ಆಫ್ರಿಕಾ ಖಂಡದ ರಕ್ತಸಿಕ್ತ ಸುದ್ದಿಗಳು...!

ಆಫ್ರಿಕಾ ಖಂಡದ ರಕ್ತಸಿಕ್ತ ಸುದ್ದಿಗಳು...!

ಕಗ್ಗತ್ತಲೆಯ ಖಂಡ ಆಫ್ರಿಕಾದಿಂದ ಮತ್ತಷ್ಟು ಕಗ್ಗೋಲೆಗಳ ರಕ್ತ ಸಿಕ್ತ ಸುದ್ದಿಗಳು ಬರುತ್ತಿವೆ. ವಿಶ್ವದ ಅತ್ಯಂತ ಬಡ ದೇಶಗಳ ಪಟ್ಟಿಯಲ್ಲಿ ಸುಡಾನ್, ಉಗಾಂಡ, ಸೊಮಾಲಿಯಾ ಮತ್ತು ಇಥೋಪಿಯಾ ಪ್ರಮುಖ ಸ್ಥಾನಗಳಲ್ಲಿ ಇವೆ. ಅಸ್ಥಿಪಂಜರದಂತ ಶರೀರದ ಹಸಿವಿನ ನರಳಾಟದ ತಾಯಿ ಮಕ್ಕಳ ಚಿತ್ರಗಳು ಸದಾ ಕಾಲ ಅಲ್ಲಿಂದ ಪ್ರಸಾರವಾಗುತ್ತಿರುತ್ತದೆ. ಅಲ್ಲಿನ ಆಂತರಿಕ ಕಲಹದ ಹಿಂಸೆಗಳು ಸಹ ಭೀಕರ - ಭಯಾನಕ.

ಮಧ್ಯಪ್ರಾಚ್ಯ ದೇಶಗಳಿಗೆ ಅಂಟಿಕೊಂಡಿರುವ ಆಫ್ರಿಕಾದ ಸುಡಾನ್ ದೇಶದಲ್ಲಿ ವಿಚಿತ್ರ ಆಂತರಿಕ ಕಲಹ ದೀರ್ಘಕಾಲದಿಂದ ನಡೆಯುತ್ತಿದೆ. ಈಗ ಅದು ತೀವ್ರ ಸ್ವರೂಪ ಪಡೆದಿದೆ. ಸೈನ್ಯ ಮತ್ತು ಆಂತರಿಕ ಭದ್ರತೆಯ ಅರೆ ಸೈನಿಕ ಪಡೆಯ ಅಧಿಕಾರ ಹಂಚಿಕೆಯ ಯುದ್ದವಿದು. ಬಡತನ, ಅಜ್ಞಾನ, ಅರಾಜಕತೆ ಮತ್ತು ಹಿಂಸೆ ಮಾನವ ನಾಗರಿಕ ಸಮಾಜದಲ್ಲಿ ಒಂದಕ್ಕೊಂದು ಬೆಸೆದು ಕೊಂಡಿವೆ. ಅದರ ಪರಿಣಾಮವೇ ಈ ರೀತಿಯ ದೇಶಗಳಲ್ಲಿ ಹಿಂಸೆಯ ರುದ್ರ ನರ್ತನ.

ಒಂದು ಕಾಲದಲ್ಲಿ ಹೆಚ್ಚಾಗಿ ಈ ಪ್ರದೇಶಗಳಿಂದಲೇ ಮನುಷ್ಯರನ್ನು ಕಾಡು ಪ್ರಾಣಿಗಳಂತೆ ಭೇಟೆಯಾಡಿ ಸೆರೆಹಿಡಿದು ಗುಲಾಮರಂತೆ ವಿದೇಶಗಳಿಗೆ ಹಡಗಿನಲ್ಲಿ ರಪ್ತು ಮಾಡಲಾಗುತ್ತಿತ್ತು. ಆ ಪರಿಸ್ಥಿತಿಯಿಂದ ಇಲ್ಲಿಯವರೆಗೆ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣ ತಂತ್ರಜ್ಞಾನ ಸಂಪರ್ಕ ಎಲ್ಲದರಲ್ಲೂ ವಿಶ್ವದ ಎಲ್ಲಾ ಬೆಳವಣಿಗೆಗಳು ಈ ದೇಶಗಳಲ್ಲೂ ಆಗಿದೆ. ಶಾಪಿಂಗ್ ಮಾಲ್ ಗಳು, ಕ್ರೀಡಾಂಗಣಗಳು, ವಾಹನಗಳು, ವಿಮಾನ ನಿಲ್ದಾಣಗಳು ಎಲ್ಲವೂ ಅಭಿವೃದ್ಧಿ ಹೊಂದಿವೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ ಬಲವಾಗಿ ಬೇರೂರಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ, ಮೊರಾಕೊ, ಕ್ಯಾಮರೂನ್ ಮುಂತಾದ ಕೆಲವು ‌ದೇಶಗಳು ಸ್ವಲ್ಪ ಮಟ್ಟಿಗೆ ಉತ್ತಮ ಆಡಳಿತ ವ್ಯವಸ್ಥೆಯ ಮೂಲಕ ಅಭಿವೃದ್ಧಿ ಹೊಂದಿವೆ ಮತ್ತು ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ.

ಆದರೆ ಸೂಡಾನ್ ಇಥೋಪಿಯಾ ನೈಜೀರಿಯಾಗಳಲ್ಲಿ ಬಂಡುಕೋರರ ತಂಡಗಳು ಈಗಲೂ ಸಾಕಷ್ಟು ಜೀವಂತವಾಗಿವೆ. ಅನೇಕ ಮಾದಕ ಪದಾರ್ಥಗಳ ಕಳ್ಳ ಸರಬರಾಜು, ಕಡಲ್ಗಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ಗುಂಪುಗಳಿವೆ. ಜೊತೆಗೆ ಮಾಫಿಯಾ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ವ್ಯವಸ್ಥೆ ತಂಡಗಳು ಇವೆ. ವಿಶ್ವದ ಅನೇಕ ಮಾಫಿಯಾ ಡಾನ್ಗಳಿಗೆ ಆಶ್ರಯವನ್ನು ನೀಡಿವೆ. ಕೆಲವು ವರ್ಷಗಳ ಹಿಂದೆ ಮಹಿಳಾ ಶಾಲೆಯೊಂದಕ್ಕೆ ನುಗ್ಗಿ ಅನೇಕ ಬಾಲಕಿಯರನ್ನು ಹೊತ್ತೊಯ್ಯುಲಾಗಿತ್ತು. ಅವರಲ್ಲಿ ಅನೇಕರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಸ್ಥಳೀಯ ಬಂಡುಕೋರರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಮನುಷ್ಯ ಸುಖವಾಗಿ ಬಾಳಲು ಎಷ್ಟೊಂದು ಅವಕಾಶಗಳು ಇದ್ದರೂ ಅದನ್ನು ಉಪಯೋಗಿಸಿಕೊಳ್ಳದೆ ಹಿಂಸೆಯನ್ನೇ ಹೆಚ್ಚು ಆಯ್ಕೆಮಾಡಿಕೊಳ್ಳುವುದು‌ ಅತ್ಯಂತ ವಿಚಿತ್ರವೆನಿಸುತ್ತದೆ. ವಾಸ್ತವವಾಗಿ ಕ್ರಿಮಿನಲ್ ಗಳ ಸಂಖ್ಯೆ ತುಂಬಾ ಕಡಿಮೆ. ಶಾಂತಿ ಬಯಸುವವರೇ ಹೆಚ್ಚು. ಆದರೆ ಶಾಂತಿ ಬಯಸುವ ಜನರ ಭಯ ಅಥವಾ ನಿರ್ಲಿಪ್ತತೆ ಕ್ರಿಮಿನಲ್ ಗಳಿಗೆ ಅನುಮತಿ ಎಂಬಂತೆ ಕಂಡುಬರುತ್ತದೆ.

ಆಫ್ರಿಕಾದ ದಟ್ಟ ಕಾಡುಗಳು, ವಿಶಿಷ್ಟ ಪ್ರಾಣಿ ಪಕ್ಷಿಗಳು, ನದಿ ಸರೋವರಗಳು ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಅತ್ಯಂತ ಸುಂದರಮಯವಾಗಿಸಿದೆ. ಅದರ ಪರಿಣಾಮ ಅತ್ಯದ್ಭುತ ಜಾನಪದೀಯ ಸಂಗೀತ ಸಾಹಿತ್ಯ ನೃತ್ಯ ಜನಜೀವನ ತುಂಬಾ ಆಕರ್ಷಕವಾಗಿರುತ್ತದೆ. ನೆಮ್ಮದಿಯುಕ್ತ ಸುಂದರ ನಾಗರಿಕ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಅದ್ಬುತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗದೆ ಮತ್ತಷ್ಟು ಕಗ್ಗತಲೆಯತ್ತ ಸಾಗುತ್ತಿದೆ.

ಸುಡಾನ್ ನಲ್ಲಿ ಭಾರತೀಯರು ಸೇರಿ ಅಲ್ಲಿನ ಜನ ಅತ್ಯಂತ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಮೂಲಭೂತ ಅವಶ್ಯಕತೆಗಳಿಗೂ ಕೊರತೆಯಾಗಿದೆ. ಜೊತೆಗೆ ಜೀವ ಭಯ.‌ ಕನಿಷ್ಠ ಮನುಷ್ಯ ಪ್ರಜ್ಞೆಯ ಕೆಲವು ಅಂಶಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ಯೋಚಿಸಿ ಅಳವಡಿಸಿಕೊಂಡರೆ ಆ ದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯ. ಪ್ರವಾಸೋದ್ಯಮದಿಂದ ಸಾಕಷ್ಟು ಹಣ ಗಳಿಸಬಹುದು. ವಿಶ್ವದ ಶ್ರೀಮಂತ ದೇಶಗಳು ತಮ್ಮಲ್ಲಿರುವ ಹೆಚ್ಚುವರಿ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಈ ದೇಶಗಳಿಗೆ ರಪ್ತು ಮಾಡಿ ಅವುಗಳ ಏಳಿಗೆಗೆ ಪ್ರಯತ್ನಿಸಬೇಕು.

ಜಗತ್ತಿನ ದೊಡ್ಡ ದೊಡ್ಡ ‌ಶಾಂತಿ ಸುಧಾರಕರು, ಧಾರ್ಮಿಕ ಗುರುಗಳು, ಆಧ್ಯಾತ್ಮಿಕ ಚಿಂತಕರು, ಧನ ಸಹಾಯ ಮಾಡುವ ಉದ್ಯಮಿಗಳು ಈ ದೇಶಗಳ ಬಗ್ಗೆ ಸ್ವಲ್ಪ ಗಮನಹರಿಸಿ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಬೇಕು. ವಿಶ್ವವೇ ಒಂದು ಕುಟುಂಬವಿದ್ದಂತೆ. ಎಲ್ಲೇ‌ ದಂಗೆಗಳಾದರು ನಾವು ಅದನ್ನು ತಡೆಯಲು ಪ್ರಯತ್ನಿಸಬೇಕು. ಅದೇ ವಿಶ್ವ ಮಾನವ ಪ್ರಜ್ಞೆ. ಆ ಮೂಲಕ ನಾವು ಸಹ ಜಾಗೃತರಾಗಬಹುದು.

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ