ಆರೋಗ್ಯದ ಹನಿಗಳು ‘

ಆರೋಗ್ಯದ ಹನಿಗಳು ‘

‘ಆರೋಗ್ಯವೇ ಭಾಗ್ಯ' ಎಂಬ ಸಂಗತಿ ನಮಗೆ ಈಗ ಸರಿಯಾಗಿ ಅರ್ಥವಾಗಿದೆ ಎಂದು ನನಗೆ ಅನಿಸುತ್ತದೆ. ಏಕೆಂದರೆ ಒಂದುವರೆ ವರ್ಷದ ಹಿಂದೆ ಹೊರಗಡೆ ಹೋಗಿ ತಿರುಗಾಡಿ ಬಂದು ಮನೆಯೊಳಗೆ ಬರುವಾಗ ಕೈಕಾಲು ಮುಖ ತೊಳೆದು ಬನ್ನಿ ಎಂದರೆ ನಿರ್ಲಕ್ಷ್ಯ ವಹಿಸುತ್ತಿದ್ದ ನಾವು ಈಗ ಯಾರೂ ಹೇಳದೇ ಇದ್ದರೂ ಸಾಬೂನು ಹಾಕಿ ಕೈಕಾಲು ಮುಖ ತೊಳೆದು ಅಥವಾ ಸ್ನಾನವೇ ಮಾಡಿ ಬರುತ್ತೇವೆ. ಎಲ್ಲವೂ ಕೊರೋನಾ ಸಾಂಕ್ರಾಮಿಕದ ಮಹಿಮೆ ಎಂದರೆ ತಪ್ಪಲ್ಲ. ಹಬೆ ತೆಗೆದುಕೊಳ್ಳುವಿಕೆ, ಕಷಾಯ ಕುಡಿಯುವುದು, ಬಿಸಿ ನೀರಿನ ನಿಯಮಿತ ಸೇವನೆ ಯಾವುದನ್ನು ಬೇಕಾದರೂ ಮಾಡುತ್ತೇವೆ. ಕೊರೋನಾ ಬರದಿದ್ದರೆ ಸಾಕು ಎಂಬ ಮನಸ್ಥಿತಿ ನಮ್ಮದಾಗಿದೆ. ಇಲ್ಲಿ ಸ್ವಲ್ಪ ಆರೋಗ್ಯದಾಯಕ ಹನಿಗಳನ್ನು ನೀಡಲಾಗಿದೆ. ನಿಮ್ಮ ದೇಹಕ್ಕೆ ಒಗ್ಗುವ ಸಂಗತಿಗಳನ್ನು ಮಾಡಿನೋಡಬಹುದು.

* ರಾತ್ರಿ ಮಲಗುವ ಮುನ್ನ ೫-೧೦ ಬಾದಾಮಿ ಚೂರುಗಳನ್ನು ಒಂದು ಚಮಚ ಸೋಂಪು ಕಾಳುಗಳನ್ನು ಕಲ್ಲು ಸಕ್ಕರೆಯೊಂದಿಗೆ ಕೆಲ ದಿನಗಳ ಕಾಲ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ.

* ದೊಡ್ದ ಪತ್ರೆ ಅಥವಾ ಸಾಂಬಾರು ಬಳ್ಳಿಯ ಸೇವನೆ ಬಹಳ ಆರೋಗ್ಯದಾಯಕ. ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಹೆಚ್ಚು. ಹೀಗಾಗಿ ದೊಡ್ಡ ಪತ್ರೆ ಎಲೆಗಳನ್ನು ಸೇವಿಸಿದರೆ ಇವುಗಳಿಂದ ಪಾರಾಗಬಹುದು. ಅಲ್ಲದೆ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುವುದರಿಂದ ಕಾಮಾಲೆ ರೋಗ ನಿವಾರಣೆಯಾಗಿ, ಜೀರ್ಣಶಕ್ತಿ ಸಹ ಹೆಚ್ಚುತ್ತದೆ. ಇನ್ನು ದೊಡ್ಡ ಪತ್ರೆ ಚಟ್ನಿಯನ್ನು ಸೇವಿಸಿದರೆ ತಲೆ ಸುತ್ತು ಕಮ್ಮಿಯಾಗುತ್ತದೆ. ದೊಡ್ಡಪತ್ರೆ ಎಲೆಗಳಿಗೆ ಕಾಳು ಮೆಣಸು, ಉಪ್ಪು ಹಾಕಿ ಚೆನ್ನಾಗಿ ಅರೆದು ರಸವನ್ನು ಕುಡಿದರೆ ಬಾಯಿಯಿಂದ ಬರುವ ದುರ್ವಾಸನೆ ದೂರವಾಗಿ ಪಿತ್ತ ಶಮನವಾಗುತ್ತದೆ.

*  ಕಬ್ಬಿನ ಹಾಲು ಹೃದಯಕ್ಕೆ ಉತ್ತಮ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣದಂತಹ ಹಲವಾರು ಪೋಷಕಾಂಶಗಳು ಇವೆ. ಸಕ್ಕರೆ ಬೆರೆಸಿದ ಇತರೆ ಪಾನೀಯಗಳಿಗಿಂತ ಕಬ್ಬಿನ ಹಾಲು ಕುಡಿಯುವುದು ಉತ್ತಮ. ಇದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಕಬ್ಬನ್ನು ಜಗಿದು ರಸ ಹೀರುವುದರಿಂದ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುವುದರ ಜೊತೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

* ಬಿಸಿ ಬಿಸಿ ನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಆಯುರ್ವೇದ ವೈದ್ಯದ ಪ್ರಕಾರ ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸೇವಿಸಿದಾಗ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಇದರ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ತೂಕ ಇಳಿಸಲು ಸಹಕಾರಿಯಾಗಿದೆ. ಹೊಟ್ಟೆ ಸಂಬಂಧಿತ ಸಮಸ್ಯೆಗಳು ಪರಿಹಾರವಾಗುತ್ತದೆ. ನಿದ್ರಾಹೀನತೆ ನಿವಾರಣೆಯಾಗುತ್ತದೆ. ಬಾಯಿಯ ಕಾಯಿಲೆ ದೂರವಾಗುತ್ತದೆ. ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಪರಿಹಾರವಾಗಿದೆ.

* ಖರ್ಜೂರವನ್ನು ಹಾಲಿನೊಂದಿಗೆ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಮೂಳೆಗಳು ದೃಢಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಒದಗಿಸಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಖರ್ಜೂರವನ್ನು ನಿಯಮಿತವಾಗಿ ಬಳಸುವುದರಿಂದ ಜೀರ್ಣಕ್ರಿಯೆ ಸುಧಾರಣೆಯಾಗಿ ದೊಡ್ಡ ಕರುಳಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಹರಿವೆ ಸೊಪ್ಪು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಹರಿವೆ ಸೊಪ್ಪಿನಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಇದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಹರಿವೆ ಸೊಪ್ಪಿನ ಸೇವನೆಯಿಂದ ರಕ್ತದೊತ್ತಡ ಕಮ್ಮಿಯಾಗುತ್ತದೆ. ದೇಹದಲ್ಲಿ ಬಿ ವಿಟಮಿನ್ ವೃದ್ಧಿಯಾಗುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ.

* ಪ್ರತಿನಿತ್ಯ ನಿಯಮಿತವಾಗಿ ಮೊಟ್ಟೆಯನ್ನು ಸೇವಿಸುವುದರಿಂದ ಬಿಳಿ ಕೂದಲು ಆಗುವುದನ್ನು ತಡೆಗಟ್ಟಬಹುದು. ಮೊಟ್ಟೆಯಲ್ಲಿನ ಬಯೋಟಿನ್ ಅಂಶ ಕೂದಲು ದಪ್ಪವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ದೇಹದಲ್ಲಿ ಪ್ರೋಟೀನ್ ಅಂಶ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ.

* ಊಟದ ನಂತರ ಲವಂಗದ ತುಂಡನ್ನು ಬಾಯಲ್ಲಿ ಇಟ್ಟುಕೊಂಡು ಅದರ ರಸವನ್ನು ಹೀರುವುದರಿಂದ ಆಮ್ಲೀಯತೆಯ (ಅಸಿಡಿಟಿ) ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ತಿಳಿಸಲಾಗಿದ್ದು, ಬೆಳ್ಳುಳ್ಳಿ ಸೇವನೆಯಿಂದ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಕಾಯಿಲೆ ದೂರವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ರಕ್ತ ಶುದ್ಧಿ ಮಾಡುವುದರ ಜತೆಗೆ ಜಠರಕ್ಕೆ ಸೋಂಕನ್ನು ತಡೆಯುತ್ತದೆ. ಶೀತ, ಕೆಮ್ಮು ನಿವಾರಣೆಯಾಗುತ್ತದೆ. ಹೃದಯ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಹತೋಟಿಗೆ ತರುವಲ್ಲಿ ಸಹಾಯಕವಾಗಿದೆ.

* ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಕೂದಲು, ಚರ್ಮ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಹಾಗೂ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.

* ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ೪-೫ ಗೋಡಂಬಿ ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ತಕ್ಷಣ ಹೆಚ್ಚುತ್ತದೆ. 

* ದೇಹದ ಬಲವನ್ನು ಅಧಿಕಗೊಳಿಸಲು, ಮೊಳಕೆಯೊಡೆದ ಕಾಳುಗಳ ಜೊತೆ ನಿಂಬೆ, ಶುಂಠಿ ತುಂಡುಗಳು, ಸ್ವಲ್ಪ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಬೆಳಿಗ್ಗೆ ಉಪಾಹಾರದಲ್ಲಿ ಸೇವಿಸಿ, ನೀವು ಇಡೀ ದಿನ ಶಕ್ತಿಯನ್ನು ಪಡೆಯುತ್ತೀರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ