ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಸು ಸಾಕಿ!

ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಸು ಸಾಕಿ!

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದ್ದವು. ಅದರಲ್ಲಿ ಒಂದು ಹಸು ಸಾಕಾಣಿಕೆ. ಹಸು ಸಾಕಾಣಿಕೆಯಿಂದ ಪ್ರತ್ಯಕ್ಷವಾಗಿಯೂ ಆರೋಗ್ಯ, ಆಯುಸ್ಸು ವೃದ್ಧಿಸುತ್ತದೆ. ಪರೋಕ್ಷವಾಗಿಯೂ ವೃದ್ಧಿಸುತ್ತದೆ. ಇದು ನಿಜವೋ, ಅಲ್ಲವೋ ಎಂಬುದನ್ನು ಹತ್ತಾರು ಕಡೆ ನೋಡಿ, ತಿಳಿದು ಎಲ್ಲರೂ ಗಮನಿಸಬಹುದು.

ಹಸು ಸಾಕಾಣಿಕೆ ಎಲ್ಲರಿಗೂ ಮಾಡಲಿಕ್ಕೆ ಸಾಧ್ಯವಿಲ್ಲ. ಪೇಟೆ ಪಟ್ಟಣದಲ್ಲಿರುವವರು ಹಸು ಸಾಕುವುದು ಕಷ್ಟ ಸಾಧ್ಯ. ಆದರೆ ಹಳ್ಳಿಯಲ್ಲಿರುವವರು ಅವರವರ ಸೌಕರ್ಯಕ್ಕನುಗುಣವಾಗಿ ಹಸು ಸಾಕಾಣಿಕೆ ಮಾಡಬಹುದು. ಇದರಿಂದ ಬಹಳಷ್ಟು ಅನುಕೂಲವಿದೆ. ದುರದೃಷ್ಟವಶಾತ್ ಈಗ ಹಳ್ಳಿಯ ಮನೆಗಳಲ್ಲಿ ಯಾರೂ ಹಸು ಸಾಕಾಣಿಕೆ ಎಂದರೆ ನಮಗೆ ಬೇಡಪ್ಪಾ ಎಂಬವರೇ ಹೆಚ್ಚಾಗಿದ್ದಾರೆ. ಹಸು ಇದ್ದ ಮನೆಗೆ ಹೆಣ್ಣು ಸಹ ಕೊಡದ ಪರಿಸ್ಥಿತಿ ಉಂಟಾಗಿದೆ. ೧೦-೧೫ ವರ್ಷಕ್ಕೆ ಹಿಂದೆ ಕೃಷಿ ಇದೆ, ಗೊಬ್ಬರಕ್ಕೆ ಬೇಕಲ್ಲವೇ ಎಂದು ಹಸು/ಎಮ್ಮೆ ಸಾಕಾಣಿಕೆ ಮಾಡುತ್ತಿದ್ದರು. ಈಗ ಗೊಬ್ಬರ ಹಣಕೊಟ್ಟರೆ ಸಿಗುತ್ತದೆ ಮತ್ತೆ ಯಾಕೆ ಈ ತಲೆಬಿಸಿಯ ಹಸು ಸಾಕಣೆ ಎಂದು ಎಲ್ಲರೂ ಯೋಚಿಸುತ್ತಾರೆ. ಬೆಳಗ್ಗೆ ಬೇಗ ಎದ್ದು ಯೋಗ ಕ್ಲಾಸಿಗೆ ಹೋಗುತ್ತಾರೆ. ಕೆಲವರು ಜಿಮ್ ಗೆ ಹೋಗುತ್ತಾರೆ. ಮನೆಗೆ ಬರುವಾಗ ಅಂಗಡಿಯಿಂದ ಪ್ಯಾಕೆಟ್ ಹಾಲು ತಂದು ಚಹಾ- ಕಾಫಿ ಕುಡಿಯುತ್ತಾರೆ. ಹಸುಗಳಿಲ್ಲದ ಕಾರಣ ಇಷ್ಟಾದರೂ ಪುರುಸೊತ್ತು ಸಿಕ್ಕಿತಲ್ಲಾ ಎಂದು ಖುಷಿಪಡುತ್ತಾರೆ. ಮನೆಯ ಅಕ್ಕಚ್ಚು, ತರಕಾರಿ ತ್ಯಾಜ್ಯಗಳನ್ನು ದೂರ ಎಸೆದು ಕೃತಾರ್ಥರಾಗುತ್ತಾರೆ.

ಹಸು ಸಾಕಿದವರ ಮನೆ ಕಥೆ: ಕಳೆದ ಹಲವಾರು ವರ್ಷಗಳಿಂದ ಹಲವಾರು ಊರುಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದ ಸತ್ಯ ಸಂಗತಿ ಯಾರು ಹಸು ಸಾಕಿ ಅದರ ಹಾಲನ್ನು ಕುಡಿದು ಬದುಕುವವರು ಆಸ್ಪತ್ರೆ ಸಹವಾಸ ಅನುಭವಿಸಿದ ಉದಾಹರಣೆ ಕಡಿಮೆ. ಇವರಿಗೆ ಬಿಪಿ, ಶುಗರ್ ಇತ್ಯಾದಿ ಖಾಯಿಲೆಗಳಿರಲಿಲ್ಲ. ಯೋಗ ಕ್ಯಾಂಪಿಗೆ ಹೋಗದಿದ್ದರೂ ಹೋಗುವವರಿಗಿಂತ ಆರೋಗ್ಯವಾಗಿ ಮತ್ತು ಲವಲವಿಕೆಯಿಂದ ಇರುತ್ತಿದ್ದರು. ಹೆಚ್ಚೇಕೆ, ಹಳ್ಳಿಯಲ್ಲಿ ವಾಸಿಸುವವರಲ್ಲಿ ೮೦+ ವಯಸ್ಸಿನಿಂದ ಮೇಲೆ ಬದುಕುವವರ ಧೀರ್ಘಾಯುಷ್ಯ ಮತ್ತು ಆಸ್ಪತ್ರೆಯ ಮುಖ ನೋಡದವರೆಲ್ಲಾ ತಾವೇ ಹಸು ಸಾಕಿ ಅದರದ್ದೇ ಹಾಲು ಕುಡಿದು ಬದುಕಿದವರು. ಹೀಗಿರುವಾಗ ವೃಥಾ ಸಮಯ ಹಾಳು ಮಾಡಲು ಯೋಗ ಕ್ಲಾಸಿಗೆ, ಜಿಮ್ ಗೆ ಅಥವಾ ಇನ್ಯಾವುದೇ ಆರೋಗ್ಯ ವೃದ್ದಿಸುವ ಕ್ಯಾಂಪ್ ಗೆ ಹೋಗಬೇಕೇ? ಖಂಡಿತವಾಗಿಯೂ ಬೇಡ. ನಿಮ್ಮ ಮನೆಯಲ್ಲಿ ಒಂದೋ ಎರಡೋ ಹಸು ಸಾಕಿ. ದಿನದಲ್ಲಿ ೧-೨ ಗಂಟೆ ಇದಕ್ಕಾಗಿ ಸಮಯ ಮೀಸಲಿಡಿ. ಇದರ ಸಂಪೂರ್ಣ ಫಲಿತಾಂಶ ನಿಮ್ಮ ಆರೋಗ್ಯದ ಮೇಲೆ ಸಿಗುತ್ತದೆ. ವೃಥಾ ಖರ್ಚು ಮಾಡಿ ಆರೋಗ್ಯವನ್ನು – ಆಯುಷ್ಯವನ್ನು ಉತ್ತಮಪಡಿಸು ಮುಂದಾಗಬೇಡಿ. ಬಹುಬಗೆಯ ಲಾಭದೊಂದಿಗೆ ಹಸು ಸಾಕಣೆ ಮಾಡಿ ಇದನ್ನು ಉಚಿತವಾಗಿ ಪಡೆಯಿರಿ.

ಹಸು ಸಾಕಣೆಯಿಂದ ಆರೋಗ್ಯ ವೃದ್ದಿಸುತ್ತದೆ: ಬೆಳಗ್ಗೆದ್ದು, ಹಸುಗಳ ಕೊಟ್ಟಿಗೆಯ ಸ್ವಚ್ಚತೆ ಮಾಡಿ. ವ್ಯಾಯಾಮ ಸರಳವಾಗಿ ಆಗುತ್ತದೆ. ಹಸುಗಳನ್ನು ಕರೆದು ಸ್ವಚ್ಚ ತಾಜಾ ಹಾಲನ್ನು ಬಳಕೆ ಮಾಡಿ. ಇದರಷ್ಟು ಒಳ್ಳೆಯದು ಮತ್ತೊಂದಿಲ್ಲ. ಸಾಧ್ಯವಾದಷ್ಟು ನಿಮ್ಮ ಬಳಕೆಗೆ ಬೇಕಾಗುವಷ್ಟು ಹಾಲು ಕೊಡಬಲ್ಲ ಹಸುಗಳನ್ನು ಸಾಕಿ. ಅದು ನಾಟಿ ಅಥವಾ ಮಿಶ್ರ ತಳಿ ಆಗಿರಲಿ. ನಿಮ್ಮ ಹಿತ್ತಲಲ್ಲಿರುವ ಯಾವುದೇ ಹಸಿರು ಹುಲ್ಲನ್ನು ಇದು ತಿನ್ನುತ್ತದೆ. ಬಿಡುವಿರುವಾಗ ಹುಲ್ಲು ತನ್ನಿ . ಇದರಿಂದ ಕಳೆ ನಿಯಂತ್ರಣ ಆಗುತ್ತದೆ. ನಾಟಿ ಹಸುಗಳಾದಲ್ಲಿ ಅವು ಎಲ್ಲಾ ನಮೂನೆಯ ಹಸಿರು ಕುಡಿಯನ್ನು ತಿನ್ನುತ್ತವೆ. ಹೊಲದಲ್ಲಿ ಸಿಗುವ ಹಲಸಿನ ಸೊಪ್ಪು ಅಥವಾ ಇನ್ಯಾವುದಾದರೂ ಹಸು ತಿನ್ನುವ ಸೊಪ್ಪನ್ನೂ ಆಹಾರವಾಗಿ ಕೊಡಬಹುದು. ಯಾವುದಕ್ಕೋ ಖರ್ಚು ಮಾಡುವವರು ಸ್ವಲ್ಪ ಸಾಕು ಪ್ರಾಣಿಗಾಗಿ ಖರ್ಚು ಮಾಡಿ. ಸ್ವಲ್ಪ ಹಿಂಡಿ ಇತ್ಯಾದಿ ತಂದು ಹಾಕಿ. ಮನೆಯಲ್ಲಿ ಉಳಿಯುವ ತರಕಾರಿ,ಅನ್ನ ಬೇಯಿಸಿದ ಅಕ್ಕಚ್ಚು ಇತ್ಯಾದಿಗಳನ್ನು ತಿಪ್ಪೆಗೆ ಚೆಲ್ಲಬೇಡಿ. ಅದನ್ನು ಹಸುಗಳು ತಿನ್ನುತ್ತವೆ. ಒಂದು ಹಸು ನೀವು ಕೊಡುವ ಆಹಾರದ ಮೇಲೆ ದಿನಕ್ಕೆ ಏನಿಲ್ಲವೆಂದರೂ ೫ ಕಿಲೋ. ಗೊಬ್ಬರ ಕೊಡುತ್ತದೆ. ಇಂದು ಇದರ ಮೌಲ್ಯ ಸುಮಾರು ನೂರು ರೂ.ಗಳು. ಇದನ್ನು ನೀವು ಬೆಳೆಯುವ ತರಕಾರಿ ಇತ್ಯಾದಿಗಳಿಗೆ ಬಳಕೆ ಮಾಡಿದರೆ ಉತ್ತಮ ಗುಣಮಟ್ಟದ ತರಕಾರಿ ಸಿಗುತ್ತದೆ. ಹಳ್ಳಿಗಳಲ್ಲಿ ಈಗಲೂ ಕೆಲವರು ಗೊಬ್ಬರ ಮಾರಾಟಕ್ಕಾಗಿಯೇ ಹಸು ಸಾಕಣೆ ಮಾಡುವವರಿದ್ದಾರೆ. ಈಗ ಒಂದು ಬುಟ್ಟಿ ಗೊಬ್ಬರಕ್ಕೆ ೫೦ ರೂ. ತನಕ ಇದೆ. ಸೊಪ್ಪು, ತರಗೆಲೆ ಇತ್ಯಾದಿ ಸೇರಿಸಿದಾಗ ತಿಂಗಳಿಗೆ ಏನಿಲ್ಲವೆಂದರೂ ೩೦-೪೦ ಬುಟ್ಟಿ ಗೊಬ್ಬರ ಉತ್ಪಾದಿಸಬಹುದು.ಇದನ್ನು ಮಾರಾಟ ಮಾಡಿದರೂ ರೂ.೨೦೦೦ ದಷ್ಟು ಯಾವುದೇ ಖರ್ಚು ಇಲ್ಲದೆ ಸ್ಥಳದಲ್ಲೇ ಸಿಗುತ್ತದೆ. ಹಸು ಕೊಟ್ಟಿಗೆಯಲ್ಲಿ ಓಡಾಡಿದಾಗ ಯಾವುದೋ ಒಂದು ಅನಿಲ ನಮ್ಮ ಶರೀರಕ್ಕೆ ಸುಖವನ್ನು, ಆನಂದವನ್ನೂ ಕೊಡುತ್ತದೆ. ಇದು ಆಯಾಸವನ್ನು ಇಲ್ಲದಾಗಿಸುತ್ತದೆ. ಇದರ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಭಾವನಾತ್ಮಕ ಹೇಳಿಕೆಗಳು ಏನೇ ಇರಲಿ, ಒಟ್ಟಿನಲ್ಲಿ ಹಸುಗಳನ್ನು ಸಾಕಿದರೆ ಪ್ರತ್ಯಕ್ಷವಾಗಿ ಕಡಿಮೆ ಲಾಭವೆಂದು ಕಂಡರೂ ಪರೋಕ್ಷವಾಗಿ ಲಾಭ ಹೆಚ್ಚು ಇದೆ. ಇದಕ್ಕೆ ನಿದರ್ಶನ ನಮ್ಮ ಹಿರಿಯರು. ಇವರ ಮನೆಯಲ್ಲಿ ಈಗಿನವರು ಹಸು ಸಾಕಣೆ ಬಿಟ್ಟಿದ್ದರೆ ಹಿರಿಯರು ಅದೇ ಕೊರಗಿನಲ್ಲಿ ಅಸ್ವಾಸ್ಥ್ಯ ಒಳಗಾಗಿರುತ್ತಾರೆ.

ಹಸುಗಳು ಮತ್ತು ಮೇವು: ಸಾಮಾನ್ಯವಾಗಿ ನಾಟಿ ಹಸುಗಳು, ಮಿಶ್ರ ತಳಿಯ ಹಸುಗಳು ಅಭ್ಯಾಸ ಮಾಡಿದರೆ ಎಂಥಹ ಹುಲ್ಲನ್ನೂ ತಿನ್ನುತ್ತವೆ. ಹಸುಗಳು ಹುಲ್ಲು, ಸೊಪ್ಪು ಸದೆ ತಿಂದು ಬದುಕುವ ಪ್ರಾಣಿಗಳು. ಇದನ್ನು ನಾವು ಅಭ್ಯಾಸ ಮಾಡಿಸಬೇಕು.ಮಾಮೂಲಿ ಹುಲ್ಲುಗಳ ಜೊತೆಗೆ ಹಲಸಿನ ಸೊಪ್ಪು, ಕೊಕ್ಕೋ ಗಿಡದ ಸೊಪ್ಪು, ಅಡಿಕೆ ಹಾಳೆ, ಹಸಿ ಗರಿ, ಹಾಗೆಯೇ ಎಲ್ಲಾ ನಮೂನೆಯ ಸೊಪ್ಪು ಇತ್ಯಾದಿಗಳನ್ನೂ ಸ್ವಲ್ಪ ಸ್ವಲ್ಪ ತಿನ್ನಿಸಬಹುದು. ಅಭ್ಯಾಸ ಆದ ನಂತರ ಅದನ್ನೂ ಇಚ್ಚೆಪಟ್ಟು ತಿನ್ನುತ್ತವೆ. ತನ್ನ ಮನೆಯಲ್ಲಿ ಬೆಳೆಸುವ ಹೂವಿನ ಗಿಡಗಳೂ ಸಹ ಹಸುಗಳಿಗೆ ಆಹಾರವಾಗುತ್ತವೆ. ದಾಸವಾಳದ ಗಿಡ ನೆಟ್ಟರೆ ಪ್ರೂನಿಂಗ್ ಮಾಡುವಾಗ ಸಾಕಷ್ಟು ಮೇವು ಸಿಗುತ್ತದೆ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ರಸ ಮೇವು ಸಹ ಲಭ್ಯ. ಇದನ್ನೂ ಹಾಕಬಹುದು. ಪಶುಗಳಿಗೆ ದಾಣಿ ಮಿಶ್ರಣವನ್ನು ಕೊಡುವಾಗ ಸಾಧ್ಯವಾದಷ್ಟು ಎಣ್ಣೆ ಕಾಳಿನ ಹಿಂಡಿಗಳನ್ನು ಕೊಡುವುದು ಸೂಕ್ತ. ಇದರಲ್ಲಿ ರಾಸಾಯನಿಕ ಕಲೆಬೆರಕೆ ಕಡಿಮೆ ಇರುವ ಸಾಧ್ಯತೆಗಳಿರುತ್ತದೆ. ಅಧಿಕ ಹಾಲು ಉತ್ಪಾದನೆಯ ಗುರಿ ಇರಕೂಡದು. ಅಧಿಕ ಹಾಲು ಪಡೆಯಲು ಅಧಿಕ ಆಹಾರ ಕೊಡಬೇಕಾಗುತ್ತದೆ. ಆ ಆಹಾರ ತಿಂದ ಹಸುವಿನ ಆರೋಗ್ಯ ಹಾಳಾಗುತ್ತದೆ. ಹಾಲು ಸಹ ಆರೋಗ್ಯಕ್ಕೆ ಉತ್ತಮವೆನಿಸುವುದಿಲ್ಲ. ನಾಟಿ ಹಾಗೂ ಮಿಶ್ರ ತಳಿಯ ಹಸು ಸಾಕಣೆ ಮಾಡುವವರಿಗೆ ಅನುಕೂಲ ಎಂದರೆ ಅದು ಹಾಲು ಕರೆಯಲು ಕರುಗಳು ಬೇಕಾಗುತ್ತದೆ. ಒಂದು ವೇಳೆ ನಿಮಗೆ ಬಿಡುವು ಇಲ್ಲದ ಸಮಯದಲ್ಲಿ ಹಾಲು ಕರೆಯುವ ಕೆಲಸವನ್ನು ಮಾಡಲಿಕ್ಕಾಗದಿದ್ದರೆ ಕರುವನ್ನು ಬಿಟ್ಟರೆ ಅದು ಹಾಲು ಕುಡಿದು ಹಸುವಿಗೆ ಹಾಲು ಹೆಚ್ಚಳವಾಗಿ ಅನಾರೊಗ್ಯ ಉಂಟಾಗಲಾರದು.

ಹಸು ಸಾಕಣೆ ಮಾಡಿ ಇಂಧನ ಉತ್ಪಾದಿಸಿ: ಗೋಬರ್ ಗ್ಯಾಸ್ ಅಥವಾ ಬಯೋಗ್ಯಾಸ್ ಹಳ್ಳಿಯ ಕೃಷಿ ಮತ್ತು ಮನೆ ವ್ಯವಸ್ಥೆಗೆ ಒಂದು ವರ. ಹಸು ಸಾಕಿದವರು ಇದನ್ನು ಮಾಡಿಕೊಂಡರೆ ಲಾಭ ಹೆಚ್ಚು. ಒಂದು ಹಸು ಒಂದು ಕರು ಇದ್ದರೂ ಸಹ ೫೦% LPG ಗ್ಯಾಸ್ ಉಳಿಸಬಹುದು. ಇದರ ತ್ಯಾಜ್ಯಗಳು ಗೊಬ್ಬರವಾಗುತ್ತದೆ. ಕಡಿಮೆ ಹಸುಗಳಿಂದ ಗರಿಷ್ಟ ಗೊಬ್ಬರ ಮಾಡಲು ಬಯೋಗ್ಯಾಸ್ ಸಹಾಯಕ. ಹಸುವಿನ ಸಗಣಿಯಿಂದ ಈಗ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದು. ಒಂದು ಸರಳ ತಯಾರಿಕೆ ಸೊಳ್ಳೆ ನಿವಾರಕ ಕಡ್ಡಿಗಳು. ಮಾರುಕಟ್ಟೆಯಲ್ಲಿ ಸೊಳ್ಳೆ ಓಡಿಸುವ ಬೇರೆ ಬೇರೆ ಧೂಪದ ಕಡ್ಡಿಗಳಿವೆ. ಇದರಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡಿರುತ್ತಾರೆ. ಹಸುವಿನ ಸಗಣಿಯನ್ನು ಬೆರಳಿನಷ್ಟು ದಪ್ಪದ ಕಡ್ಡಿಗಳನ್ನಾಗಿ ಮಾಡಿ ಅದು ಹಸಿ ಇರುವಾಗ ದೂಪದ ಮರ( ಗಣಪತಿ ಕಾಯಿ) ಮರದ ಅಂಟನ್ನು ಮಿಶ್ರಣ ಮಾಡಿ ಒಣಗಿಸಿದರೆ ಅದನ್ನು ಹೊತ್ತಿಸಿದರೆ ನಿಧಾನವಾಗಿ ಉರಿದು ಸೊಳ್ಳೆ ದೂರವಾಗುತ್ತದೆ. ಸಾಗರದ ವರದಳ್ಳಿ ಎಂಬಲ್ಲಿ ಶ್ರೀ ವೆಂಕಟೇಶ್ ಎಂಬವರು ಇದನ್ನು ತಮ್ಮ ಸ್ವಂತ ಬಳಕೆಗಾಗಿ ತಯಾರಿಸುತ್ತಾರೆ. ಸ್ವಲ್ಪ ಸ್ವಲ್ಪ ಸಗಣಿ ಇದ್ದರೆ ಸಹ ಅದನ್ನು ಪುಷ್ಟೀಕರಿಸಿ ಹಂಚಿ ಗೊಬ್ಬರದ ಸ್ವಾವಲಂಬನೆ ಮಾಡಬಹುದು. ಒಟ್ಟಿನಲ್ಲಿ ಸ್ವಾವಲಂಭಿ ಬದುಕಿಗೆ ಹಸು ಸಾಕಣೆ ಪೂರಕ.

ನಾವು ಇಲ್ಲಿ ಹೇಳಿದ ವಿಚಾರಗಳನ್ನು ತಾವು ಹತ್ತಾರು ಕಡೆ ನೋಡಿ, ನೀವು ತೀರ್ಮಾನಕ್ಕೆ ಬನ್ನಿ. ಇದು ನಿಜವೆಂದು ಕಂಡರೆ ಮಾತ್ರ ಹಸು ಸಾಕಿ. ಹಸು ಸಾಕಣೆಯಲ್ಲಿ ಲಾಭ ನಷ್ಟ ಲೆಕ್ಕಾಚಾರ ಹಾಕಬೇಡಿ. ಅದು ಒಂದು ಉತ್ತಮ ಕೆಲಸ. ನಿಮ್ಮ ಜೀವನದಲ್ಲಿ ಸಮಯ ಕೊಲ್ಲಲು ಅವಕಾಶ ಇರುವುದಿಲ್ಲ. ಯಾರೊಡನೆಯೋ ಹಾಳು ಹರಟೆ ಹೊಡೆದು ಮಾತು ಕಲಹಕ್ಕೆ ಕಾರಣವಾಗುವ ಸಾಧ್ಯತೆಯೂ ಇಲ್ಲ. ನೀವಾಯಿತು, ನಿಮ್ಮ ಹೊಲ ಮನೆ ಮತ್ತು ಅಲ್ಲಿನ ವ್ಯವಸ್ಥೆಗಳಾಯಿತು. ಅದು ನೆಮ್ಮದಿಯನ್ನು ಕೊಡುತ್ತದೆ. ಹಸು ಸಾಕುವವರು ಯಾರಿಗೂ ದಾನ ಧರ್ಮ ಮಾಡಬೇಕಾಗಿಲ್ಲ. ಇದುವೇ ಒಂದು ಧಾನ ಧರ್ಮದ ರೂಪ.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ