ಆಯುರ್ವೇದದ ವೈದ್ಯ - ಧನ್ವಂತರಿ

ಆಯುರ್ವೇದದ ವೈದ್ಯ - ಧನ್ವಂತರಿ

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ//

ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ. ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ. ಸಸ್ಯಜನ್ಯ ಮೂಲಗಳಿಂದ ಔಷಧ ತಯಾರಿಸಿದ ಮೊದಲ ಗೌರವ ಇವನಿಗಂತೆ.

ಸಮುದ್ರಮಥನ ಕಾಲದಲ್ಲಿ ದಿವ್ಯ ಪ್ರಭೆಯೊಂದಿಗೆ ಕರಗಳಲ್ಲಿ ಅಮೃತಕಲಶ ಹಿಡಿದು ಶ್ರೀಗಂಧದ ಘಮಲಿನೊಂದಿಗೆ ಮಹಾವಿಷ್ಣುವೇ ಧನ್ವಂತರಿ ಅವತಾರದಲ್ಲಿ ಬಂದನೆಂದು ಪುರಾಣವು ತಿಳಿಸುತ್ತದೆ. ಸುರಾಸುರರ ಹೋರಾಟದಲ್ಲಿ ಆಗುವ ನೋವು ಗಾಯಗಳನ್ನು ವಾಸಿ ಮಾಡುವ ಸಲುವಾಗಿ ಅವತರಿಸಿದನು ಎಂದು ಕಂಡು ಬರುತ್ತದೆ.ಗಾಯಗಳಿಗೆ ಸೊಪ್ಪನ್ನು ಅರೆದು ಲೇಪಿಸುವುದು ಸಾಮಾನ್ಯ‌.ಆದರೆ ಅದಕ್ಕೊಂದು ಕ್ರಮವಿದೆ, ಪದ್ಧತಿಯಿದೆ. ಧನ್ವಂತರಿಯ ಬಲಗೈಯಲ್ಲಿ ಜ್ಞಾನಮುದ್ರೆ, ಎಡಗೈಯಲ್ಲಿ ಅಮೃತಕಲಶ,ವನ್ನು ಕಾಣಬಹುದು.

*ನಮಾಮಿ ಧನ್ವಂತರಿಯಾದಿದೇವಂ ಸುರಾಸುರೈರ್ವಂದಿತ/ ಪಾದಪದ್ಮಂ ಲೋಕೇಜರಾಋಗ್ವಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ//*

ಈ ಶ್ಲೋಕವನ್ನು ಪ್ರತಿನಿತ್ಯ ಹೇಳಿ, ಸರ್ವ ಪಾಪಕರ್ಮಗಳನ್ನೂ ನಾಶಮಾಡೆಂದು ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿದರೆ ದೇಹದ ನರನಾಡಿಗಳಲ್ಲಿ ಚೈತನ್ಯಮೂಡುತ್ತದೆಯೆಂಬ ಪ್ರತೀತಿ, ನಂಬಿಕೆ. ಬೇವಿನೆಲೆ ಮತ್ತು ಸಕ್ಕರೆಯ ನೈವೇದ್ಯ ನೀಡಿ  ರಕ್ಷಿಸೆಂದು ಬೇಡಿಕೊಳ್ಳುತ್ತಾರೆ. ಧನ್ವಂತರಿ ದೇವತೆಯ ಉಪದೇಶವನ್ನು ಆಯುರ್ವೇದ ಗ್ರಂಥಗಳಲ್ಲಿ ಕಾಣಬಹುದು. ಆಯುಷ್ಯದಾತ, ಆರೋಗ್ಯ ಪ್ರದಾತ, ಸಕಲವನ್ನೂ ನೀಡಿ ಶರೀರದ ರಕ್ಷಣೆಯನ್ನು ಮಾಡುವ, ಎಲ್ಲರನ್ನೂ ಕಾಪಾಡುವ ಧನ್ವಂತರಿಯನ್ನು ಆತನ ಜಯಂತಿಯಂದು (ಅ.೨೨) ಸ್ಮರಿಸೋಣ.

-ರತ್ನಾ ಕೆ ಭಟ್, ತಲಂಜೇರಿ

ಆಧಾರ: *ಧನ್ವಂತರಿ ದೇವ* ಸಂಗ್ರಹದಿಂದ