ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮ ಮತ್ತು ಮನಸ್ಥಿತಿ

ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮ ಮತ್ತು ಮನಸ್ಥಿತಿ

ವಿಶ್ವಕ್ಕೆ ಆವರಿಸಿದ ಮಹಾಮಾರಿ ಕೊರೋನಾ ಒಂದೆಡೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳು. ಮಹಾಮಾರಿ  ಪ್ರವೇಶ ಆದ ದಿನದಿಂದ ಮೀಡಿಯಾ (ಮಾಧ್ಯಮ) ಗಳಲ್ಲಿ ಬರುವಂಥ ಸಂದೇಶಗಳು, ಮಾಹಿತಿಗಳು ಒಂದಷ್ಟು ಒಳ್ಳೆಯದನ್ನು , ಒಂದಷ್ಟು ಕೆಟ್ಟದನ್ನು ಮನುಷ್ಯನ ಆರೋಗ್ಯದ ಮೇಲೆ, ಮನಸ್ಥಿತಿಯ ಮೇಲೆ ಬೀರಿದೆ ಎಂಬುದು ನಗ್ನಸತ್ಯ ವಿಚಾರ. ಮಾಧ್ಯಮಗಳ ಕುರಿತಾಗಿ ಹೇಳಹೊರಟರೆ ದೂರದರ್ಶನ, ರೇಡಿಯೋ, ಮೊಬೈಲ್ ಅದರಲ್ಲಿ ಹರಿದಾಡುವ ವಾಟ್ಸಾಪ್ ಸಂದೇಶಗಳು, ಫೇಸ್ಬುಕ್ ಮಾಹಿತಿಗಳು, ಹಾಗೆ ಒಬ್ಬರಿಗೊಬ್ಬರು ಮೊಬೈಲ್ ನಲ್ಲಿ ಮಾತನಾಡುವ ವಿಷಯಗಳು, ನಿಯತಕಾಲಿಕೆಗಳು, ಇನ್ನೊಂದಿಷ್ಟು ಪತ್ರಿಕೆಗಳು.

ನಿಯತಕಾಲಿಕೆಗಳಲ್ಲಿ ಪ್ರತಿನಿತ್ಯದ ಆಗುಹೋಗುಗಳ ವಿಶ್ವವ್ಯಾಪಿ ವಿಚಾರಗಳನ್ನು ನಾವು ತಿಳಿಯುತ್ತೇವೆ. ಇದರಲ್ಲಿ ಬರೆದಿರುವ ಮಾಹಿತಿ ಸತ್ಯವೋ, ಮಿಥ್ಯವೋ ಎಂಬ ವಿವೇಚನೆ ನಮಗಿರುವುದಿಲ್ಲ. ಇಂದು ಓದಿದ ವಿಷಯದ ಬಗ್ಗೆ ಮರುದಿನ ಬರುವುದು ಎಷ್ಟೋ ಸಲ ಓದಿದ್ದು ಇದೆ, "ನಿನ್ನೆಯ ಹೇಳಿಕೆ ಕಣ್ತಪ್ಪಿನಿಂದ ತಪ್ಪಾಗಿದ್ದು, ಆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ" ಎಂಬುದಾಗಿ ನಿನ್ನೆ ಓದಿ, ಯಾರ ಮೇಲೆ ಏನು ಪರಿಣಾಮ ಆಗಿದೆ ಎಂಬ ನಾಗರಿಕ ಪ್ರಜ್ಞೆ ಸಹ ಹೇಳಿದವರಿಗೆ ಅಥವಾ ಬರೆದವರಿಗಿಲ್ಲ. ಅದನ್ನು ಓದಿ ಮನಸ್ಸು ಹಿಡಿತ ತಪ್ಪಿ, ಅನಾರೋಗ್ಯ ಅಥವಾ ಎದೆಯೊಡೆದು ಸತ್ತರೆ ಯಾರು ಹೊಣೆ?

ವಾಟ್ಸಾಪ್ ಸಂದೇಶಗಳು ಈಗಂತೂ ಹೆಚ್ಚಿನವರ ಮನಸ್ಥಿತಿಯನ್ನೂ ಹಾಳುಮಾಡಿದೆ. ಅಲ್ಲಿ ಸತ್ತರು, ಇಲ್ಲಿ ವೆಂಟಿಲೇಟರ್ ಕೊರತೆ, ಸಾವಿರ ಸಾವಿರ ಸಂಖ್ಯೆಯಲ್ಲಿ ಸಾವು ನೋವುಗಳ ಲೆಕ್ಕ ಒಂದೆಡೆ ಓದುವಾಗಲೇ ಎದೆ *ಧಸಕ್* ಹೇಳಬಹುದು ದುರ್ಬಲ ಹೃದಯದವರಿಗೆ.

ಜ್ಯೋತಿಷಿಗಳ ಸಮಯ ಸಾಧಕ ಹೇಳಿಕೆಗಳು ಜನಸಾಮಾನ್ಯರ ದಿಕ್ಕು ತಪ್ಪಿಸಿ, ಇದ್ದದ್ದನ್ನೂ ಕಳಕೊಳ್ಳುವ ಹಾಗೆ ಮಾಡುತ್ತದೆ. ಗಟ್ಟಿ ಮನಸ್ಥಿತಿ ಇದ್ದವರು, ಸ್ಥಿತಪ್ರಜ್ಞರಿಗೆ ಏನೂ ಆಗದು. ದುರ್ಬಲರು ಬೇಗ ಬಲಿಯಾಗುವ ಸಾಧ್ಯತೆಯಿದೆ. ನಿನ್ನೆ ತಾನೆ ನಡೆದ ಒಂದು ಘಟನೆ ಇಲ್ಲಿಗೆ ಸೂಕ್ತ ಅನ್ನಿಸ್ತಿದೆ 'ನನ್ನ ಒಟ್ಟಿಗೆ ಕರ್ತವ್ಯದಲ್ಲಿದ್ದ ಶಿಕ್ಷಕರೊಬ್ಬರು ಕೋವಿಡ್ ನಿಂದ ಮೃತರಾದರು, ಅಂತ್ಯ ಸಂಸ್ಕಾರ ನಡೆಸಲಾಯಿತು 'ಬಹಳ ಪ್ರತಿಭಾವಂತರು, ಹಾಡುಗಾರರು. ನನಗೋ ದುಃಖ ತಡೆಯಲಾರದೇ, ಮನಸ್ಸು ಹಿಂಡಿತು. ಅವರ ಪತ್ನಿ, ಮಗು ಕಣ್ಣೆದುರು ಬಂದರು. ಸ್ವಲ್ಪ ಹೊತ್ತಾಗುವಾಗ ನನಗೊಂದು ಫೋನ್ ಕಾಲ್ "ಟೀಚರೇ ಅದು ಅವರಲ್ಲ, ಅವರ ಹೆಸರಿನ ಹಾಗೆ ಇರುವ ಇನ್ನೊಬ್ಬರು.' ಏನು ಹೇಳಬೇಕು ಇದಕ್ಕೆ, ಈ ಎಡವಟ್ಟಿಗೆ?

ಅಷ್ಟು ಹೊತ್ತಿನ ನನ್ನ ಮನಸ್ಥಿತಿ ಹೀಗೆಲ್ಲ ಆಗಿರುವಾಗ, ಅವರ, ಮನೆಯವರ, ಬಂಧುಗಳ ಸ್ಥಿತಿ ಏನಾಗಿರಬೇಡ? ಪಾಪ! ಅವರೇ ವೀಡಿಯೋ ಮಾಡಿ ಎಲ್ಲರಿಗೂ *ಬದುಕಿದ್ದೇನೆ* ಎಂದು ಕಳುಹಿಸಿದರು.

ವಾಟ್ಸಾಪ್, ಫೇಸ್ಬುಕ್ ಎರಡರಲ್ಲೂ ರಾಜಕೀಯ ವಿಷಯಗಳ ಹ್ಯೊಕೈ ಓದುತ್ತೇವೆ.ಇದೂ ಒಂದು ರೀತಿಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಆಯಾಯ ಪಕ್ಷದವರಿಗೆ ರಾಗ-ದ್ವೇಷಗಳಿಗೆ ಕಾರಣವಾಗಬಹುದು. ಇನ್ನು ದೂರದರ್ಶನ ವಾಹಿನಿಗಳತ್ತ ಬಂದರೆ, ಅಯ್ಯೋ ಭಗವಂತ! ಹೇಳಿ ಪ್ರಯೋಜನವಿಲ್ಲ. ಒಂದೊಂದು ವಾಹಿನಿಯಲ್ಲಿ ಒಂದೊಂದು ರೀತಿಯ ಮಾಹಿತಿಗಳು. ಪ್ರಸ್ತುತ ಆಗುತ್ತಿರುವ *ಮೋಸ, ವಂಚನೆ, ಭೃಷ್ಟಾಚಾರ, ಅನಾಚಾರ, * ಕೋಟಿ ಕೋಟಿ ಸಂಖ್ಯೆಯಲ್ಲಿ. ನೋಡ್ತಾ, ಕೇಳ್ತಾ ಇದ್ದೇವೆ. ಇವರು ಮನುಷ್ಯರಾ, ನರರಾಕ್ಷಸರಾ ಎಂಬುದೇ ತಿಳಿಯುತ್ತಿಲ್ಲ. ಬಡವರ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ ಎಂದು ಮನಸ್ಸು ಚೀರಿ ಚೀರಿ ಹೇಳುತ್ತಿದೆ. ಶವಗಳನ್ನು *ಗುಜರಿ* ತುಂಬಿಸಿದ ಕಸದ ಹಾಗೆ ಲಾರಿಗಳಲ್ಲಿ ತುಂಬಿಸುವುದು, ಹೊಂಡ ತೆಗೆದು ಬಿಸಾಡುವ ದೃಶ್ಯ, ಹೆಣಗಳನ್ನು ನದಿಗಳಲ್ಲಿ ತೇಲಿಸಿ ಬಿಡುವುದು, ನರಿನಾಯಿ ಅರೆಬೆಂದ ಶವಗಳನ್ನು ಎಳೆದಾಡುವುದು ಇದನ್ನೆಲ್ಲಾ ನೋಡಿದರೆ ಎಂಥ ಆರೋಗ್ಯವಂತನೂ ಒಂದು ಕ್ಷಣ ವಿಚಲಿತನಾಗಬಲ್ಲ.ಆಗ ಅವನ ಮನಸ್ಥಿತಿ ಹೇಗಿರಬಹುದು?

ವೈರಾಣು ಬಂದಾಗಿದೆ, ಮುಂಜಾಗರೂಕತೆ, ಏನೆಲ್ಲಾ ಮಾಡಬಹುದು, ಎಷ್ಟು ಜನ ಗುಣಹೊಂದಿದ್ದಾರೆ, ಸರಕಾರ, ಖಾಸಗಿ ಸಂಸ್ಥೆಗಳು, ಜನಸಾಮಾನ್ಯರು ಒಟ್ಟಾಗಿ ಏನು ಮಾಡಬಹುದು? ಕೈಗೊಂಡ ಕಾರ್ಯಕ್ರಮಗಳು, ವೈದ್ಯರ ಸಲಹೆಗಳು, ವಹಿಸಬೇಕಾದ ಎಚ್ಚರಿಕೆಗಳು, ಇದನ್ನೆಲ್ಲಾ ಪದೇಪದೇ ತೋರಿಸಿ, ಜನರಲ್ಲಿ ಆತ್ಮವಿಶ್ವಾಸ, ಧೈರ್ಯ, ದೃಢತೆ, ಉತ್ತಮ ಮನಸ್ಥಿತಿ ಮೂಡಿಸುವ ಕೆಲಸವನ್ನು ಮಾಡಿದ್ದರೆ, ಸಾಯುವ ಸಂಖ್ಯೆ ಕಡಿಮೆಯಾಗಬಹುದಿತ್ತು.*ಕೋವಿಡ್ ಪಾಸಿಟಿವ್* ಬಂದವರು *ಆತ್ಮಹತ್ಯೆ* ಮಾಡಿಕೊಳ್ಳುವಷ್ಟೂ ಮನಸ್ಥಿತಿ ದುರ್ಬಲವಾಗಲು ಕೆಲವು ಮೀಡಿಯಾಗಳೇ ಒಂದು ರೀತಿಯಲ್ಲಿ ಕಾರಣವೆಂದು ಹೇಳಬಲ್ಲೆ.

ಇನ್ನೊಂದೆಡೆ ಜನಸಾಮಾನ್ಯರಿಗೆ ಆಡಳಿತದ ಅರಿವಿಲ್ಲ, ಸತ್ಯಾಂಶಗಳ ಆಗರವನ್ನೇ ಮೀಡಿಯಾಗಳು ಹೊರಗೆಳೆದಾಗ, ಛೀ, ಥೂ, ಇಷ್ಟೂ ಹೊಲಸೇ! ಅನ್ನಿಸದೇ ಇರಲಾರದು. ಆಗಲೂ ಮನಸ್ಸು ಹೊಯ್ದಾಟ ಮಾಡುವುದು. ಹೀಗೂ ಆಯಿತೇ? ಎಂದು ಚಿಂತಿಸುವುದು.

ಸ್ವಲ್ಪದಿನಗಳ ಹಿಂದೆ ತಾನೇ ಶಿಕ್ಷಕರ ವೃಂದ ಚುನಾವಣಾ ಕರ್ತವ್ಯಕ್ಕೆ ಹೋದವರು ಮರಣ ಹೊಂದಿದ್ದು, ಇನ್ನೂ ಜೀವನ್ಮರಣ ಸ್ಥಿತಿಯಲ್ಲಿರುವವರ ಕುರಿತಾಗಿ ವಾಹಿನಿಯಲ್ಲಿ ನೋಡಿದೆ. ನಾನೂ ಓರ್ವ ಅಧ್ಯಾಪಿಕೆಯಾಗಿ ನಿವೃತ್ತಿ ಆದವಳು, ಇದನ್ನು ನೋಡುವಾಗ ಮನಸ್ಸು ಮಮ್ಮಲ ಮರುಗಿತು. ಹೀಗೆ ಎಷ್ಟು ಜನರ ಮನಸ್ಸು ಮುದುಡಿರಬಹುದು? ವಾಹಿನಿಗಳು ಎಳೆಎಳೆಯಾಗಿ ಬಿಡಿಸಲಿ, ಆದರೆ ತೋರಿಸಿದ್ದನ್ನೇ ತೋರಿಸಿ ತಲೆಚಿಟ್ಟು ಹಿಡಿಸುವುದರಿಂದ ಮನಸ್ಥಿತಿ ಮತ್ತೂ ಹಾಳಾಗಬಹುದು. ಆಗ ನೋಡುವುದೇ ಬೇಡವೆಂದು ಬಂದ್ ಮಾಡಬೇಕಷ್ಟೆ.

ಪ್ರಾಕೃತಿಕ ವಿಕೋಪಗಳ ಬಗ್ಗೆ ಬರೆದಷ್ಟೂ ಮುಗಿಯದು.ಮಳೆ ಎಡೆಬಿಡದೆ ಸುರಿಯಿತು, ಗುಡ್ಡ ಜರಿದು ಮಣ್ಣಿನಡಿ ಜನರು ‌ಸಿಲುಕಿ ಹಾಕಿಕೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ, ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ,  ಕಾಲುಜಾರಿ ಬಿದ್ದಿದ್ದಾರೆ ಎಂಬ ವಾರ್ತೆಗಳು. ಜೋರಾಗಿ ಬೀಸಿದ ಗಾಳಿಗೆ ಬೃಹದಾಕಾರದ ಮರ ಉರುಳಿತು, ವಾಹನಗಳ ಮೇಲೆ, ಮನುಷ್ಯರ, ಕಟ್ಟಡಗಳ ಮೇಲೆ, ತೋಟ ಸರ್ವನಾಶವಾಯಿತು  ಇದೇ ಸುದ್ಧಿ ಸಮಾಚಾರಗಳು.ಎಲ್ಲೆಲ್ಲಿ ಯಾರೆಲ್ಲ ಸಹಾಯ ಹಸ್ತ ಚಾಚಿದ್ದಾರೆ ಅದನ್ನು ಹೇಳಲಿ, ಆ ಬಗ್ಗೆ ಚಕಾರವಿಲ್ಲ.

ಇನ್ನಾದರೂ ಮನುಷ್ಯನ ಮನಸ್ಥಿತಿ ಕೆಡದಂತೆ ಮೀಡಿಯಾಗಳು ಕಾರ್ಯ ಪ್ರವೃತ್ತರಾಗಿ, ಜನಮೆಚ್ಚುಗೆಗಳಿಸಲಿ ಎಂಬ ಹಾರೈಕೆ. ಸುದ್ದಿಯನ್ನು ಯಾವುದೇ ಆಗಿರಲಿ ತೋರಿಸಬೇಕಾದದ್ದು ದೃಶ್ಯ ಮಾಧ್ಯಮಗಳ ಕೆಲಸ. ಆದರೆ ಇಡೀ ದಿನ ಪದೇ ಪದೇ ಒಂದೇ ಸಂಗತಿಯನ್ನು ತಿಳಿಸುತ್ತಿದ್ದರೆ ನೋಡುಗನ ಮನಸ್ಥಿತಿ ಏನಾಗಬಹುದು?  ನಮ್ಮ ಮನಸ್ಥಿತಿಯನ್ನು ನಾವೇ ದೃಢಗೊಳಿಸುವ ಅಗತ್ಯ ಈಗ ಬಹಳ ಇದೆ. ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದು ಕೆಮ್ಮು, ಜ್ವರ, ತಲೆನೋವು, ಮೈಕೈನೋವು, ಬಂದರೂ ಹೆದರುವ ಮನಸ್ಥಿತಿಯನ್ನು ಕೆಲವು ಮೀಡಿಯಾಗಳು ತಂದಿಟ್ಟಿವೆ. ಅದರೆಡೆಯಲ್ಲಿ ಇತ್ತೀಚೆಗೆ *ಬ್ಲಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್* ಅಂಥ ಹೆದರಿಸಿ ಕೊಲ್ಲುತ್ತಿವೆ. ಈಗಂತೂ, ೩ನೇ ಅಲೆ ಮಕ್ಕಳಿಗೆ ಅಂಥ ಹೇಳಿ ಹೇಳಿ ,ಹೆತ್ತವರ ನೆಮ್ಮದಿಯೇ ಹಾಳಾಗಿದೆ. ಯಾವುದಕ್ಕೂ ನಮ್ಮ ಜಾಗೃತೆ ಮಾಡಿಕೊಂಡು, ನಮ್ಮ ಕುಟುಂಬ ವೈದ್ಯರ ಸಲಹೆಯಂತೆ, ಮೀಡಿಯಾಗಳ ಅನಾವಶ್ಯಕ ಮಾಹಿತಿಗಳಿಗೆ ಮನಸ್ಥಿತಿ ಕೆಡಿಸಿಕೊಳ್ಳದೆ, ನಮ್ಮ ಪರಿಸರದವರಿಗೆ , ಬಂಧುಗಳಿಗೆ ಧೈರ್ಯ ಹೇಳುತ್ತಾ‌, ಸಾಂತ್ವನ ಹೇಳುತ್ತಾ, ಪರಸ್ಪರ ಚಿಂತನ-ಮಂಥನ ಮಾಡುತ್ತಾ, ನಮ್ಮ ಮನೋನಿಗ್ರಹದೊಂದಿಗೆ, ಮನಸ್ಥಿತಿ ಯನ್ನು ಸಮಸ್ಥಿತಿಯಲ್ಲಿಡುತ್ತಾ ಕೋವಿಡ್-19ರ ಮಧ್ಯೆ ಬದುಕು ಕಟ್ಟಿಕೊಳ್ಳೋಣ.

ಎಲ್ಲರಿಗೂ ಯಾವಾಗಲೂ ಆರೋಗ್ಯ ಭಾಗ್ಯ ಲಭಿಸಲಿ

ಸರ್ವೇ ಜನಾಃ ಸುಖಿನೋ ಭವಂತುಃ

ಸನ್ಮಂಗಲಾನಿ ಭವಂತು

ಓಂ ಶಾಂತಿಃ.  ಶಾಂತಿಃ  ಶಾಂತಿಃ

-ರತ್ನಾ ಕೆ.ಭಟ್ ತಲಂಜೇರಿ

ನಿವೃತ್ತ ಸರಕಾರಿ ಶಾಲಾ ಶಿಕ್ಷಕಿ, ದ.ಕನ್ನಡ, ಬಂಟ್ವಾಳ.

ಚಿತ್ರ ಕೃಪೆ: ಅಂತರ್ಜಾಲ ತಾಣ