪಾದಿತನಾಗಿ ನ್ಯಾಯಾಲಯದಲ್ಲಿ ನಿಲ್ಲುವುದು - ಕುಟುಂಬಕ್ಕೆ ಕಳಂಕ
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.
ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”
ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)
೧೯೫೪ರಲ್ಲಿ ಕುಂದಾಪುರದಲ್ಲಿ ಮ್ಯಾಜಿಸ್ಟ್ರೇಟಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಟೆನ್ನಿಸ್ಕ್ಲಬ್ ಸ್ಥಾಪಿಸಲು ಅಧಿಕಾರಿಗಳಲ್ಲಿ ಕೆಲವರು ಮುಂದಾದೆವು ಮತ್ತು ತುಂಬ ಗೌರವಾನ್ವಿತ ಕುಟುಂಬಗಳ ಯುವಕರು ಮತ್ತು ಮಧ್ಯವಯಸ್ಕರಲ್ಲಿ ಅನೇಕರು ಕ್ಲಬ್ಬಿನ ಸದಸ್ಯರಾದರು. ಅದು ಒಂದು ಪ್ರತಿಷ್ಠಿತ ಕ್ಲಬ್ ಆಯಿತು ಮತ್ತು ಟೆನಿಸ್ ಆಟಗಾರರಲ್ಲದವರು ಕೂಡ ಈ ಗಣ್ಯರ ಜೊತೆ ಸಮಯ ಕಳೆಯಲು ಸದಸ್ಯರಾದರು.
ಒಂದೆರಡು ವರ್ಷಗಳ ತರುವಾಯ, ತುಂಬ ಗೌರವಾನ್ವಿತ ಮತ್ತು ಶ್ರೀಮಂತ ಕುಟುಂಬದ ಯುವಕನು ಕ್ಲಬ್ ಸೇರಿದ. ಆತ ಒಳ್ಳೆಯ ವ್ಯಕ್ತಿಯಾದರೂ ಸಂಪೂರ್ಣವಾಗಿ ಕುಡಿತದ ಚಟಕ್ಕೆ ಬಲಿಯಾಗಿಬಿಟ್ಟಿದ್ದ ಮತ್ತು ಹಗಲು-ರಾತ್ರಿಗಳೆನ್ನದೆ ಮದ್ಯಪಾನಮಾಡುತ್ತಿದ್ದ. ಆತ ಟೆನ್ನಿಸ್ಕೋರ್ಟಿಗೆ ತನ್ನ ಜೇಬಿನಲ್ಲಿ ವ್ಹಿಸ್ಕಿಯ ಕ್ವಾರ್ಟರ್ಬಾಟ್ಲ್ ಇಟ್ಟುಕೊಂಡು ಬರುತ್ತಿದ್ದ ಮತ್ತು ಕೆಲವೊಮ್ಮೆ ಕುಡಿದೂ ಬರುತ್ತಿದ್ದ. ಇದರಿಂದ ಎಲ್ಲ ಸದಸ್ಯರಿಗೆ ಅದರಲ್ಲಿಯೂ ವಿಶೇಷವಾಗಿ ನನಗೂ ಸಬ್ಇನ್ಸ್ಪೆಕ್ಟರಿಗೂ (ಎಸ್. ಐ.) ತುಂಬ ಇರುಸುಮುರುಸು ಆಗುತ್ತಿತ್ತು. ನಾವು ಆತನಿಗೆ ಹಲವು ಸಲ ಬುದ್ಧಿವಾದ ಹೇಳಿದೆವು; ಆದರೆ ಅದರಿಂದ ಯಾವುದೇ ಪರಿಣಾಮವೂ ಆಗಲಿಲ್ಲ. ಆತನಿಗೆ ಕುಡಿತ ನಿಲ್ಲಿಸಬೇಕೆಂದು ಬುದ್ಧಿ ಹೇಳುವಂತೆ ಅಥವಾ ಪಾನಮತ್ತನಾಗಿ ಟೆನ್ನಿಸ್ಕೋರ್ಟಿಗೆ ಬಾರದಂತೆಯಾದರೂ ಮಾಡಬೇಕೆಂದು ಅವರ ಕುಟುಂಬದ ಹಿರಿಯರನ್ನು ಕೋರಿಕೊಂಡೆವು. ಆದರೆ ನಮ್ಮ ಮಾತುಗಳು ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿತ್ತು.
ಕೊನೆಯದಾಗಿ, ಈ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತನಾಗಿರುವುದು ಹಾಗೂ ತನ್ನಲ್ಲಿ ಕ್ವಾರ್ಟರ್ಬಾಟ್ಲ್ ವ್ಹಿಸ್ಕಿ ಇಟ್ಟುಕೊಂಡದ್ದಕ್ಕಾಗಿ ಎಸ್.ಐ. ಪ್ರಕರಣ ದಾಖಲಿಸಿದರು. ಇದರಿಂದ ಆತನ ಕುಟುಂಬದ ಸದಸ್ಯರು ಸಂಕಟಕ್ಕೆ ಸಿಲುಕಿದರು ಮತ್ತು ಕುಟುಂಬದ ಗೌರವಪ್ರತಿಷ್ಠೆಯನ್ನಾದರೂ ಕಾಪಾಡುವ ಸಲುವಾಗಿ ಗಲ್ಫ್ ದೇಶ (ಕೊಲ್ಲಿರಾಷ್ಟ್ರ)ವೊಂದರಲ್ಲಿ ಆತನಿಗೆ ಒಂದು ಉದ್ಯೋಗ ದೊರಕಿಸಿಕೊಂಡರು ಮತ್ತು ಆತ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ದಿನಾಂಕದ ಮೊದಲೇ ಆತನನ್ನು ಕುಂದಾಪುರದಿಂದ ದೂರಕಳುಹಿಸಬೇಕೆಂದುಕೊಂಡರು.
ಆನಂತರ, ಆಪಾದಿತನ ಪರ ವಕಾಲತ್ತು ವಹಿಸುವ ಲಾಯರು ತನ್ನ ಬಳಿ ಬಂದರು ಮತ್ತು ಆ ಕುಟುಂಬದ ಸದಸ್ಯರು ಆ ವ್ಯಕ್ತಿ ನ್ಯಾಯಾಲಯದಲ್ಲಿ ಆರೋಪಿಯಾಗಿ ಹಾಜರಾಗುವುದರಿಂದ ಕುಟುಂಬದ ಗೌರವ-ಪ್ರತಿಷ್ಠೆ ಹಾಳಾಗುವುದನ್ನು ತಪ್ಪಿಸುವ ಬಗ್ಗೆ ಕಾತರರಾಗಿರುವವರು; ಆ ವ್ಯಕ್ತಿ ನ್ಯಾಯಾಲಯದಲ್ಲಿ ಹಾಜರಾಗಿ, ತಪ್ಪಿತಸ್ಥನೆಂದು ಒಪ್ಪಿಕೊಳ್ಳಬೇಕಾದ ದಿನಾಂಕದಂದು ಆತನ ಪರವಾಗಿ ತನ್ನ ಲಾಯರು ಹಾಜರಾಗುವುದಕ್ಕೆ ಅವಕಾಶ ನೀಡಿದರೆ, ನ್ಯಾಯಾಲಯ ವಿಧಿಸುವ ಯಾವುದೇ ಜುಲ್ಮಾನೆಯನ್ನು ಆ ಕುಟುಂಬದವರು ಸಂದಾಯ ಮಾಡುವರು ಎಂದು ನನಗೆ ತಿಳಿಸಿದರು.
ಪ್ರಕರಣದ ಈ ಪರಿಸ್ಥಿತಿಗಳಲ್ಲಿ ನಾನು ಸಮ್ಮತಿಸಿದೆ ಮತ್ತು ಆಪಾದಿತನು ನನ್ನ ಮುಂದೆ ನ್ಯಾಯಾಲಯದಲ್ಲಿ ಹಾಜರಾಗಲು ನಿಗದಿಪಡಿಸಿದ್ದ ದಿನಾಂಕಕ್ಕೆ ಮೊದಲೇ ಆತನನ್ನು ಕೊಲ್ಲಿ ರಾಷ್ಟ್ರಕ್ಕೆ ಕಳುಹಿಸಿಬಿಡಲಾಯಿತು. ಆತನ ಅಡ್ವೋಕೇಟ್ ಆತನ ಪರವಾಗಿ ಹಾಜರಾಗಿ, ಜುಲ್ಮಾನೆ ಸಂದಾಯ ಮಾಡಿದರು.