ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೧

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೧

ಬರಹ

ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ ಕಿರ್ರ್ ಅನ್ನುತಿತ್ತು. ಅರೆಗಣ್ಣಿಂದಲೇ ಸುತ್ತ ಕತ್ತಾಡಿಸಿದೆ. ಗೋಡೆ ಗಡಿಯಾರ ಅದಾಗಲೇ ಎಂಟು ಗಂಟೆ ತೋರಿಸುತ್ತಿತ್ತು . ದಿಗ್ಗನೆದ್ದು ಬಾಗಿಲು ತೆರೆದೆ. ಆರಡಿ ಎತ್ತರದ ಅಜಾನುಬಾಹು ದೇಹ ತನ್ನ ಋಷಿಗಡ್ಡಮೀಸೆಯ ನಡುವಿನ, ಹಳದಿ ಹಲ್ಲಿನ ಸಾಲಿನ ಪ್ರದರ್ಶನ ಮಾಡುತ್ತಿತ್ತು. ತಲೆಯಿಂದ ಪಾದದವರೆಗೆ ಕಂದು ಬಣ್ಣದ ವಸ್ತ್ರದಲ್ಲಿ ಸುತ್ತುವರೆದಿದ್ದ ಅಪ್ಪಟ ದೇಸಿ ಉಡುಗೆಯ ರೂಪದರ್ಶಿಯಂತಿದ್ದ ಆತ. ಆದರೆ ಬಟ್ಟೆ ಒಗೆದು ಅದೆಷ್ಟು ದಿವಸಗಳಾಗಿತ್ತೋ? ಅನಿಸುತಿತ್ತು. ಅತ್ತರಿನ ವಾಸನೆಯ ಜೋರು ಘಾಟು ತಂಡಿ ಹವೆಯೊಡನೆ ತೇಲಿ ಬಂದು ಇನ್ನೇನು ನನಗೆ ವಾಂತಿ ಬಂದೇಬಿಟ್ಟಿತು ಅನ್ನುವಷ್ಟರಲ್ಲಿ, "ಸಾಬ್.. ಮಾರ್ಕೆಟ್ ಜಾಯೆಂಗೆ?" ಎನ್ನುವ ಉರ್ದು ವಾಣಿ ಹೊರಬಿತ್ತು. ಹೊರಬರಬೇಕಿದ್ದ ವಾಂತಿ ಗಕ್ಕನೆ ನಿಂತುಬಿಟ್ಟಿತ್ತು. ನಾನು: "ಅರೆ..! ಎ ತೊ ಕಮಾಲ್ ಹೋಗಯಾ, ಆಪ್ಕೊ ಉರ್ದು ಆತೀ ಹೈ ಕ್ಯಾ?" ಎಂದೆ. ಹ್ಹೀ... ಎಂದು ಹಲ್ಲನ್ನು ಗಿಂಜುತ್ತಲೇ "ಕುಚ್ ಕುಚ್.. ಸಾಬ್" ಅಂದ. ಆತನಿಗೆ ಸುಮಾರು ಐವತ್ತರ ಪ್ರಾಯ ಇರಬಹುದು. ಹೆಸರು ಹಾಜಿ ಮೊಹಮ್ಮದ್. ವ್ಯವಹಾರಲೋಸುಗವಾಗಿ ಇದುವರೆಗಿನ ತನ್ನ ಜೀವನ ಕಾಲದಲ್ಲಿ ಕೆಲವಾರು ಬಾರಿ ಪಾಕಿಸ್ತಾನಕ್ಕೆ ಹೋಗಿಬಂದದ್ದರಿಂದ ಸ್ವಲ್ಪ ಉರ್ದು ಕಲಿತಿದ್ದನಂತೆ. ದರಿ-ಉರ್ದು-ಇಂಗ್ಲಿಷ್ ಭಾಷೆಗಳ ಭಯಾನಕ ಕಾಕ್ ಟೈಲ್ ಉಲಿಕೆ ಆತನದು. ದುಭಾಷಿಯಾಗಿಯೂ, ಭದ್ರತಾ ಸಲಹಗಾರನಾಗಿಯೂ ಅಲ್ಲಿನ ಎಲ್ಲರಿಗೂ ಚಿರಪರಿಚಿತ ಆತ. ತುಸು ಹೊತ್ತಿನಲ್ಲಿ ಬರುವೆನೆಂದು ಆತನಿಗೆ ಕೂರಲು ಹೇಳಿ ಸ್ನಾನದ ಕೋಣೆಯ ಕಡೆ ನಡೆದೆ.

ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಭಾಗಿಯಾಗಿದ್ದ ನ್ಯಾಟೊ ಸದಸ್ಯ ರಾಷ್ಟ್ರಗಳು ಮತ್ತು ಅಮೆರಿಕೆಯ ಸೈನಿಕರಿಗೆ ಅಲ್ಲಿನ ಯುದ್ಧಭೂಮಿಗಳಲ್ಲಿ ಎಲ್ಲಾ ತೆರನಾದ ಸೌಕರ್ಯವನ್ನೊದಗಿಸುವ ಅತೀವ ಕುತೂಹಲಕಾರಿ ಹಾಗೂ ಅಷ್ಟೇ ಅಪಾಯಕಾರಿ ಕೆಲಸ ನಾನು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯದು. ಆಗಷ್ಟೇ ಅಮೆರಿಕಾ ದೇಶವು ಇರಾಕ್ ನಲ್ಲಿನ ತನ್ನ ಬಹುತೇಕ ಯೋಧರನ್ನು ಹಿಂದಕ್ಕೆ ಕರೆಸಿಕೊಂಡು ಅಫ್ಘಾನಿಸ್ತಾನದ ಮಿಲಿಟರಿ ಕ್ಯಾಂಪ್ ನೊಳಗೆ ತಳ್ಳುತ್ತಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ಅಮೆರಿಕಾದ ಸೈನಿಕರಿಗೆ ವಸತಿಯೂ ಸೇರಿದಂತೆ ಮತ್ತೂ ಕೆಲ ಏರ್ ಬೇಸ್ ಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಕಂಪನಿಯ ಹೆಗಲ ಮೇಲೆ ಬಿದ್ದಿತ್ತು. ನಿರ್ಮಾಣ ಹಂತದಲ್ಲಿದ್ದ ಹೊಸ ಕಂದಹಾರ್ ಏರ್ ಬೇಸ್ ನಲ್ಲಿನ ಯಾವುದೋ ಸಣ್ಣ ತಾಂತ್ರಿಕ ದೋಷದ ನೆಪವೊಡ್ಡಿ ನನ್ನನ್ನು ಅಲ್ಲಿನ ಅಂತರಾಷ್ಟ್ರೀಯ ಏರ್ ಬೇಸ್ ಗೆ ತತ್ ಕ್ಷಣವೇ ಹೊರಡಲುನುವಾಗುವಂತೆ ಆದೇಶ ಹೊರ ಬಿದ್ದಿತ್ತು. ತೀರ ಅವಶ್ಯಕತೆ ಬಿದ್ದಾಗ ವರ್ಷಕ್ಕೆ ಕನಿಷ್ಟ ಹದಿನೈದು ದಿನದ ಮಟ್ಟಿಗಾದರೂ ಯುದ್ಧ ಪೀಡಿತ ಪ್ರದೇಶಗಳಲ್ಲಿನ ನಮ್ಮ ಕಂಪನಿಯ ಕ್ಯಾಂಪ್ ನಲ್ಲಿ ಉಳಿಯಬೇಕಾಗಿಬರಬಹುದು ಎಂಬ ಒಪ್ಪಂದಕ್ಕೆ ಈ ಮೊದಲೇ ಒಪ್ಪಿದ್ದ ಕಾರಣ ಆ ಆದೇಶಕ್ಕೆ ತಲೆ ಬಾಗಿಸಲೇ ಬೇಕಾಗಿಬಂದಿತ್ತು. ಅಲ್ಲಿ ನನಗೆ ಅಗತ್ಯವಿದ್ದ ಕೆಲ ತಾಂತ್ರಿಕ ಬಿಡಿ ಸರಕುಗಳು ಕಾಬೂಲಿನ ಮಾರುಕಟ್ಟೆಯಲ್ಲಿಯಷ್ಟೇ ಲಭ್ಯವಾದ್ದರಿಂದ ಕಂದಹಾರ್ ಏರ್ ಬೇಸ್ ನಿಂದ ಕಾಬೂಲ್ ನಲ್ಲಿದ್ದ ನಮ್ಮ ಕಂಪನಿಯ ವಿಭಾಗ ಕಛೇರಿಗೆ ಬಂದಿಳಿದಿದ್ದೆ. ಕಂದಹಾರ್ ನಲ್ಲಿನ ಮಿಲಿಟರಿ ಕ್ಯಾಂಪ್ ನಂತೆ ಕಾಬೂಲ್ ನಗರ ಅಂದುಕೊಂಡಷ್ಟು ಸುರಕ್ಷಿತವಲ್ಲ.

ನಾನೂ ಸೇರಿದಂತೆ ನಾವು ಒಟ್ಟು ನಾಲ್ಕು ಜನರಿದ್ದೆವು ಆ ಕಾರಿನೊಳಗೆ. ಸ್ಥಳೀಯ ’ಹಾಜಿ ಮೊಹಮ್ಮದ್’,’ ’ಇಝೆತ್ ಝೈಮಿ’ ಹಾಗೂ ’ಗಾಝ್ಮೆಂಡ್ ಸೆಕ’ ಎಂಬ ಹೆಸರಿನ ಇಬ್ಬರು ಯೂರೋಪಿಯನ್ನರು. ಕಾಬೂಲಿನ ವಿಭಾಗ ಕಚೇರಿಯಲ್ಲಿ ಕ್ರಮವಾಗಿ ಅಭಿಯಂತರನಾಗಿಯೂ, ವ್ಯವಸ್ಥಾಪಕನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವಶ್ಯ ದಾಖಲೆಗಳನ್ನು ಸರಿಯಾಗಿದೆಯೇ ಎಂದು ಜೋಡಿಸುಕೊಳ್ಳುವಲ್ಲಿ ನಾ ಮಗ್ನನಾಗಿದ್ದೆ. ಹಾಜಿ ಮೊಹಮ್ಮದ್ ಮಿನರಲ್ ವಾಟರ್ ಬಾಟಲ್ ಗಳನ್ನು ಕಾರಿನಲ್ಲಿ ತುಂಬುತ್ತಿದ್ದ. ಇನ್ನಿಬ್ಬರು ಕೈ-ಬಂದೂಕುಗಳನ್ನು ತಮ್ಮ ಸೊಂಟ ಪಟ್ಟಿಗೆ ಸಿಕ್ಕಿಸಿಕೊಳ್ಳುತ್ತಿದ್ದರು. ಕಾರಿನ ಇಂಜಿನ್ ಚಾಲನೆಯಲ್ಲಿತ್ತು. "ಇಷ್ಟೊಂದು ನೀರಿನ ಡಬ್ಬಿಗಳ ಅವಶ್ಯಕತೆಯೇನಿದೆ?" ಎಂದೆ. ನನ್ನನ್ನು ನೋಡಿ ಮುಗುಳ್ನಕ್ಕ ಮೊಹಮ್ಮದ್ "ಅವಶ್ಯಕತೆ ಇದೆ" ಎಂಬರ್ಥದಲ್ಲಿ ತಲೆ ಆಡಿಸಿದನಷ್ಟೆ. ಕೈನಲ್ಲಿ ಒಂದಷ್ಟು ಗುಂಡುಗಳನ್ನು ಹಿಡಿದ ಆ ಯೋರೋಪಿಯನ್ನರು ’ಆಲ್ಬೇನಿಯಾ’ ಭಾಷೆಯಲ್ಲಿ ಅದೇನನ್ನೋ ಮಾತನಾಡಿಕೊಳ್ಳುತ್ತಿದ್ದರು. ಸುತ್ತಲೂ ಕಣ್ಣಾಡಿಸಿದೆ. ವಸತಿಗೃಹದ ನಾಲ್ಕೂ ದಿಕ್ಕುಗಳನ್ನೂ ಸುತ್ತುವರಿದಿದ್ದ ಮೂರಾಳೆತ್ತರಕ್ಕೂ ಮಿಗಿಲಾದ ಸಿಮೆಂಟಿನ ಗೋಡೆಯ ಮೇಲೆ ಮುಳ್ಳುತಂತಿಯ ಸುರುಳಿಯನ್ನು ಹರವಿದ್ದರು. ಎಂತಹ ಚಾಕಚಕ್ಯನಿಗೂ ಆ ಗೋಡೆಯ ಲಂಘನ ಸುಲಭ ಸಾಧ್ಯವಿರಲಿಲ್ಲ ಎಂದೇ ಹೇಳಬೇಕು. ’ಗಾಝ್ಮೆಂಡ್ ಸೆಕ’ನ ಮೌಖಿಕ ಅಪ್ಪಣೆ ಪಡೆದ ಮೊಹಮ್ಮದ್ ಕಾರನ್ನು ಚಲಾಯಿಸುತ್ತಾ ಮುಖ್ಯದ್ವಾರದ ಬಳಿ ಬಂದು ನಿಲ್ಲಿಸಿದ. ಬಂದೂಕುಧಾರಿ ಬಿಳಿ ತೊಗಲಿನ ಭದ್ರತಾಧಿಕಾರಿಯೊಬ್ಬ ಹತ್ತಿರ ಬಂದು ಕಾರಿನೊಳಗೆ ಒಮ್ಮೆ ಇಣುಕಿ ನೋಡಿ ತಲೆಯಾಡಿಸಿದ. ದಿಮ್ಮಿಗಳಂತೆ ಹರವಾಗಿದ್ದ ಕಬ್ಬಿಣದ ಬಾಗಿಲುಗಳು ಕಿರ್ರನೆ ಅರುಚುತ್ತಾ ತೆರೆದುಕೊಂಡವು. ಕಾರು ಹೊರಕ್ಕೆ ಬಂದು ಕಾಬುಲ್-ಜಲಾಲಾಬಾದ್ ಹೆದ್ದಾರಿಯನ್ನು ಸೇರಿಕೊಂಡಿತು. ಕುತೂಹಲವೇನೋ ಎಂಬಂತೆ ಹೊರ ಬಂದ ದ್ವಾರದೆಡೆಗೆ ಒಮ್ಮೆ ದೃಷ್ಟಿ ಹಾಯಿಸಿದೆ. ನೀಲ ವಸ್ತ್ರಧಾರಿಗಳಾದ ಇಬ್ಬರು ಖಾಸಗಿ ಆಫ್ಘನ್ ಭದ್ರತಾ ಪಡೆಯವರು AK47 ನಂತೆ ಕಾಣುತ್ತಿದ್ದ ಬಂದೂಕನ್ನು ಹೆಗಲಿಗೇರಿಸಿ ದ್ವಾರ ಪಾಲಕರಂತೆ ಮಿಸುಕಾಡದೆ ನಿಂತಿದ್ದರು.

ಕಾರು ವೇಗ ಪಡೆದುಕೊಂಡು ಸಾಗಲೆತ್ನಿಸುತ್ತಿತ್ತು. ಹೆದ್ದಾರಿಯ ಸಾಲು ಸಾಲು ತಗ್ಗುಗಳು ಕಾರಿನ ವೇಗಕ್ಕೆ ಕಡಿವಾಣ ಹಾಕುತ್ತಿದ್ದವು. "ಕಾಬೂಲ್ ನಗರ ಇನ್ನೂ ಹನ್ನೆರಡು ಮೈಲಿಗಳಾಚೆ ಇದೆ" ಎಂದ ಮೊಹಮ್ಮದ್ ಆತನ ಪಕ್ಕ ಕುಳಿತಿದ್ದ ನನ್ನ ಪ್ರತಿಕ್ರಿಯೆಗೆ ಕಾಯುತ್ತಿರುವವನಂತೆ ಮುಖ ನೋಡಿದ. ಕತ್ತನ್ನಾಡಿಸಿದ ನಾನು ರಸ್ತೆಯ ಆಚೆಯನ್ನೇ ನೋಡುತ್ತಾ ಕುಳಿತಿದ್ದೆ. ರಸ್ತೆಗೆ ಸಮಾನಾಂತರವಾಗಿ ತೀವ್ರ ಶಿಥಿಲಾವಸ್ಥೆಯಲ್ಲಿದ್ದ ಮಣ್ಣಿನ ಮನೆಗಳು, ಗ್ಯಾರೇಜ್ ಶೆಡ್ ಗಳು, ಸಣ್ಣ ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು, ಅಸ್ತವ್ಯಸ್ತವಾಗಿ ಜೋಡಿಸಿದಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ನಾ ಹಿಂದೆ ನೋಡಿದಂತಹ ಎತ್ತರದ ಗೋಡೆಗಳೂ ಸಹ ಇದ್ದು, ಗೋಡೆಗಂಟಿಕೊಂಡಂತಿದ್ದ ಕಾವಲು ಗೋಪುರದ ಮೇಲೆ ಬಂದೂಕುಧಾರಿ ಸೈನಿಕನಂತವರು ಎದೆ ಸೆಟೆಸಿ ನಿಂತದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಅಂಗಡಿಗಳಲ್ಲಿ ತಿಂಡಿ ಡಬ್ಬಗಳು, ತರಕಾರಿ, ಕೋಲ ಪಾನೀಯಗಳನ್ನು ಒಟ್ಟಾಗಿ ಒಂದರನಂತರ ಒಂದರಂತೆ ಮೆಟ್ಟಿಲೋಪಾದಿಯಾಗಿ ಜೋಡಿಸಲಾಗಿತ್ತು. ಹಸಿಮಾಂಸದ ದೊಡ್ಡ ಭಾಗಗಳನ್ನು ಮತ್ತು ತಂದೂರಿಯ ದಪ್ಪ ರೊಟ್ಟಿಯನ್ನು ಸಾಲು ಸಾಲಾಗಿ ಕೊಕ್ಕೆಗೆ ನೇತುಹಾಕಲಾಗಿತ್ತು. ಕನಿಷ್ಟ ಪ್ಲಾಸ್ಟಿಕ್ ಹೊದಿಕೆಯೂ ಇರಲಿಲ್ಲ. ಪ್ರತೀ ಅಂಗಡಿಯಲ್ಲಿಯೂ ಒಂದೇ ತೆರನಾದ ನೋಟ ನನ್ನನ್ನು ಆಶ್ಚರ್ಯಚಕಿತನಾಗಿಸಿತ್ತು. ಏಪ್ರಿಲ್ ತಿಂಗಳು ಅದು. ಕಂದಹಾರಿನಲ್ಲಿ ಅನುಭವಿಸಿದ್ದ ಸುಡು ಬಿಸಿಲು ಇಲ್ಲಿಲ್ಲ. ತಂಪಿನ ವಾತಾವರಣವಿದೆ. ಆದರೆ ಎಲ್ಲೆಲ್ಲೂ ಧೂಳೇ ಧೂಳು. ಅಪರಿಮಿತ ಕಸದ ರಾಶಿ. ಗಾಳಿಯಲ್ಲಿ ತೇಲಿ ಬರುತ್ತಿದ್ದ ಧೂಳಿನ ಕಣಗಳು, ಕಸದ ತುಣುಕುಗಳು ಅಂಗಡಿಯಲ್ಲಿನ ಪದಾರ್ಥಗಳನ್ನೆಲ್ಲಾ ಮುತ್ತುತ್ತಿದ್ದರೂ, ಏನೂ ಸಂಭವಿಸುತ್ತಿಲ್ಲವೇನೋ ಎಂಬ ಮನಸ್ಥಿತಿ ಎಲ್ಲರದು, ಗ್ರಾಹಕನೂ ಸೇರಿ!

ಅದಾಗಲೇ ಹತ್ತು ನಿಮಿಷಗಳ ಪ್ರಯಾಣ ಮುಗಿದಿರಬಹುದು. ನಗರ ಸಮೀಪಿಸುತ್ತಿದ್ದಿತು. ಅಂಗಡಿ ಮುಂಗಟ್ಟುಗಳು ಇನ್ನೂ ಒತ್ತೊತ್ತಾಗುತ್ತಲಿದ್ದಂತೆ ಜನ ನಿಬಿಡತೆಯೂ ಹೆಚ್ಚಾಗುತ್ತಿತ್ತು. ಹಿಂದೆ ನೋಡಿದಂತಹ ಮಣ್ಣಿನ ಮನೆಗಳು ಈಗ ಎಲ್ಲಿಯೂ ಕಾಣಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿರುವಂತೆ ಆಧುನಿಕ ಶೈಲಿಯ ಕಾಂಕ್ರೀಟ್ ಕಟ್ಟಡಗಳು ಹಾಗೂ ಪರ್ಸಿಯನ್ ಶೈಲಿಯ ಕಟ್ಟಡಗಳ ಸಾಲು. ಆಶ್ಚರ್ಯವೆಂದರೆ ಅಲ್ಲಿನ ಪ್ರತಿಯೊಬ್ಬರೂ ದೇಸಿ ಉಡುಗೆಯಲ್ಲಿಯೇ ಇದ್ದದ್ದು. ನಮ್ಮಂತೆ ಅಂಗಿ ಶರಾಯಿ ಧರಿಸಿದವರು ಹುಡುಕಿದರೂ ಸಿಗುತ್ತಿರಲಿಲ್ಲ. ಆದರೆ, ಇದುವರೆಗೂ ಬಂದ ದಾರಿಯಲ್ಲಿ ನಾನು ಕನಿಷ್ಟ ಒಬ್ಬ ಹೆಂಗಸನ್ನೂ ನೋಡಲಿಲ್ಲ. ತಲೆಯಲ್ಲಿ ನೂರಾರು ಪ್ರಶ್ನಾರ್ಥಕ ಸ್ವರೂಪಿ ಯೋಚನಾ ಲಹರಿಗಳು ಹರಿದಾಡುತ್ತಿದ್ದರೂ ಮೊಹಮ್ಮದ್ ನನ್ನು ಕೇಳಲು ಹಿಂಜರಿಕೆ. ಹಳ್ಳ ತಗ್ಗುಗಳೊಂದಿಗೆ ಸರಸ ಜುಗಲ್ಬಂಧಿಗೆ ಬಿದ್ದಿದ್ದ ಅವನನ್ನು ನನ್ನೆಡೆಗೆ ಸೆಳೆಯದಿರುವುದೇ ಉಚಿತವೆನಿಸಿತ್ತೂ ಕೂಡ. ಸರಕ್ಕನೆ ಬ್ರೇಕ್ ಬಿದ್ದೊಡನೆ ಹೋ..ಕಾರ ಮಾಡಿ ನಾವೆಲ್ಲರೂ ಏನಾಯ್ತೆಂದು ಮುಂದೆ ನೋಡಿದೆವು. ಸುಮಾರು ಏಳೆಂಟು ವರುಷದ ಪೋರನೊಬ್ಬ ದಾರಿಗಡ್ಡವಾಗಿ ಓಡಿಬಂದಿದ್ದ. ಮೊಹಮ್ಮದ್ ಆತನನ್ನು ದರಿ ಭಾಷೆಯಲ್ಲಿ ಜೋರಾಗಿ ಗದರುತ್ತಿದ್ದುದಷ್ಟೇ ಅರಿವಾಗುತ್ತಿತ್ತು. ಆ ಹುಡುಗ ಚಲಿಸುವ ಕಾರಿಗೇಕೆ ಅಡ್ಡ ಬಂದ? ಇವ ಏನೆಂದು ಬೈಯುತ್ತಿದಾನೆ? ನಮ್ಮಲ್ಲ್ಯಾರಿಗೂ ತಿಳಿಯಲಿಲ್ಲ. ಜೇಬಿನಿಂದ ಹತ್ತು ಆಫ್ಘಾನಿ ನೋಟೊಂದನ್ನು ತೆಗೆದ ಮೊಹಮ್ಮದ್ ಆ ಬಾಲಕನ ಕೈಗಿತ್ತ. ಸಮಾಧಾನವಾದಂತೆ ಕಾಣದ ಆ ಹುಡುಗ ”ಮಾಯ್" ಎಂದೇನೋ ಮುಲುಕುತ್ತಿತ್ತು. ಎರಡು ನೀರಿನ ಬಾಟಲ್ ಗಳನ್ನು ತೆಗೆದು ಕೊಟ್ಟ ಮೊಹಮ್ಮದ್ ಕಾರನ್ನು ಚಲಾಯಿಸತೊಡಗಿದ.

ಉಸಿರುಕಟ್ಟಿದಂತೆ ಅಡಗಿಸಿಟ್ಟಿದ್ದ ಪ್ರಶ್ನೆಗಳನ್ನೆಲ್ಲಾ ಒಂದೇ ಉಸುರಿಗೆ ಕೇಳಿದೆ. ಮೊಹಮ್ಮದ್ ಒಮ್ಮೆ ನಸುನಕ್ಕು, "ರಸ್ತೆ ಬದಿಯಿದ್ದ ಆ ಹುಡುಗನ ತಾಯಿಯನ್ನು ನೀವು ಗಮನಿಸಲಿಲ್ಲವೇ?" ಎಂದ. ಇಲ್ಲ ಎಂದು ತಲೆಯಾಡಿಸಿದೆ. "ರಸ್ತೆಯಲ್ಲಿ ಓಡಾಡುವ ಕಾರುಗಳನ್ನೋ, ಲಾರಿಗಳನ್ನೋ ಅಡ್ಡ ಹಾಕಿ ಭಿಕ್ಷೆ ಬೇಡೋದು ಅವರ ನಿತ್ಯ ಕಾಯಕ. ಆಕೆ ತನ್ನ ಮಗನನ್ನು ರಸ್ತೆಗೆ ಬಿಟ್ಟು ಓಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ಬೇಡುವಂತೆ ಕಳಿಸುತ್ತಾಳೆ. ನೀರಿಗೆ ತುಂಬಾ ಅಭಾವವಿದೆ ಇಲ್ಲಿ. ನೀರು ಹೇರಳವಾಗಿಯೇನೋ ಸಿಗುತ್ತೆ, ಆದರೆ ಅದನ್ನು ಸರಿಯಾಗಿ ಹಂಚುವ, ನಿರ್ವಹಿಸುವ ಸರ್ಕಾರಿ ಸಂಸ್ಥೆಗಳು ತುಕ್ಕು ಹಿಡಿದಂತೆ ಸೊರಗಿಹೋಗಿವೆ. ಉಳ್ಳವರು ಶಿಫಾರಸಿನಂದಲೋ ಎಲ್ಲಾ ಹಣವನ್ನು ತೆತ್ತೋ ತಮಗೆ ಬೇಕಾದಂತೆ ಅಗತ್ಯಗಳನ್ನ ಮಾಡಿಕೊಳ್ತಾರೆ, ಆದರೆ ಏನೂ ಇಲ್ಲದಂತಹ ಈ ಬಡ ಜನರ ಅಗತ್ಯಗಳನ್ನು ಪೂರೈಸುವವರು ಯಾರು? ಈ ಬಿಳಿ ಚರ್ಮದೋರು ನಮ್ಮ ದೇಶಾನ ಹಾಳುಮಾಡ್ಬಿಟ್ಟ್ರು ಹಿಂದುಸ್ತಾನಿ!"  ಮೊಹಮ್ಮದ ತುಸು ಆವೇಶಕ್ಕೊಳಗಾದವನಂತೆ ಮಾತನಾಡುತ್ತಿದ್ದ. ಮೊದಲ ಬಾರಿ ನನ್ನನ್ನು ’ಹಿಂದುಸ್ತಾನಿ’ಎಂದು ಕರೆದಿದ್ದರಿಂದ ನನಗೆ ಸ್ವಲ್ಪ ಇರುಸುಮುರುಸಾದಂತನಿಸಿತ್ತು. ಆತ ತನ್ನ ಮಾತುಗಳನ್ನು ಮುಂದುವರೆಸುತ್ತಾ ಅಲ್ಲಿನ ರಾಜಕೀಯ ಅರಾಜಕತೆ, ಜನರ ಮೌಢ್ಯ, ಸಾಲುಸಾಲು ಯುದ್ಧಗಳು, ಬಡತನ ಇತ್ಯಾದಿ ವಿಷಯಗಳ ಬಗ್ಗೆ ಅವನದೇ ದೃಷ್ಟಿ ಕೋನದಲ್ಲಿ ಮಾತನಾಡುತ್ತಲೇ ಇದ್ದ. ಹಿಂದೆ ಕುಳಿತಿದ್ದ ಬಿಳಿ ಚರ್ಮದವರಿಗೆ ಈತನ ಮಿಶ್ರ ಭಾಷೆಯ ಉಲಿಕೆ ಅರ್ಥವಾಗುವುದಿಲ್ಲ ಎಂಬ ಭಾವ ಹಾಗೂ ಅನುಭವ ಮೊಹಮ್ಮದ್ ನದು.

"ಅಲ್ಲಿ ನೋಡಿದಿರಾ ಆ ಎತ್ತರದ ಬೆಟ್ಟಗಳು!" ನನಗೆ ಅಣತಿಯಿತ್ತ ಮೊಹಮ್ಮದ್ ಮುಂದೆ ಕಾಣಿಸುತ್ತಿದ್ದ ಗಿರಿಗಳತ್ತ ತದೇಕವಾಗೊಮ್ಮೆ ನೋಡಿದ. ಅವನಣತಿಯಂತೆ ನಾನೂ ದಿಟ್ಟಿಸಿ ನೋಡತೊಡಗಿದೆ. "ಅದೇ ಹಿಂದು ಕುಶ್ ಪರ್ವತ ಸಾಲು, ಸೆಪ್ಟಂಬರ್ ನಂತರ ನೋಡ್ಬೇಕು ನೀವು, ನಿಮ್ಮ ಹಿಮಾಲಯಕ್ಕಿಂತಲೂ ಚೆನ್ನ. ನಾಲ್ಕೂ ದಿಕ್ಕಿಗೆ ಚಾಚಿದ ಹರವು ಆ ಗಿರಿಗಳದ್ದು. ಮಧ್ಯದಲ್ಲಿ ಈ ಕಾಬುಲ್ ನಗರ. ಇಂತಹ ಸುಂದರ ನಗರವನ್ನ ಹೇಗೆ ಹಾಳು ಮಾಡಿದ್ದಾರೆ ನೋಡಿ". ಎಂದು ಅವಲತ್ತುಕೊಳ್ಳುತ್ತಿದ್ದ. ಆತ ಹೇಳಿದ್ದು ಅಕ್ಷರಸಹ ಸತ್ಯ. ನನ್ನ ದೃಷ್ಟಿಯ ಸುರುಳಿ ಬಿಚ್ಚಿ ತೀವ್ರವಾಗಿ ನೋಡತೊಡಗಿದೆ. ಬೇಸಿಗೆಯಲ್ಲಿ ಶಿಮ್ಲಾ ನಗರ ಹೇಗೆ ಕಾಣುತ್ತೋ ಹಾಗೇ ಇದೆ ಕಾಬೂಲ್. ಸಮುದ್ರದಿಂದ ಸುಮಾರು ಐದು ಸಾವಿರ ಅಡಿಗಳಿಗಿಂತಲೂ ಹೆಚ್ಚಿನ ಎತ್ತರದಲ್ಲಿರುವ ಕಾಬೂಲ್ ನಗರ ಒಂದು ಸುಂದರ ಗಿರಿಧಾಮವೆನ್ನುವುದರಲ್ಲಿ ಸಂಶಯವಿಲ್ಲ.ಏಪ್ರಿಲ್ ಬೇಸಿಗೆಯ ಕಾವು ತಣಿಸಲೇನೋ ಎಂಬಂತೆ ಸಾಲು ಬೆಟ್ಟಗಳವು ತಮ್ಮ ಬಿಳಿ ಬಟ್ಟೆಗಳನ್ನ ಬಿಚ್ಚಿ ನಗ್ನವಾಗಿ ಕುಳಿತಿದ್ದವು. ಚಳಿಗಾಲದ ಹಿಮಚ್ಚಾದಿತ ಕಾಬೂಲ್ ನಗರವನ್ನು ಕಲ್ಪಿಸಿಕೊಂಡು ನನ್ನಷ್ಟಕ್ಕೇ ನಾನೇ ಪುಳಕಗೊಳ್ಳುತ್ತಿದ್ದೆ. ಅದಕ್ಕೇ ಇರಬಹುದು ಅನಿಸುತ್ತೆ ಕಾಬೂಲ್ ಬಾಬರನಿಗೆ ಸ್ವರ್ಗವಾಗಿತ್ತು. ಏನೋ ನೆನಪಾದಂತೆ, "ಹಿಂದೂಗಳನ್ನು ಸಾಮೂಹಿಕವಾಗಿ ಹತ್ಯೆಗೈದ ಬೆಟ್ಟವಂತೆ ಅದು, ಅದಕ್ಕಾಗಿಯೇ ಅದರ ಹೆಸರು ’ಹಿಂದು ಕುಶ್’ಅಂತಲ್ಲವೇ?" ಎಂದೆ. ಹೌದೆಂಬಂತೆ ತಲೆಯಾಡಿಸಿದ. "ಹಾಗಾದರೆ ಇಲ್ಲಿ ಹಿಂದೂಗಳು ಇದ್ದರು ಅನ್ನೋ ಹಾಗಾಯ್ತು ಅಲ್ಲವೇ?". "ಹ್ಞಾಂ.. ಈಗಲೂ ಇದ್ದಾರೆ. ನೂರಕ್ಕೆ ಇಬ್ಬರಿರಬಹುದು ಅನಿಸುತ್ತೆ. ಆದರೆ ಅವರನ್ನು ನೀವು ನೋಡಿದರೆ ಹಿಂದೂಗಳೆಂದು ಗುರುತು ಹಚ್ಚಲು ಅಸಾಧ್ಯ. ಏಕೆಂದರೆ ಅವರ ರೂಪ, ಉಡುಪು, ಊಟ ಎಲ್ಲವೂ ನಮ್ಮಂತೆ. ಎಲ್ಲಾ ಹೆಂಗಸರೂ ಬುರ್ಖಾ ಹಾಕಲೇಬೇಕು. ನಾಲ್ಕಾರು ಹಿಂದೂ ದೇವಸ್ಥಾನಗಳೂ ಇವೆ" ಎಂದ. ನನಗೋ ತಡೆದುಕೊಳ್ಳಲಾಗದ ಸಖೇದಾಶ್ಚರ್ಯ. "ಅವರನ್ನು ನೋಡಬಹುದೇ? ಕನಿಷ್ಠ ದೇವಸ್ಥಾನವನ್ನಾದರೂ.." ಎನ್ನುವಷ್ಟರಲ್ಲೇ ನನ್ನ ಮಾತನ್ನು ತಡೆದ ಮೊಹಮ್ಮದ್, ನನಗೆ ಹಿಂದೆ ನೋಡುವಂತೆ ಒಮ್ಮೆ ಕಣ್ಣಿನ ಸನ್ನೆ ಮಾಡಿ "ಈಗ ಬೇಡ, ಸಾಧ್ಯವಾದರೆ ನಾಳೆ ಪ್ರಯತ್ನಿಸೋಣ" ಎಂದ. "ಅವರದೇನಾದರೂ ತಕರಾರಿದೆಯೇ?" ಎಂದೆ. " ಹಾಗೇನಿಲ್ಲಾ, ಆದರೆ ಕಳೆದ ನಾಲ್ಕೈದು ತಿಂಗಳಿನಲ್ಲಿ ಕಂಪನಿಯ ಮೂವರು ಕೆಲಸಗಾರರನ್ನು ಅಪಹರಿಸಿ ಬಹು ಮೊತ್ತದ ದುಡ್ಡನ್ನು ಕಿತ್ತಿದ್ದರು, ಅದಾದ ನಂತರ ಯಾರನ್ನೂ ನಗರದ ಒಳಗೆ ಕಳುಹಿಸುತ್ತಿಲ್ಲ. ನಿಮ್ಮ ಕೆಲಸ ಏನೋ ತುಂಬಾ ಪ್ರಮುಖವಾದದ್ದಂತೆ, ಅದಕ್ಕೆ ಇಲ್ಲಿಗೆ ಬಂದಿದ್ದೇವೆ ಅದೂ ಈ ಇಬ್ಬರ ಜೊತೆ, ಆಯುಧಧಾರಿಗಳಾಗಿ" ಎಂದ. "ಯಾರು ಅಪಹರಿಸಿದ್ದು, ತಾಲಿಬಾನ್ ನವರೇ?" ಎಂದೆ. "ಅವರು ಜಾಗ ಖಾಲಿ ಮಾಡಿ ತುಂಬಾ ದಿವಸ ಆಯ್ತು, ಅವರ ಹೆಸರಲ್ಲಿ ಇಲ್ಲಿಯ ಜನರೇ ದುಡ್ಡಿಗಾಗಿ ಏನೆಲ್ಲಾ ಮಾಡ್ತಾ ಇದಾರೆ" ಎಂದ. "ನಿಮ್ಮ ಜೊತೆ ನಾನು ಇಲ್ಲಿ ಬಂದಿರೋದೂ ಸುರಕ್ಷಿತವಿಲ್ಲ. ಆದರೆ ನನ್ನ ಹೊಟ್ಟೆ ಪಾಡು ಇದರಿಂದಲೇ ಸಾಗೋದು" ಎನ್ನುತ್ತಿದ್ದ. ಹಾಗಾದರೆ ನಾನಿಲ್ಲಿ ಅದೆಷ್ಟು ಸುರಕ್ಷಿತ ಎಂಬ ನೂರಾರು ಆಲೋಚನೆಗಳು ಕಾಡಹತ್ತಿದವು...

(ಮುಂದುವರೆಯುವುದು....)

ನನ್ನೆಲ್ಲಾ ಅನುಭವ ಲೇಖನಗಳು ಇಲ್ಲಿ ಲಭ್ಯ. http://manjanloka.blogspot.com/