ಆಭರಣಗಳು ಬಾಡಿಗೆಗೆ!

ಆಭರಣಗಳು ಬಾಡಿಗೆಗೆ!

ಬರಹ

ಗ್ರಾಹಕರಿಗೇ ಗುತ್ತಿಗೆ!
ಹೊರಗುತ್ತಿಗೆ ವಿಧಾನದಲ್ಲಿ ಕಂಪೆನಿಯು ತನ್ನ ಕೆಲಸವನ್ನು, ಆ ಕೆಲಸದಲ್ಲಿ ಹೊರಗಿನ ಇನ್ಯಾವುದಾದರೂ ಪರಿಣತ ಕಂಪೆನಿಗೆ ನೀಡಿ ತನ್ಮೂಲಕ ಮಿತವ್ಯಯ ಸಾಧಿಸುತ್ತದೆ. ಈಗಿನ ಹೊಸ ನಮೂನೆ ಎಂದರೆ ಗ್ರಾಹಕರಿಗೇ ಗುತ್ತಿಗೆ ನೀಡುವುದು. ಉತ್ಪನ್ನದ ವಿನ್ಯಾಸವನ್ನು ಗ್ರಾಹಕರಿಂದಲೇ ಆಹ್ವಾನಿಸಿ, ವಿನ್ಯಾಸಕ್ಕೆ ಕಡಿಮೆ ದರದಲ್ಲಿ ಅಥವ ಉಚಿತವಾಗಿ ಅದನ್ನು ಬಳಸುವುದು ಕಂಪೆನಿಗಳ ತಂತ್ರ. ತ್ರೆಡ್‌ಲೆಸ್ ಎನ್ನುವ ಟಿ-ಶರ್ಟ್ ತಯಾರಿಸುವ ಕಂಪೆನಿಯು ತನ್ನ ಗ್ರಾಹಕರಿಂದ ಟಿ-ಶರ್ಟಿನ ವಿನ್ಯಾಸವನ್ನು ಆಹ್ವಾನಿಸುತ್ತದೆ.ವಿನ್ಯಾಸಗಳನ್ನು ಅಂತರ್ಜಾಲ ತಾಣದಲ್ಲಿ ಹಾಕಿ,ಗ್ರಾಹಕರಿಂದ ಅವುಗಳಿಗೆ ರೇಟಿಂಗ್ ನೀಡಿಸಿ, ಹೆಚ್ಚು ಜನರು ಇಷ್ಟಪಟ್ಟ ವಿನ್ಯಾಸಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡುತ್ತದೆ. ವಿನ್ಯಾಸಕಾರನ ಹೆಸರನ್ನೂ ಟಿ-ಶರ್ಟಿನ ಲೇಬಲ್‌ನಲ್ಲಿ ನೀಡಲಾಗುತ್ತದೆ.ಕಂಪೆನಿಯು ವಿನ್ಯಾಸಕಾರನಿಗೆ ಪ್ರತೀ ವಾರ ನೀಡುವ ಬಹುಮಾನದ ಮೊತ್ತ ಎರಡು ಸಾವಿರ ಡಾಲರುಗಳು. ಮ್ಯುಜಿ.ನೆಟ್ ಎನ್ನುವ ಜಪಾನಿ ಕಂಪೆನಿಯು ಪೀಠೋಪಕರಣಗಳ ವಿನ್ಯಾಸವನ್ನು ಗ್ರಾಹಕರಿಂದ ಸ್ವೀಕರಿಸುತ್ತದೆ. ಹೊಸ ವಿನ್ಯಾಸದ ಪೀಠೋಪಕರಣಗಳನ್ನು ಅಂತರ್ಜಾಲ ತಾಣದಲ್ಲಿ ಪ್ರದರ್ಶಿಸಿ,ಗ್ರಾಹಕರು ಬೇಡಿಕೆ ಸಲ್ಲಿಸಲು ಅವಕಾಶ ನೀಡುತ್ತದೆ. ಕನಿಷ್ಠ ಪಕ್ಷ ಮುನ್ನೂರು ಜನರಿಂದ ಬೇಡಿಕೆ ಪಡೆದ ಪೀಠೋಪಕರಣಗಳನ್ನು ತಯಾರಿಸಿ,ಮಾರಾಟಕ್ಕೆ ಒದಗಿಸುವುದು ಕಂಪೆನಿಯು ಅನುಸರಿಸುವ ಕ್ರಮ.ಮಲಗುವಾಗ ಮಂಚದ ತಲೆಯ ಸಮೀಪ ಅಳವಡಿಸಬಹುದಾದ ಅನುಕೂಲಕರ ದೀಪ ಮತ್ತು ಹಲವು ರೀತಿಯಲ್ಲಿ ಇರಿಸಬಹುದಾದ ಬೀನ್ ಬ್ಯಾಗ್ ಕುರ್ಚಿಗಳು ಈ ರೀತಿ ಗ್ರಾಹಕರಿಂದ ವಿನ್ಯಾಸಗೊಳಿಸಲ್ಪಟ್ಟು ಮಾರಾಟದಲ್ಲಿ ದಾಖಲೆ ಮಾಡಿವೆ.
----------------------------------------------------------------------
ಆಭರಣಗಳು ಬಾಡಿಗೆಗೆ!
ಮನೆ,ವಾಹನ ಇತ್ಯಾದಿಗಳು ಬಾಡಿಗೆಗೆ ಸಿಗುತ್ತಿರುವಾಗ, ಆಭರಣಗಳೂ ಬಾಡಿಗೆಗೆ ಸಿಕ್ಕಬಾರದೇ?ಈಗ ಅದೂ ಸಾಧ್ಯವಾಗಲಿದೆ.ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಜನರ ಕೈಯಲ್ಲಿ ಓಡಾಡುವ ಹಣದ ಪ್ರಮಾಣ ಕಡಿಮೆಯಾಗಿದೆ. ಬಂಗಾರದ ಬೆಲೆಯೂ ಗಗನಕ್ಕೇರಿದೆ. ವರ್ಷದಲ್ಲಿ ನಾಲ್ಕೈದು ಬಾರಿ ಧರಿಸುವ ಆಭರಣಗಳಿಗೆ ಲಕ್ಷಗಟ್ಟಲೆ ಸುರಿಯುವ ಬದಲು ಅದು ಬಾಡಿಗೆಗೆ ದೊರೆತರೆ ಚೆನ್ನಲ್ಲವೇ?ಇಂಡಿಯಾ ಕ್ಯಾಪಿಟಲ್ ಕಂಪೆನಿಯಿದೀಗ ಬಂಗಾರದ ಆಭರಣಗಳನ್ನು ಬಾಡಿಗೆಗೆ ಒದಗಿಸಲು ಯೋಜಿಸಿದೆ. ಬಾಡಿಗೆಯು ಮೂರು ದಿನಗಳಿಗೆಯು ಆಭರಣದ ಬೆಲೆಯ ಶೇಕಡಾ ಮೂರರಿಂದ ಹತ್ತುಆಗಿರುತ್ತದೆ. ವಿದೇಶಗಳಿಗೆ ಆಭರಣಗಳನ್ನು ಕೊಂಡೊಯ್ಯುವವರು ಅಧಿಕ ಬಾಡಿಗೆ ಕೊಡಬೇಕಾಗುತ್ತದೆ. ಅಂತರ್ಜಾಲ ತಾಣದ ಮೂಲಕ ಬಾಡಿಗೆಗೆ ದೊರೆಯುವ ವಿವಿಧ ಮಾದರಿಗಳನ್ನು ಪ್ರದರ್ಶಿಸಿ,ಆಸಕ್ತರಿಂದ ಬೇಡಿಕೆ ಬಂದಾಗ ಬಾಡಿಗೆ ನೀಡಲಾಗುವುದು. ಬಾಡಿಗೆಗೆ ಆಭರಣವನ್ನು ನೀಡುವ ಮೊದಲು,ಅದನ್ನು ಗ್ರಾಹಕನ ಮುಂದೆಯೇ ಲೇಸರ್ ತಂತ್ರಜ್ಞಾನದ ಸಹಾಯದಿಂದ ಪರೀಕ್ಷಿಸಿ,ಆಭರಣದಲ್ಲಿರುವ ವಿವಿಧ ಲೋಹಗಳ ಪ್ರಮಾಣವನ್ನು ತಿಳಿಸಲಾಗುವುದು.ಆಭರಣವನ್ನು ಪಡೆದ ಬಗ್ಗೆ ಗ್ರಾಹಕ ಸಹಿ ಹಾಕಿದ ಪತ್ರವನ್ನು ಕಂಪೆನಿಗೆ ನೀಡುವುದಲ್ಲದೆ,ಖಾತರಿ ಮೊತ್ತವನ್ನೂ ನೀಡಬೇಕು.ಅಗತ್ಯವಿದ್ದರೆ ಖಾತರಿ ನೀಡುವವರ ಸಹಿಯನ್ನೂ ಪಡೆಯಲಾಗುತ್ತದೆ.ಆಭರಣ ವಾಪಸ್ಸು ಪಡೆಯುವಾಗ ಪರೀಕ್ಷಿಸಿಯೇ ಪಡೆಯಲಾಗುತ್ತದೆ.
------------------------------------------------
ಟ್ವಿಟರ್ ಮೇಲೆ ಟಿವಿ ಧಾರಾವಾಹಿ!
ಮೈಕ್ರೋಬ್ಲಾಗಿಂಗ್‌ಗೆ ಅವಕಾಶ ನೀಡುವ ಟ್ವಿಟರ್ ಅಂತರ್ಜಾಲ ತಾಣವು ರ‍ೆವಿಲ್ಲ್ ಪ್ರೊಡಕ್ಷನ್ಸ್ ಮತ್ತು ಬ್ರಿಲ್ಲ್‌ಸ್ಟೀನ್ ಎಂಟರ್ಟೈನ್‌ಮೆಂಟ್ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಈ ಟಿವಿ ಕಂಪೆನಿಗಳು ಟ್ವಿಟರ್ ಸುತ್ತ ಹೆಣೆದ ಕತೆಯ ಧಾರಾವಾಹಿಯನ್ನು ಪ್ರಸಾರ ಮಾಡಲಿವೆ. ಜನರ ನಡುವಣ ಸಂಪರ್ಕಕ್ಕೆ ಹೊಸ ಹಾದಿ ಕಲ್ಪಿಸಿರುವ ಟ್ವಿಟರ್ ಈ ಒಡಂಬಡಿಕೆಯಿಂದ ಸಾಧಿಸಲಿರುವುದು ಏನು ಎನ್ನುವುದಿನ್ನೂ ಅಸ್ಪಷ್ಟ.

-------------------------------------
ಕನ್ನಡ ಅಂತರ್ಜಾಲ ತಾಣಗಳು
ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣ. ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ಮೂರು ತಿಂಗಳೊಳಗೆ ಸಾವಿರದಿನ್ನೂರು ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" http://www.kendasampige.com/ ತಾಣದಲ್ಲಿ ಲಭ್ಯವಿದೆ. ಅನಂತಮೂರ್ತಿ,ಮೊಗಳ್ಳಿ,ವೈದೇಹಿ,ಫಕೀರ್,ಉಮಾರಾವ್,ಕೇಶವ ಕುಲಕರ್ಣಿ,ಅನಿವಾಸಿ ಮುಂತಾದವರು ನಿಯಮಿತವಾಗಿ ಬರೆಯುವ ಈ ತಾಣ ದೈನಿಕ ಕಾದಂಬರಿಯನ್ನೂ ಪ್ರಕಟಿಸುತ್ತಿದೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್‌ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ‍್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ  ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.
-------------------------------------------
ಮೈಕ್ರೋಸಾಫ್ಟ್ ಬಿಂಗ್
ಮೈಕ್ರೋಸಾಫ್ಟಿನ ಹೊಸ ಶೋಧ ಸೇವೆ ಜೂನ್ ಮೂರರಿಂದ ಅನಾವರಣಗೊಳ್ಳಲಿದೆ. ಇದು ಜನರಿಗೆ ವಿವಿಧ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಹಾಯ ಮಾಡುವ ಫಲಿತಾಂಶಗಳನ್ನು ಒದಗಿಸಿ,ಇತರ ಶೋಧ ಸೇವೆಗಳಿಗೆ ಭಿನ್ನವಾಗಿ ಕಂಡು ಬರಲಿದೆ.ಬೇಕಾದ ವಸ್ತುವನ್ನು ಆಯ್ದುಕೊಳ್ಳಲು, ಪ್ರವಾಸ ಕೈಗೊಳ್ಳಲು, ಆರೋಗ್ಯ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಮತ್ತು ಅಗತ್ಯವಾದ ಸ್ಥಳೀಯ ಉದ್ದಿಮೆಯನ್ನು ಹುಡುಕಲು ಬಿಂಗ್ ಸಹಾಯ ಮಾಡಲಿದೆಯಂತೆ. ಗೂಗಲ್ ಶೋಧ ಸೇವೆಗೆ ಸ್ಪರ್ಧೆ ನೀಡುವ ಮೈಕ್ರೋಸಾಫ್ಟಿನ ಗುರಿಯು ಬಿಂಗ್ ಶೋಧ ಸೇವೆಯಿಂದಲಾದರೂ ಈಡೇರುವುದೋ ಕಾದು ನೋಡಬೇಕು.
----------------------------------------------------
ಜತೆಗೊಯ ಬಹುದಾದ ಓಎಸ್
ಸಿಡಿಯಲ್ಲೂ ಪೆನ್ ಡ್ರೈವಿನಲ್ಲೂ ನಮಗೆ ಬೇಕಾದ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶವನ್ನು ಒಯ್ಯಬಹುದಾದರೆ ಬಹಳ ಅನುಕೂಲತೆಯಿದೆ. ಈ ಸಿಡಿ ಅಥವ ಪೆನ್ ಡ್ರೈವ್ ಬೂಟೇಬಲ್ ಆಗಿದ್ದರೆ, ಯಾವುದೇ ಕಂಪ್ಯೂಟರಿಗೆ ಇವನ್ನು ಹಾಕಿ, ಅವುಗಳ ಮೂಲಕವೇ ಯಂತ್ರವನ್ನು ಚಾಲೂ ಮಾಡಿದರೆ, ಅಲ್ಲೂ ಸಿಡಿ ಅಥವ ಪೆನ್ ಡ್ರೈವಿನಲ್ಲಿರುವ ಓ ಎಸ್ ಮತ್ತು ಡೆಸ್ಕ್‌ಟಾಪ್ ಪಡೆಯಬಹುದು. ನಮಗೆ ಬೇಕಾದ ತಂತ್ರಾಂಶಗಳೂ ಅದರಲ್ಲಿ ಅನುಸ್ಥಾಪಿಸಿಯೇ ಇರುವುದರಿಂದ ಸದ್ಯ ನಾವು ಕೆಲಸ ಮಾಡುತ್ತಿರುವ ಯಂತ್ರದಲ್ಲಿ ಅವಿಲ್ಲದೆ ಪರದಾಡುವ ಅಗತ್ಯ ಇಲ್ಲ. ಡ್ಯಮ್ ಸ್ಮಾಲ್ ಲಿನಕ್ಸ್ ಎನ್ನುವ ಓ ಎಸ್ ಐವತ್ತು ಎಂಬಿ ಗಾತ್ರದ್ದು.ಪೆನ್ ಡ್ರೈವಿನಲ್ಲಿ ಇದು ಆರಾಮವಾಗಿ ಹಿಡಿಯುತ್ತದೆ ಮತ್ತು ಅಗತ್ಯವಾದ ಪದಸಂಸ್ಕಾರ,ಬ್ರೌಸರ್ ಇತ್ಯಾದಿಗಳೂ ಇದರಲ್ಲಿವೆ.
ಕ್ರಂಚ್‌ಬ್ಯಾಗ್ ಲಿನಕ್ಸ್ ಕೂಡಾ ಲಿನಕ್ಸ್ ಓ ಎಸ್.ಉಬುಂಟು ಲಿನಕ್ಸ್ ಬಹು ಜನಪ್ರಿಯ ಲಿನಕ್ಸ್.ಇನ್ನೂರೈವತ್ತಾರು ಎಂಬಿ ಸ್ಮರಣಸಾಮರ್ಥ್ಯ ಕಂಪ್ಯೂಟರಿನಲ್ಲಿದ್ದರೆ, ಉಬುಂಟು ಲಿನಕ್ಸ್‌ನ ಬೂಟೇಬಲ್ ಸಿಡಿ ಬಳಸಿ,ಯಾವ ಕಂಪ್ಯೂಟರಿನಲ್ಲಿಯೂ ಉಬುಂಟುವನ್ನು ಪಡೆಯಬಹುದು.ಸ್ಲಾಕ್ಸ್ ಮತ್ತು ಪಪ್ಪಿ ಲಿನಕ್ಸ್ ಕೂಡಾ ಬೂಟೇಬಲ್ ಸಿಡಿ ಅಥವ ಪೆನ್ ಡ್ರೈವಿನಲ್ಲಿ ಹಿಡಿಸುವ ಓ ಎಸ್.ಇವೆರದೂ ಇನ್ನೂರೈವತ್ತಾರು ಎಂಬಿ ರಾಮ್ ಇದ್ದರೆ ಆರಾಮವಾಗಿ ಕೆಲಸ ಮಾಡುತ್ತವೆ. ಅಗತ್ಯ ತಂತ್ರಾಂಶಗಳೆಲ್ಲಾ ಇವುಗಳಲ್ಲಿವೆ.

ಉದಯವಾಣಿ

*ಅಶೋಕ್‌ಕುಮಾರ್ ಎ