ಆರೋಗ್ಯಮಸ್ತು

ಆರೋಗ್ಯಮಸ್ತು

ಪುಸ್ತಕದ ಲೇಖಕ/ಕವಿಯ ಹೆಸರು
ವೈದ್ಯ ಶ್ರೀವತ್ಸ ಭಾರಧ್ವಾಜ ಹಾಗೂ ವೈದ್ಯೆ ಅನಸೂಯ ದೇವಿ
ಪ್ರಕಾಶಕರು
ದತ್ತಂ ಪ್ರಕಾಶನ, ಕರಂಗಲಪಾಡಿ, ಮಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೧೩

‘ಆರೋಗ್ಯವೇ ಭಾಗ್ಯ' ಎನ್ನುವ ಈ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿರಬೇಕು. ಆರೋಗ್ಯದ ಬಗ್ಗೆ ತಿಳಿಸಲು ಹಲವಾರು ಪುಸ್ತಕಗಳು ಬಂದಿವೆ. ಮಂಗಳೂರಿನ ವೈದ್ಯ ದಂಪತಿಗಳಾದ ಶ್ರೀವತ್ಸ ಹಾಗೂ ಅನಸೂಯಾ ದೇವಿಯವರು ‘ಆರೋಗ್ಯಮಸ್ತು' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ರಚಿಸಿದ್ದಾರೆ. ಇದರಲ್ಲಿ ಆಯುರ್ವೇದ ಪದ್ಧತಿ, ಮದ್ದು ಹಾಗೂ ಅವುಗಳ ಬಳಕೆ ಕುರಿತಾಗಿ ಬಹಳ ಸೊಗಸಾದ ಮಾಹಿತಿಯನ್ನು ನೀಡಿದ್ದಾರೆ.

“ವಿಶ್ವವಿಖ್ಯಾತ ಸಸ್ಯ ಔಷಧ ವಿಜ್ಞಾನಿ ದಿ.ಡಾ. ಪಳ್ಳತ್ತಡ್ಕ ಕೇಶವ ಭಟ್ಟರ ಕುಟುಂಬದ ಶಿಷ್ಯರಾದ ವೈದ್ಯ ಶ್ರೀವತ್ಸ ಭಾರಧ್ವಾಜ ಹಾಗೂ ಅನಸೂಯಾ ದೇವಿ ಆಯುರ್ವೇದ ದಂಪತಿಗಳು. ಇವರಿಂದ ನಾಡಿವಿಜ್ಞಾನ, ಮೂಲಿಕೆಗಳ ಪರಿಚಯ, ಸಸ್ಯೌಷಧಿಗಳ ತಯಾರಿ, ಚಿಕಿತ್ಸೆಗಳನ್ನು ಕಲಿತು ದೇಶ ವಿದೇಶಗಳಲ್ಲಿ ವಿವಿಧ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದಾರೆ.

ಮಂಗಳೂರಿನ ಪ್ರತಿಷ್ಟಿತ ‘ದತ್ತಂ ಆಯುರ್ಧಾಮ' ಎಂಬ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಮತ್ತು ‘ಸತ್ವಂ ಆರ್ಗಾನಿಕ್ಸ್' ಎಂಬ ಸಾವಯವ ಆಹಾರದ ಮಳಿಗೆಯನ್ನು ಆರೋಗ್ಯಾಕಾಂಕ್ಷಿಗಳಿಗೆ ಸಮರ್ಪಿಸಿದ್ದಾರೆ. ಈ ದಂಪತಿಗಳು ಹಲವಾರು ರೇಡಿಯೋ, ಟಿ.ವಿ. ಹಾಗೂ ಜನ ಸಮಾವೇಶಗಳಲ್ಲಿ ಆರೋಗ್ಯ ಪ್ರಶಿಕ್ಷಣಾ ನೀಡುತ್ತಾ ಬಂದಿದ್ದಾರೆ. ಪ್ರಸ್ತುತವಾಗಿ ಇವರು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಮತ್ತು ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ.

'ಔಷಧವು ರೋಗಕ್ಕಲ್ಲ ರೋಗಿಗೆ' ಎಂಬ ಸಿದ್ಧಾಂತ ಇವರದ್ದು. ಇವರ ಹತ್ತಾರು ವರ್ಷಗಳ ವೈದ್ಯಕೀಯ ಅನುಭವದ ಫಲವೇ ಈ ಪುಸ್ತಕ. ಸಾವಿರಾರು ರೋಗಿಗಳ ಮೇಲಿನ ಚಿಕಿತ್ಸಾ ಪಾಕವಿದು. ಇಲ್ಲಿರುವ ಸುಲಭ ಆರೋಗ್ಯ ಸೂತ್ರಗಳು ನಿಮ್ಮ ಆಹಾರ, ವಿಹಾರ, ವ್ಯಾಯಾಮ, ವಿರಾಮಗಳಿಗೆ ಯಾರೂ ಪಾಲಿಸಬಹುದಾದ ಮಾರ್ಗ ಸೂಚಿಗಳಾಗಿವೆ. ಈ ಪುಸ್ತಕವು ನಿಮ್ಮ ಕೈಗೆ ದೊರಕುತ್ತಿರುವ ಮನೆವೈದ್ಯ"

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಡಾ.ಶಿಕಾರಿಪುರ ಕೃಷ್ಣಮೂರ್ತಿ ಇವರು. ಇವರ ಅನುಭವದಲ್ಲಿ “ಸಮಸ್ಯೆಯನ್ನು ಮೂಲದಲ್ಲಿ ಪರಿಹರಿಸಿದರೆ ಮತ್ತೆ ಕಾಡುವುದಿಲ್ಲ. ಆದರೆ ಮೂಲ ಹುಡುಕುವುದು ಕಷ್ಟ. ಆರೋಗ್ಯ ವಿಷಯದಲ್ಲಿ ದೃಷ್ಟಿ ವೈವಿಧ್ಯಗಳಿವೆ. ಹಾಗಾಗಿ ಚಿಕಿತ್ಸಾ ಕ್ರಮಗಳು ವಿವಿಧವಾಗಿವೆ. ಸಮಗ್ರ ದೃಷ್ಟಿಯನ್ನು ಪ್ರತಿಪಾದಿಸುವ ಅಪರೂಪ ಪುಸ್ತಕವಿದು. ಜನರು ತಾವೇ ಅನುಸರಿಸಬಹುದಾದ ಆರೋಗ್ಯ ಸೂತ್ರಗಳ ಕೈಪಿಡಿ ಇದು. ಈ ವೈದ್ಯ ದಂಪತಿಗಳಿಗೆ ಇವರ ಪುಣ್ಯ ವಿಶೇಷತೆಯಿಂದ ದೊರೆತ ಗುರು ಡಾ.ಪಳ್ಳತ್ತಡ್ಕ ಕೇಶವ ಭಟ್. ಅವರು ಈ ಯುಗದ ಸತ್ಯಶೋಧಕ ವಿಜ್ಞಾನಿ. ನಿಜವಾದ ಅರ್ಥದಲ್ಲಿ ಇವರೊಂದು ಋಷಿ. ಅವರ ನಿರ್ದೇಶನದಲ್ಲಿ ನಾಡಿ ಪರೀಕ್ಷೆಯ ರೋಗವಿಧಾನ ಕ್ರಮವನ್ನು ಕಲಿತು, ಅವರು ಶೋಧಿಸಿ ಕಂಡುಕೊಂಡ ಹಲವಾರು ಸಸ್ಯಮೂಲ ಔಷಧಿಯನ್ನು ತಯಾರಿಸಿ, ಅದರಿಂದ ತಿಳಿದ ಆರೋಗ್ಯ ಸೂತ್ರಗಳನ್ನು ಪ್ರಚಾರ ಮಾಡುತ್ತಿರುವ ಅಪರೂಪದ ವೈದ್ಯರು. ಇವರ ದೃಷ್ಟಿಯಲ್ಲಿ ಸ್ಪಷ್ಟತೆ ಇದೆ. ವಿಚಾರದಲ್ಲಿ ಪ್ರಖರತೆಯಿದೆ. ಚಿಕಿತ್ಸಾಕ್ರಮದಲ್ಲಿ ಅದ್ಭುತ ಪ್ರಭಾವವಿದೆ. ಹಾಗಾಗಿ ಬೇರೆಡೆ ಸೋತವರು ಇಲ್ಲಿ ಬಂದು ಗೆಲ್ಲುತ್ತಾರೆ.” ಎಂದಿದ್ದಾರೆ.

ಪುಸ್ತಕದ ವಿಷಯಸೂಚಿಯಲ್ಲಿ ೨೬ ಅಧ್ಯಾಯಗಳಿವೆ. ಅಗತ್ಯವಿದ್ದ ಕಡೆ ಛಾಯಾಚಿತ್ರಗಳನ್ನು ನೀಡಿದ್ದಾರೆ. ಆರೋಗ್ಯ ಎಂದರೇನು?, ವ್ಯಾಯಾಮ-ಯೋಗ, ವಿರಾಮ, ನೇತ್ರ ಸಂರಕ್ಷಣೆ, ಕಾಡಿಗೆ ತಯಾರಿಸುವ ವಿಧಾನ, ಕೆಮ್ಮು-ದಮ್ಮು-ಶೀತಕ್ಕೆ ಮದ್ದು, ನಮ್ಮ ಅಡುಗೆ ಮನೆ, ತಿಂಡಿಗಳು, ಗಂಜಿಗಳು, ಚಟ್ನಿಗಳು, ತಂಬುಳಿಗಳು, ಮೊಸರಿನ ಬಗೆಗಳು, ಸಾಯಂಕಾಲದ ತಿಂಡಿಗಳು, ಸಿಹಿತಿಂಡಿಗಳು, ಪಾನೀಯಗಳು, ಉಪ್ಪಿನಕಾಯಿ ಹೀಗೆ ಹಲವಾರು ಆಸಕ್ತಿದಾಯಕ ವಿಷಯಗಳನ್ನು ಈ ಪುಸ್ತಕದಲ್ಲಿ ಅಳವಡಿಸಿಕೊಂಡಿದ್ದಾರೆ. ಸುಮಾರು ೨೦೦ ಪುಟಗಳಿರುವ ಈ ಪುಸ್ತಕ ಒಂದು ಸಂಗ್ರಹ ಯೋಗ್ಯ ಕೃತಿಯಾಗಿದೆ.