ಆಯ್ಲೊರೇ ಆಯ್ಲೋ…
“ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ ವಿನ್ಯಾಸಗಳಲ್ಲಿ ಪಳಗಿದವರು. ಪ್ರಗತಿಶೀಲ ರಂಗಭೂಮಿಯ ಕೃಷಿಕನಾಗಿ, ಸಂಗೀತದ ಒಳಮಜಲುಗಳನ್ನು ಅರಿತವರಾಗಿ, ಒಳ್ಳೆಯ ಸಂಘಟಕರಾಗಿ ಸಾಧನೆಗೈದವರು. ಲಾರಿ ನಾಟಕ, ಸಂಗೀತ ರಥ, ಯಕ್ಷತೇರು... ಹೀಗೆ ಸಾಗುತ್ತದೆ ಆವರ ಅಭಿಯಾನಗಳ ಸರಮಾಲೆಗಳು. ಚಲನಚಿತ್ರ, ಧಾರವಾಹಿ, ಆಕಾಶವಾಣಿ, ರಂಗಭೂಮಿ, ಸಂಘಟನೆ ಎಲ್ಲದರಲ್ಲೂ ಅವರದ್ದೇ ಛಾಪು. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ, ಪ್ರಶಸ್ತಿ ವಿಜೇತರಾಗಿ ಪ್ರಶಂಶಿಸಲ್ಪಟ್ಟವರು, ರಂಗಾಸಕ್ತರ ಪ್ರೀತಿಯ ಗೆಳೆಯರಾಗಿ, ಹೊಸ ಪೀಳಿಗೆಗೆ ರಂಗ ತರಭೇತಿಯ ನಿರ್ದೇಶಕರಾಗಿ, ಕೆಲವು ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಕನ್ನಡ, ತುಳು, ಕೊಂಕಣಿ, ಮಲಯಾಳ, ಇಂಗ್ಲಿಷ್ ರಂಗಭೂಮಿಯಲ್ಲಿ ಪಳಗಿದವರಾಗಿ, ದೇಶ ವಿದೇಶಗಳಲ್ಲಿ ರಂಗ ವೈಭವವನ್ನು ಸಾಕ್ಷಾತ್ಕರಿಸುವ ರೂವಾರಿಯಾಗಿರುವ ಜಿನ್ನಾರವರ ಯಶಸ್ಸಿನ ಹಾದಿಯ ಕಿರೀಟಕ್ಕೆ ಈ ನಾಟಕವು ಚಿನ್ನದ ಗರಿಯಾಗಲಿ” ಎಂದು ಎಂದು ತಮ್ಮ ಬೆನ್ನುಡಿಯಲ್ಲಿ ಹಾರೈಸಿದ್ದಾರೆ ಪ್ರಶಸ್ತಿ ವಿಜೇತ ಕಲಾವಿದರಾದ ಪಿ.ವಿ.ಪರಮೇಶ್ ಇವರು.
‘ಆಯ್ಲೋರೇ ಆಯ್ಲೋ’ (ಕನ್ನಡದ ‘ಬಂದಾ ಬಂದಾ ಸರದಾರ, ಲೇ: ಶ್ರೀನಿವಾಸ ಪ್ರಭು, ಬೆಂಗಳೂರು) ಎಂಬ ನಾಟಕವು ಮೂಲತಃ ರಷ್ಯನ್ ಭಾಷೆಯ ನಾಟಕ. ರಷ್ಯನ್ ಲೇಖಕರಾದ ಗೊಗೋಲ್ ಇವರು ಬರೆದ ‘ಇನ್ಸ್ ಪೆಕ್ಟರ್ ಜನರಲ್' ಎಂಬ ನಾಟಕವನ್ನು ಶ್ರೀನಿವಾಸ ಪ್ರಭು ಅವರು ಕನ್ನಡಕ್ಕೆ ಭಾಷಾಂತರಿಸಿದ್ದರು. ಅದನ್ನು ಕಾಸರಗೋಡು ಚಿನ್ನಾ ಇವರು ಕೊಂಕಣಿ ಭಾಷೆಗೆ ಅನುವಾದ ಮಾಡಿದ್ದಾರೆ. ಪುಸ್ತಕಕ್ಕೆ ತಮ್ಮ ಎರಡು ಮಾತಿನಿಂದ ಶುಭಕೋರಿದ್ದಾರೆ ಡಾ.ಕೆ.ಮೋಹನ ಪೈ ಇವರು. ಈ ನಾಟಕದಲ್ಲಿನ ಅಭಿನಯಕ್ಕಾಗಿ ಕಾಸರಗೋಡು ಚಿನ್ನಾ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ಬಂದಿದೆ.
ಕಾಸರಗೋಡು ಚಿನ್ನಾ ಅವರು ಈಗಾಗಲೇ ‘ಗಾಂಟಿ' (ಮೂಲ: ಬಂಗಾಳಿ) ಎಕ್ಲೋ ಆನ್ನೆಕ್ಲೋ (ಮೂಲ: ಮಲಯಾಳ) ಕರ್ಮಾಧೀನ (ಮೂಲ: ಕನ್ನಡ) ಎಂಬ ಹೆಸರಿನ ನಾಟಕಗಳನ್ನು ಭಾಷಾಂತರ ಮಾಡಿ ನಮ್ಮ ಮುಂದೆ ಇರಿಸಿದ್ದಾರೆ. ಪ್ರಸ್ತುತ ನಿಮ್ಮ ಕೈಯಲ್ಲಿ ಇರುವ 'ಆಯ್ಲೋರೇ ಆಯ್ಲೋ’ ಪುಸ್ತಕದಲ್ಲಿರುವ ನಾಟಕವನ್ನು ರಂಗದ ಮೇಲೆ ಅಭಿನಯಿಸಿದ್ದಾರೆ. ಬಹು ಜನರ ಮೆಚ್ಚುಗೆಯೂ ಪಾತ್ರವಾಗಿದೆ.
ಸುಮಾರು ೧೦೦ ಪುಟಗಳ ಈ ನಾಟಕ ಪುಸ್ತಕವನ್ನು ಚಿನ್ನಾ ಅವರು ಕೊಂಕಣೆ ರಂಗ ಭೂಮಿಗೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ ದಿ.ಕುಡ್ಪಿ ವಾಸುದೇವ ಶೆಣೈ ಮತ್ತು ದಿ.ಕೆ.ಬಾಲಕೃಷ್ಣ ಪೈ (ಕುಳ್ಳಪ್ಪು) ಇವರಿಗೆ ಅರ್ಪಿಸಿದ್ದಾರೆ.