ಆಯುಷ್ ವೀಸಾ, ಹಾಲ್ಮಾರ್ಕ್ : ಜಾಗತಿಕ ಮನ್ನಣೆಗೆ ರಹದಾರಿ

ಆಯುಷ್ ವೀಸಾ, ಹಾಲ್ಮಾರ್ಕ್ : ಜಾಗತಿಕ ಮನ್ನಣೆಗೆ ರಹದಾರಿ

ಗುಜರಾತಿನಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಯುರ್ವೇದ ಮುಂತಾದ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಗಳ ಅಡಿ ಚಿಕಿತ್ಸೆಗೆಂದು ಬರುವ ವಿದೇಶಿಯರಿಗೆಂದೇ ಆಯುಷ್ ವೀಸಾ ಆರಂಭಿಸಲಾಗುವುದು ಹಾಗೂ ಭಾರತದಲ್ಲಿ ತಯಾರಿಸಿದ ಆಯುಷ್ ಔಷಧೋತ್ಪನ್ನಗಳಿಗೆ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಲು ಹಾಲ್ ಮಾರ್ಕ್ ವ್ಯವಸ್ಥೆ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಜೊತೆಗೆ, ಔಷಧೀಯ ಸಸ್ಯಗಳನ್ನು ಬೆಳೆಸುವ ರೈತರಿಗೆ ಸುಲಭವಾಗಿ ಮಾರುಕಟ್ಟೆ ಸಿಗುವಂತೆ ಮಾಡಲಾಗುವುದು ಹಾಗೂ ಆಯುಷ್ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ಹೆಚ್ಚಿಸಲು ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲಾಗುವುದು ಎಂದೂ ಪ್ರಕಟಿಸಿದ್ದಾರೆ. ಈ ಎಲ್ಲ ಉಪಕ್ರಮಗಳು ಈಗಾಗಲೇ ಭಾರತದ ಶ್ರೀಮಂತ ಪ್ರಾಚೀನ ಪರಂಪರೆಯಾದ ಯೋಗವನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡಿದ ನಂತರ ಆಯುರ್ವೇದ ಮುಂತಾದ ಭಾರತದ ವಿಶಿಷ್ಟ ಆರೋಗ್ಯ ವಿಜ್ಞಾನ ಮತ್ತು ಚಿಕಿತ್ಸಾ ಕ್ರಮಗಳನ್ನೂ ವಿದೇಶದಲ್ಲಿ ಪ್ರಚುರ ಪಡಿಸಿ ಬ್ರ್ಯಾಂಡ್ ಆಗಿ ರೂಪಿಸಲು ಕೇಂದ್ರ ಸರ್ಕಾರ ಇಟ್ಟ ಹೆಜ್ಜೆಗಳು ಎಂಬುದರಲ್ಲಿ ಅನುಮಾನವಿಲ್ಲ. ನಮ್ಮಲ್ಲಿರುವ ಪ್ರಾಚೀನ ಸಂಪತ್ತನ್ನು ಜಾಗತಿಕ ವೇದಿಕೆಯಲ್ಲಿ ಮಾರ್ಕೆಟಿಂಗ್ ಮಾಡುವ ಈ ಚಿಂತನೆ ಸ್ವಾಗತಾರ್ಹವಾದುದು.

ಆಯುಷ್ ಅಂದರೆ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಯುನಾನಿ, ಸಿದ್ಧೌಷಧ ಹಾಗೂ ಹೋಮಿಯೋಪಥಿ ಇವುಗಳ ಸಂಕ್ಷಿಪ್ತ ರೂಪ. ಇವೆಲ್ಲವೂ ಪ್ರಾಚೀನ ಭಾರತದಲ್ಲಿ ಬಳಕೆಯಾಗುತ್ತಿದ್ದ ವೈದ್ಯಕೀಯ ಪದ್ಧತಿಗಳು. ಇವು ಅಲೋಪಥಿ ಮುಂತಾದ ಆಧುನಿಕ ವೈದ್ಯಕೀಯ ಪದ್ಧತಿಗಳಿಗಿಂತ ಭಿನ್ನ. ಇಂದು ಮನುಷ್ಯರನ್ನು ಕಾಡುತ್ತಿರುವ ಎಲ್ಲ ರೋಗಗಳಿಗೂ ಅಲೋಪಥಿಯ ಫಟಾಫಟ್ ಚಿಕಿತ್ಸೆಯೇ ಪರಿಹಾರವಲ್ಲ. ಬದಲಿಗೆ ಮಧುಮೇಹ, ಹೃದ್ರೋಗ ಮುಂತಾದವುಗಳಿಂದ ಹಿಡಿದು ಅನೇಕ ಕಾಯಿಲೆಗಳಿಗೆ ಆಯುಷ್ ವೈದ್ಯಕೀಯ ಪದ್ಧತಿಗಳಲ್ಲಿರುವ ಜೀವನ ಶೈಲಿ ಬದಲಾವಣೆ ಹಾಗೂ ಸೌಮ್ಯ ಔಷಧಿಗಳ ವಿಧಾನ ಕೂಡ ಪರಿಣಾಮಕಾರಿ ಎಂಬುದು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಇದೇ ವೇಳೆ, ಭಾರತವು ಜಗತ್ತಿನ ಆರೋಗ್ಯ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಸೋವಿ ದರದಲ್ಲಿ ಉತ್ಕೃಷ್ಟ ಚಿಕಿತ್ಸೆ ಪಡೆಯಲು ಬೇರೆ ಬೇರೆ ದೇಶಗಳಿಂದ ಜನರು ಬರುತ್ತಿದ್ದಾರೆ. ಹೀಗಾಗಿ ವಿದೇಶಗಳಲ್ಲಿ ಆಯುಷ್ ಚಿಕಿತ್ಸೆಯ ಆಯ್ಕೆಯನ್ನು ಪ್ರಚುರ ಪಡಿಸಲು ಆಯುಷ್ ವೀಸಾ, ಆಯುಷ್ ಔಷಧಿಗಳ ಗುಣಮಟ್ಟ ಕಾಪಾಡುವ ಹಾಲ್ ಮಾರ್ಕ್ ಇತ್ಯಾದಿಗಳು ನೆರವಾಗಲಿವೆ. ಇದು ದೇಶದ ಅಭಿವೃದ್ಧಿಗೂ ಪೂರಕ, ಜೊತೆಗೆ ಜಾಗತಿಕ ಆರೋಗ್ಯ ವರ್ಧನೆಗೂ ಸಹಕಾರಿಯಾಗಿದೆ.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೨೨-೦೪-೨೦೨೨

ಚಿತ್ರ ಕೃಪೆ ಇಂಟರ್ನೆಟ್ ತಾಣ