ಆಪ್ ಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಅಗತ್ಯ
ಚೀನ ಸಹಿತ ವಿದೇಶಗಳ ೨೦೦ಕ್ಕೂ ಅಧಿಕ ಸಾಲ ನೀಡಿಕೆ ಮತ್ತು ಬೆಟ್ಟಿಂಗ್ ಆಪ್ (App) ಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಈ ಮೂಲಕ ದೇಶದಲ್ಲಿ ಅಮಾಯಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ವಿದೇಶಿ ಮೂಲದ ಈ ಆಪ್ ಗಳಿಂದ ಜನರು ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಪರಿಶೀಲನೆಯ ಬಳಿಕ ೧೩೮ ಬೆಟ್ಟಿಂಗ್ ಮತ್ತು ೯೪ ಸಾಲ ನೀಡಿಕೆ ಆಪ್ ಗಳನ್ನು ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ನಿರ್ದೇಶನ ನೀಡಿದೆ. ನಿಷೇದಿತ ಆಪ್ ಗಳನ್ನು ದೇಶದಲ್ಲಿ ಬ್ಲಾಕ್ ಮಾಡುವ ಪ್ರಕ್ರಿಯೆಯನ್ನು ಇಲಾಖೆ ಈಗಾಗಲೇ ಕೈಗೆತ್ತಿಕೊಂಡಿದೆ.
ಚೀನ ಮೂಲದ ವ್ಯಕ್ತಿಗಳಿಂದ ಹೆಚ್ಚಿನ ಆಪ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಭಾರತದಲ್ಲಿ ಈ ಆಪ್ ಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಭಾರತೀಯ ಮೂಲದವರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳುತ್ತಿರುವುದು ಗೃಹ ಇಲಾಖೆಯ ಪರಿಶೀಲನೆಯ ವೇಳೆ ಧೃಢಪಟ್ಟಿದೆ. ಸಾಲ ನೀಡಿಕೆ ಆಪ್ ಗಳ ವಂಚನಾ ಜಾಲಕ್ಕೆ ಸಿಲುಕಿ ಸಾಲಗಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಲೇ ಇವೆ. ಇದೇ ಮಾದರಿಯಲ್ಲಿ ಜೂಜು ಮತ್ತು ಬೆಟ್ಟಿಂಗ್ ಆಪ್ ಗಳೂ ಕಾರ್ಯನಿರ್ವಹಿಸುತ್ತಿದ್ದು ಇವುಗಳ ಗೀಳಿಗೆ ತುತ್ತಾದ ಜನರು ಇದರಿಂದ ಹೊರಬರಲಾರದೆ ಸಾಲಗಾರರಾಗಿಯೋ, ಮರ್ಯಾದೆಗೆ ಅಂಜಿಯೋ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದೇಶದ ವಿವಿದೆಡೆಗಳಲ್ಲಿ ನಡೆದಿದೆ.
ವಿವಿಧ ರಾಜ್ಯ ಸರಕಾರಗಳು ಮತ್ತು ಗುಪ್ತಚರ ಸಂಸ್ಥೆಗಳು ಇಂತಹ ಆಪ್ ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದವು. ಇದರಂತೆ ಕೇಂದ್ರ ಗೃಹ ಖಾತೆ ವಿದೇಶಿ ಮೂಲದ ಕೆಲವೊಂದು ನಿರ್ದಿಷ್ಟ ಆಪ್ ಗಳನ್ನು ತೀವ್ರ ಪರಿಶೀಲನೆಗೊಳಪಡಿಸಿದಾಗ ಇವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡುತ್ತಿರುವುದು ಸಾಬೀತಾಗಿತ್ತು. ನಿಷೇದಿತ ಆಪ್ ಗಳಲ್ಲಿ ಬಹುತೇಕವು ಥರ್ಡ್ ಪಾರ್ಟಿ ಮೂಲಕ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ತನಿಖೆಯ ವೇಳೆ ಧೃಢ ಪಟ್ಟಿದೆ. ಇದು ದೇಶದಲ್ಲಿ ಜಾರಿಯಲ್ಲಿರುವ ಐಟಿ ಕಾಯಿದೆಯ ಸೆಕ್ಷನ್ ೬೯ರ ಸ್ಪಷ್ಟ ಉಲ್ಲಂಘನೆಯಾದ್ದರಿಂದ ಇವುಗಳನ್ನು ನಿಷೇದಿಸುವಂತೆ ಐಟಿ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.
ಎರಡು ವರ್ಷಗಳ ಹಿಂದೆಯೂ ಕೇಂದ್ರ ಸರಕಾರ ದೇಶದ ಸಮಗ್ರತೆಗೆ ಅಪಾಯ ಉಂಟುಮಾಡುವಂತಹ ಚೀನದ ಹಲವು ಆಪ್ ಗಳನ್ನು ನಿಷೇದಿಸಿತ್ತು. ಈವರೆಗೆ ೨೦೦ಕ್ಕೂ ಅಧಿಕ ಆಪ್ ಗಳಿಗೆ ದೇಶದಲ್ಲಿ ನಿರ್ಬಂಧ ಹೇರಲಾಗಿದೆ. ಇದೀಗ ಕೇಂದ್ರ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಜನರನ್ನು ತನ್ನ ವಂಚನಾ ಜಾಲದಲ್ಲಿ ಸಿಲುಕುವಂತೆ ಮಾಡಿ ಅವರನ್ನು ಇನ್ನಿಲ್ಲದ ಸಂಕಷ್ಟಕ್ಕೆ ಗುರಿ ಮಾಡುತ್ತಿರುವ ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಆಪ್ ಗಳಿಗೆ ನಿರ್ಬಂಧ ಹೇರಿದೆ.
ಆದರೆ ಇಂತಹ ಆಪ್ ಗಳು ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದರಿಂದ ಈ ನಿಷೇಧದ ಪರಿಣಾಮಗಳು ತಾತ್ಕಾಲಿಕವಾಗಬಹುದೇ ವಿನಾ ಶಾಶ್ವತ ಪರಿಹಾರ ಎಂದೆನಿಸದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಜನರಿಗೆ ಇಂತಹ ವಂಚನೆ, ನಕಲಿ, ಅಕ್ರಮ ಆಪ್ ಗಳು ಯಾವ ಮೂಲದಿಂದಲೂ ಲಭ್ಯವಾಗದಂತೆ ಕಟ್ಟುನಿಟ್ಟಿನ ಕಾನೂನು ಒಂದನ್ನು ಜಾರಿಗೆ ತರಲೇ ಬೇಕಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಭಾರೀ ಬೆಳವಣಿಗೆಗಳಾಗುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ಸಮಸ್ಯೆಗೆ ಸೂಕ್ತ ಪರಿಹಾರೋಪಾಯವನ್ನು ಕಂಡು ಹುಡುಕುವ ಅಗತ್ಯವಿದೆ. ಪ್ರತಿಯೊಂದೂ ಆಪ್ ಅನ್ನು ಅದರ ಮೂಲದಲ್ಲಿಯೇ ಜರಡಿ ಹಿಡಿದು ಅದರ ಒಳಿತು-ಕೆಡುಕುಗಳ ಬಗೆಗೆ ಪರಾಮರ್ಶೆ ನಡೆಸಿದ ಬಳಿಕವಷ್ಟೇ ಅದು ದೇಶದಲ್ಲಿ ಜನರಿಗೆ ಲಭ್ಯವಾಗುವಂತೆ ಮತ್ತು ಆ ಬಳಿಕವೂ ಆ ಆಪ್ ಗಳ ಮೇಲೆ ಕಣ್ಗಾವಲು ಇರಿಸುವ ಕಾರ್ಯ ಸರಕಾರದಿಂದಾಗಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೬-೦೨-೨೦೨೩