ಆಫ್ರಿಕದ ಹಾಡು (ವಿಶ್ವಕಥಾಕೋಶ -೨)

ಆಫ್ರಿಕದ ಹಾಡು (ವಿಶ್ವಕಥಾಕೋಶ -೨)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ.

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಎರಡನೆಯ ಸಂಪುಟ -’ಆಫ್ರಿಕದ ಹಾಡು’ ಎಂಬ ಹೆಸರಿನ ಆಫ್ರಿಕಾ ಖಂಡದ ಕಥೆಗಳು. ಈ ಪುಸ್ತಕದ ಪ್ರಸ್ತಾವನೆಯಲ್ಲಿ ಸಂಪಾದಕರು ಹೀಗೆ ಬರೆಯುತ್ತಾರೆ “ಪ್ರಾಚೀನ ಮನುಷ್ಯನಿಗೆ, ಮಾತು ಬಂದುದಕ್ಕೂ ಮುಂಚೆ ಗಂಟಲಿನಿಂದ ರಾಗ ಹೊರಟಿತು. ಗುಡ್ಡದ ಈಚೆ ತಪ್ಪಲಿನಲ್ಲಿ ತಾನಿದ್ದೇನೆ ಎಂದು ಆಚೆ ತಪ್ಪಲಿನವನಿಗೆ ತಿಳಿಸುವುದಕ್ಕೆ ಕೂಗು. ಮಿಕವನ್ನು ಬೆನ್ನಟ್ಟಿದಾಗ ನಡುಕ ಹುಟ್ಟಿಸುವ ರಾಗಮೇಳ. ದೋಣಿಗೆ ಹುಟ್ಟುಹಾಕುವಾಗ ಪರಿಸರಕ್ಕೆ ಮೇಳೈಸಿ ಆಲಾಪನೆ. ಹೆಜ್ಜೆಗಳು ಲಯಬದ್ಧವಾದಾಗ ರಾಗದ ಜತೆ ಕುಣಿತ. ಪದಗಳಿಗೆ ಅರ್ಥ ನಿಶ್ಚಿತವಾದಾಗ, ಹಾಡು.”

ಈ ಪುಸ್ತಕದಲ್ಲಿ ೧೩ ಕಥೆಗಳಿವೆ. ಆಫ್ರಿಕದ ಹಾಡು (ರಿಚರ್ಡ್ ರೀವೆ), ಹಸಿದ ಹುಡುಗ (ಜೆ.ಆರ್ಥರ್ ಮೈಮಾನೆ), ಬದುಕಿದವರು-ಸತ್ತವರು (ಎಜೆಕಿಯೆಲ್ ಎಂಫಲೀಲಿ), ಪ್ರತಿಧ್ವನಿಗಳು (ಆಲ್ಫ್ ವಾನೆನ್ ಬರ್ಗ್), ಮೊಗಸಾಲೆಯಲ್ಲಿ ಆತಿಥ್ಯ (ಅಲನ್ ಪೇಟನ್), ಶವ ಪೆಟ್ಟಿಗೆ ( ಐಸ್ ಕ್ರೀಹ), ಸೇಡಿನ ಸಾಲಗಾರ (ಚಿನುವ ಅಹೇಬೆ), ರಜತ ರಸ್ತೆ (ಅಬುಲ್ ಎಡ್ ಡೋಡು), ಕೊಳ (ಚಾರ್ಲ್ಸ್ ಜೊ), ಆ ನೋಟ (ಲಿನೋ ಲೆಟಾಸ್), ಮೊಕದ್ದಮೆ (ಅಲೀ ಎಲ್ ಮಾಕ್), ಆಫ್ರಿಕನ್ ನೆಲದ ಹಂಬಲ (ಡ್ರಿಸ್ ಕ್ರೇಯ್ ಬಿ), ಅಬುಲ್ ರೀಶ್ ಮಸೀದಿಯ ಬಳಿ (ಯೂಸುಫ್ ಎಲ್ ಸೆಬಾಯ್) ಎಂಬ ಕಥೆಗಳಿವೆ.

ಇಲ್ಲಿರುವ ಎಲ್ಲಾ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ೧೬೫ ಪುಟಗಳನ್ನು ಹೊಂದಿದೆ. ಆಫ್ರಿಕ ಖಂಡದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.