ಆರಿ ಹೋಯಿತು ಕಾರುಣ್ಯ ಮತ್ತು ದಯೆಯ ದಾರಿದೀಪ!

ಆರಿ ಹೋಯಿತು ಕಾರುಣ್ಯ ಮತ್ತು ದಯೆಯ ದಾರಿದೀಪ!

ದೀರ್ಘಕಾಲದ ಅನಾರೋಗ್ಯದಿಂದ ಪೋಪ್ ಫ್ರಾನ್ಸಿಸ್ ಅವರು ಸೋಮವಾರ (21-04) ಬೆಳಿಗ್ಗೆ 7:35 ಕ್ಕೆ ಈಸ್ಟರ್ ಸೋಮವಾರದ ದಿನದಂದು ದಿವ್ಯದೆಡೆಗೆ ತಮ್ಮ ಪಯಣವನ್ನು ಬೆಳೆಸಿದರು. ಅವರ ವಿಧಿವಶಕ್ಕೆ ಸಂತಾಪ ಸೂಚಿಸುತ್ತ ಪ್ರಧಾನಿ ನರೇಂದ್ರ ಮೋದಿ ಅವರು, "a beacon of compassion and hope" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ಎ ಗ್ರೇಟ್ ಮ್ಯಾನ್, ಎ ಗ್ರೇಟ್ ಶೆಫರ್ಡ್" ಎಂದು ಪೋಪ್ ಅವರ ನಿಧಾನಕ್ಕೆ ಇಟಲಿಯ ಪ್ರಧಾನಿ ಜೊರ್ಜಿಯ ಮೆಲೋನಿ ಅವರು ಶೋಕಿಸಿದರು.

ಪೋಪ್ ಫ್ರಾನ್ಸಿಸ್ ಅವರು ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥರು ಮತ್ತು ವ್ಯಾಟಿಕನ್ ಸಿಟಿ ಸ್ಟೇಟಿನ ಸರ್ವೋತ್ತಮ ಧರ್ಮಗುರುಗಳಾಗಿದ್ದರು; ಅವರು 13 ಮಾರ್ಚ್ 2013ರಿಂದ ತೀರಿಹೋಗುವರೆಗೆ ಆ ಸ್ಥಾನವನ್ನು ಅಲಂಕರಿಸಿದ್ದರು. ಅವರು ಕ್ರೈಸ್ತ ಧರ್ಮದ ಅತ್ಯುನ್ನತ ಸ್ಥಾನಮಾನ ಪಡೆದರೂ, ಅವರು ದೂರದ ಗಾಳಿಗೋಪುರದಲ್ಲಿ ಐಷಾರಾಮಿ ಬದುಕನ್ನು ಬದುಕುವ ಬದಲು ಅವರು ಜಗತ್ತಿನಾದ್ಯಂತ ದೀನ-ದಲಿತರ, ಬಡವರ, ಶೋಷಿತರ ಪರವಾಗಿ ಸೇವೆಯನ್ನು ಸಲ್ಲಿಸಿದ್ದರು.

ಅವರು ಕೊನೆಯುಸಿರು ಎಳೆಯುವರೆಗೂ ದಮನಿತರ ಪರವಾಗಿ ತಮ್ಮ ಧ್ವನಿಯನ್ನು ಎತ್ತಿದರು. ಅವರ ಸಾಮಾಜಿಕ ಕರ್ತವ್ಯಗಳನ್ನು ಎತ್ತಿಹಿಡಿಯುತ್ತ, "ಪೋಪ್ ಫ್ರಾನ್ಸಿಸ್ ಅವರು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರು" ಎಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಪ್ರಕಟಿಸಿದೆ. ಪೋಪ್ ಫ್ರಾನ್ಸಿಸ್ ಅವರನ್ನು 'ಕ್ಯಾಥೊಲಿಕ್ ಚರ್ಚ್ ಅನ್ನು ಮರುರೂಪಿಸಿದ ಬಡವರ ಧ್ವನಿ' ಎಂದೂ ಕರೆಯಲಾಗುತ್ತದೆ. ಚಿಕ್ಕ ವಯಸ್ಸಿನಿಂದಲೂ ಅವರು ಯೇಸು ಕ್ರೈಸ್ತರ ಆದರ್ಶಗಳನ್ನು ಅರಿತುಕೊಳ್ಳುವ ಕಡೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಬಾಲ್ಯದಿಂದಲೇ ಅವರು ಬಡ ಮತ್ತು ದೀನ ದಲಿತರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ನರಳುತ್ತಿರುವವರಿಗೆ ಅವರು ಭರವಸೆಯ ಮನೋಭಾವವನ್ನು ಹೊತ್ತಿಸಿದರು. ಸೆಪ್ಟೆಂಬರ್ 2024ರಲ್ಲಿ, ಪೋಪ್ ಫ್ರಾನ್ಸಿಸ್ ಅವರು ಸಾರ್ವತ್ರಿಕ ಮೂಲ ಆದಾಯಕ್ಕಾಗಿ ಕರೆಗಳನ್ನು ನವೀಕರಿಸಿದರು; ಅವರು ಬಿಲಿಯನೇರ್‌ ಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಲು ಒತ್ತಾಯಿಸಿದರು.

ಅವರು ಸದಾ ವಲಸೆಗರ ಮತ್ತು ನಿರಾಶ್ರಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು: ಪೋಪ್ ಫ್ರಾನ್ಸಿಸ್ ಅವರು ನಿರಾಶ್ರಿತರ ಮತ್ತು ವಲಸಿಗರ ಅವಸ್ಥೆಯನ್ನು ಯುರೋಪ್ ಮತ್ತು ಅಮೆರಿಕಾದೊಂದಿಗೆ ಮಾತುಕತೆಗಳಲ್ಲಿ ಅವರ ಹಕ್ಕುಗಳನ್ನು ಎತ್ತಿ ಹಿಡಿದಿದ್ದರು. ನಿರಾಶ್ರಿತರನ್ನು ಸ್ವೀಕರಿಸಲು ತಿರಸ್ಕರಿಸುವ ನವ-ರಾಷ್ಟ್ರೀಯವಾದಿಗಳನ್ನು ಫ್ರಾನ್ಸಿಸ್ ಅವರು ಕಟುವಾಗಿ ಟೀಕಿಸಿದ್ದರು. ಪೋಪ್ ಫ್ರಾನ್ಸಿಸ್ ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮೂಹಿಕ ಗಡೀಪಾರು ಕ್ರಮಗಳನ್ನು ಖಂಡಿಸಿ ಬಹಿರಂಗ ಪತ್ರ ಬರೆದಿದ್ದರು ಎಂದು ವರದಿಯಾಗಿದೆ.

ಪೋಪ್ ಫ್ರಾನ್ಸಿಸ್ ಅವರು ಯುದ್ಧ ವಿರೋಧಿಯಾಗಿದ್ದರು: ರಷ್ಯ-ಯೂಕ್ರೈನ್ ಯುದ್ಧದುದ್ದಕ್ಕೂ ಪೋಪ್ ಫ್ರಾನ್ಸಿಸ್ ಅವರು ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಲು ಒತ್ತಾಯಿಸಿದ್ದರು. ಅವರು ಶಾಂತಿಗಾಗಿ ಕರೆ ನೀಡುತ್ತ, "ದಯವಿಟ್ಟು ಶಸ್ತ್ರಾಸ್ತ್ರಗಳನ್ನು ಮೌನಗೊಳಿಸಿರಿ!" ಎಂದು ಹೇಳಿದರು. ಜನವರಿ 2018 ರಲ್ಲಿ, ಫ್ರಾನ್ಸಿಸ್ ಯುರೋಪಿನಲ್ಲಿ ಯಜಿದಿ ನಿರಾಶ್ರಿತರನ್ನು ಭೇಟಿಯಾದರು. ಅವರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ಯಜಿದಿ ನರಮೇಧಕ್ಕೆ "ಸ್ಪಂದಿಸದ ಮೌನ ಪ್ರೇಕ್ಷಕರಾಗಿ ಉಳಿಯಬಾರದು" ಎಂದು ಕರೆ ನೀಡಿದ್ದರು. ಪೋಪ್ ಅವರು ಇಸ್ರೇಲ್-ಫೆಲೆಸ್ತೀನಿನ ಸಂಘರ್ಷಕ್ಕೆ ಅಂತ್ಯಗೊಳಿಸಲು ಬಹಳ ಶ್ರಮ ಪಟ್ಟಿದರು. 

ಮೇ 2014ರಲ್ಲಿ, ಪೋಪ್ ಇಸ್ರೇಲ್ ಮತ್ತು ಫೆಲೆಸ್ತೀನಿ ಪ್ರಾಂತ್ಯಗಳಿಗೆ ಭೇಟಿ ನೀಡಿದರು. ಪೋಪ್ ಇಸ್ರೇಲ್-ಫೆಲೆಸ್ತೀನಿ ಸಂಘರ್ಷದಲ್ಲಿ ಎರಡೂ ಕಡೆಯವರಿಗೆ ಸಾಂಕೇತಿಕವಾಗಿ ಶಾಂತಿಯನ್ನು ಸ್ಥಾಪಿಸಲು ಸನ್ನೆಗಳನ್ನು ನೀಡಿದರು. ಅವರು ಬೆಥ್ಲೆಹೆಮ್ ಗೆ ಭೇಟಿ ನೀಡಿದರು. ಅಲ್ಲಿ ಅವರು ಫೆಲೆಸ್ತೀನ್ ಪ್ರಧಾನಿ ಮಹಮೂದ್ ಅಬ್ಬಾಸ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತ ಭಾಷಣ ಮಾಡಿದರು ಮತ್ತು 'ಚರ್ಚ್ ಆಫ್ ದಿ ನೇಟಿವಿಟಿ'ಯಲ್ಲಿ ಮಾಸ್ ಆಚರಿಸಿದರು. ಮೇ 2021ರಲ್ಲಿ, ಜೆರುಸಲೆಮ್ ನಲ್ಲಿ ಸಂಘರ್ಷಣೆಗಳ ನಡುವೆ, ಪೋಪ್ ಇಸ್ರೇಲ್ ಮತ್ತು ಫೆಲೆಸ್ತೀನಿಯರ ನಡುವೆ ಶಾಂತಿಗಾಗಿ ಕರೆಗಳನ್ನು ಪುನರುಚ್ಚರಿಸಿದರು. ಅವರು ಇಸ್ರೇಲಿನ ವೈಮಾನಿಕ ದಾಳಿಗಳನ್ನು "ಅದು ಕ್ರೌರ್ಯ; ಯುದ್ಧವಲ್ಲ" ಎಂದು ಖಂಡಿಸಿದರು. ಪೋಪ್ ಫ್ರಾನ್ಸಿಸ್ ಫೆಲೆಸ್ತೀನದ `ನಿಷ್ಠಾವಂತ ಮಿತ್ರ'ಎಂದು ಫೆಲೆಸ್ತೀನಿನ ಪ್ರಧಾನಿ ಮಹ್ಮೂದ್ ಅಬ್ಬಾಸ್ ಅವರು ಪೋಪ್ ಅವರ ನಿಧನಕ್ಕೆ ತಮ್ಮ ಶೋಕವನ್ನು ವ್ಯಕ್ತಪಡಿಸಿದರು.

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ