ಆರ್ಟ್ ಆಫ್ ಸಕ್ಸಸ್

ಆರ್ಟ್ ಆಫ್ ಸಕ್ಸಸ್

ಪುಸ್ತಕದ ಲೇಖಕ/ಕವಿಯ ಹೆಸರು
ರಮೇಶ್ ಅರವಿಂದ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೨

ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ರಮೇಶ್ ಅವರ ಲೇಖನಿಯಿಂದ ಮೂಡಿಬಂದ 'ಆರ್ಟ್ ಆಫ್ ಸಕ್ಸಸ್' ಪುಸ್ತಕವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆಯವರು ಬಿಡುಗಡೆಗೊಳಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ೧೬೦ ಟಿಪ್ಸ್ ಗಳು ಈ ಪುಸ್ತಕದಲ್ಲಿ ಅಡಕವಾಗಿವೆ. 

ವೀರಲೋಕ ಪ್ರಕಾಶನದ ಪರವಾಗಿ ಮಾಲಕರಾದ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡದ್ದು ಹೀಗೆ "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ.

ಯುವ ಜನತೆ ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಓದಿಸಬೇಕಾದ ಜವಾಬ್ದಾರಿ ಕೂಡ ನಮ್ಮದು ಎನ್ನುವುದು ಅಷ್ಟೇ ಸತ್ಯ -ಅವರಿಗೆ ಓದಿನ ರುಚಿ ಹಚ್ಚಿ, ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶ ವೀರಲೋಕ ಬುಕ್ಸ್ ಹಿಂದಿದೆ. ಪ್ರಾಮಿಸ್, ನಾವು ರಾಜ್ಯದ ಕಟ್ಟಕಡೆಯ ಓದುಗನಿಗೆ ಪುಸ್ತಕ ತಲುಪಿಸುವ ಬಹುದೊಡ್ಡ ನೆಟ್ ವರ್ಕ್ ಹೊಂದಿದ್ದೇವೆ. ನಿಮ್ಮೂರು ಯಾವುದೇ ಇರಲಿ, ಅಲ್ಲಿಗೆ ಪುಸ್ತಕ ಮುಟ್ಟಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಬೆನ್ನ ಹಿಂದೆ ಈ ನಾಡಿನ ಅಸಂಖ್ಯಾತ ಲೇಖಕರ ಬಳಗವೇ ಇದೆ."

ವೀರಕಪುತ್ರ ಶ್ರೀನಿವಾಸ ಇವರು ತಮ್ಮ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ನಿರ್ದೇಶಕ ರಮೇಶ್ ಅರವಿಂದ್ ಅವರನ್ನೇ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ಜನರಲ್ಲಿ ಓದುವ ಸದಭಿರುಚಿ ಬೆಳೆಯಲಿದೆ ಎಂದು ಅವರ ನಂಬಿಕೆ. 

ಲೇಖಕರಾದ ರಮೇಶ್ ಅರವಿಂದ್ ಅವರು ತಮ್ಮ ಮಾತಿನಲ್ಲಿ "ಗೆಲುವಿಗೆ ಇಂಥದ್ದೇ ಅಂತ ಸೂತ್ರವಿದೆಯಾ? ಹಲವರು ಹಲವು ಬಾರಿ ನನ್ನನ್ನು ಕೇಳಿದ ಪ್ರಶ್ನೆಯಿದು. ನನ್ನನ್ನು ನಾನೇ ಕೇಳಿಕೊಂಡ ಪ್ರಶ್ನೆ ಕೂಡ. ಹೌದು ನಾನೀಗ ನಿಮ್ಮನ್ನು ಕೇಳುತ್ತೇನೆ. ಈ ಗೆಲುವಿಗೆ ಸೂತ್ರವಿದೆಯಾ?

ಒಬ್ಬೊಬ್ಬ ಸಾಧಕನ ಹಿಂದೆಯೂ ಒಂದೊಂದು ಸಾಧನೆಯ ಕಥೆಯಿದೆ. ದಾರಿ ಬೇರೆ ಬೇರೆಯಾದರೂ, ಅವರು ತಲುಪಿದ್ದು ಅದೇ ಸಾಧನೆಯನ್ನು. ಹಾಗಾಗಿ ದಾರಿ ಎನ್ನುವುದೇ ಅವರಿಗೆ ಸೂತ್ರ ಯಾಕಿರಬಾರದು? ಅದನ್ನೇ ನಾನು ಸೂತ್ರ ಅಂದುಕೊಳ್ಳುತ್ತೇನೆ. ಹಾಗಾದರೆ, ಈ ಸೂತ್ರ ಬರೆದವರು ಯಾರು? ಈ ಹುಡುಕಾಟದಲ್ಲಿ ಸಿಕ್ಕ ಮುತ್ತಗಳೇ ಇಂದು ನಿಮ್ಮೆದುರು 'ಆರ್ಟ್ ಆಫ್ ಸಕ್ಸಸ್' ಆಗಿ ಕುಳಿತಿವೆ. ಇಲ್ಲಿರುವ ಬರಹಗಳು ನಮ್ಮ ಅಪ್ಪ ಅಮ್ಮ ಹೇಳಿಕೊಟ್ಟದ್ದು, ನಮ್ಮ ಅಜ್ಜಿ ಮನೆಯಲ್ಲಿ ಮಾವ, ಅತ್ತಿಗೆ, ಕಸಿನ್ಸೂ ಇತರರು ಹಂಚಿಕೊಂಡ ಕಥೆಗಳು, ಸ್ಕೂಲ್ ನಲ್ಲಿ ಟೀಚರ್ ಹೇಳಿಕೊಟ್ಟದ್ದು. ಲೈಬ್ರೆರಿ ಬುಕ್ ಗಳಿಂದ ಕಲಿತದ್ದು. ಫ್ರೆಂಡ್ಸ್ ಜೊತೆ ಹರಟೆಯಲ್ಲಿ ಸಿಕ್ಕಂತ ವಿಷಯಗಳು ಹಾಗೂ ಟಿವಿ, ನ್ಯೂಸ್ ಪೇಪರ್ ಮತ್ತು ಮಾಧ್ಯಮಗಳ ಮೂಲಕ ಗ್ರಹಿಸಿದಂತಹ ಸುದ್ದಿಗಳು." ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಮೇಶ್ ಅರವಿಂದ್ ಈ ಪುಸ್ತಕದಲ್ಲಿ ಹಂಚಿಕೊಂಡ ಒಂದೆರಡು ಟಿಪ್ಸ್ ನೋಡುವ…

"ಜೀವನದಲ್ಲಿ ಸಾಧನೆಯ ಗರಿಯನ್ನು ಮುಡಿಗೇರಿಸಿ ಕೊಳ್ಳುವುದಕ್ಕೆ ಟ್ಯಾಲೆಂಟ್, ಧೈರ್ಯ, ಛಲ, ಹಠ, ಅದೃಷ್ಟ, ಪರಿಶ್ರಮ ಹೀಗೆ ಸಾಕಷ್ಟು ಗುಣಗಳು ಇರಬೇಕು. ಎಲ್ಲದಕ್ಕಿಂತ ತಾಳ್ಮೆ ಮುಖ್ಯ. ಕೆಲವರಿಗೆ ಗೆಲುವು ಬೇಗ ಸಿಕ್ಕು ಬಿಡುತ್ತದೆ. ಕೆಲವರಿಗೆ ತಡವಾಗಿ ಸಿಗುತ್ತದೆ. ಇನ್ನೂ ಕೆಲವರಿಗೆ ಹಂತ ಹಂತದಲ್ಲಿ ಸಿಗುತ್ತದೆ. ಹಾಗಾಗಿ ತಾಳ್ಮೆಯಿಂದ ಕೆಲವನ್ನು ಸ್ವೀಕರಿಸೋಣ."

" ಒಂದು ಹನಿಯನ್ನು ಮುತ್ತಾಗಿ ಬದಲಿಸೋ ಮ್ಯಾಜಿಕ್ ನಮಗೆಲ್ಲಾ ಗೊತ್ತಿದ್ದರೆ ನಾವೆಲ್ಲರೂ ಕೋಟ್ಯಾಧಿಪತಿಗಳು. ನಾವ್ಯಾರು ಅತ್ತಿಲ್ಲ? ಎಳ್ಳಷ್ಟೂ ಅತ್ತಿಲ್ಲ? ನೋವಿನ ಕಣ್ಣೀರು, ದುಃಖದ ಕಣ್ಣೀರು. ನಿಟ್ಟುಸಿರಿನ ಕಣ್ಣೀರು, ಆನಂದದ ಕಣ್ಣೀರು, ವಿರಹದ ಕಣ್ಣೀರು, ಬೀಳ್ಗೊಡುಗೆಯ ಕಣ್ಣೀರು. ಹೀಗೆ ಕಣ್ಣೀರಿಗೆ ನೂರಾರು ಕಾರಣಗಳು. ಹೃದಯವೇ ಒಂದು ಡ್ಯಾಂ ಆಗಿದ್ದರೆ, ಭಾವನೆಗಳು ತುಂಬಿದಾಗ ಕಣ್ಣುಗಳು ಓವರ್ ಫ್ಲೋ ಆಗುತ್ತಂತೆ. ಅದಕ್ಕೆ ಕಣ್ಣೀರು ಅಂದರೆ ಬೇಡದ ದೌರ್ಬಲ್ಯ ಅಲ್ಲ. ಅದು ಅವಶ್ಯಕ."

೯೬ ಪುಟಗಳ ಪುಟ್ಟ ಪುಸ್ತಕವನ್ನು ನೀವು ಎಲ್ಲಿಂದ ಬೇಕಾದರೂ ಓದಲು ಪ್ರಾರಂಭಿಸಬಹುದು. ಬಾಳಿನಲ್ಲಿರುವ ನೆಗೆಟಿವ್ ಅಂಶಗಳನ್ನು ನಿವಾರಿಸಿ ಅವುಗಳನ್ನು ಪಾಸಿಟಿವ್ ಆಗಿ ಪರಿವರ್ತಿಸುವ ಧೈರ್ಯ ನಿಮ್ಮಲ್ಲಿ ಖಂಡಿತಾ ಮೂಡುತ್ತದೆ. ಪುಸ್ತಕದ ಮುಖಪುಟ ಹಾಗೂ ಅದಕ್ಕೆ ಬಳಸಿದ ಪೇಪರ್ ಎರಡೂ ಬಹಳ ಸೊಗಸಾಗಿದೆ. ಈ ಪುಟ್ಟ ಪುಸ್ತಕ ನಿಮ್ಮ ಮನೆಯಲ್ಲಿ ಇರುವುದು ಖಂಡಿತಕ್ಕೂ ಅಪೇಕ್ಷಣೀಯ.