ಆರೋಗ್ಯ ಜಾಗೃತಿಗಾಗಿ ‘ವಿಶ್ವ ಹೃದಯ ದಿನ'
‘ಹೃದಯ’ ವೆನ್ನುವುದು ಅತ್ಯಂತ ಅಮೂಲ್ಯವಾದ ಒಂದು ಅಂಗ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ದೇಹದಲ್ಲಿ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಹೃದಯವೆಂದಲ್ಲ, ನಮ್ಮ ಐದು ಬೆರಳುಗಳು ಸರಿಯಾಗಿದ್ದರೆ ಮಾತ್ರ ಒಂದು ಮುಷ್ಟಿಯಲ್ಲವೇ? ಹಾಗೆಯೇ ಎಲ್ಲಾ ಅಂಗಗಳೂ ಸರಿಯಾಗಿರಲೇ ಬೇಕು. ಈ ಪುಟ್ಟ ಹೃದಯ ನಮ್ಮ ಎಡಕೈ ಮುಷ್ಟಿ ಗಾತ್ರವಂತೆ. ಹೃದಯದ ಲಬ್-ಡಬ್ ಲ್ಲಿ ಎಲ್ಲವೂ ಅಡಗಿದೆ.
ಒಂದು ಅಂದಾಜಿನ ಪ್ರಕಾರ ೧೭.೯ದಶಲಕ್ಷ ಜನ ಪ್ರತಿವರ್ಷ ವಿಶ್ವದಲ್ಲಿ ಹೃದಯ ಕಾಯಿಲೆಯಿಂದ ಮರಣಿಸುತ್ತಾರಂತೆ. ಅದರಲ್ಲಿ ೮೦% ಹೃದಯಾಘಾತದ ಸಾವು. ’ಜಾತಸ್ಯ ಮರಣಂ ಧ್ರುವಂ’ ಹೌದು ‘ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ’ ಹುಟ್ಟಿದವ ಒಂದು ದಿನ ಸಾಯಲೇಬೇಕು. ಹಾಗೆಂದು ಅಕಾಲ ಮರಣ ಬಾರದಂತೆ ಜಾಗ್ರತೆ ಮತ್ತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ. ಹಾಗಾದರೆ ಏನು? ಹೇಗೆ? ಯಾವ ರೀತಿ ಜಾಗ್ರತೆ ಮತ್ತು ಜಾಗೃತಿ ಮೂಡಿಸೋಣ?
‘ವಿಶ್ವ ಹೃದಯ ದಿನ’ ವನ್ನು ಈ ದಿಸೆಯಲ್ಲಿಯೇ ಹುಟ್ಟು ಹಾಕಲಾಯಿತು. ಪ್ರತಿವರ್ಷ ಸಪ್ಟಂಬರ ೨೯ನ್ನು ‘ವಿಶ್ವ ಹೃದಯದಿನ’ ವೆಂದು ಆಚರಿಸಲಾಗುತ್ತಿದೆ. ಒಂದು ದಿನ ಜಾಗೃತಿ ಮೂಡಿಸಿದರೆ ಸಾಕೆ?
ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು: ತಂಬಾಕು ಉತ್ಪನ್ನಗಳನ್ನು ತಿನ್ನದೇ ಇರುವುದು. ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಇಲಾಖೆ, ಶಾಲಾ ಕಾಲೇಜ್, ಸ್ವಯಂ ಸೇವಾ ಸಂಸ್ಥೆಗಳು, ಬೀದಿನಾಟಕಗಳನ್ನು ಪ್ರದರ್ಶಿಸುವುದು, ಆರೋಗ್ಯ ಮಾಹಿತಿಗಳ ಮೂಲಕ ಜನಜಾಗೃತಿ ಮೂಡಿಸುವುದು, ದೂರದರ್ಶನ, ರೇಡಿಯೋಗಳ ಮೂಲಕ ನಾಟಕ, ಪ್ರಹಸನ, ಎಚ್ಚರಿಕೆಯ ಸಂದೇಶಗಳು ಮುಂತಾದವುಗಳ ಮೂಲಕ ಪ್ರಚಾರ ಮಾಡಬಹುದು. ಶಾಲಾಕಾಲೇಜುಗಳಲ್ಲಿ ಈ ಬಗ್ಗೆ ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಿ ಮಾಹಿತಿ ನೀಡಬಹುದು. ಹೃದಯಾಘಾತವಾದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅನಾರೋಗ್ಯಕರ ಅಭ್ಯಾಸಗಳ ಬಗ್ಗೆ ಪ್ರಹಸನಗಳು,ಮೂಕಾಭಿನಯ ಪ್ರದರ್ಶಿಸಬಹುದು. ಸಣ್ಣ ಮಗುವಾಗಿರುವಾಗಲೇ ಹೃದಯದ ತೊಂದರೆಗಳ ಬಗ್ಗೆ ವೈದ್ಯರಲ್ಲಿ ಕೇಳಿ ಮಾಹಿತಿ ಪಡೆಬಹುದು. ಅಂಗನವಾಡಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ವೈದ್ಯಕೀಯ ತಪಾಸಣೆ ವೇಳೆ, ಶಿಕ್ಷಕರು ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳನ್ನು ಪಟ್ಟಿ ಮಾಡಿಟ್ಟು ಹೇಳಬೇಕು. ಆಗ ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಹೃದಯದಲ್ಲಿ ತೂತು ಮುಂತಾದ ತೊಂದರೆಗಳು ತಿಳಿದರೆ, ಮಗುವಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುವ ಸೌಲಭ್ಯ ಸಹ ಈಗ ಇದೆ.
ಅಂಗಡಿಗಳಲ್ಲಿ ನೇತುಹಾಕಿರುವ ಪಾನ್ ಪರಾಗ್, ಸಿಗರೇಟ್, ಬೀಡಿ ತಂಬಾಕು ಸೇವನೆ, ಜೊತೆಗೆ ಚುಟ್ಟಾ, ನಶ್ಯ ಇತ್ಯಾದಿಗಳು, ಮಾದಕವಸ್ತುಗಳ ಸೇವನೆಗಳಿಂದ ಹೃದಯಕ್ಕೆ, ಶ್ವಾಸಕೋಶಕ್ಕೆ, ಶರೀರದ ನರ ಅಂಗಾಂಶಗಳಿಗೆ, ಮಿದುಳಿಗೆ ಅಪಾರ ಹಾನಿ ಉಂಟಾಗುತ್ತದೆ ಎಂದು ಮಾಹಿತಿ ನೀಡುವ ಕೆಲಸವಾಗಬೇಕು. ಇನ್ನೊಂದು ಕುಡಿತದ ಚಟ, ಅಮಲು ಪದಾರ್ಥ ಸೇವನೆ. ಇದರಿಂದ ಶರೀರವಿಡೀ ದುರ್ಬಲವಾಗುತ್ತದೆ, ಹೃದಯದ ಕವಾಟಗಳ ಸಾಮರ್ಥ್ಯಕ್ಕೆ ಧಕ್ಕೆ ಯಾಗುತ್ತದೆ, ರಕ್ತ ನಾಳಗಳು ಹಾಳಾಗುತ್ತವೆ, ರಕ್ತದೊತ್ತಡ ಏರಿಕೆ, ಸಕ್ಕರೆ ಮಟ್ಟದ ಏರುಪೇರು, ಬೊಜ್ಜು ಹೆಚ್ಚಾಗಬಾರದು. ಉನ್ಮಾದ, ಕೋಪ, ಸಿಟ್ಟು, ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಹೆದರಿಕೆ, ಬೆದರಿಕೆ, ಭಯ ಆದಾಗ ಘಾಸಿಯಾಗುತ್ತದೆ. ನೀರಿಗೆ ಬಿದ್ದಾಗ, ಹಾವು ಕಚ್ಚಿದಾಗ, ಬೆಂಕಿ ಅವಘಡ, ಎತ್ತರದಿಂದ ಬಿದ್ದಾಗ, ಅಪಘಾತಗಳಾದಾಗ ಜೀವ ಇದ್ದರೂ ಸಹ ಗಾಬರಿಗೊಳಗಾಗಿ ಹೃದಯಾಘಾತವಾಗುತ್ತದೆ. ಪರಿಸರಮಾಲಿನ್ಯ ಸಹ ಹೃದಯದ ಕಾರ್ಯ ಕ್ಷಮತೆಯನ್ನು ಕುಗ್ಗಿಸುತ್ತದೆ. ಧ್ಯಾನ, ಯೋಗ, ವ್ಯಾಯಾಮ, ವೇಗದ ನಡಿಗೆ, ಚಟುವಟಿಕೆಯ ಜೀವನ, ಪೋಷಕಾಂಶದ ಆಹಾರ ಸೇವನೆ, ಉಲ್ಲಾಸದ ಮನಸ್ಸು ಜಾಗ್ರತೆ, ಜಾಗೃತಿ ಮೂಡಿಸುವ ಮೂಲಕ ಮಾಹಿತಿ ನೀಡಬೇಕು.
ಅಂಗಾಂಗ ದಾನದ ಬಗ್ಗೆ ತಿಳುವಳಿಕೆ ನೀಡಿ,’ತಾನು ಅಳಿದರೂ ತನ್ನ ಹೃದಯ ಬೇರೊಬ್ಬನಲ್ಲಿ ಮಿಡಿಯುತ್ತದೆ’ ಎಂದು ಹೇಳಬಹುದು. ದಯೆ, ಅಂತಃಕರಣದ ಬಗ್ಗೆಯೂ ತಿಳಿಸಬಹುದು. ಬದಲಿ ಹೃದಯ ಕಸಿ ಬಗ್ಗೆ ಮಾಹಿತಿ ನೀಡಬಹುದು. ದಾಂಪತ್ಯದ ಬಿರುಕು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಶಾಂತಿ, ಉಲ್ಲಾಸ, ನೆಮ್ಮದಿ, ಸಹಕಾರ, ಸಂಗೀತ ನೃತ್ಯ, ಮನರಂಜನೆಯಿಂದ ಹೃದಯ ಆರೋಗ್ಯವಾಗಿರುತ್ತದೆ. ‘ರೈಲು ಹೋದ ಮೇಲೆ ಟಿಕೇಟು ತೆಗೆದರೆ ಪ್ರಯೋಜನ ವಿಲ್ಲ, ಹಾಗೆಯೆ ಉಸಿರು ನಿಲ್ಲುವ ಮೊದಲೇ ಜಾಗೃತಿ ಮೂಡಿಸಬೇಕು.’
ನಮ್ಮ ಆರೋಗ್ಯ, ನಮ್ಮ ಪುಟ್ಟ ಹೃದಯದ ಕಾಳಜಿಯ ಬಗ್ಗೆ ನಾವೇ ಯೋಜನೆಗಳನ್ನು ಹಾಕಿಕೊಂಡು ಜೋಪಾನ ಮಾಡೋಣ. ನಮ್ಮ ಸುತ್ತಲಿನವರ ಬಗ್ಗೆ ಯೂ ಜಾಗ್ರತೆ ವಹಿಸೋಣ.
*ಸದಯಂ ಹೃದಯಂ ಯಸ್ಯ ಭಾಷಿತಂ ಸತ್ಯಭಾಷಿತಂ/*
*ಕಾಯ:ಪರಹಿತೇ ಯಸ್ಯ* *ತಸ್ಯ ದೇವತ್ವಮುಚ್ಯತೇ//*
ಯಾರ ಹೃದಯವು ದಯೆಯಿಂದ ಕೂಡಿರುವುದೋ,ಯಾರ ಮಾತು ಸತ್ಯದಿಂದ ಕೂಡಿರುವುದೋ, ಯಾರ ದೇಹವು ಇತರರಿಗಾಗಿ, ಇತರರ ಒಳಿತಿಗಾಗಿ ಇರುವುದೋ ಅವರನ್ನು ಹೃದಯವಂತರು, ದೇವಮಾನವರು ಎನ್ನಬಹುದು.
ಹೃದಯಹೀನರಾಗದೆ, ಹೃದಯವಂತರಾಗೋಣ, ದೀರ್ಘಾಯುಷ್ಯವಂತರಾಗಿ, ಮಾನವತೆಯ ಪ್ರತಿರೂಪವಾಗಿ ಬಾಳಿ ಬದುಕೋಣ.
-ರತ್ನಾ ಕೆ.ಭಟ್, ತಲಂಜೇರಿ
(ಶ್ಲೋಕ: ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ