ಆರ್ಥಿಕತೆ ಚೇತರಿಕೆ

ಆರ್ಥಿಕತೆ ಚೇತರಿಕೆ

ಕೋವಿಡ್ ಸಂಕಷ್ಟದ ಪರಿಣಾಮ ಕಳೆದ ಎರಡು ವರ್ಷದಿಂದ ಬಹುತೇಕ ಎಲ್ಲ ಕ್ಷೇತ್ರಗಳು ನಲುಗಿದವು. ರಾಜ್ಯದ ಬೊಕ್ಕಸದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು ಎಂಬುದು ನಮಗೆ ಗೊತ್ತಿರುವಂಥದ್ದೇ. ಕರೋನಾ ಮೂರನೇ ಅಲೆ ಭಾಗಶಃ ತಗ್ಗಿ ಜನಜೀವನ ಸಮಾನ್ಯಗೊಂಡಿರುವುದರಿಂದ ಆರ್ಥಿಕತೆ ಹಳಿಗೆ ಮರಳುತ್ತಿರುವುದು ಸಮಾಧಾನಕರ ಬೆಳವಣಿಗೆ. ಕರ್ನಾಟಕ ನಿಗದಿತ ಗುರಿಗಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿರುವುದು ಇದಕ್ಕೆ ಸಾಕ್ಷಿ. ಪ್ರಸಕ್ತ ೨೦೨೧-೨೨ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಗುರಿ ಮೀರಿ ಅಂದಾಜು ೯೫೦೦ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ಆರ್ಥಿಕ ಶಿಸ್ತಿಗೆ ಒತ್ತು ನೀಡಿ ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ವಾಹನ ತೆರಿಗೆ ಹೊರತು ಪಡಿಸಿ, ಉಳಿದೆಲ್ಲ ಆದಾಯ ಮೂಲಗಳ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ. ಕರೋನಾ ಸಂಕಷ್ಟವನ್ನು ಮೀರಿ ರಾಜ್ಯದ ಆರ್ಥಿಕತೆ ಬೆಳವಣಿಗೆಯ ಹಾದಿಯತ್ತ ಕ್ರಮಿಸುತ್ತಿರುವುದು  ಶುಭ ಸೂಚನೆ ಎಂದೇ ಹೇಳಬಹುದು. 

ರಾಜ್ಯ ಸರ್ಕಾರ ಮಂಗಳವಾರ ಕೈಗಾರಿಕೆಗಳಿಗೆ ಸಂಬಂಧಿಸಿ ಮಹತ್ವದ ಘೋಷಣೆ ಮಾಡಿದೆ. ಏಕಗವಾಕ್ಷಿ ಪದ್ಧತಿಯಡಿ ಕೈಗಾರಿಕೆಗಳಿಗೆ ಶೀಘ್ರವೇ ಅನುಮತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಇರುವ ತೊಡಕುಗಳನ್ನು ನಿವಾರಿಸಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಘೋಷಿಸಿದ್ದಾರೆ. ಈ ಕ್ರಮ ಸರಿಯಾಗಿ ಅನುಷ್ಟಾನಕ್ಕೆ ಬರಲೇ ಬೇಕು. ಏಕೆಂದರೆ, ಬಂಡವಾಳ ಹೂಡಿಕೆ ಸಮಾವೇಶಗಳು ನಮ್ಮಲ್ಲಿ ಬಹು ಉತ್ಸಾಹದಿಂದ ನಡೆಯುತ್ತವೆ. 

ಸರ್ಕಾರದ ಆಶ್ವಾಸನೆಗಳನ್ನು ನಂಬಿ ಕಂಪೆನಿಗಳು ಒಡಂಬಡಿಕೆ ಮಾಡಿಕೊಳ್ಳುತ್ತವೆ. ಆದರೆ, ಅವು ಉದ್ಯಮ ಆರಂಭಿಸಲು ಮುಂದಾದಾಗ ಹಲವು ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ. ಮಂಜೂರಾತಿಗೆ ವಿಳಂಬ, ಭೂಮಿ ಸಿಗಬೇಕಾದರೆ ಅಲೆದಾಟ, ಸರ್ಕಾರಿ ಕಚೇರಿಗಳ ನಿಧಾನಗತಿ, ಅಧಿಕಾರಿಗಳು ನೀಡುವ ಸಬೂಬು ಇದರಿಂದ ರೋಸಿ ಹೋಗಿ ಎಷ್ಟೋ ಉದ್ಯಮಗಳು ಇತರ ರಾಜ್ಯಗಳತ್ತ ಮುಖ ಮಾಡುತ್ತವೆ.

ಈ ಕಹಿ ಸತ್ಯ ಸರ್ಕಾರಕ್ಕೆ ಗೊತ್ತೇ ಇದೆ. ಆದರೆ, ವ್ಯವಸ್ಥೆಯಲ್ಲಿನ ಜಡತ್ವ ಮತ್ತು ಲಂಚದ ಹಾವಳಿ ಸಂಪೂರ್ಣವಾಗಿ  ತೊಡೆದು ಹಾಕುವವರೆಗೂ ಸಮರ್ಪಕವಾದ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸುವುದು ಸುಲಭವಲ್ಲ. ಕೈಗಾರಿಕೋದ್ಯಮಿಗಳ ಸಮಸ್ಯೆಗಳಿಗೆ ಕಿವಿಯಾಗಿ, ತಕ್ಷಣ ಸ್ಪಂದಿಸುವುದು, ಉದ್ಯಮಗಳು ಇಲ್ಲಿನ ನೆಲದ ಕಾನೂನುಗಳಿಗೆ ಪೂರಕವಾಗಿ ನಡೆದುಕೊಂಡು ಸ್ಥಳೀಯರಿಗೆ ಕೆಲಸದಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಉತ್ಪಾದನೆಯಲ್ಲಿ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಸೇರಿ ಹಲವು ಸಂಗತಿಗಳಿಗೆ ಪ್ರಾಮುಖ್ಯತೆ ನೀಡಬೇಕು. ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕವಾಗಿ ಜಾರಿಗೆ ತಂದಲ್ಲಿ ಸಾಕಷ್ಟು ತೊಡಕುಗಳನ್ನು ನಿವಾರಿಸಬಹುದು. ಹಾಗಾಗಿ, ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿ ಮಾಡಿ, ಮೂಲ ಸೌಕರ್ಯಗಳನ್ನೂ ಹೆಚ್ಚಿಸಿದಲ್ಲಿ ಆರ್ಥಿಕ ಚೇತರಿಕೆಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೩೦-೦೩-೨೦೨೨ 

ಚಿತ್ರ ಕೃಪೆ: ಇಂಟರ್ನೆಟ್ ತಾಣ