ಆರಕ್ಕೇರದ ‘ಕಪೂರ್’ ಮನೆತನದ ರಾಜೀವ್!
ಅಜ್ಜ ಹಿಂದಿ ಚಿತ್ರರಂಗದ ದಂತಕತೆಯಾದ ಪೃಥ್ವೀರಾಜ್ ಕಪೂರ್, ತಂದೆ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ 'ಶೋ ಮೆನ್' ರಾಜ್ ಕಪೂರ್, ಅಣ್ಣಂದಿರು ಖ್ಯಾತ ನಟರೂ, ನಿರ್ದೇಶಕರೂ ಆದ ರಣದೀರ್ ಕಪೂರ್, ರಿಷಿ ಕಪೂರ್, ಚಿಕ್ಕಪ್ಪಂದಿರೂ ಸಾಮಾನ್ಯದವರಲ್ಲ. ಅವರೂ ಹಿಂದಿ ಚಿತ್ರರಂಗವನ್ನು ಹಲವಾರು ವರ್ಷಗಳ ಕಾಲ ಆಳಿದವರೇ. ಶಮ್ಮಿ ಕಪೂರ್ ಹಾಗೂ ಶಶಿ ಕಪೂರ್. ಇಷ್ಟು ಜನರನ್ನು, ಅವರ ಕಲಾ ಪ್ರತಿಭೆಯನ್ನು ಹುಟ್ಟಿನಿಂದಲೇ ನೋಡುತ್ತಾ ಬಂದವನೇ ರಾಜೀವ್ ಕಪೂರ್. ರಾಜ್ ಕಪೂರ್ ಅವರ ಕೊನೆಯ ಪುತ್ರ. ಹತ್ತಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ, ಮೂರು ಚಿತ್ರಗಳನ್ನು ನಿರ್ಮಿಸಿ, ಒಂದು ಚಿತ್ರವನ್ನು ನಿರ್ದೇಶನ ಮಾಡಿಯೂ ಮೂರರಿಂದ ಆರಕ್ಕೇರದೇ ಮರಳಲಾರದ ಲೋಕಕ್ಕೆ ತೆರಳಿದ 'ಕಪೂರ್' ಮನೆತನದ ರಾಜೀವ್ ಕಪೂರ್ ಒಂದು ರೀತಿಯಲ್ಲಿ ನತದೃಷ್ಟನೇ.
ಕಪೂರ್ ಕುಟುಂಬದ್ದೇ ಆದ ಆರ್. ಕೆ. ಸ್ಟುಡಿಯೋ ಇತ್ತು. ಅಪ್ಪನ ಬೆಂಬಲವಿತ್ತು. ಅಣ್ಣಂದಿರ ಸಹಕಾರವಿತ್ತು. ಚಿಕ್ಕಪ್ಪನವರ ಪ್ರೀತಿ ಇತ್ತು. ಆದರೂ ಎಲ್ಲೋ ಒಂದು ಕಡೆ ರಾಜೀವ್ ಅವರಿಗೆ ಅದೃಷ್ಟ ಕೈಕೊಟ್ಟಿತು ಎಂದೇ ನನ್ನ ವೈಯಕ್ತಿಕ ಭಾವನೆ. ೧೩ ಚಿತ್ರಗಳಲ್ಲಿ ನಟಿಸಿದರೂ ನಟನೆಂದು ಹೆಸರು ಮಾಡಲಿಲ್ಲ. ಅಂದಿನ ಕಾಲಕ್ಕೆ ಸೂಪರ್ ಹಿಟ್ ಎಂದು ಹೆಸರು ಮಾಡಿದ್ದ ‘ರಾಮ್ ತೇರಿ ಗಂಗಾ ಮೈಲಿ' ಚಿತ್ರದ ಶ್ರೇಯಸ್ಸೆಲ್ಲಾ ಆ ಚಿತ್ರದಲ್ಲಿ ನಟಿಸಿದ ಮಾದಕ ನಟಿ ಮಂದಾಕಿನಿ ಕಸಿದುಕೊಂಡಳು. ಆ ಚಿತ್ರದಲ್ಲಿ, ಆ ಸಮಯಕ್ಕೆ ಬಹಳ ‘ಬೋಲ್ಡ್' ಆಗಿ ನಟಿಸಿದ ಖ್ಯಾತಿ (?!) ಮಂದಾಕಿನಿಗೆ ಸಲ್ಲಬೇಕು. ನೋಡಲೂ ಸುಂದರವಾಗಿದ್ದ ರಾಜೀವ್ ಚಿತ್ರರಂಗದಲ್ಲಿ ದಾರಿ ತಪ್ಪಿದ್ದು ಎಲ್ಲಿರಬಹುದು? ಬನ್ನಿ ಒಂದು ವಿಶ್ಲೇಷಣೆ ಮಾಡುವ.
೧೯೬೨, ಆಗಸ್ಟ್ ೨೫ರಂದು ಮುಂಬೈನಲ್ಲಿ ಹುಟ್ಟಿದವರು ರಾಜೀವ್ ಕಪೂರ್. ತಂದೆ ರಾಜ್ ಕಪೂರ್-ತಾಯಿ ಕೃಷ್ಣಾ ಕಪೂರ್. ಬಾಲ್ಯದಲ್ಲಿ ಎಲ್ಲರೂ ಇವರನ್ನು ‘ಚಿಂಪೂ’ ಎಂದು ಕರೆಯುತ್ತಿದ್ದರು. ಅಣ್ಣ ರಣಧೀರ್, ರಿಷಿ ಹಾಗೂ ಸಹೋದರಿ ರೀತು ನಂದಾ ಜೊತೆಯಲ್ಲಿ ಬೆಳೆದ ಈತ ತನ್ನ ಕುಟುಂಬದ ಎಲ್ಲಾ ಸದಸ್ಯರ ಹಾಗೆ ಚಿತ್ರರಂಗದಲ್ಲಿ ಮಿಂಚುವ ಕನಸು ಕಂಡಿದ್ದ. ಅದೇ ಕನಸನ್ನು ನನಸು ಮಾಡಲು ೧೯೮೩ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ. ರಾಜೀವ್ ನಟಿಸಿದ ಮೊದಲ ಚಿತ್ರ ‘ಏಕ್ ಜಾನ್ ಹೈ ಹಮ್' ಇದು ಅಷ್ಟೇನೂ ಯಶಸ್ಸು ಕಾಣಲಿಲ್ಲ. ನಂತರ ೧೯೮೪ರಲ್ಲಿ ‘ಆಸ್ಮಾನ್' ೧೯೮೫ರಲ್ಲಿ ‘ಮೇರಾ ಸಾಥಿ, ಲಾವಾ, ಜಬರ್ ದಸ್ತ್, ಲವರ್ ಬಾಯ್, ರಾಮ್ ತೇರಿ ಗಂಗಾ ಮೈಲಿ' ಮೊದಲಾದ ಚಿತ್ರಗಳಲ್ಲಿ ನಟಿಸಿದರು. ೧೯೮೫ ಇವರ ಅದೃಷ್ಟದ ವರ್ಷ ಎಂದೂ ಹೇಳ ಬಹುದು. ಇವರು ನಟಿಸಿದ ರಾಮ್ ತೇರಿ ಗಂಗಾ ಮೈಲಿ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಚಿತ್ರವೆಂದು ಪರಿಗಣಿಸಲ್ಪಟ್ಟಿತು. ಮೊದಲೇ ಹೇಳಿದಂತೆ ರಾಜೀವ್ ಇದರಲ್ಲಿ ನಾಯಕನಾಗಿ ನಟಿಸಿದ್ದರೂ ಆ ಚಿತ್ರದ ಯಶಸ್ಸಿನ ಶ್ರೇಯ ಮಂದಾಕಿನಿ ಎಂಬ ಮಾದಕ ಚೆಲುವೆಯ ಪಾಲಾಯಿತು. ಇದರ ಯಶಸ್ಸು ರಾಜೀವ್ ಅವರಿಗೆ ಪ್ರಯೋಜನಕಾರಿಯಾಗಲಿಲ್ಲ. ಮುಂದಿನ ವರ್ಷದಲ್ಲಿ ಇವರ ಕೇವಲ ಒಂದು ಚಿತ್ರ ಮಾತ್ರ ಬಿಡುಗಡೆಯಾಯಿತು. ‘ಪ್ರೀತಿ' ಎಂಬ ಈ ಚಿತ್ರ ನೆಲಕಚ್ಚುವುದರ ಜೊತೆ ರಾಜೀವ್ ಅವರ ಚಿತ್ರ ರಂಗದಲ್ಲಿ ಮಿಂಚುವ ಕನಸೂ ಕಮರತೊಡಗಿತು. ೧೯೮೭ರಲ್ಲಿ ಯಾವ ಚಿತ್ರಗಳೂ ಬಿಡುಗಡೆಯಾಗಲಿಲ್ಲ. ೧೯೮೮ರಲ್ಲಿ ಶುಕ್ರಿಯಾ ಹಾಗೂ ಇನ್ನೆರಡು ಚಿತ್ರಗಳು ಬಿಡುಗಡೆಯಾದರೂ ಯಾವುದೂ ಗೆಲ್ಲಲಿಲ್ಲ. ೧೯೯೦ರಲ್ಲಿ ಇವರು ನಟಿಸಿದ ಚಿತ್ರ ‘ಜಿಮ್ಮೇದಾರ್'. ನಟರಾಗಿ ಇದೇ ರಾಜೀವ್ ಆವರ ಕೊನೆಯ ಚಿತ್ರವಾಯಿತು. ನೋಡಲು ಸುಂದರನಾಗಿದ್ದರೂ ನಟನೆಯಲ್ಲಿ ರಾಜೀವ್ ಅಷ್ಟೇನೂ ಚುರುಕಾಗಿರಲಿಲ್ಲ ಎಂದು ಅವರ ಚಿತ್ರಗಳನ್ನು ನೋಡಿದಾಗ ಅರಿವಾಗುತ್ತದೆ.
ಮುಂದಿನ ದಿನಗಳಲ್ಲಿ ನಿರ್ಮಾಪಕರಾಗಲು ಮನಸ್ಸು ಮಾಡಿದ ರಾಜೀವ್ ‘ಆ ಅಬ್ ಲೌಟ್ ಚಲೇ’ ಮತ್ತು ‘ಹಿನಾ’ ಚಿತ್ರಗಳನ್ನು ನಿರ್ಮಿಸುತ್ತಾರೆ. ಎರಡೂ ಚಿತ್ರಗಳು ಸಾಧಾರಣ ಯಶಸ್ಸು ಕಾಣುತ್ತದೆ. ಪಾಕಿಸ್ತಾನದ ಚೆಲುವೆ ಜೀಬಾ ಬಕ್ತಿಯಾರ್ ನಟಿಸಿದ ‘ಹಿನಾ’ ಚಿತ್ರ ಆ ಸಮಯದಲ್ಲಿ ಬಹಳ ಹೆಸರು ಮಾಡಿತ್ತು. ೧೯೯೬ರಲ್ಲಿ ಇವರು ‘ಪ್ರೇಮ್ ಗ್ರಂಥ್' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ. ರಿಷಿ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ತಾರಾಗಣವಿದ್ದ ಈ ಚಿತ್ರದ ಬಗ್ಗೆ ರಾಜೀವ್ ಅವರಿಗೆ ಬಹಳಷ್ಟು ನಿರೀಕ್ಷೆಗಳಿದ್ದವು. ಆದರೆ ಚಿತ್ರ ಯಶಸ್ಸು ಕಾಣುವುದಿಲ್ಲ. ಹೀಗಾಗಿ ನಂತರದ ದಿನಗಳಲ್ಲಿ ರಾಜೀವ್ ಚಿತ್ರರಂಗದಿಂದ ನೇಪಥ್ಯಕ್ಕೆ ಸರಿದು ಬಿಡುತ್ತಾರೆ. ಮನೆತನದ ಬೆಂಬಲ, ಹಣಕಾಸು, ಪ್ರತಿಭೆ ಎಲ್ಲವೂ ಇದ್ದರೂ ಸ್ವಲ್ಪ ಅದೃಷ್ಟವೂ ಅಗತ್ಯ ಎನ್ನುವುದು ರಾಜೀವ್ ಅವರ ಚಿತ್ರ ಬದುಕು ನೋಡುವಾಗ ಗೊತ್ತಾಗುತ್ತದೆ.
ಚಿತ್ರ ಬದುಕು ಕುಸಿದ ನಂತರ ೨೦೦೧ರಲ್ಲಿ ಆರ್ತಿ ಸಭರವಾಲ್ ಜೊತೆ ವಿವಾಹವಾಗುತ್ತಾರೆ. ಆದರೆ ರಾಜೀವ್ ಅವರ ವೈವಾಹಿಕ ಜೀವನವೂ ಹೆಚ್ಚು ಸಮಯ ಬಾಳುವುದಿಲ್ಲ. ೨೦೦೩ರಲ್ಲಿ ಇವರಿಗೆ ವಿಚ್ಛೇದನವಾಗುತ್ತದೆ. ಸಿನೆಮಾ ಬದುಕು, ಸಾಂಸಾರಿಕ ಬದುಕು ಎರಡರಲ್ಲೂ ಯಶಸ್ಸು ಕಾಣದೇ ರಾಜೀವ್ ಮಾನಸಿಕವಾಗಿ ಜರ್ಜರಿತರಾಗಿದ್ದರೇ ಎನ್ನುವುದು ಪ್ರಶ್ನೆ. ಕಳೆದ ವರ್ಷ ಇವರ ಸಹೋದರಿ ರೀತೂ ನಂದಾ ಹಾಗೂ ಅಣ್ಣ ರಿಷಿ ಕಪೂರ್ ನಿಧನವಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದ ರಾಜೀವ್ ಮೊನ್ನೆ ಫೆಬ್ರವರಿ ೯ರಂದು ಹೃದಯಾಘಾತದಿಂದ ನಿಧನ ಹೊಂದಿದಾಗಲೇ ಲೋಕಕ್ಕೆ ನೆನಪಾದದ್ದು. ಪತ್ರಿಕೆಗಳ ಪಾಲಿಗೆ ಕೇವಲ ಸಿಂಗಲ್ ಕಾಲಂ ಸುದ್ದಿಯಾದ ರಾಜೀವ ಕಪೂರ್ ಗೆ ಬದುಕಿನಲ್ಲಿ ಯಶಸ್ಸು ಮರೀಚಿಕೆಯಾಗಿಯೇ ಉಳಿಯಿತು.
ಚಿತ್ರ ಕೃಪೆ: ಅಂತರ್ಜಾಲ ಸಂಗ್ರಹ