ಆರೋಗ್ಯ ಕ್ಷೇತ್ರದ ದೊಡ್ಡ ವ್ಯವಹಾರ ಮತ್ತು ಹೆಮ್ಮೆ ಎನ್ನೋಣವೇ…?

ಆರೋಗ್ಯ ಕ್ಷೇತ್ರದ ದೊಡ್ಡ ವ್ಯವಹಾರ ಮತ್ತು ಹೆಮ್ಮೆ ಎನ್ನೋಣವೇ…?

ವೈದ್ಯಕೀಯ ಕ್ಷೇತ್ರದ ವ್ಯಾವಹಾರಿಕ ಸಾಧನೆ ಮತ್ತು ಜನರ ಆರೋಗ್ಯದ ಆತಂಕದ ನಡುವೆ.... 2020 ರಲ್ಲಿ ಮಣಿಪಾಲ್ ಆಸ್ಪತ್ರೆ ಸಮೂಹಗಳ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳ ಸಮೂಹ. ಸುಮಾರು 2100 ಕೋಟಿ ರೂಪಾಯಿಗಳ ಖರೀದಿ ವ್ಯವಹಾರ.

2023… ಸಿಂಗಪುರ ಮೂಲದ ಟಮಾಸೆಕ್ ಸ್ವಾಧೀನಕ್ಕೆ ಮಣಿಪಾಲ್ ಆಸ್ಪತ್ರೆಗಳ ಸಮೂಹ. ಶೇಕಡಾ 70% ಒಡೆತನದ ಷೇರುಗಳ ಖರೀದಿ. ಸುಮಾರು 16300 ಕೋಟಿ ರೂಪಾಯಿಗಳ ವ್ಯವಹಾರ. ಆರೋಗ್ಯ ಕ್ಷೇತ್ರದ ದೊಡ್ಡ ವ್ಯವಹಾರ ಮತ್ತು ಹೆಮ್ಮೆ ಎನ್ನೋಣವೇ? ಅಥವಾ  ಅನಾರೋಗ್ಯವೂ ಭಾರತದಲ್ಲಿ ಒಂದು ದೊಡ್ಡ ಉದ್ಯಮವಾಗುತ್ತಿದೆಯೇ ಎಂದು ಭಯ ಪಡಬೇಕೇ?

ಕೊರೊನಾ ನಂತರದ ಸಮಯದಲ್ಲಿ ಬಹಳಷ್ಟು ವ್ಯಾವಹಾರಿಕ ಕ್ಷೇತ್ರಗಳು ತುಂಬಾ ನಷ್ಟಕ್ಕೆ ಒಳಗಾದವು. ಆದರೆ ಆಸ್ಪತ್ರೆಗಳು ತುಂಬಾ ಅಭಿವೃದ್ಧಿ ಹೊಂದಿದವು ಎಂಬುದು ಇದರಿಂದ ತಿಳಿಯುತ್ತಿದೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಜನಸಾಮಾನ್ಯರ ದೃಷ್ಟಿಯಿಂದ ಸ್ವಾಗತಾರ್ಹವೇ. ಗುಣಮಟ್ಟ, ಪ್ರಗತಿ ಮತ್ತು ಆಧುನಿಕತೆ ಸದಾ ಸ್ವೀಕಾರಾರ್ಹ. ಆದರೆ ಈ ಮಟ್ಟದ ವ್ಯಾವಹಾರಿಕತೆಯಿಂದ ಬಡವರ ಪಾಲಿಗೆ ಆರೋಗ್ಯ ಮತ್ತು ಶಿಕ್ಷಣ ಕೈಗೆಟುಕುವುದು ಕಷ್ಟ.

ಮಿನಿ ವಿಧಾನಸೌಧಗಳಂತ ಭವ್ಯವಾದ ಆಸ್ಪತ್ರೆ ಮತ್ತು ಶಿಕ್ಷಣಾ ಕಲಿಕಾ ಕೇಂದ್ರಗಳು ಬಹುತೇಕ ನಮ್ಮೆಲ್ಲರ ಭ್ರಷ್ಟಾಚಾರದ ಮೂಲ ಕೇಂದ್ರಗಳಾಗಿ ಪರಿವರ್ತನೆ ಹೊಂದಿವೆ. ಬೇಕಾದರೆ ಒಮ್ಮೆ ಯೋಚಿಸಿ ನೋಡಿ. ನಾವುಗಳು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿ ಪರಿಗಣಿಸುವುದು ನಮ್ಮ ಮಕ್ಕಳ ಶಿಕ್ಷಣ ಮತ್ತು ನಮ್ಮ ‌ಆರೋಗ್ಯ. ಅದಕ್ಕಾಗಿಯೇ ನಾವು ಹೆಚ್ಚು ಹೆಚ್ಚು ಹಣವನ್ನು ಗಳಿಸಲು ಮತ್ತು ಉಳಿಸಲು ಶ್ರಮಪಡುತ್ತೇವೆ. ಮುಂದೆ ಈ ಎರಡು ವಿಷಯಗಳಿಗೆ ಹಣ ಇಲ್ಲದಿದ್ದರೆ ಹೇಗೆ ಎಂಬುದೇ ನಮ್ಮ ದಿನನಿತ್ಯದ ಆಲೋಚನೆ.

ಶಿಕ್ಷಣ ಮತ್ತು ಆರೋಗ್ಯ ಕೇವಲ ಸ್ವಲ್ಪ ಮಟ್ಟಿನ ವ್ಯಾವಹಾರಿಕ ಉದ್ಯಮವಾಗಿ ಬೆಳೆದಿಲ್ಲ. ಅದನ್ನು ಒಂದು ದಂಧೆ ಎನ್ನುವಷ್ಟು ಪ್ರಮಾಣದಲ್ಲಿ ಬೆಳೆದಿದೆ. ಕೆಲವು ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳ ಭವ್ಯತೆ ಫೈವ್ ಸ್ಟಾರ್ ಹೋಟೆಲ್ ಗಳನ್ನು ನೆನಪಿಸುತ್ತದೆ. ವಿದ್ಯೆ ಕಲಿಯಲು ಮತ್ತು ಅನಾರೋಗ್ಯ ವಾಸಿ ಮಾಡಿಕೊಳ್ಳಲು ಈ ಫೈವ್ ಸ್ಟಾರ್ ಸಂಸ್ಕೃತಿಯ ಅವಶ್ಯಕತೆ ಇದೆಯೇ?

ಭವ್ಯ ಹೋಟೆಲುಗಳಂತೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಕೊಠಡಿ, ಡಿಲಕ್ಸ್ ಕೊಠಡಿ, ಏಸಿ ಕೊಠಡಿ, ಸಿಂಗಲ್ ಡಬಲ್ ತ್ರಿಬಲ್ ರೂಂ, ಸೂಟ್ ರೂಂ, ವಿಐಪಿ, ವಿವಿಐಪಿ ರೂಂ ಮುಂತಾದ ಅನೇಕ ವಿಭಾಗಗಳಿವೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ರೋಗಿಗೆ ಒಳ್ಳೆಯ ಗುಣಮಟ್ಟದ ಸೇವೆಯ ಅವಶ್ಯಕತೆ ಇರುತ್ತದೆಯೇ ಹೊರತು ಈ ರೀತಿಯ ವಿಲಾಸಿ ಕಟ್ಟಡಗಳ ಮಾದರಿಯಲ್ಲ.

ಒಂದು ಕಡೆ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಜನರ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುತ್ತಿವೆ. ಇನ್ನೊಂದು ಕಡೆ ಖಾಸಗಿಯಾಗಿ ಇವು ಅತ್ಯಂತ ದುಬಾರಿ ವ್ಯವಹಾರಗಳಾಗುತ್ತಿವೆ. ಶಿಕ್ಷಣ ಮತ್ತು ಆಸ್ಪತ್ರೆಗಳಲ್ಲಿ ಜನರ ನಿರೀಕ್ಷೆ ಗುಣಮಟ್ಟವೇ ಹೊರತು ಐಷಾರಾಮಿ ಸೌಕರ್ಯಗಳಲ್ಲ ಎಂದು ಇವರಿಗೆ ಮನವರಿಕೆ ಮಾಡಿ ಕೊಡುವುದು ಹೇಗೆ? ಅತಿಹೆಚ್ಚು ಹಣ ಖರ್ಚು ಮಾಡಿ ಡಾಕ್ಟರ್ ಆಗುವುದು, ಸಾಕಷ್ಟು ಹಣ ಸುರಿದು ಜಮೀನು ಪಡೆದು ಕಟ್ಟಡ ಕಟ್ಟುವುದು, ಆ ಹಣವನ್ನು ಜನರ ಅನಾರೋಗ್ಯದ ಸಮಯದಲ್ಲಿ ಸಂಪಾದಿಸುವುದು. ಇದು ಶೋಷಣೆಯಲ್ಲವೇ. ಈ ಸಂಸ್ಥೆಗಳಿಗೆ ಮುಖ್ಯ ಪ್ರದೇಶಗಳಲ್ಲಿ ಅಷ್ಟು ದೊಡ್ಡ ಕಟ್ಟಡಗಳ ಅವಶ್ಯಕತೆ ಇದೆಯೇ, ಸರಳವಾಗಿ ಆದರೆ ಸೇವೆಯ ಉದ್ದೇಶದ ಕಟ್ಟಡ ಸಾಲದೇ?

ಬದುಕಿನ ಅವಲಂಬಿತ ಮತ್ತು ಅನಿವಾರ್ಯ ಕ್ಷೇತ್ರಗಳು ಹೆಚ್ಚು ದುಬಾರಿಯಾಗುತ್ತಿದ್ದಷ್ಟು ಭ್ರಷ್ಟಾಚಾರ ಹೆಚ್ಚಾಗುತ್ತದೆ. ಜನರು ಭವಿಷ್ಯದ ದೃಷ್ಟಿಯಿಂದ ಹೆಚ್ಚು ಹೆಚ್ಚು ಹಣವನ್ನು ಭ್ರಷ್ಟ ಮೂಲಗಳಿಂದ ಗಳಿಸಲು ಪ್ರಯತ್ನಿಸುತ್ತಾರೆ. ಇಂದು ಆಗಿರುವುದು ಇದೇ ರೀತಿಯ ಬದಲಾವಣೆ. ಕಡಿಮೆ ಹಣದಲ್ಲಿ ಶಿಕ್ಷಣ ಮತ್ತು ಆರೋಗ್ಯ ಜನರಿಗೆ ಸಿಗುವುದಾದರೆ ಖಂಡಿತ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ. ಮನಸ್ಸು ಹಗುರಾವಾಗುತ್ತದೆ. ವಯಸ್ಸಾದ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾರ ನೆರವು ಇಲ್ಲದೆ ಕಡಿಮೆ ಹಣದಿಂದ ಚಿಕಿತ್ಸೆ ಪಡೆಯುವ ಅವಕಾಶವಿದ್ದರೆ ಜನ ಅನವಶ್ಯಕವಾಗಿ ಯಾವುದೋ ರೂಪದಲ್ಲಿ ಹಣ ಉಳಿಸಲು ಕಸರತ್ತು ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ.

-ವಿವೇಕಾನಂದ ಎಚ್ ಕೆ., ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ