ಆರಿಸಿ ಕೊಡುವಳು...

ಆರಿಸಿ ಕೊಡುವಳು...

ಕವನ

ಸೂತ್ರವನರಿಯೆನು ಕವನವ ರಚಿಸಲು

ರಾತ್ರಿಯ ಕಾನನ ಪಯಣವಿದು

ಮಾತ್ರೆಯು ಗಣಗಳು ಲೋಹದ ಕಡಲೆಯು

ನೇತ್ರದಿ ತುಂಬಿದೆ ಕಂಬನಿಯು

 

ಬರೆಯುವ ಗೀತೆಗೆ ವಿಷಯವನರಸಲು

ಕೊರತೆಯು ನನ್ನನು ಕಾಡುತಿದೆ

ದೊರೆಯದೆ ಹೋಯಿತು ಕವನಕೆ ಪದಗಳು

ಕರುಣೆಯ ವಾಣಿಯು ಹರಿಯಿಸದೆ

 

ಶಾರದೆ ಹರಸಿರೆ ಕವನಗಳುದಿಪವು

ಬಾರದು ಪದಗಳ ಬರಗಾಲ

ತೋರಲಿ ದಯೆಯನು ಅಕ್ಷರ ಮಾತೆಯು

ಕೋರುವೆ ಪೂಜಿಸಿ ಚರಣಗಳ

 

ಎಲ್ಲಾ ಕಲೆಗಳ ದಾತೆಸರಸ್ವತಿ

ಗೆಲ್ಲಿಸಿ ಬಿಡುವಳು ಲೋಕದೊಳು

ಸಲ್ಲುವ ಮಂದಿಯನಾರಿಸಿ ಕೊಡುವಳು

ಬಲ್ಲವರೀನುಡಿ ನುಡಿಯುವರು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್