ಆರೋಗ್ಯಕ್ಕಾಗಿ ಯೋಗ

ಆರೋಗ್ಯಕ್ಕಾಗಿ ಯೋಗ

ಜೂನ್ ೨೧ರಂದು ಪ್ರತೀ ವರ್ಷ 'ಅಂತರಾಷ್ಟ್ರೀಯ ಯೋಗ ದಿನ' ಎಂದು ಆಚರಿಸಲಾಗುತ್ತದೆ. ಭಾರತದ ಒತ್ತಾಸೆಯಿಂದ ಈ ದಿನವನ್ನು ಏಳು ವರ್ಷಗಳ ಹಿಂದೆ (೨೦೧೫) ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ. ಈ ದಿನವನ್ನು ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳು ಆಚರಿಸುತ್ತದೆ. ಯೋಗ ಎಂಬುವುದು ಇವತ್ತಿನ ದಿನ ಮಾಡಿ ಮತ್ತೆ ಮರೆತು ಬಿಡುವ ಕಾರ್ಯವಲ್ಲ. ಇದು ಪ್ರತೀ ದಿನ ನಾವು ವೃತದಂತೆ ಆಚರಿಸಬೇಕಾದ ಜೀವನ ಕ್ರಮ. ಹೀಗೆ ಮಾಡುವುದರಿಂದ ನಾವು ನಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧವಾಗಿ ಇಡಬಹುದಾಗಿದೆ. ಆದುದರಿಂದ ಈಗಲೇ ಯೋಗದ ಬಗ್ಗೆ ತಿಳಿದುಕೊಂಡು ಆಸನಗಳನ್ನು ಮಾಡಲು ಪ್ರಾರಂಭಿಸಿ. ಸುಲಭದ ಆಸನಗಳಿಂದ ಶುರು ಮಾಡಿದರೆ ಉತ್ತಮ.

ಯೋಗಾಭ್ಯಾಸ ಮಾಡಲು ನುರಿತ ಯೋಗ ಪಟು ಅಥವಾ ಗುರುಗಳನ್ನು ನಾವು ಮೊದಲು ಗುರುತಿಸಿಕೊಳ್ಳಬೇಕು. ಏಕೆಂದರೆ ನಾವು ಮಾಡುವ ಯೋಗವು ಕೇವಲ ಹೊರಗೆ ಕಾಣುವ ದೇಹಕ್ಕೆ ಮಾತ್ರವಲ್ಲದೇ ನಮ್ಮ ಮನಸ್ಸಿನ ಆರೋಗ್ಯಕ್ಕೂ ಮುಖ್ಯವಾಗುತ್ತದೆ. ತಪ್ಪು ತಪ್ಪು ಯೋಗಾಸನಗಳನ್ನು ಮಾಡುವುದರಿಂದ ನಮ್ಮ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಅನಾರೋಗ್ಯ ಪೀಡಿತರು ಪರಿಣಿತರಿಂದ ಅಥವಾ ಕುಟುಂಬ ವೈದ್ಯರಿಂದ ಸಲಹೆ ಪಡೆದು ಯೋಗಾಸನವನ್ನು ಪ್ರಾರಂಭಿಸುವುದು ಉತ್ತಮ.

ಮಾನವ ದೇಹವು ಪಂಚ ತತ್ವಗಳಿಂದಾಗಿದೆ ಎಂಬುದನ್ನು ನಾವು ಈಗಾಗಲೇ ಅರಿತವರಿದ್ದೇವೆ. ಬ್ರಹ್ಮಾಂಡವೇ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ ಈ ಐದು ತತ್ವಗಳಿಂದ ಕೂಡಿದೆ. ಪಂಚತತ್ವಗಳಿಂದಾದ ದೇಹ ಉಸಿರು ನಿಂತಾಗ, ಇದೇ ಪಂಚಭೂತಗಳಲ್ಲಿ ಲೀನವಾಗುತ್ತದೆ. ಯಾವಾಗ ಪಂಚತತ್ವಗಳಲ್ಲಿ ಸಮತೋಲನವಿರುತ್ತದೋ ಆಗ ನಾವು ಸಕಲ ವ್ಯಾಧಿಗಳಿಂದ ಮುಕ್ತರು. ಎಲ್ಲಿ ‌ಸಮತೋಲನ ತಪ್ಪಿತೋ ಅಲ್ಲಿಗೆ ರೋಗರುಜಿನಗಳು ಪ್ರವೇಶವಾಗುವುದು ಸಹಜ.

ನಮ್ಮ ಮೆದುಳು ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಗಳಿಗೆ ಸಂಬಂಧಿಸಿದೆ. ನಮ್ಮ ಮನಸ್ಸು ಚೈತನ್ಯ ಶಕ್ತಿಯಾಗಿದೆ. ಇಡೀ ಶರೀರವನ್ನು ಮನಸ್ಸು ತನ್ನ ಅಂಕೆಯಲ್ಲಿಡುತ್ತದೆ. ‘ಆರೋಗ್ಯವೇ ಭಾಗ್ಯ’ ಎಂಬ ವಿಷಯವನ್ನು ಬಾಲ್ಯದಿಂದಲೇ ಓದಿದವರು ನಾವೆಲ್ಲ. ಆದರೆ ಓದಿದ ಹಾಗೆಯೇ ಮರೆತು ಬಿಟ್ಟಿದ್ದೇವೆ. ಪ್ರಾಚೀನ ಕಾಲದಿಂದಲೂ ಜ್ಞಾನದ ದೀಪ್ತಿಯಿಂದ ಜಗತ್ತನ್ನು ಎಚ್ಚರಿಸಿದ ಬೆಳಗಿದ ದೇಶ ಎಂದರೆ ಭಾರತ. ಯೋಗಿಗಳು ನೂರಾರು ವರ್ಷ ಆರೋಗ್ಯವಾಗಿ ಬದುಕಿದ್ದರಂತೆ. ಕಾರಣ ಯೋಗ, ಧ್ಯಾನ, ಮುದ್ರೆ, ಹಿತಮಿತ ಆಹಾರ ಸೇವನೆ, ಗುಣನಡತೆ ಎಂದು ಹೇಳುತ್ತಾರೆ. ಯೋಗ ಮತ್ತು ಮುದ್ರೆಗಳು ‘ಸತ್,ಚಿತ್,ಆನಂದ’ ನೀಡುವಂಥದ್ದು.

ಸುಮಾರು ೬೦೦೦ ವರುಷಗಳ ಹಿಂದಿನ ಕಲ್ಪನೆಯೊಂದಿಗೆ ಈ ಯೋಗ ದಿನ ಆರಂಭವಾಯಿತು. ಭೌತಿಕ, ಮಾನಸಿಕ, ಆಧ್ಯಾತ್ಮಿಕ, ಪರಿಪೂರ್ಣ ವಿಕಸನಕ್ಕೆ, ಧ್ಯಾನ, ಹಠ, ಯೋಗ, ಏಕಾಗ್ರತೆ, ಮನಸ್ಸಿನ ಮೇಲೆ ಹತೋಟಿ, ಸಕಾರಾತ್ಮಕ ಚಿಂತನೆ, ನಕಾರಾತ್ಮಕ ಧೋರಣೆಯ ಬಿಡುಗಡೆ ಈ ಎಲ್ಲದಕ್ಕೂ ಯೋಗ ಮತ್ತು ಧ್ಯಾನ ಬಹು ಮುಖ್ಯ ಎಂಬುದನ್ನು ಕಂಡುಕೊಂಡ ರಾಷ್ಟ್ರಗಳು ಯೋಗಕ್ಕೆ ಪ್ರಾಮುಖ್ಯತೆ ಕೊಡುವುದಕ್ಕಾಗಿಯೇ ವಿಶ್ವ ಯೋಗ ದಿನವನ್ನು ಜಾರಿಗೆ ತಂದವು.

ಯೋಗಃ ಕರ್ಮಸು ಕೌಶಲಂ ಯೋಗಕ್ಕೆ ಜಾತಿ, ಮತ, ಪಂಥ, ವಯಸ್ಸು ಯಾವುದೂ ಅಡ್ಡಿಯಾಗದು. ಪ್ರತಿನಿತ್ಯ ಒಂದು ಸರಿಯಾದ ಸಮಯವನ್ನು ಮಾಡಿಕೊಳ್ಳಬೇಕು. ಪ್ರಶಾಂತ ವಾತಾವರಣವಿದ್ದರೆ ಚಂದ. ಆಸನ, ಪ್ರಾಣಾಯಾಮ, ಧ್ಯಾನ, ಜೀವನಪದ್ಧತಿ, ಇವೆಲ್ಲವನ್ನೂ ಒಳಗೊಂಡಿರಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕರ. ನಡಿಗೆ, ಸರಳ ವ್ಯಾಯಾಮಗಳು. ಶರೀರ ,ಮನಸ್ಸು, ಉಸಿರಾಟ ಎಲ್ಲಾ ಒಂದಕ್ಕೊಂದು ನೇರ ಸಂಬಂಧವಿದೆ. ನಮ್ಮ ಮನಸ್ಸಿಗೆ ನೋವಾದಾಗ ನಮ್ಮ ಶರೀರ ದುಃಖದಿಂದ ಕೃಶವಾಗುತ್ತದೆ. ಮನಸ್ಸಿನಲ್ಲಿ ಭಾವನೆಗಳ ತಾಕಲಾಟ ನಡೆದು ಆರೋಗ್ಯ ಹಾಳಾಗಬಹುದು. ಸೇವಿಸುವ ಆಹಾರ ಮತ್ತು ಮನಸ್ಸು ಆರೋಗ್ಯ ಒಂದಕ್ಕೊಂದು ಅವಲಂಭಿತವಾಗಿದೆ‌. ಇಂದ್ರಿಯಗಳ ನಿಯಂತ್ರಣ, ಮಾನಸಿಕ ಬಲವರ್ಧನೆಗೆ, ದೈಹಿಕ ಬಲ ಹೆಚ್ಚಿಸಲು, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಯೋಗ ಅವಶ್ಯಕ. ಯೋಗನಿದ್ರೆ ನಮ್ಮ ತನುವನ್ನು ತಂಪಾಗಿಡುತ್ತದೆ.

ಓಂಕಾರ ಎಂಬ ಬೀಜಮಂತ್ರ ಆತ್ಮ-ಪರಮಾತ್ಮನ ಸಮ್ಮಿಲನಕ್ಕೆ ರಹದಾರಿ. ನಮ್ಮಲ್ಲಿರುವ ರಜೋ, ತಮೋಗುಣಗಳು ಸರಿಯಲು ಸಹಕಾರಿ. "ಶರೀರ ಮಾದ್ಯಂ ಖಲು ಧರ್ಮ ಸಾಧನಂ"ಎಂಬಂತೆ ಶರೀರ ಎಂಬ ಅಮೋಘ ಸಾಧನದಿಂದ ಯಾವ ಕಾರ್ಯ ವನ್ನು ಸಾಧಿಸಲು, ಈ ಯೋಗ ‌ಸಹಕಾರಿಯಾಗಬಲ್ಲುದು.

ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ 'ಬಲ'ಎಂಬುದು ಆತ್ಮರಕ್ಷಣೆ ಇದ್ದಂತೆ. ಬಲಹೀನರು ಇದ್ದೂ ಇಲ್ಲದಂತೆ. ಹಾಗಾದರೆ ನಾವು ಬಲಾಢ್ಯರಾಗಲು ದಾರಿ ನಮ್ಮ ನಮ್ಮಲ್ಲೇ ಇದೆ. ವ್ಯಸನಗಳಿಂದ ನಮ್ಮನ್ನು ಮುಕ್ತ ಮಾಡಲು ಯೋಗ ಒಳ್ಳೆಯದು. "ಅವಿದ್ಯಾಸ್ಮಿತಾ ರಾಗ ದ್ವೇಷಾ ಭಿನಿವೇಷಾ ಕ್ಲೇಶಾ"-ಎಂಬಂತೆ ಅಜ್ಞಾನ, ಅಹಂಕಾರ, ರಾಗ, ದ್ವೇಷ, ಮೋಹ, ಮತ್ಸರ ಈ ಎಲ್ಲಾ ಅವಗುಣಗಳನ್ನು ಹೋಗಲಾಡಿಸಿ, ಸತ್ಯ, ಶಾಂತಿ, ದಯೆ, ಕ್ಷಮೆ, ವಾತ್ಸಲ್ಯ, ಪ್ರೀತಿ, ಅಹಿಂಸೆ, ಪ್ರೇಮ ಇವುಗಳನ್ನು ಮೂಡಿಸಲು ಯೋಗ ಅಗತ್ಯವಿದೆ.

'ಈಶವಾಸ್ಯಮಿದಂ ಸರ್ವಂ' ಎಂಬಂತೆ ಈ ಚರಾಚರ ಸೃಷ್ಟಿಯಲ್ಲಿ ಭಗವಂತ ವ್ಯಾಪಿಸಿ, ನೆಲೆಸಿದ್ದಾನೆ. ಇದನ್ನು ಅರಿಯಲು ದಿವ್ಯ ದೃಷ್ಟಿ ಬೇಕು. ಆ ದಿವ್ಯ ದೃಷ್ಟಿ ಯೋಗ, ಪ್ರಾಣಾಯಾಮದಿಂದ ಲಭ್ಯವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕೊರೋನಾ ಮಹಾಮಾರಿ ನಮ್ಮನ್ನು ಹಿಂಡುತ್ತಿರುವ ಕಾರಣ ನಾವು ಯೋಗವನ್ನು ಮಾಡುವುದು ಅನುಕೂಲಕರ. ಆದರೆ ಸಾಮೂಹಿಕ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಮನೆಯಲ್ಲೇ ಕುಟುಂಬದ ಸದಸ್ಯರ ಜೊತೆ ಸೇರಿ ಪ್ರತೀ ದಿನ ಯೋಗಾಭ್ಯಾಸವನ್ನು ಮಾಡುವುದು ಬಹಳ ಉತ್ತಮ. ಇದರಿಂದಾಗಿ ಮನೆಯ ಸದಸ್ಯರ ಜೊತೆ ಉತ್ತಮ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಯೋಗದ ಗುರಿ ಕೇವಲ ದೈಹಿಕ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಸುಧಾರಿಸುವುದೂ ಆಗಿದೆ. ಈಗ ಲಾಕ್ ಡೌನ್ ಸಮಯದಲ್ಲಿ ನಾವು ಕೆಲಸ ಕಾರ್ಯಗಳಿಲ್ಲದೇ ಮನೆಯಲ್ಲೇ ಇರುವುದರಿಂದ ನಮಗೆ ಬಹಳ ಮಾನಸಿಕ ಸಮಸ್ಯೆಗಳು ಎದುರಾಗುತ್ತದೆ. ಹಣಕಾಸಿನ ಚಿಂತೆ, ಅಂಗಡಿಯಲ್ಲಿ ಹಾಳಾಗುತ್ತಿರುವ ವಸ್ತುಗಳ ತಲೆ ಬಿಸಿ. ಹೀಗೆ ಹತ್ತು ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವಾಗ ನಾವು ಯೋಗಾಭ್ಯಾಸವನ್ನು ನಿಯಮಿತವಾಗಿ ಮಾಡುವುದರಿಂದ ಬಹಳಷ್ಟು ಮಟ್ಟಿಗೆ ಈ ಮಾನಸಿಕ ವೇದನೆಯಿಂದ ಹೊರಬರಬಹುದು. ಯಾವುದೇ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬಹುದು.

 ‘ಧ್ಯಾನವೊಂದೇ ಮದ್ದು, ಯೋಗವೊಂದೇ ಚಿಕಿತ್ಸೆ’ ನಾವೆಲ್ಲರೂ ಅನುಕೂಲವಿದ್ದಂತೆ ಅನುಸರಿಸಿ ಉತ್ತಮ ಆರೋಗ್ಯ ಹೊಂದೋಣ. ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಷಯಗಳು.

ಕೊನೇ ಹನಿ: ಜೂನ್ ೨೧ ದಿನಕ್ಕೆ ಇನ್ನೂ ಕೆಲವು ವಿಶೇಷತೆಗಳಿವೆ. ಈ ದಿನವನ್ನು ವಿಶ್ವ ಸಂಗೀತ ದಿನ (World Music Day) ಎಂದು ಆಚರಿಸುತ್ತಾರೆ. ೧೯೮೨ರಲ್ಲಿ ಫ್ರಾನ್ಸ್ ನಲ್ಲಿ ಅಲ್ಲಿನ ಸಂಸ್ಕೃತಿ ಸಚಿವ ಜ್ಯಾಕ್ ಲ್ಯಾಂಗ್ ಈ ದಿನವನ್ನು ಸಂಗೀತ ದಿನವನ್ನಾಗಿ ಆಚರಿಸಲು ಮೊದಲು ಮಾಡಿದರು. ಇಂದಿನ ದಿನವನ್ನು ಮೋಟಾರ್ ಸೈಕಲ್ ದಿನವೆಂದೂ ಆಚರಿಸಲಾಗುತ್ತದೆ. ೧೮೬೦ರಲ್ಲಿ ಇದು ಜಾರಿಗೆ ಬಂತು. ಜೂನ್ ೨೧ರ ಇನ್ನೊಂದು ವಿಶೇಷವೆಂದರೆ, ಇದು ವರ್ಷದ ದೀರ್ಘವಾದ ಹಗಲು ಇರುವ ದಿನ. ಈ ದಿನದಂದು ದೀರ್ಘ ಅವಧಿಯ ಹಗಲು ಇರುತ್ತದೆ.  

ಸಹಕಾರ- ರತ್ನಾ ಕೆ.ಭಟ್, ತಲಂಜೇರಿ

(ಧ್ಯಾನ ಮತ್ತು ಚಿಕಿತ್ಸೆ ಆಕರ ಗ್ರಂಥ)

ಚಿತ್ರ ಕೃಪೆ: ಅಂತರ್ಜಾಲ ತಾಣ