ಆರೋಗ್ಯದಾಯಕ ತಂಪಿನ ರಾಜ - ಪುನರ್ಪುಳಿ



ಆಯುರ್ವೇದದಲ್ಲಿ ಆರು ತರಹದ ರುಚಿಗಳನ್ನು ಉಲ್ಲೇಖಿಸುತ್ತಾರೆ: ಸಿಹಿ, ಉಪ್ಪು, ಖಾರ, ಕಹಿ, ಹುಳಿ ಮತ್ತು ಒಗರು. ಈ ಎಲ್ಲ ರುಚಿಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಳವಡಿಸಿದಲ್ಲಿ ದೇಹ ಆರೋಗ್ಯವಾಗಿರುತ್ತದೆ ಎಂದು ನಂಬಿದ್ದಾರೆ. ಆದರೆ ಹುಳಿಯ ಮಹತ್ವವನ್ನು ಗಮನಿಸಿದರೆ ಇದು ಪಚನಕ್ರಿಯೆಯಲ್ಲಿ, ಕೋಶಗಳನ್ನು ಶುಚಿಗೊಳಿಸುವಲ್ಲಿ ಮತ್ತು ಖನಿಜಗಳನ್ನು ಹೀರುವ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ಹುಳಿ ಅಂಶವನ್ನು ನೀಡುವ ಹಣ್ಣಿನ ಸೇವನೆ ಅಗತ್ಯವಾಗಿದೆ. ಈ ಅಂಶವನ್ನು ಒದಗಿಸುವ ಹಲವು ಹಣ್ಣುಗಳಲ್ಲಿ ಪುನರ್ಪುಳಿ (ಮುರುಗನ ಹುಳಿ/ ಕೋಕಂ) ಕೂಡ ಒಂದು. ಆಯುರ್ವೇದದಲ್ಲಿ ಇದನ್ನು ‘ವೃಕ್ಷಾಮ್ಲ’ ಎಂದು ಕರೆಯುತ್ತಾರೆ.
ಆಂಗ್ಲ ಭಾಷೆಯಲ್ಲಿ ಕೋಕಂ ಎಂದು ಕರೆಯುವ ಪುರ್ನಪುಳಿಯು ಪಶ್ಚಿಮ ಘಟ್ಟದ ಸ್ಥಳೀಯ ಹಣ್ಣಾಗಿದ್ದು ಇದನ್ನು ಕರಾವಳಿ ಮತ್ತು ಮಲೆನಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಪ್ರಖರ ಕೆಂಪು ಬಣ್ಣದ ಮತ್ತು ಹುಳಿ ಇರುವ ಈ ಹಣ್ಣನ್ನು ಹಾಗೇ ತಿನ್ನಬಹುದು ಅಥವಾ ಒಣಗಿಸಿ ವರ್ಷವಿಡೀ ಉಪಯೋಗಿಸಬಹುದಾಗಿದೆ. ಇದರ ರಸವು ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಹಲವು ಖನಿಜಗಳು ಇವೆ. ಇವೆಲ್ಲ ಆರೋಗ್ಯ ವೃದ್ದಿಸುವಲ್ಲಿ ಸಹಕರಿಸುತ್ತವೆ. ಇದರ ಹುಳಿಯಾದ ರುಚಿಗೆ ಇದರಲ್ಲಿರುವ ಮ್ಯಾಲಿಕ್ ಆಮ್ಲ, ಅಸೆಟಿಕ್ ಆಮ್ಲ, ಹೈಡ್ರೋಸಿಟ್ರಿಕ್ ಆಮ್ಲ ಮತ್ತು ಹೈಡ್ರಾಕ್ಸಿ ಸಿಟ್ರಿಕ್ ಆಮ್ಲಗಳು ಕಾರಣವಾಗಿವೆ. ಇವುಗಳಿಂದ ಇದೊಂದು ಬ್ಯಾಕ್ಟೀರಿಯ ನಿವಾರಕ, ಸೋಂಕು ನಿವಾರಕ, ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ನಿವಾರಕ ಆಗಿದೆ.
ಇದರ ನಿಸರ್ಗದತ್ತ ಕ್ಯಾನ್ಸರ್ ನಿವಾರಕ ಗುಣಕ್ಕೆ ಇದರಲ್ಲಿರುವ "ಗಾರ್ಸಿನಾಲ್" ಎಂಬ ಕಣವೇ ಕಾರಣ. ಕ್ಯಾನ್ಸರ್ ಎಂದರೆ ಯಾವುದೋ ಅಂಗಾಂಶ ಲಂಗು ಲಗಾಮಿಲ್ಲದೆ ಬೆಳೆಯುತ್ತಾ ಹೋಗುವುದು. ಗಾರ್ಸಿನಾಲ್ ಈ ಬೆಳವಣಿಗೆಗೆ ಅಡ್ಡಗಲು ಹಾಕಿ ಕ್ಯಾನ್ಸರನ್ನು ಮುಂದುವರಿಯದಂತೆ ತಡೆಯುವ ಮೂಲಕ ಕ್ಯಾನ್ಸರ್ ರೋಗವನ್ನು ಹತ್ತಿಕ್ಕಲು ಸಹಕರಿಸುತ್ತದೆ. ಅಲ್ಲದೇ ಇತರ ಪಾಲಿಫಿನಾಲುಗಳು ಇದರಲ್ಲಿ ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ಆಂಟಿ ಆಕ್ಸಿಡೆಂಟುಗಳAತೆ ವರ್ತಿಸುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಹರಡುವ ಫ್ರೀ ರ‍್ಯಾಡಿಕಲ್ ಎಂಬ ಕಣಗಳು ದೇಹಕ್ಕೆ ಹನಿ ಮಡದಂತೆ ನೆರವಾಗುತ್ತವೆ. ಅಲ್ಲದೇ ಇವು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಗುವ ಮೂಲಕ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಇದರ ನಿಯಮಿತ ಸೇವನೆಯಿಂದ ಯಕೃತ್, ಬಡಲಿ, ಕರುಳು, ನಾಲಿಗೆ ಮತ್ತು ಚರ್ಮದ ಕ್ಯಾನ್ಸರ್‌ಗಳನ್ನು ಸಮರ್ಥವಾಗಿ ತಡೆಗಟ್ಟಬಹುದು.
ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಹಾಗು ಕ್ಯಾಲೋರಿ ಅಂಶಗಳು ಕಮ್ಮಿ ಇರುತ್ತದೆ. ಇದರ ಹಣ್ಣಿನಲ್ಲಿರುವ ಆಮ್ಲ ರಕ್ತದಲ್ಲಿ ಬೇಡದ ಕೊಲೆಸ್ಟ್ರಾಲನ್ನು ತಡೆಗಟ್ಟಿ ರಕ್ತದಲ್ಲಿ ಕೊಲೆಸ್ಟ್ರಾಲಿನ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ. ಇದರಲ್ಲಿರುವ ಹೈಡ್ರಾಕ್ಸಿಲ್ ಆಮ್ಲವನ್ನು ಕರಗಿಸಲು ದೇಹಕ್ಕೆ ಹೆಚ್ಚು ಕಷ್ಟಪಡಬೇಕಾಗುತ್ತದೆ. ಅಂದರೆ ಶೇಖರವಾಗಿದ್ದ ಕೊಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿ ಬರುತ್ತದೆ. ಅಲ್ಲದೆ ಇತರ ಆಮ್ಲಗಳು ದೇಹದ ಚಟುವಟಿಕೆಗೆ ನೆರವಾಗುವ ಮೂಲಕ ಇನ್ನಷ್ಟು ಕೊಬ್ಬು ಕರಗುವಂತೆ ಮಾಡುತ್ತದೆ. ಎರಡೂ ಕಡೆಯ ಹೊಡೆತಗಳಿಂದ ತತ್ತರಿಸುವ ಕೊಬ್ಬಿನ ಭಂಡಾರ ನಿಧಾನವಾಗಿ ಕರಗತೊಡಗುತ್ತದೆ. ಪರೋಕ್ಷವಾಗಿ ಇದು ತೂಕವನ್ನು ಇಳಿಸಲು ನೆರವಾಗುತ್ತದೆ.
ಮಧುಮೇಹ, ಕ್ಯಾನ್ಸರ್ ಹಾಗು ನರ ಸಂಭಂದಿತ ರೋಗಗಳನ್ನು ತಡೆಗಟ್ಟುವಲ್ಲಿ ಸಹ ಮಹತ್ವದ ಪಾತ್ರವಹಿಸಿದೆ. ನೋವು ಹಾಗೂ ಗಡ್ಡೆಗಳನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ. ಇದರ ಉತ್ಕರ್ಷನ ನರೋಧಕ ಹಾಗು ಶಿಲೀಂದ್ರ ನಿರೋಧಕ ಗುಣಗಳು ನಮ್ಮನ್ನು ಅನೇಕ ಸೋಂಕುಗಳಿಂದ ರಕ್ಷಿಸುತ್ತದೆ.
ಪುನರ್ಪುಳಿ ರಸವನ್ನು ಊಟದ ಬಳಿಕ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಏಕೆಂದರೆ ಇದರಲ್ಲಿರುವ ಆಮ್ಲಗಳು ಜಠರರಸವನ್ನು ಸಮರ್ಪಕ ಆಮ್ಲೀಯತೆಯಲ್ಲಿಡಲು ಸಹಕರಿಸಿ ಜಿರ್ಣಕ್ರಿಯೆಯನ್ನು ಸುಲಲಿತವಾಗಿಸುತ್ತದೆ. ಅಜೀರ್ಣಕ್ಕೆ ಪುರ್ನಪುಳಿ ಪಾನಿಯಾ ಉತ್ತಮ ಪರಿಹಾರವಾಗಿದೆ. ಅಜೀರ್ಣದ ಕಾರಣ ಉದ್ಭವವಾಗುವ ಹೊಟ್ಟೆಯಲ್ಲಿ ಉರಿ, ಮಲಬದ್ದತೆ, ಕರುಳಿನ ಹುಣ್ಣು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.
ಕೆಲವರಿಗೆ ಹೂವಿನ ಪರಾಗ, ಧೂಳಿನಿಂದ ಅಲರ್ಜಿಯುಂಟಾಗಿ ಚಮ್ದ ಕೆಲವೆಡೆ ಅತೀವ ತುರಿಕೆಯುಂಟಾಗುತ್ತದೆ. ಇದರಿಂದ ಚರ್ಮದ ಮೇಲೆ ಚಿಕ್ಕ ದುದ್ದುಗಳು ಎದ್ದು ಕೆರೆತದ ಕಾರಣ ಚರ್ಮದಲ್ಲಿ ಗಾಯಗಳಾಗುತ್ತವೆ. ಇದಕ್ಕೆ ಸಾಮಾನ್ಯವಾಗಿ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗಿರುವುದೇ ಕಾರಣ. ಪುನರ್ಪುಳಿಯ ಸೇವನೆಯಿಂದ ಈ ಆಮ್ಲೀಯತೆ ನಿವಾರಣೆಯಾಗುವ ಮೂಲಕ ಚರ್ಮದ ಅಲರ್ಜಿ ಕಡಿಮೆಯಾಗಿ ಚರ್ಮದ ತುರಿಕೆಯನ್ನು ನಿಲ್ಲಿಸುತ್ತದೆ. ಅಷ್ಟೆ ಅಲ್ಲದೆ ಹಲವು ಬಗೆಯ ಅಹಾರದ ಅಲರ್ಜಿಗಳನ್ನೂ ನಿವಾರಿಸುತ್ತದೆ.
ಬೇಸಿಗೆಯಲ್ಲಿ ಪುನರ್ಪುಳಿ ಹಣ್ಣಿನ ಪಾನಿಯಾ ದೇಹದ ಉಷ್ಣತೆಯನ್ನು ಕಡಿಮೆಗೊಳಿಸಿ ದೇಹವನ್ನು ತಂಪಾಗಿರಿಸುವಲ್ಲಿ ಸಹಕರಿಸಿ ಆಹ್ಲಾದಕರ ಅನುಭವ ನೀಡುತ್ತದೆ. ಕೇರಳ ರಾಜ್ಯ ಹಾಗು ನಮ್ಮ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಇದರ ಒಣಗಿಸಿದ ತಿರುಳನ್ನು ಹುಣಸೆಹುಳಿಯ ಬದಲಿಗೆ ಅಡುಗೆಗೆ ಉಪಯೋಗಿಸುತ್ತಾರೆ.
ಇಂತಹ ಮಹತ್ವವುಳ್ಳ ಹಣ್ಣಿನ ಬೇಸಾಯ ಕ್ರಮ ಈ ಕೆಳಗಿನಂತಿದೆ.
ಮಣ್ಣು: ಈ ಹಣ್ಣಿನ ಮರಗಳಿಗೆ ಫಲವತ್ತಾದ ಭೂಮಿ ಬೇಕು. ಮಣ್ಣಿನಲ್ಲಿ ಸಾಕಷ್ಟು ತೇವ ಹಿಡಿಯುವ ಅಲ್ಲದೇ ನೀರು ಬಸಿದು ಹೋಗುವ ಗುಣವಿರಬೇಕು. ಇದಕ್ಕೆ ಗೋಡು ಮಣ್ಣಿನ ಭೂಮಿ ಬಹುವಾಗಿ ಹಿಡಿಸುತ್ತದೆ.
ಹವಾಗುಣ: ಉಷ್ಣವಲಯದ ತೇವದಿಂದ ಕೂಡಿದ ಹವಾಗುಣವಿದ್ದಲ್ಲಿ ಉತ್ತಮ ಇಳುವರಿ ನೀಡುತ್ತದೆ. ಈ ಬೆಳೆಗೆ ೨ ಡಿಗ್ರಿ ಸೆ. ರಿಂದ ೩೬ ಡಿಗ್ರಿ ಸೆ. ಉಷ್ಣಾಂಶ ೭೦% ತೇವಾಂಶ ಮತ್ತು ವಾರ್ಷಿಕ ಮಳೆ ೨೫೦ ಸೆಂ.ಮೀ. ರಿಂದ ೪೦೦ ಸೆಂ.ಮೀ. ಇದ್ದಲ್ಲಿ ಉತ್ತಮವಾಗಿ ಬೆಳೆಯುತ್ತದೆ.
ಬಿತ್ತನೆ ಕ್ರಮಗಳು: ಈ ಬೆಳೆಯನ್ನು ಬೀಜದಿಂದ ಅಥವಾ ನಾಟಿಯ ಮೂಲಕ ಬೆಳೆಯಬಹುದು. ಬೀಜವನ್ನು ಉಪಯೋಗಿಸಿದಲ್ಲಿ ಬೆಳೆಯಲು ತುಂಬ ಸಮಯ ತೆಗೆದುಕೊಳ್ಳುವುದರಿಂದ ನಾಟಿಮಾಡುವುದು ಉತ್ತಮ.
ಬೇಸಾಯ ಕ್ರಮಗಳು: ಭೂಮಿಯನ್ನು ಒಂದೆರಡು ಸಾರಿ ಆಳವಾಗಿ ಉಳುಮೆ ಮಾಡಿ ಸಮಾ ಮಾಡಬೇಕು. ಕಳೆರಹಿತ ನೆಲವನ್ನು ಮಾಡಬೇಕು. ೬ಮೀ ಅಂತರದಲ್ಲಿ ೬೦ x ೬೦ x ೬೦ ಸೆಂ.ಮೀ ಗಾತ್ರದ ಗುಂಡಿಗಳನ್ನು ತೆಗೆದು ಇದರಲ್ಲಿ ೧೦ ರಿಂದ ೧೨ ಕೆಜಿ ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣನ್ನು ೧:೩ ಪ್ರಮಾಣದಲ್ಲಿ ಮಿಶ್ರಣಮಾಡಿ ತುಂಬಬೇಕು. ನೆಡುವ ಕಾಲಕ್ಕೆ ಗಿಡಗಳ ವಯಸ್ಸು ೧-೨ ವರ್ಷಗಳಿಷ್ಟಿದ್ದಲ್ಲಿ ಸಾಕು. ಈ ವೇಳೆ ಅವುಗಳ ಎತ್ತರ ಸುಮಾರು ೪೫ ಸೆ.ಮೀ.ಗಳಷ್ಟಿರುತ್ತದೆ. ಸಂಜೆಯ ಇಳಿ ಹೊತ್ತಿನಲ್ಲಿ ಗಿಡಗಳನ್ನು ನೆಡುವುದು ಅತ್ಯುತ್ತಮ. ನೆಡುವ ಮುಂಚೆ ಪ್ರತಿಗುಂಡಿಯ ಮಧ್ಯೆ ಹೆಪ್ಪು ಹಿಡಿಸುವಷ್ಟೆ ತಗ್ಗನ್ನು ತೆಗೆದು ಬೇರು ಸಮೂಹ ಸುತ್ತಲೂ ಹರಡುವಂತೆ ಮಾಡಿ, ಹಸಿಮಣ್ಣಿನಿಂದ ಮುಚ್ಚಿ ಬುಡದಸುತ್ತ ಬಿಗಿಯಾಯಿ ತುಳಿಯಬೇಕು. ಗಿಡಗಳು ಗಾಳಿಗೆ ಅಲುಗಾಡದಂತೆ ಆಸರೆ ಸಿಕ್ಕಿಸಿ ಕಟ್ಟಬೇಕು. ಅನಂತರ ಹದವರಿತು ನೀರು ಕೊಡಬೇಕು.
ಮಿಶ್ರಬೆಳೆಗಳು: ರೈತರು ಕೋಕಂ ಬೆಳೆಯ ಜೊತೆ ಹಲವು ಮಿಶ್ರಬೆಳೆಗಳನ್ನು ೫ ರಿಂದ ೬ ವರ್ಷಗಳವರೆಗೆ ಬೆಳೆಯಬಹುದು. ಸಿಹಿಗೆಣಸು, ತರಕಾರಿಗಳು, ಹೂವಿನ ಬೆಳೆಗಳು ಮತ್ತು ಕೆಲವು ಬಗೆಯ ಹುಲ್ಲುಗಳನ್ನು ಮಿಶ್ರಬೆಳೆಗಳಾಗಿ ಬೆಳೆಯಬಹುದು. ತೆಂಗಿನತೋಟದಲ್ಲಿ ಕೂಡ ಪುನರ್ಪುಳಿಯನ್ನು ಮಿಶ್ರಬೆಳೆಯಾಗಿ ಬೆಳೆಯಬಹುದು.
ನೀರಾವರಿ: ಈ ಗಿಡಗಳಿಗೆ ಸಾಕಷ್ಟು ತೇವ ಇರಬೇಕು. ಒಣ ಮತ್ತು ಉಷ್ಣ ಹವಾಮಾನದಲ್ಲಿ ಪ್ರತಿ ೭ ರಿಂದ ೧೦ ದಿನಗಳ ಕಾಲಾಂತರದಲ್ಲಿ ನೀರು ಒದಗಿಸಬೇಕು. ಮಳೆಗಾಲದಲ್ಲಿ ನೀರು ನೀಡುವ ಅವಶ್ಯಕತೆ ಇರುವುದಿಲ್ಲ ನೀರನ್ನು ಹಿತವಾಗಿ ಉಪಯೋಗಿಸಲು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳಬಹುದು.
ಗೊಬ್ಬರಗಳ ನಿರ್ವಹಣೆ: ಮೊದಲ ವರ್ಷದಲ್ಲಿ ಪ್ರತಿಗಿಡಕ್ಕೂ ೨ ಕೆಜಿ ಕೊಟ್ಟಿಗೆ ಗೊಬ್ಬರ/ತಿಪ್ಪೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ೫೦:೨೫ ಗ್ರಾಂ ಪ್ರಮಾಣದಂತೆ ನೀಡಬೇಕು. ಈ ಪ್ರಮಾಣವನ್ನು ನಂತರದ ವರ್ಷಗಳಲ್ಲಿ ಮತ್ತು ೧೦ ವರ್ಷದ ನಂತರ ಹೆಚ್ಚಿಸಬೇಕಾಗುತ್ತದೆ. ಪ್ರತಿ ಮರಕ್ಕೆ ೨೦ಕೆಜಿ ತಿಪ್ಪೆಗೊಬ್ಬರ ೫೦೦ಗ್ರಾಂ ಸಾರಜನಕ, ೨೫೦ ಗ್ರಾಂ ರಂಜಕ ಮತ್ತು ೨೫೦ ಗ್ರಾಂ ಪೊಟ್ಯಾಷ್ ನೀಡಬೇಕಾಗುತ್ತದೆ.
ರೋಗ ಮತ್ತು ಕೀಟಗಳು: ಈ ಬೆಳೆಯನ್ನು ಪೀಡಿಸುವ ರೋಗ ಮತ್ತು ಕೀಟಗಳು ಕಡಿಮೆ. ಆದರು ಲೀಫ್ ಮೈನರ್ ಮತ್ತು ಮಿಲಿಬಗ್ಸ್ ಕೀಟಗಳು ಎಳೆಯ ಎಲೆಗಳನ್ನು ಹಾನಿಮಾಡುತ್ತವೆ. ಆದ್ದರಿಂದ ಗಿಡಗಳಿಗೆ ೦.೦೩% ಡೈಮಿಥೋಯೆಟ್ ಕೀಟನಾಶಕಗಳನ್ನು ಸಿಂಪಡಿಸಬೇಕು.
ಕೋಯ್ಲು ಮತ್ತು ಇಳುವರಿ:- ೭ ರಿಂದ ೮ ವರ್ಷಗಳ ನಂತರ ಫಸಲು ನೀಡಲು ಶುರುಮಾಡುತ್ತದೆ, ಅತ್ಯಧಿಕ ಫಸಲು ಸಿಗುವುದು ೧೫ ರಿಂದ ೩೦ ವರ್ಷಗಳವರೆಗೆ ಮಾತ್ರ ಹಣ್ಣುಗಳನ್ನು ಕೈಯಿಂದ ಬಿಡಿಸುವುದು ಸೂಕ್ತ. ಮರವೊಂದಕ್ಕೆ ಕನಿಷ್ಠ ೨೦೦-೩೦೦ ಹಣ್ಣುಗಳು ಸಿಗುತ್ತದೆ, ಪ್ರತಿ ವರ್ಷಕ್ಕೆ ಮರವೊಂದರಿಂದ ೪೫-೬೫ ಕೆಜಿ ಹಣ್ಣುಗಳನ್ನು ಕೊಯ್ಲು ಮಾಡಬಹುದು.
ಮಾರಾಟ: ಹಣ್ಣುಗಳು ಬೇಗ ಕೊಳೆಯುವುದರಿಂದ ಕೊಯ್ಲು ಮಾಡಿದ ನಂತರ ಬಿದಿರಿನ ಬುಟ್ಟಿಗಳಲ್ಲಿ ಹುಲ್ಲಿನ ಮೇಲಿರಿಸಿ ಕಾರ್ಖಾನೆಗಳಿಗೆ ಸಾಗಿಸಬೇಕು.
ಚಿತ್ರ ಮತ್ತು ಮಾಹಿತಿ ಕೃಪೆ: ಚಂದನ, ಬಿ,ಸಿ, ಡಾ. ಕುಮಾರಿ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ,