ಆರ್ಥಿಕ ಹಿಂಜರಿತದ ಗಾಯಕ್ಕೆ ಉದ್ಯೋಗ ಕಡಿತದ ಬರೆ

ಆರ್ಥಿಕ ಹಿಂಜರಿತದ ಗಾಯಕ್ಕೆ ಉದ್ಯೋಗ ಕಡಿತದ ಬರೆ

ಸತತ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಭಾಧಿಸಿದ ಕೊರೋನಾ ಸಾಂಕ್ರಾಮಿಕ ಜಗತ್ತಿನ ಆರ್ಥಿಕತೆಯ ಮೇಲೆ ಬಲುದೊಡ್ಡ ಬರೆ ಎಳೆದಿದೆ. ಇದರ ನಡುವೆಯೇ ರಷ್ಯಾ-ಉಕ್ರೇನ್ ನಡುವಣ ಯುದ್ಧ ಗಾಯದ ಮೇಲೆ ಉಪ್ಪು ಸವರಿದಂತಾಗಿದ್ದು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಉದ್ಯೋಗ ಕಡಿತವೆಂಬುದು ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡುವಂತೆ ಮಾಡಿದೆ.

ಪ್ರತಿಯೊಂದು ರಾಷ್ಟ್ರಗಳೂ ಈಗ ತೀವ್ರ ತೆರನಾದ ಹಣದುಬ್ಬರ ಎದುರಿಸುತ್ತಿದ್ದು ಜನಸಾಮಾನ್ಯರ ಜೀವನ ತೀರಾ ದುಸ್ತರವೆನಿಸಿದೆ. ಅಮೇರಿಕ, ಬ್ರಿಟನ್, ಚೀನ ಆದಿಯಾಗಿ ವಿಶ್ವದ ಬಹುತೇಕ ದೇಶಗಳ ಆರ್ಥಿಕತೆ ಅಲುಗಾಡತೊಡಗಿದ್ದರೆ ಕೆಲವೊಂದು ದೇಶಗಳು ದಿವಾಳಿಯಾಗಿವೆ. ಮತ್ತೊಂದಿಷ್ಟು ದೇಶಗಳು ದಿವಾಳಿಯಂಚಿಗೆ ಬಂದು ನಿಂತಿವೆ. ಈ ಎಲ್ಲ ಆರ್ಥಿಕ ವಿಪ್ಲವಗಳನ್ನು ಗಮನಿಸುತ್ತಲೇ ಬಂದ ಬಲಾಢ್ಯ ರಾಷ್ಟ್ರಗಳು ಹಿನ್ನಡೆಯ ಹಾದಿಯಲ್ಲಿದ್ದ ತಮ್ಮ ಆರ್ಥಿಕತೆಗೆ ಒಂದಿಷ್ಟು ಟಾನಿಕ್ ನೀಡಲು ಕೆಲವೊಂದು ನಿಷ್ಟುರ ಕ್ರಮಗಳನ್ನು ಕೈಗೊಳ್ಳಲು ಮುಂದಾದವು. ಅಲ್ಲಿನ ಸೆಂಟ್ರಲ್ ಬ್ಯಾಂಕ್ ಗಳು ಪದೇ ಪದೆ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಹಿಂಜರಿತದ ಬಿರುಗಾಳಿಯಿಂದ ಪಾರಾಗುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆಯಾದರೂ ಈವರೆಗೆ ಅಂತಹ ಯಶಸ್ಸೇನೂ ಕಂಡಿಲ್ಲ. ಇನ್ನು ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಲ್ಲಂತೂ ಆರ್ಥಿಕತೆ ಹೊಯ್ದಾಟದ ಸ್ಥಿತಿಯಲ್ಲಿದ್ದು ಅಕ್ಷರಶಃ ತೂಗುಯ್ಯಾಲೆಯಲ್ಲಿದೆ.

ಈ ವರ್ಷದ ಆರಂಭದಿಂದೀಚೆಗೆ ಉದ್ಯೋಗ ಕಡಿತ ಪ್ರಕ್ರಿಯೆ ಬಿರುಸಾಗಿದ್ದು ಬಹುತೇಕ ಟೆಕ್ ಕಂಪೆನಿಗಳು ಮತ್ತು ಸಂಸ್ಥೆಗಳು ಆದ್ಯತೆಯ ಮತ್ತು ಅನಿವಾರ್ಯತೆಯ ಹುದ್ದೆಗಳನ್ನು ಹೊರತುಪಡಿಸಿದಂತೆ ಉಳಿದ ಹುದ್ದೆಗಳಲ್ಲಿ ಭಾರೀ ಕಡಿತವನ್ನು ಮಾಡುತ್ತಿವೆ. ೨೦೨೨ರ ಅಂತ್ಯಕ್ಕೆ ಟೆಕ್ ದಿಗ್ಗಜ ಕಂಪೆನಿಗಳು ೧.೫ ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆ ಕಳೆದ ಮೂರು ವಾರಗಳ ಅವಧಿಯಲ್ಲಿ ಇದು ದುಪ್ಪಟ್ಟಾಗಿದೆ. ಮುಂದಿನ ದಿನಗಳಲ್ಲಿ ತೀವ್ರವಾಗಿ ಕಾಡಬಹುದೆನ್ನಲಾಗಿರುವ ಆರ್ಥಿಕ ಹಿಂಜರಿತದಿಂದ ಪಾರಾಗಲು ಕಂಪೆನಿಗಳು ಈ ಹೆಜ್ಜೆ ಇರಿಸಿವೆಯಾದರೂ ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಬಲುದೊಡ್ದ ಸಾಂಕ್ರಾಮಿಕವಾಗಿ ಮಾರ್ಪಡುವುದರಲ್ಲಿ ಅಚ್ಚರಿ ಇಲ್ಲ. ಈಗಾಗಲೇ ಕೋಟ್ಯಾಂತರ ವಿದ್ಯಾವಂತರು ಸೂಕ್ತ ಉದ್ಯೋಗವಿಲ್ಲದೆ ಹೆಣಗಾಟ ನಡೆಸುತ್ತಿರುವಾಗಲೇ ಬೃಹತ್ ಕಂಪೆನಿಗಳು ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದಲ್ಲಿ ನಿರುದ್ಯೋಗ ಸಮಸ್ಯೆ ಇಡೀ ವಿಶ್ವವನ್ನು ಪೆಡಂಭೂತವಾಗಿ ಕಾಡಲಿದೆ.

ಟೆಕ್ ಕಂಪೆನಿಗಳಲ್ಲಿನ ಈ ಉದ್ಯೋಗ ಕಡಿತದ ನೇರ ಪರಿಣಾಮ ಭಾರತದ ಮೇಲೂ ಬೀಳುತ್ತಿದೆ. ಮೇಲ್ನೋಟಕ್ಕೆ ದೇಶದ ಮಟ್ಟಿಗೆ ಇದೊಂದು ಸಣ್ಣ ಬೆಳವಣಿಗೆಯಂತೆ ಕಂಡರೂ ಈ ಕ್ಷೇತ್ರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇದನ್ನು ನಿರ್ಲಕ್ಷಿಸಲಾಗದು. ಉಳಿದ ಕ್ಷೇತ್ರ ಅಥವಾ ವಲಯಗಳೂ ಇದೇ ತಂತ್ರಗಾರಿಕೆಗೆ ಜೋತು ಬಿದ್ದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸಲಿದೆ. ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತ ನಿಶ್ಚಿಂತೆಯಿಂದ ಇರಲು ಸಾಧ್ಯವಿಲ್ಲ. ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ದೇಶ ಸದಾ ಸನ್ನದ್ಧವಾಗಿರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೩-೦೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ