ಆಯುಧಪೂಜೆ ಮತ್ತು ಹಸಿವು...

ಆಯುಧಪೂಜೆ ಮತ್ತು ಹಸಿವು...

ಬರಹ

ನನ್ನ ಬೈಕ್

ಇಂದು ಮಹಾನವಮಿ ಆಯುಧಪೂಜೆಯ ಪ್ರಯುಕ್ತ ಕಛೇರಿಗೆ ರಜೆಯಾದ ಕಾರಣ ಬೆಳಿಗ್ಗೆ ತಡವಾಗಿ ಅಂದರೆ ೭.೪೫ಕ್ಕೆ ಎದ್ದು ಸಂಪದ ಸಮುದಾಯದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ನಂತರ ಕಾರನ್ನು, ಬೈಕನ್ನು ತೊಳೆಯಲು ಕೋಣೆಯಿಂದ ಹೊರಡಲನುವಾಗುತ್ತಿದ್ದೆ. ಅಷ್ಟರಲ್ಲಿ ನನ್ನ ಚಿಕ್ಕಮ್ಮನ ಮಗ ಫೋನ್ ಮಾಡಿದ. ಏನು ವಿಷಯ ಅಂತ ಕೇಳಲು ಅವನು "ನಮ್ಮ ಮನೆಗೇ ಬಾ. ಇಲ್ಲೆ ಕಾರನ್ನು ತೊಳೆಯೋಣ. ಇಬ್ಬರ ಕಾರುಗಳನ್ನು ತೊಳೆಯಲು ಪರಸ್ಪರ ಸಹಾಯ ಮಾಡಿದಂತಾಗುತ್ತದೆ" ಅಂತ ಹೇಳಿದ. ನಾನು "ಸರಿ ಬರ್ತೀನಿ" ಅಂತ ಹೇಳಿ ಫೋನ್ ಕಟ್ ಮಾಡಿ ಅಮ್ಮ ಕೊಟ್ಟ ಹಾರ್ಲಿಕ್ಸ್ ಅನ್ನು ಕುಡಿದು ಕಾರನ್ನು ಓಡಿಸಿಕೊಂಡು ಪಕ್ಕದ ರಸ್ತೆಯಲ್ಲಿರುವ ಅವನ ಮನೆಗೆ ಹೋದೆ. ಆಗ ಸಮಯ ಹತ್ತು ಘಂಟೆ.

ಇಂದು ರಜೆಯಾದ ಕಾರಣ ತಿಂಡಿಯೂ ತಡ. ಅಲ್ಲಿ ಹೋದ ತಕ್ಷಣ ನನ್ನ ಚಿಕ್ಕಮ್ಮ ಕಾಫಿ ಕುಡೀತೀಯೇನೋ ಅಂತ ಕೇಳಲು ಇನ್ನೊಂದು ಸ್ವಲ್ಪ ಹೊತ್ತು ಆಗಲಿ ಅಂತ ಹೇಳಿ ಕಾರನ್ನು ತೊಳೆಯಲು ನಾನು ಮತ್ತು ನನ್ನ ಚಿಕ್ಕಮ್ಮನ ಮಗ ಅಣಿಯಾದೆವು.

ಅಷ್ಟರಲ್ಲಿ ನನ್ನ ಸ್ನೇಹಿತರೊಬ್ಬರು ಎಸ್. ಎಮ್. ಎಸ್. ಮೂಲಕ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಅಂತ ಸಂದೇಶ ಕಳುಹಿಸಿದ್ದರು. ಅವರಿಗೆ ಫೋನ್ ಮಾಡಿ ದಸರಾ ಹಬ್ಬದ ಶುಭಾಶಯಗಳನ್ನು ಹೇಳಿ , ಹಾಗೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಮಾತನ್ನು ಮುಗಿಸುವಷ್ಟರಲ್ಲಿ ೧೫ ನಿಮಿಷಗಳು ಆಗಿದ್ದವು. ನಂತರ ವಿಮೆ ಏಜೆಂಟ್ ಫೋನ್ ಮಾಡಿ "ನಿಮ್ಮ ಕಾರಿನ ವಿಮೆ ಬರುವ ಭಾನುವಾರದಂದು ಕೊನೆಗೊಳ್ಳುತ್ತದೆ, ಆದ್ದರಿಂದ ನೀವು ಶುಕ್ರವಾರವೇ ನಮ್ಮ ಕಛೇರಿಗೆ ಬಂದು ವಿಮೆಯನ್ನು ಕಟ್ಟಬೇಕು" ಎಂದು ಹೇಳಿದರು. ಕೊನೆಯಲ್ಲಿ ವಿಮೆಗೆ ಕಟ್ಟಬೇಕಾದ ಒಟ್ಟು ಮೊತ್ತವನ್ನು ಹೇಳಿ ಫೋನ್ ಕಟ್ ಮಾಡಿದರು. ಸರಿ ಹೊತ್ತಾಗುತ್ತದೆ ಅಂತ ನನ್ನ ಮೊಬೈಲ್ ಫೋನನ್ನು ಸೈಲೆನ್ಟ್ ಮೋಡ್ ಗೆ ಸೆಟ್ ಮಾಡಿ ಕಾರನ್ನು ತೊಳೆಯಲು ಶುರುಮಾಡಿದಾಗ ವೇಳೆ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು.

ಬೆಳಿಗ್ಗೆ ಒಂದು ಲೋಟ ಹಾರ್ಲಿಕ್ಸ್ ಬೆರೆಸಿದ ಹಾಲನ್ನು ಕುಡಿದಿದ್ದರಿಂದ ಹೊಟ್ಟೆ ತುಂಬಾ ಹಸಿದಿತ್ತು. ಕಾರುಗಳನ್ನು ತೊಳೆಯುದೇ ಸ್ನಾನ ಇಲ್ಲ, ಸ್ನಾನ ಮಾಡದೇ ತಿಂಡಿಯೂ ಇಲ್ಲ, ತೀರ್ಥವೂ ಇಲ್ಲ. :-(

ಮೊದಲು ನನ್ನ ಚಿಕ್ಕಮ್ಮನ ಮಗನ ಮಾರುತಿ ವ್ಯಾನನ್ನು ತೊಳೆಯಲು ಶುರುಮಾಡಿದೆವು. ಸುಮಾರು ಹನ್ನೆರಡು ಘಂಟೆಯ ಹೊತ್ತಿಗೆ ಅವನ ಕಾರನ್ನು ತೊಳೆದು ಒರೆಸಿ ಆಚೆ ನಿಲ್ಲಿಸಿ ನಂತರ ನನ್ನ ಕಾರನ್ನು ತೊಳೆಯಲು ಶುರುಮಾಡಿದೆವು. ನನ್ನ ಕಾರನ್ನು ಇತ್ತೀಚೆಗಷ್ಟೇ ಸರ್ವೀಸ್ ಮಾಡಿಸಿದ್ದರಿಂದ ಜಾಸ್ತಿ ಕೊಳೆಯಿರಲಿಲ್ಲ. ಕಾರುಗಳನ್ನು ತೊಳೆದು ಒರೆಸುವ ಹೊತ್ತಿಗೆ ಗಡಿಯಾರದಲ್ಲಿ ಹನ್ನೆರಡು ಘಂಟೆ ಮೂವತ್ತು ನಿಮಿಷವಾಗಿತ್ತು. ಅಷ್ಟರಲ್ಲಿ ನನ್ನ ಹಸಿವೇ ಇಂಗಿ ಹೋಗಿತ್ತು... :-(

ಬೆಳಗ್ಗಿನಿಂದ ಏನೂ ತಿನ್ನದೇ ಹೊಟ್ಟೆ ಹಸಿದಿದ್ದ ಕಾರಣ, ಮನೆಗೆ ಬಂದು ಬೇಗ ಬೇಗ ಬೈಕನ್ನು ತೊಳೆದು ಸ್ನಾನ ಮಾಡಿ, ದಿನವೂ ಮಾಡುವ ಸಂಧ್ಯಾವಂದನೆಯನ್ನು ಇಂದು ಮಾಡದೆ :-(, ರಾಹುಕಾಲ ಮುಗಿಯುವವರೆಗೂ ಕಾದು ೧.೩೦ ರ ನಂತರ ಕಾರು ಮತ್ತು ಬೈಕುಗಳ ಪೂಜೆಯನ್ನು ಮಾಡಿದೆವು. ಬೈಕ್ ಹಾಗೂ ಕಾರಿನ ಚಕ್ರಗಳಿಗೆ ನಿಂಬೇಹಣ್ಣುಗಳನ್ನು ಇಟ್ಟು, ಗಾಡಿಗಳಲ್ಲಿ ಒಂದು ಸುತ್ತು ಹೊಡೆದು ಮನೆಗೆ ಬಂದು ಅಮ್ಮ ಮಾಡಿದ್ದ ತರಕಾರಿ ಪಲಾವ್, ಆಂಬೊಡೆಗಳನ್ನು ಗಡತ್ತಾಗಿ ತಿಂದು, ಗಸಗಸೆ ಪಾಯಸವನ್ನು ಕುಡಿಯುವ ಹೊತ್ತಿಗೆ ಸಮಯ ಎರಡು ಘಂಟೆ ಮೂವತ್ತು ನಿಮಿಷವಾಗಿತ್ತು.

ನಾಳೆ ವಿಜಯದಶಮಿಯ ಪ್ರಯುಕ್ತ ರಜೆ. :-)

ನನ್ನ ಫೋರ್ಡ್ ಐಕಾನ್ ಫ್ಳೇರ್