ಆಯುರ್ವೇದ ದರ್ಶನ

ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದರಲ್ಲಿರುವ 14 ಅಧ್ಯಾಯಗಳು:
1)ಪ್ರಸ್ತಾವನೆ 8)ನಾಲ್ಕನೆಯ ಆಯಾಮ: ಕಾಲ
2)ಒಂದು ಪಕ್ಷಿನೋಟ 9)ಪಥ್ಯಾಹಾರ
3)ಆಳುವವರು: ದೋಷಗಳು 10)ಮೊದಲನೆ ಮತ್ತು ಎರಡನೆ ಬಾಲ್ಯಾವಸ್ಥೆ
4)ಜನತೆ: ಧಾತುಗಳು 11)ಮಾಂತ್ರಿಕ ಗುಂಡು
5)ಪ್ರೇರಕ ಶಕ್ತಿ: ಅಗ್ನಿ 12)ಮೈಗೆ ಸ್ವಲ್ಪ ಹುಷಾರಿಲ್ಲವೇ?
6)ಆಮ ಎಂಬ ಶತ್ರು 13)ಪಂಚಕರ್ಮ
7)ನಿಮ್ಮ ದೇಹ ಪ್ರಕೃತಿ 14)ಅಂತಿಮವಾಗಿ….
ಜಗತ್ತಿನ ಅತಿ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿ ಆಯುರ್ವೇದವೂ ಒಂದು. ವಿಜ್ಞಾನ, ಕಲೆ ಮತ್ತು ತತ್ವಜ್ಞಾನಗಳ ಸಂಗಮವಾಗಿರುವ ಆಯುರ್ವೇದವು ಅಥರ್ವಣ ವೇದದ ವಿಸ್ತೃತ ಭಾಗವಾಗಿದೆ. ಆಯುರ್ವೇದ ಎಂಬ ಪದಕ್ಕೆ “ಜೀವದ ಬಗೆಗಿನ ಜ್ಞಾನ” ಎಂಬ ಅರ್ಥವಿದೆ. ಇದು ಆಯುರ್ವೇದದ ತಿರುಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಯಾಕೆಂದರೆ, ಆಯುರ್ವೇದವು ಕಾಯಿಲೆಗಳ ಚಿಕಿತ್ಸೆಗೆ ಔಷಧಗಳ ಸೂತ್ರಗಳನ್ನು ಸೂಚಿಸುತ್ತದೆ ಮಾತ್ರವಲ್ಲ ಯಾವುದೇ ಕಾಯಿಲೆ ಬಾರದಂತೆ ತಡೆಗಟ್ಟುವ ವಿಧಾನಗಳನ್ನು ವಿವರವಾಗಿ ತಿಳಿಸುತ್ತದೆ. ಕೆಲವರಿಗೆ ಆಯುರ್ವೇದ ಎಂದರೆ ಅಲಕ್ಷ್ಯ. ಅಂಥವರು ಆಯುರ್ವೇದದ ಬಗೆಗಿನ ಸಂಸ್ಕೃತ ಶ್ಲೋಕಗಳ ಅರ್ಥ ತಿಳಿದು, ಅವುಗಳಲ್ಲಿರುವ ಸ್ಪಷ್ಟ ಒಳನೋಟಗಳನ್ನು ಗ್ರಹಿಸಬೇಕು. ಆಗ ಅವರಲ್ಲಿರುವ ತಪ್ಪು ಕಲ್ಪನೆಗಳು ದೂರವಾಗಿ, ಅವರ ವಿವೇಕ ಜಾಗೃತವಾಗುತ್ತದೆ.
ಸರಿಯಾಗಿ ಯೋಚಿಸಿದರೆ, ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಆಯುರ್ವೇದದ ತತ್ವಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತಲೇ ಇರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗಳು:
-ಕೆಮ್ಮು ಅಥವಾ ಒಣಕೆಮ್ಮಿನಿಂದ ಬಳಲುವಾಗ, ಹಸಿ ಶುಂಠಿ ಅಥವಾ ಒಣ ಶುಂಠಿಯನ್ನು ಜಗಿದು ನುಂಗಿದರೆ ಶಮನವಾಗುತ್ತದೆ; ಶುಂಠಿಯನ್ನು ಜೇನಿನೊಂದಿಗೆ ಸೇವಿಸಿದರೂ ಗುಣವಾಗುತ್ತದೆ.
-ಮಲಬದ್ಧತೆಯಿಂದ ಸಂಕಟಪಡುವವರು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ಒಂದು ಚಮಕ ದನದ ತುಪ್ಪ ಸೇವಿಸಿದರೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ.
-ಮೂಲವ್ಯಾಧಿಯಿಂದ ನರಳುವವರಿಗೆ ಆಹಾರದ ಜೊತೆ ಗೆಣಸನ್ನು ಸೇವಿಸುವುದರಿಂದ ಶಮನವಾಗುತ್ತದೆ.
-ಮಗುವಿಗೆ ಮೊಲೆ ಹಾಲುಣಿಸುವ ತಾಯಿಗೆ ಹಾಲು ವೃದ್ದಿಯಾಗಲು ಬೇರೆಬೇರೆ ಜನಾಂಗಗಳಲ್ಲಿ ನಿರ್ದಿಷ್ಟ ಆಹಾರ ಸೇವನೆ ತಲೆತಲಾಂತರದಿಂದ ನಿಗದಿಪಡಿಸಲಾಗಿದೆ.
ಇಂತಹ ಹಲವಾರು ಕಾಯಿಲೆಗಳ ಶಮನಕ್ಕೆ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಆಯುರ್ವೇದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ ಎಂಬುದನ್ನು ಯಾರು ಬೇಕಾದರೂ ಪರೀಕ್ಷಿಸಬಹುದು.
ಪುಸ್ತಕದ ಮುನ್ನುಡಿಯಲ್ಲಿ ಮುಂಬೈಯ ಕೆ.ಇ. ಎಂ. ಆಸ್ಪತ್ರೆಯ ಪ್ರೊ. ಆರ್. ಡಿ. ಬಾಪಟ್ ಆಯುರ್ವೇದದ ಮಹತ್ವವನ್ನು ಹೀಗೆ ತಿಳಿಸಿದ್ದಾರೆ: “… ಆಯುರ್ವೇದವು ಒಂದು “ಪರಿಪೂರ್ಣ” ವಿಜ್ಞಾನವಾದ್ದರಿಂದ ಆರೋಗ್ಯಕರ ಜೀವನ ಸಾಗಿಸಲು ಅಗತ್ಯವಾದ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆಧುನಿಕ ವಿಜ್ಞಾನ ಪದ್ಧತಿಯಲ್ಲಿರುವಂತೆ ವಿಶ್ಲೇಷಣಾತ್ಮಕ ಗ್ರಹಿಕೆಗಳು ಆಯುರ್ವೇದ ಮೂಲಗ್ರಂಥಗಳಲ್ಲಿ ಲಭ್ಯವಿಲ್ಲದಿರಬಹುದು; ಆದರೆ ಸದೃಢವಾಗಿ ನಿಂತ ಅವಲೋಕನದ ಸಿದ್ಧಾಂತಗಳು ಸಾವಿರಾರು ವರುಷಗಳ ಕಾಲಗತಿಯ ಪರೀಕ್ಷೆಗಳನ್ನು ಎದುರಿಸಿ ನಿಂತಿರುವುದೇ ಅವುಗಳ ಮಹತ್ವವನ್ನು ಶ್ರುತಪಡಿಸುತ್ತವೆ. ಆಯುರ್ವೇದದಲ್ಲಿ ಸ್ವಾಭಾವಿಕವಾಗಿ ಲಭ್ಯವಿರುವ ಸಸ್ಯ ಮತ್ತು ಖನಿಜಗಳನ್ನೇ ಮದ್ದುಗಳಾಗಿ ಬಳಸಲಾಗುತ್ತದೆಯಷ್ಟೆ. ಇದು ಭೂಮಿಯಲ್ಲಿನ ಸಜೀವ ಮತ್ತು ನಿರ್ಜೀವ ಅಂಶಗಳ ಪರಸ್ಪರ ಲಾಭಕರ ಪರಿಣಾಮಗಳ ತತ್ವವು ಜೀವವಿಕಾಸ ಮತ್ತು ಮನುಜನ ಅಸ್ತಿತ್ವದ ಮೇಲಾಗಿರುವುದರ ದ್ಯೋತಕ.
ಈ ರೀತಿಯ “ಪರಿಪೂರ್ಣ” ವಿಜ್ಞಾನದ ವಿವಿಧ ಮಗ್ಗಲುಗಳ ಪರಿಶೀಲನೆ ಹಾಗೂ ಅದರ ತತ್ವಗಳ ಪುನರ್-ಮೌಲ್ಯಮಾಪನ ಇಂದಿನ ಅವಶ್ಯಕತೆಯಾಗಿದೆ. … ಆಧುನಿಕ ವೈದ್ಯಪದ್ಧತಿ ಮತ್ತು ಇತರ ಪರಂಪರಾನುಗತ ಪದ್ಧತಿಗಳ ನಡುವಿನ ಅದೃಶ್ಯ ಗೋಡೆಯನ್ನು ಬೇಧಿಸುವ ಅವಶ್ಯಕತೆ, ಎಂದಿಗಿಂತ ಈಗಿನ ಶತಮಾನದಲ್ಲಿ ಉಂಟಾಗುತ್ತಿರುವ ಪರಿಸರದ ಏರುಪೇರು, ಜೀವನಶೈಲಿಗಳ ಬದಲಾವಣೆ ಹಾಗೂ ಏರುತ್ತಿರುವ ಬಾಳಿನ ಒತ್ತಡಗಳ ದೃಷ್ಟಿಯಿಂದ ಹೆಚ್ಚಾಗುತ್ತಿದೆ….”
“ನಿಮ್ಮ ದೇಹ ಪ್ರಕೃತಿ” (7ನೇ) ಅಧ್ಯಾಯದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೇಹ ಪ್ರಕೃತಿಗಳ ಮಾಹಿತಿ ಇದೆ. ಅಧ್ಯಾಯದ ಕೊನೆಯಲ್ಲಿರುವ 28 ಪ್ರಶ್ನೆಗಳನ್ನು ಉತ್ತರಿಸಿ, ನಮ್ಮ ಉತ್ತರಗಳನ್ನು ನಾವೇ ಮೌಲ್ಯಮಾಪನ ಮಾಡಿಕೊಂಡು, ನಮ್ಮ ದೇಹ ಪ್ರಕೃತಿ ಏನೆಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. “ಮಾಂತ್ರಿಕ ಗುಂಡು” (11ನೇ) ಅಧ್ಯಾಯದಲ್ಲಿ ಹಲವಾರು ಆಯುರ್ವೇದ ಔಷಧಗಳ ಬಳಕೆ ಹಾಗೂ ಪರಿಣಾಮಗಳನ್ನು ವಿವರಿಸಲಾಗಿದೆ.
ಈ ಪುಸ್ತಕದಲ್ಲಿ ವಿವರಿಸಿರುವ ಆಯುರ್ವೇದದ ವಿವಿಧ ಮಗ್ಗಲುಗಳು ಭಾರತೀಯರಾದ ನಮಗೆ ಸುಪರಿಚಿತ - ನಮ್ಮ ಪ್ರತ್ಯಕ್ಷ ಅನುಭವಗಳಿಂದ ಅಥವಾ ನಮ್ಮ ಅಜ್ಜ-ಅಜ್ಜಿಯರಿಂದ ಎರವಲು ಪಡೆದ ಜ್ಞಾನಭಂಡಾರದ ಭಾಗವಾಗಿರುವುದರಿಂದ. ಲೇಖಕಿಯರು ಆಯುರ್ವೇದದ ಮೂಲತತ್ವಗಳನ್ನು ಸುಲಭವಾಗಿ ಗ್ರಹಿಸಬಹುದಾದ ಭಾಷೆಯಲ್ಲಿ ವಿವರಿಸಿರುವ ಕಾರಣ, ನಮ್ಮ ಆಯುರ್ವೇದ ಜ್ಞಾನಕ್ಕೆ ಪ್ರಾಚೀನ ಗ್ರಂಥಗಳನ್ನು ಆಧರಿಸಿದ ತಾರ್ಕಿಕ ನೆಲೆಗಟ್ಟು ಇದರ ಓದಿನಿಂದ ಲಭಿಸುತ್ತದೆ.
ಆಯುರ್ವೇದವು ಅತ್ಯಂತ ಕಠಿಣವಾದ “ಕಾಲದ ಪರೀಕ್ಷೆ”ಯನ್ನು ಎದುರಿಸಿ ಸಾವಿರಾರು ವರುಷಗಳಿಂದ ಪರಿಣಾಮಕಾರಿ ಚಿಕಿತ್ಸಾ ಹಾಗೂ ಪ್ರತಿಬಂಧಕ ವೈದ್ಯ ವಿಜ್ಞಾನವಾಗಿ ಬೆಳೆದು ಬಂದಿದೆ. ತನ್ನ ಮೇಲಾದ ಆಕ್ರಮಣಗಳನ್ನೆಲ್ಲ ಜಯಿಸಿ ನಿಂತ ವೈದ್ಯ ವಿಜ್ಞಾನ ಇದಾಗಿದೆ. ಜಗತ್ತಿನ ಮೂಲೆಮೂಲೆಗೂ ಆಯುರ್ವೇದದ ಜ್ಞಾನ ಹಾಗೂ ಬಳಕೆಯನ್ನು ಪಸರಿಸಿ, ರೋಗ ನಿರೋಧ ಶಕ್ತಿಯ ಹೆಚ್ಚಳವೇ ಆರೋಗ್ಯಪೂರ್ಣ ಜೀವನದ ಅಡಿಪಾಯ ಎಂಬ ಸೂತ್ರದ ಆಧಾರದಿಂದ ಆಲೋಪತಿಯ ಔಷಧಿ ತಯಾರಕ ಕಂಪೆನಿಗಳ ಲಾಭದ ಕೊಳ್ಳೆಯ ಜಾಲದಿಂದ ಜನಸಾಮಾನ್ಯರನ್ನು ಪಾರುಮಾಡಬಲ್ಲ ಆಯುರ್ವೇದದ ಕೈಪಿಡಿ ಈ ಪುಸ್ತಕ.