ಆಲದ ಮರ
ನನ್ನ ಊರು ಅಂತಹ ದೊಡ್ಡ ಊರು ಏನೂ ಅಲ್ಲ. ಚಿಕ್ಕ ಹಳ್ಳಿ. ಬಿ. ಸಿ ರೋಡಿಂದ ಒಳಕ್ಕೆ ತಿರುಗಿ ಒಂದು ಹತ್ತು ಕಿಲೋ ಮೀಟರ್ ಹೋದ್ರೆ ಅಲ್ಲಿ ಸಿಗುವುದೇ ನಾನು ಹುಟ್ಟಿದ ಹಳ್ಳಿ. ಆ ಹಳ್ಳಿಗೆ ಗುರುತು - ಒಂದು ಸಣ್ಣ ಬಸ್ ಸ್ಟಾಂಡ್, ಒಂದು ನಾಲ್ಕು ಚಿಕ್ಕ ಪುಟ್ಟ ಅಂಗಡಿಗಳು, ಒಂದೆರಡು ಬಸ್ಸು ನಿಲುವಷ್ಟು ಜಾಗ. ಅದೇ ನಾನು ಹುಟ್ಟಿದ ಹಳ್ಳಿ. ಅಲ್ಲಿಯ ಬಸ್ಸ್ಟಾಂಡ್ ಪಕ್ಕದ್ದೇ ನಮ್ಮ ಹಿತ್ತಿಲು ಜಾಗ. ಒಂದು ಸಣ್ಣ ಪುರಾತನ ಮನೆ. ಹತ್ತಾರು ಗಿಡ ಮರಗಳು, ಹಣ್ಣು, ಕಾಯಿ, ಒಂದು ಸ್ವಲ್ಪ ಗದ್ದೆ, ತರಕಾರಿ ತೋಟ. ಒಂದಿಷ್ಟು ಜಾಜಿ, ಅಬ್ಬಲ್ಲಿಗೆ ಅಲ್ಲದೆ ಹಿತ್ತಿಲ ಸುತ್ತಲೂ ಬೇಲಿ ಗಿಡಗಳು. ಅದ್ರೆ ವಿಶೇಷ ಅಂದ್ರೆ ಆ ಹಿತ್ತಿಲಿನ ಹಿಂಭಾಗದಲ್ಲಿ ಒಂದು ದೊಡ್ಡ ಆಲದ ಮರ. ಭಾರೀ ಗಾತ್ರದ್ದು. ಅದನ್ನು ಯಾವ ಕಾಲದಲ್ಲಿ ಯಾರು ನೆಟ್ಟರೋ ಗೊತ್ತಿಲ್ಲ, ತಲತಲಾಂತರದಿಂದ ಅದು ಅಲ್ಲೇ ನಿಂತು ತನ್ನ ಎಲ್ಲಾ ದಿಕ್ಕುಗಳಲ್ಲೂ ಹರಡಿ, ಭದ್ರವಾಗಿ ಬೇರೂರಿ, ಅದೂ ಸಾಲದೋ ಎಂಬಂತೆ ಇನ್ನೂ ಹತ್ತಾರು ಬೀಳಲುಗಳನ್ನು ಭೂಮಿಯತ್ತ ಕೈ ಚಾಚಿಕೊಂಡಿದೆ. ಮರತುಂಬ ಎಲೆಗಳು, ಸಕಾಲದಲ್ಲಿ ಹೂ ಹಣ್ಣುಗಳು, ಹಕ್ಕಿಗಳ ಗೂಡುಗಳು ಎಲ್ಲವೂ ಆ ಮರಕ್ಕೆ ಒಂದು ದಿವ್ಯ ವರ್ಛಸ್ಸನ್ನೇ ನೀಡಿದೆ.
ನಾವೆಲ್ಲಾ ಬಾಲ್ಯದಿಂದಲೇ ಅದರ ಬಳಿ ಆಟವಾಡಿಕೊಂಡೇ ಬೆಳೆದದ್ದು. ನೆರೆಮನೆ ಮಕ್ಕಳೆಲ್ಲ ಸೇರಿ ಅದರ ಬೀಳಲುಗಳಲ್ಲಿ ಜೋತಾಡಿಕೊಂಡು ಅರಚಾಡಿಕೊಂಡು ಕಾಲಹರಣ ಮಾಡುತ್ತಿದ್ರೆ ಅಮ್ಮ ಬಂದು ಬೆನ್ನಿಗೊಂದು ಗುದ್ದಿದ ಮೇಲೆಯೇ ಅಲ್ಲಿಂದ ಹೋಗಿ ನಾಳೆಗೆ ಯಾವ ಹೋಮ್ ವರ್ಕ್ ಕೊಟ್ಟಿದ್ದಾರೆ ಅಂತ ನೋಡ್ಲಿಕ್ಕೆ ಓಡುತ್ತಿದ್ದೆವು. ರಜೆ ತುಂಬಾ ಅಲ್ಲೇ ಆಡ್ತಾ ಇದ್ದೆವು. ಬೆಳಗ್ಗಿಂದ ಸಾಯಂಕಾಲದವರೆಗೂ ಅಲ್ಲೇ ಹಾರಾಡ್ತಾ ಇರುತ್ತಿದ್ದೆವು. ಬಾಲ್ಯದುದ್ದಕ್ಕೂ ನಮಗೆ ಅತ್ಯಂತ ಇಷ್ಟವಾದ ಜಾಗ ಅದಾಗಿತ್ತು.
ದೊಡ್ಡವರಾದ ಹಾಗೆ ನಮಗೆ- ಅಂದ್ರೆ, ನಾನೂ ಮತ್ತು ನನ್ನಣ್ಣ- ಗೊತ್ತಾಗ್ಲಿಕ್ಕೆ ಸುರುವಾಯ್ತು ಆ ಮರ ಅಂದ್ರೆ ಬರೇ ಒಂದು ಆಟಕ್ಕಾಗಿ ಅಲ್ಲ ಅದರ ಹಿಂದೆ ಒಂದು ಅಪಾರವಾದ ಶಕ್ತಿಯೇ ಇದೆ ಅಂತ. ನಮ್ಮ ಹಿರಿಯರೆಲ್ಲಾ ಸೇರಿ ದಿನಾ ಅದಕ್ಕೆ ಪೂಜೆ ಮಾಡ್ತಾ ಇದ್ರು. ಅದನ್ನು ಭಕ್ತಿಯಿಂದ ಪೂಜಿಸಿ ನಮ್ಮ ಮನೆತನದ ಸಕಲ ಸೌಭಾಗ್ಯಕ್ಕಾಗಿ ಪ್ರಾರ್ಥನೆ ಮಾಡ್ತಾ ಇದ್ರು. ಇಲ್ಲಾ, ಕಷ್ಟ ತೊಂದರೆ ನಿವಾರಣೆಗಾಗಿ ಬೇಡಿಕೊಳ್ತಾ ಇದ್ರು. ಇದು ಊರೆಲ್ಲಿ ಎಲ್ರಿಗೂ ಗೊತ್ತಿರುವ ಸಂಗತಿ. ಭಟ್ರ ಮನೆ ಆಲದ ಮರಾ ಅಂತಾನೇ ಹೆಸರು ಅದಕ್ಕೆ. ಕೆಲವರು ಹೊಗಳ್ತಾ ಇದ್ರು; ಕೆಲವರು ಟೀಕೆ ಮಾಡ್ತಾ ಇದ್ರು ಇನ್ನು ಕೆಲವರು ಅವರವರಿಗೆ ಏನಾದರೂ ಕಷ್ಟ ಬಂದಿದ್ರೆ ಅಥವಾ ಏನಾದರೂ ಕೇಳ್ಕೊಳ್ಲಿಕೆ ಇದ್ರೆ ಒಂದು ಲೋಟ ಹಾಲೂ ಐದು ಬಾಳೆಹಣ್ಣೂ ಮಕ್ಳದ್ದೋ ಇನ್ನು ಯಾರದ್ದೋ ಕೈಯಲ್ಲಿ ಕೊಟ್ಟು ಕಳುಹಿಸ್ತಾ ಇದ್ರು. ನಮ್ತಂದೆ ಇಲ್ದಿದ್ರೆ ತಾಯಿ ಅಂಥಾ ಕಾಣಿಕೆಗಳನ್ನು ಭಕ್ತಿಯಿಂದ ತಮ್ಮ ವಕಾಲತ್ತಿನೊಂದಿಗೆ ಮರಕ್ಕೆ ಸಮರ್ಪಿಸ್ತಾ ಇದ್ರು. ಒಂದು ಹತ್ತಾರು ದಿನಗಳ ಬಳಿಕ ಅಂಥವರು ಜರಿ ಜರಿ ಧೋತಿ ಸೀರೆ ಉಟ್ಟ್ಕೊಂಡು ಪ್ಲೇಟ್ ತುಂಬಾ ಸಿಹಿತಿಂಡಿ ಹಣ್ಣು ಹೂ ಹಿಡ್ಕೊಂಡು ನಮ್ಮ ಮನೆಗೆ ನಗು ನಗ್ತಾ ಬರ್ತಿದ್ರೆ ನಮ್ಮ ತಂದೆ ತಾಯಿ "ಎಲ್ಲ ನಾವಿಟ್ಟಿರೋ ನಂಬಿಕೆ ಫಲ. ಆ ದೇವ್ರು ನಂಬಿದವನನ್ನು ಎಂದಿಗೂ ಕೈ ಬಿಡುವುದಿಲ್ಲ" ಎಂದೆಲ್ಲಾ ಮಾತು ಹಚ್ಚುತ್ತಿದ್ದರು ಹಾಗೂ ಬಂದವರು ಅತ್ಯಂತ ದೈನ್ಯತಾ ಭಾವದಿಂದ ಆ ಮಾತಿಗೆ ದನಿಗೂಡಿಸುತ್ತಿದ್ದರು.
ಹಾಗೂ, ತಿಳಿದೋ ತಿಳಿಯದೆಯೋ ನಾವೂ ಕೂಡಾ ನಮ್ಮ ಆಟ ಆಡೋ ಬಾಲ್ಯದ ದೋಸ್ತಿ ಮರವನ್ನು ಮನಸಾರೆ ಪೂಜಿಸ್ಲಿಕ್ಕೆ ಶುರು ಮಾಡಿದೆವು. ನಮ್ಮ ಎಲ್ಲಾ ಕಷ್ಟಕ್ಕೂ ನಷ್ಟಕ್ಕೂ ನಮ್ಮ ಮುತ್ತಜ್ಜನ ಮುತ್ತಜ್ಜ ಯಾರೋ ನೆಟ್ಟ ಆ ಆಲದ ಮರವನ್ನೇ ನಂಬಿ ಮುಂದಡಿ ಇಡ್ಲಿಕ್ಕೆ ಶುರು ಮಾಡಿದ್ವಿ. ನಂಬಿಕೆ ಇದ್ರೆ ಅವನೆಂದೂ ಕೈ ಬಿಡೋದಿಲ್ಲ ಎಂಬ ಅಚಲ ನಂಬಿಕೆಯಿಂದ್ಲೇ ಎಲ್ಲಾ ಕಠಿಣ ನಿರ್ಧಾರಗಳನ್ನೂ ತಗೊಳ್ತಾ ಇದ್ವಿ. ಸತ್ಯದ ಮಾತು, ಸತ್ಯದ ಹಾದಿ, ನ್ಯಾಯಕ್ಕಾಗಿ ಬದುಕು ಅಂತೆಲ್ಲ ಆರಂಭ ಮಾಡಿದ್ವಿ. ವರ್ಷಕ್ಕೊಮ್ಮೆ ಹಳ್ಳಿಗೆ ಹೋದ್ರೆ ಒಂದು ಭರ್ಜರಿ ಪೂಜೆ ಮಾಡ್ಸಿ ಊರಿಗೆಲ್ಲಾ ಊಟ ಹಾಕಿಸ್ತಿದ್ದೆವು................................
ಹಾಗಂತ, ಈಗ ನನಗೆ ಕೂತ್ಕೊಂಡು ಕಥೆ ಹೇಳೋ ಟೈಮ್ ಅಲ್ಲ. ಇನ್ನು ಒಂದು ಐದು-ಹತ್ತು ನಿಮಿಷಗಳಲ್ಲೇ ಮೀಟಿಂಗ್ ಇದೆ. ವಿಶಾಲವಾದ ಹಾಲ್ನಲ್ಲಿ ನಾನು ಕುತಿರೋ ಕ್ಯೂಬಿಕಲ್ಲಿಂದ್ಲೇ ಎದುರಿಗೆ ಕಾಣ್ತಾ ಇದೆ ಮೀಟಿಂಗ್ ರೂಮ್. ಅಡ್ಮಿನ್ನವ್ರು ಈಗಾಗ್ಲೇ ಅದನ್ನ ತೆರೆದು ಲೈಟ್, ಏ.ಸಿ ಎಲ್ಲಾ ಆನ್ ಮಾಡಿ ಇಟ್ಟಿದ್ದಾರೆ. ಸಾದಾರಣ ಇಡೀ ರೂಮನ್ನೇ ಆವರಿಸುವ ದೊಡ್ಡ ಮೇಜು, ಸುತ್ತಲೂ ಕುಳಿತಿರುವ ತಿರುಗು-ಕುರ್ಚಿಗಳು, ಮೇಜಿನ ಮೇಲೆ ಕುಡಿಯವ ನೀರಿನ ಬಾಟಲಿಗಳು, ತಿನ್ನಲು ಮಿಂಟ್, ನೋಟ್ಸ್ ಬರೆದುಕೊಳ್ಳಲು ಪೆನ್-ಪ್ಯಾಡ್ ಎಲ್ಲಾ ಸುಸಜ್ಜಿತವಾಗಿ ಇಟ್ಟಿರುವುದು ಗಾಜಿನ ಗೋಡೆಯ ಮೂಲಕ ನನಗೆ ಕುಳಿತಲ್ಲಿಂದಲೇ ಕಾಣಿಸುತ್ತಿತ್ತು. ಅಡ್ಮಿನ್ ಸೆಕ್ಶನಿನವರು ಆ ರೂಮನ್ನು ಸಿದ್ಧಪಡಿಸಿ ತಮ್ಮ ಮುಂದಿನ ಕೆಲಸಕ್ಕೆ ಆಚೀಚೆ ಹಾಯುವಾಗಲೆಲ್ಲಾ ಅವರ ದೃಷ್ಟಿಗಳು ನನ್ನನ್ನೇ ಅಗತ್ಯಕ್ಕಿಂತಲೂ ತುಸು ಹೆಚ್ಚು ಹೊತ್ತು ನೋಡುತ್ತಿರುವಂತೆ ನನಗೆ ತೋರ ತೊಡಗಿತು. ಅಂದರೆ, ಇಂದಿನ ಮೀಟಿಂಗಿನ ಮುಖ್ಯ ಮಸಾಲೆ ಅವಾಗಲೇ ಆಫ಼ೀಸಿನ ಎಲ್ಲರಿಗೂ ವಾಸನೆ ಹತ್ತಿ ಹೋಗಿತ್ತು.
ಕಂಪನಿಯದ್ದು ಕೋಟ್ಯಂತರ ವ್ಯವಹಾರ. ದುಡ್ಡು ಒಂದು ಚೂರು ಆಚೀಚೆ ಆದರೆ ಯಾರಿಗೆ ತಾನೇ ಗೊತ್ತಾಗುತ್ತದೆ? ಕೆಲ ಸಮಯದಿಂದ ನಡೆಯುತ್ತಿರುವ ಒಂದು ಅವ್ಯವಹಾರದ ಬಳ್ಳಿ ಒಂದು ದಿನ ಕಾಲಿಗೆ ತೊಡರಿತು. ಸುಪರ್ವೈಸರ್ ಲಕ್ಷ್ಮಣ ನಡೆಸುತ್ತಿದ್ದ ಒಂದು ಕಾರಾನಾಮ. ಕಂಪನಿಯ ದುಡ್ಡು ಕೊಳ್ಳೆ ಹೊಡೆಯುವ ಒಂದು ಕಾರ್ಯತಂತ್ರ. ಅದರ ಹಿಂದೆ ಬಿದ್ದು ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಎಲ್ಲಾ ಪುರಾವೆಗಳೊಂದಿಗೆ ಮ್ಯಾನೇಜ್ಮೆಂಟಿಗೆ ರಿಪೋರ್ಟ್ ಕೊಟ್ಟೆ. ಅವರಿಂದ ನಿರೀಕ್ಷಿತ ಉತ್ತರ ಸಿಗಲಿಲ್ಲ. ನಾನು ಕೊಟ್ಟ ಪುರಾವೆಗಳು ಗಟ್ಟಿಯಿಲ್ಲ ಎಂದು ಕಾಲ ದೂಡತೊಡಗಿದರು. ಆಕ್ಷನ್ ತಗೊಳ್ಳಲು ಆಗುವುದಿಲ್ಲ ’ಬಾಡ್ ಪಿ.ಆರ್’ ಪ್ರಾಬ್ಲೆಂ ಬರುತ್ತದೆ ಅಂತೆಲ್ಲ ನನ್ನನ್ನು ಸುಮ್ಮನಾಗಿಸಲು ಪ್ರಯತ್ನಿಸಿದರು.
ಕೇಸನ್ನು ಇತ್ಯರ್ಥ ಮಾಡಲೇ ಬೇಕು ಎಂದು ಹಟ ಹಿಡಿದೆ. ನನ್ನ ಕಂಪನಿಯ ಸಂಪತ್ತನ್ನು ರಕ್ಷಿಸುವುದು, ಅದಕ್ಕಾಗಿ ಹೋರಾಡುವುದು ನನ್ನ ಕರ್ತವ್ಯ. ಅದರಲ್ಲೇಕೆ ಅಂಜಿಕೆ? ಅಂತೂ ನನ್ನ ಸತತ ಮೂರು ತಿಂಗಳ ಹೋರಾಟದ ಫಲ - ಇಂದು ಆ ಕೇಸಿನ ಫ಼ೈನಲ್ ಎನ್ಕ್ವಯರಿ. ಸದ್ಯ ! ಇನ್ನು ಜಯ ಸಿದ್ಧ. ಧರ್ಮ ಯುದ್ಧದಲ್ಲಿ ನ್ಯಾಯಕ್ಕೆ ಎಂದಿಗೂ ಗೆಲುವು ನಿಶ್ಚಿತ. ಎಲ್ಲಾ ಆಲದ ಮರದ ಸತ್ಯದ ಪ್ರಮಾಣ.
ಮೀಟಿಂಗ್ ರೂಮಿನಲ್ಲಿ ಈಗಾಗಲೇ ಬರಬೇಕಾದ ಮೂರು ಜನರೂ ಬಂದಿದ್ದರು. ತಮ್ಮೊಳಗೆ ಗಂಭೀರವಾಗಿ ಚರ್ಚಿಸುತ್ತಿದ್ದರು. ತನಿಕೆಯ ಪೂರ್ವಭಾವೀ ತಯಾರಿ ನಡೆಸುತ್ತಿದ್ದಂತೆ ತೋರುತ್ತಿತ್ತು.
ನಾವು ಕುಳಿತಿರುವ ಕ್ಯುಬಿಕಲ್ಲಿನಲ್ಲಿ ನನ್ನದೇ ಒಂದು ಪ್ರೈವೇಟ್ ವಿಶ್ವ ಇದೆ. ಆ ವಿಶ್ವದ ಕೇಂದ್ರ ಅಂದ್ರೆ ಆಲದ ಮರದ ಒಂದು ಚಿಕ್ಕ ಫ಼ೋಟೊ. ದಿನಾಲೂ ಅದಕ್ಕೆ ಹೂ ಏರಿಸಿ, ಕುಂಕುಮ ಹಚಿದ ಮೇಲೆಯೇ ದಿನ ಆರಂಭ. ದಿನಕ್ಕೆ ಸಾವಿರಾರು ಬಾರಿ ಕೆಲಸದಲ್ಲಿ ತೊಡಗಿದ್ದಾಗೆ ಕಣ್ಣಿಗೆ ಬೀಳುವ ಆಲದ ಮರದ ದಿವ್ಯ ಕೃಪಾದೃಷ್ಟಿ ಸದಾ ಮನಸ್ಸಿಗೆ ಶಕ್ತಿ ಹಾಗೂ ಉಲ್ಲಾಸ ನೀಡುತ್ತದೆ. ಒಮ್ಮೆ ಅದನ್ನೇ ದೃಷ್ಟಿಸಿ ಮತ್ತೆ ಕಣ್ಣು ಮುಚ್ಚಿ ಮನಸ್ಸಿನಲ್ಲಿ ದೈವಿಕ ಶಕ್ತಿಯನ್ನು ತುಂಬಿಕೊಂಡೆ. ಇನ್ನೇನು, ನನ್ನನ್ನು ಕರೆಯುತ್ತಾರೆ..., ನಾನು ಒಳಗೆ ಹೋಗುತ್ತೇನೆ...., ಹೋಗಿ ನನ್ನ ವಾದ ಮಂಡಿಸಿ ಪುರಾವೆ ಒದಗಿಸಿ ಲಕ್ಷ್ಮಣನ ವಿರುದ್ಧ ಆಕ್ಷನ್ ತೆಗೆದುಕೊಳ್ಳುವಂತೆ ಅವರನ್ನು ಒತ್ತಾಯಿಸುವೆ...., ಧರ್ಮಕಾರ್ಯದ ಅಂತಿಮ ಕ್ಷಣಗಳು............
ಕಣ್ಣು ತೆರೆದು ತಲೆ ಎತ್ತಿ ನೋಡಿದಾಗ ಹಲ್ಲು ಕಿಸಿದು ಎದುರು ನಿಂತಿದ್ದ ಸುಬ್ಬು ಕಂಡ. ಸುಬ್ಬು ಅಂದರೆ ಸುಬ್ರಹ್ಮಣ್ಯಂ ನಮ್ಮ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್. ಅತ್ಯಂತ ಶಿಸ್ತಿನಿಂದ ಅಚ್ಚುಕಟ್ಟಾಗಿ ಡ್ರೆಸ್ ಧರಿಸುವ ಸುಬ್ಬು ಕಂಪನಿಯ ಏಣಿಯಲ್ಲಿ ಅತ್ಯಂತ ಶೀಘ್ರವಾಗಿ ಮೇಲೇರಿದ ಕೆಲವೇ ಕೆಲವರಲ್ಲಿ ಒಬ್ಬ. ಅವನ ಸಕ್ಸೆಸ್ ಕಂಡು ಕರುಬುವವರು ಹಲವರು. ಆದರೆ ಅವನು ಈವರೆಗೆ ಯಾವುದೇ ಪ್ರಾಜೆಕ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕಂಪನೆಗೆ ಲಾಭ ಗಳಿಸಿದ್ದನ್ನು ಕಂಡವರಿಲ್ಲ. ದಿನಾ ಫ಼ೋನ್, ಮೊಬೈಲ್, ಇ-ಮೈಲ್ ನಲ್ಲಿ ಕಾಲ ಕಳೆಯುವ ಸುಬ್ಬು ಮೀಟಿಂಗುಗಳಲ್ಲಿ, ಸೀನಿಯರ್ಸ್ ಬಂದಾಗ ಮಾಡಲ್ಪಡುವ ಪ್ರೆಸೆಂಟೇಷನ್ನುಗಳಲ್ಲಿ ಎತ್ತಿದ ಕೈ. ಅವನನ್ನು ಮೀರಿಸುವವರು ಬೇರಾರೂ ಇಲ್ಲ. ಜೂನಿಯರ್ಸುಗಳು ಹಗಲೂ ರಾತ್ರಿ ಕಷ್ಟ ಪಟ್ಟು ಮಾಡುವ ಕೆಲಸಗಳನ್ನು ಮೀಟಿಂಗ್ ರೂಮಿನಲ್ಲಿ ಅತ್ಯದ್ಭುತವಾಗಿ ತಾನೇ ಮಾಡಿದೆನೆಂದು ಮಾಯೆ ಸೃಷ್ಟಿಸುವುದಲ್ಲದೆ ಕೆಟ್ಟು ಹೋದ ಪ್ರತಿಯೊಂದು ಕಾರ್ಯಗಳಿಗೂ ಇನ್ನೊಬ್ಬನನ್ನು ದೋಷಿಯನ್ನಾಗಿಸಿ ಲೀಲಾಜಾಲವಾಗಿ ಮಾತನಾಡಿ ತನ್ನ ಅಭಿವೃದ್ದಿಯ ಏಣಿಯಲ್ಲಿ ದಿನಾ ಮೇಲೇರುವ ಒಂದು ಸಂಘೀಯ ಕೀಟ.
" ಸೋ, ನಿಮ್ಮ ಆಲದ ಮರ...." ಎಂದು ತುಟಿ ಬಿರಿದ ಸುಬ್ಬು.
ಆಫ಼ೀಸಿನಲ್ಲಿ ಎಲ್ಲರಿಗೂ ಈ ಫ಼ೋಟೋ ಒಂದು ತಾತ್ಸಾರ. ಒಂದು ಅತಿದೊಡ್ಡ ಕಂಪನಿಯ ಗ್ಲಾಮರ್ ಇಮೇಜಿಗೆ ಇಂತಹ ಫ಼ೋಟೋ, ಕುಂಕುಮ ಸರಿ ಹೊಂದುವುದಿಲ್ಲ ಎಂಬ ಕುಹಕ. ಸಾಫ಼ಿಸ್ಟಿಕೇಟೆಡ್ ಜನ!
"..................." ಅಂತಹ ಬಾಣಗಳಿಗೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಮುಖ ಸೀರಿಯಸ್ಸಾಗಿ ಇರಿಸಿ ಸುಮ್ಮನೆ ಕುಳಿತು ಮುಂದಿನ ಮಾತಿಗೆ ಕಾದೆ.
" ಓ.ಕೆ, ಓ.ಕೆ.................... ಏನಿದು ಭಟ್, ನಿನ್ಮೇಲೆ ಎನ್ಕ್ವಯರಿ? ಮೇ ಐ ಆಸ್ಕ್?" ಎಂದು ನೇರವಾಗಿ ಮಾತಿಗೆ ಇಳಿದ.
" ನನ್ನ ಮೇಲೆ ಎನ್ಕ್ವಯರಿ ಅಲ್ಲ. ನಾನು ಹಿಡಿದ ಕರಪ್ಷನ್ ಕೇಸಿನ ಮೇಲೆ ಎನ್ಕ್ವಯರಿ.... ಲಕ್ಷ್ಮಣ್ ಮೇಲೆ. ಎಲ್ರಿಗೂ ಗೊತ್ತು. ನಿನಗೆ ಗೊತ್ತಿಲ್ವ? " ಸ್ಪಷ್ಟೀಕರಣ ಗಡಸಾಗಿ ಕೊಟ್ಟೆ.
" ಆರ್ ಯೂ ಶೂರ್, ಭಟ್ ?" ಅಂತ ಮೂತಿ ಒಂತರಾ ತಿರುಚಿ ಕಣ್ಣು ಅಗಲಿಸಿದ. ಸುಬ್ಬುವಿನ ಈ ಮುದ್ರೆಯ ಹಿಂದೆ ಯವುದೋ ಘನವಾದ ರಹಸ್ಯ ಅಡಗಿರುತ್ತೆ. " ಕ್ವೆಶ್ಚನ್ ಎಲ್ರಿಗೂ ಗೊತ್ತಿರೋದು ಅಲ್ಲ ಭಟ್. ಲಕ್ಷ್ಮಣ್ ಕೇಸಲ್ಲಿ ನೀನು ಮಾಡಿರೋ ಕೆಲಸ ಎಲ್ಲ ನನಗೆ ಗೊತ್ತು. ಪ್ರಶ್ನೆ ಈಗ ನಿನ್ನ ಮೇಲಿರೋ ಆಪಾದನೆಯದ್ದು. ನನಗೆ ತಿಳಿದ ಹಾಗೆ ನಿನ್ನ ವಿರುದ್ಧ ಈಗಾಗಲೇ ಸಾಕಷ್ಟು ಪುರಾವೆ ಮ್ಯಾನೇಜ್ಮೆಂಟ್ ಕೈಯಲ್ಲಿ ಇದೆ. ಇವತ್ತಿನ ಮೀಟಿಂಗ್ ಲಕ್ಷ್ಮಣ್ ಮೇಲಿನ ಆಪಾದನೆ ಮೇಲಲ್ಲ, ನಿನ್ನ ಮೇಲಿನ ಅಪಾದನೆ ಬಗ್ಗೆ....... ಯು ಮೆ ನಾಟ್ ಬಿ ಏಬಲ್ ಟು ಕೌಂಟರ್ ದೆಮ್." ಅಂತ ಸ್ವಲ್ಪ ಹೊತ್ತು ಸುಮ್ಮನಾದ.
ನನ್ನನ್ನು ಎತ್ತಿ ಪ್ರಪಾತದಿಂದ ಕೆಳಕ್ಕೆ ನೂಕಿದಂತಾಯಿತು. ಏನು ಹೇಳುತ್ತಿದ್ದಾನಿವನು? ಇದು ಇನ್ನೊಂದು ಕುಹಕವೇ?
" ಮೈ ಗ್ರೇಪ್ ವೈನ್ ಯು ನೋ" ಎಂದು ಭುಜ ಹಾರಿಸಿ ನನ್ನ ಪ್ರತಿಕ್ರಿಯೆಗಾಗಿ ಕಾದು ನಿಂತ. ಈಗ ತಾನೆ ಬೌನ್ಸರ್ ಎಸೆದ ಅಕ್ರಂನಂತೆ ನನ್ನ ಮೋರೆಯನ್ನು ಸೀಳಿ ನೋಡತೊಡಗಿದ.
ಈಗಾಗಲೇ ಅಕ್ಕಪಕ್ಕದವರೆಲ್ಲ ನಮ್ಮನ್ನೇ ಗಮನಿಸಿದಂತಿತ್ತು. ಗಾಜಿನ ಗೋಡೆಯ ಆಚೆಗಿನ ಮೂವರೂ ಅಧಿಕಾರಿಗಳೂ ತಮ್ಮ ಮಾತುಕತೆ ಕೈಬಿಟ್ಟು ನಮ್ಮನ್ನೇ ಆಸಕ್ತಿಯಿಂದ ನೋಡುವುದು ಕಂಡುಬರುತ್ತಿತ್ತು.
"ಓಹ್................." ಅಂದೆ.
ಪ್ಲಾಟ್ ನಿಚ್ಚಲವಾಗಿ ಕಾಣತೊಡಗಿತು.
"ಸೋ, ನೀನು ಅವರ ರಾಯಭಾರಿ ಅಲ್ಲವೇ? ಗೋ ಟು ಹೆಲ್........ ನಾನು ಕ್ಯಾರ್ ಮಾಡೋದಿಲ್ಲ. ಸುಳ್ಳು ಸಾಕ್ಷಿ ಕ್ರಿಯೇಟ್ ಮಾಡಿ ನನ್ನನ್ನೇ ಸಿಕ್ಕಿಸಿ ಹಾಕಲು ಪ್ರಯತ್ನ ಪಡ್ತೀರಾ? ನಾನು ಸತ್ಯ ಬಿಡೋದಿಲ್ಲ. ಲಕ್ಷ್ಮಣ್ ಕೇಸ್ ಪ್ರೂವ್ ಮಾಡೇ ಮಾಡ್ತೀನಿ......." ನನ್ನ ಅಬ್ಬರಕ್ಕೆ ಸುಬ್ಬು ತುಸು ಕೂಲಾದ. ದೂರದಿಂದ ಗಮನಿಸುತ್ತಿದ್ದವರಲ್ಲಿ ಕೆಲವರು ಒಂದೆರಡು ಹೆಜ್ಜೆ ಹತ್ತಿರಕ್ಕೆ ಬಂದು ಹೆಚ್ಚು ಆಸಕ್ತಿಯಿಂದ ನಮ್ಮನ್ನೇ ನಿರುಕಿಸತೊಡಗಿದರು.
" ರಿಲಾಕ್ಸ್..........ರಿಲಾಕ್ಸ್. ನಾನು ಬರೇ ನಿಂಗೆ ಸಹಾಯ ಮಡೋದಿಕ್ಕೆ ಟ್ರೈ ಮಾಡ್ತಾ ಇದ್ದೇನೆ. ನಾನು ನಿನ್ನ ಫ಼್ರೆಂಡ್. ನೀನು ಅಪಾಯಕ್ಕೆ ಸಿಲುಕಿ ಹಾಕಿಕೊಳ್ತಾ ಇದ್ದೀಯ. ಅದಕ್ಕೇ, ಲೆಟ್ಸ್ ಸೀ ವ್ಹಾಟ್ ವಿ ಕಾನ್ ವರ್ಕ್ ಔಟ್"
"ದೇರ್ ಈಸ್ ನಥಿಂಗ್ ಟು ವರ್ಕ್ ಔಟ್, ಸುಬ್ಬು. ಐ ವಾಂಟ್ ಆಕ್ಷನ್ ಎಗೈನ್ಸ್ಟ್ ಲಕ್ಷ್ಮಣ್. ಯಾಕೆ, ಕರಪ್ಷನ್ ಕಂಪನಿ ಪಾಲಿಸಿಗೆ ವಿರುದ್ಧ ಅಲ್ಲವೇ? ಅವನನ್ನು ಯಾಕೆ ನೀವೆಲ್ಲ ಪ್ರೊಟೆಕ್ಟ್ ಮಾಡ್ತೀರಾ?"
" ನೋಡು ಭಟ್, ಇಲ್ಲಿ, ಈ ಕಾರ್ಪರೇಟ್ ಸಂಸ್ಕೃತಿಯಲ್ಲಿ ಈಸಲು, ಈಸಿ ಜಯಿಸಲು ಪ್ರತಿಭೆ, ಶ್ರಮ, ಹಾನೆಸ್ಟಿ ಮಾತ್ರ ಇದ್ದರೆ ಸಾಲದು. ಇಲ್ಲಿ ಬೇಕಾಗಿರುವುದು ರಣತಂತ್ರ. ಯಾರು ಮೊದಲು ಚೂರಿ ಎಳೆದು ಕುತ್ತುತ್ತಾನೋ ಅವನು ಜಯಿಸುತ್ತಾನೆ; ಉಳಿದವನು ಮಣ್ಣು ಮುಕ್ಕುತ್ತಾನೆ. ನೀನು ಒಬ್ಬ ಎಸಳು. ನಿನಗೆ ಅರ್ಥ ಆಗೋಲ್ಲ. ಆದ್ರಿಂದ ಹೇಳ್ತಾ ಇದ್ದೀನಿ. ಈಗ ಮೀಟಿಂಗ್ ಇದೆ. ಅಲ್ಲಿ ಎನ್ಕ್ವೈರಿ ’ನಿನ್ನ ಮೇಲೆ’; ’ಲಕ್ಷ್ಮಣ್’ ಮೇಲೆ ಅಲ್ಲ. ನೀನು ಸ್ವಲ್ಪ ಕೋಪರೇಟ್ ಮಾಡಿದ್ರೆ ಎಲ್ಲ ಸರಿ ಹೋಗತ್ತೆ. ಮ್ಯಾನೇಜ್ಮೆಂಟ್ ಹತ್ರ ನಾನೂ ಈ ವಿಷಯ ಮಾತನಾಡಬಲ್ಲೆ" ಸ್ವಲ್ಪ ಹತ್ತಿರ ಸರಿದು ಅತ್ಯಂತ ಆತ್ಮೀಯ ಸ್ವರದಲ್ಲಿ ನುಡಿದನು ಸುಬ್ಬು.
ಊಸರವಳ್ಳಿ ಉಸುರಿದಂತಾಯಿತು. ಹೊಟ್ಟೆ ಹಿಂಡತೊಡಗಿತು. ಮೈ ಬೆವರಿತು. ನಿಧಾನವಾಗಿ ಟೇಬಲ್ ಮೇಲಿನ ಅಲದ ಮರವನ್ನು ದೃಷ್ಟಿಸಿದೆ. ನಮ್ಮ ಆಲದ ಮರ- ನಮ್ಮ ಅತಿ ನಂಬಿಕೆಯ ಆಲದ ಮರ-ಅದರ ಕೆಳಗೆ ಇರುವುದು ತಂಗಾಳಿ. ಮೇಲ್ಗಡೆ ಹಕ್ಕಿಗಳ ಮಧುರ ಚಿಲಿಪಿಲಿ, ಆ ಶಾಂತ ವಾತಾವರಣ..ನೆನಸುತ್ತಾ ಹೋದಂತೆ ಹೊಟ್ಟೆಯ ಸಂಕಟ ಕಮ್ಮಿಯಾಗತೊಡಗಿತು. ಮನಸ್ಸು ನಿಧಾನವಾಗಿ ಪ್ರಶಾಂತವಾಗತೊಡಗಿತು. ಇದೆಲ್ಲ ಬಿಟ್ಟು ದೂರ, ಬಲು ದೂರ ಆ ಆಲದ ಮರದ ಬಳಿಗೆ ಹೋಗಿ ಅದರ ಬೀಳಲುಗಳಲ್ಲಿ ಜೋತಾಡಿದೆ. ಮನಸ್ಸು ಹಗುರೆನಿಸಿತು. ಧೈರ್ಯ, ಹುಮ್ಮಸ್ಸು ಮೂಡಿತು.
ನಿಧಾನವಾಗಿ ಕಣ್ಣು ತೆರೆದು ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದೆ:
"ಸುಬ್ಬು, ಐ ವಿಲ್ ಫ಼ೈಟ್ ಫ಼ಾರ್ ಟ್ರುತ್.......... ನಾನು ಸತ್ಯಕ್ಕಾಗಿ ಹೋರಾಡುತ್ತೇನೆ."
ಸುಬ್ಬು ಧೀರ್ಘಕಾಲ ನನ್ನನ್ನೇ ದಿಟ್ಟಿಸಿದ. ಕೊನೆಗೆ " ಓ.ಕೆ....., ನಿನ್ನ ನಿರ್ಧಾರ; ಆಲ್ ದ ಬೆಸ್ಟ್" ಎಂದು ನಿಟ್ಟುಸಿರು ಬಿಟ್ಟು ಗಾಜಿನ ಆಚೆಗೆ ಅಸಹಾಯಕತೆಯ ಸಂಜ್ಞೆ ತೂರಿ ಅಲ್ಲಿಂದ ಹೊರಟು ಹೋದ.
ನಾನು ಮಾತನಾಡಲಿಲ್ಲ. ಸುಮ್ಮನಿದ್ದೆ. ಹಲ್ಲು ಕಚ್ಚಿ ಸುಮ್ಮನೇ ಮರದ ಫ಼ೋಟೋವನ್ನೇ ದಿಟ್ಟಿಸುತ್ತಾ ಜಗತ್ತಿನ ಪರಿವೆಯನ್ನೇ ಬಿಟ್ಟು ಧ್ಯಾನಿಸತೊಡಗಿದೆ.
ಎಷ್ಟೋ ಹೊತ್ತಿನ ಬಳಿಕ ಒಳಗಿಂದ ಕರೆ ಬಂತು.
ಫ಼ೋಟೋಕ್ಕೆ ನಮಸ್ಕರಿಸಿ ಕುರ್ಚಿಯಿಂದೆದ್ದು ಹೋಗಿ ಮೀಟಿಂಗ್ ರೂಮೊಳಗೆ ಅಡಿಯಿಟ್ಟೆ. ಎದುರಿಗೆ ಕಂಡು ಬಂದದ್ದು ವಿಚಿತ್ರ ದೃಶ್ಯ !!!!!
ಆ ಅಂದದ ಕೋಣೆಯಲ್ಲಿ ಉತ್ತಮ ದರ್ಜೆಯ ಆಸನಗಳಲ್ಲಿ ಕಂಡದ್ದು ಆಫ಼ೀಸರುಗಳಲ್ಲ.................. ಕಾಡಿನ ಘೋರ ಮೃಗಗಳು !!!!!!!!
ಮುಖ್ಯ ಸೀಟಿನಲ್ಲಿ, ಎಂ.ಡಿ ಜಾಗದಲ್ಲಿ ಒಂದು ಕೊಬ್ಬಿದ ಸಿಂಹ ಬಾಯ್ತೆರೆದು ನನ್ನನ್ನು ತಿನ್ನುವಂತೆ ಎದಿರು ನೋಡುತ್ತಿತ್ತು! ಅದರ ಕೋರೆಹಲ್ಲುಗಳನ್ನೂ ಕುಣಿದಾಡುವ ಮೂಗಿನ ಹೊಳ್ಳೆಗಳನ್ನೂ ನೋಡಿದಾಗಲೇ ಹೊಟ್ಟೆಯೊಳಗಿನ ಸಂಕಟ ಪುನರಾರಂಭವಾಯಿತು. ಪಕ್ಕದ ಸೀಟಿನಲ್ಲಿ ಒಂದು ನರಿ - ಪಕ್ಕಾ ನರಿ - ಮೂತಿ ಉದ್ದ ಮಾಡಿ ಸಿಗರೇಟು ಸೇದುತ್ತಾ ಬಾಯಿಯಲ್ಲಿ ಬೆಂಕಿ ಉಗುಳುತ್ತಾ ಡ್ರಾಗನ್ನಿನಂತೆ ನನ್ನತ್ತ ಉರಿಯುವ ಕಣ್ಗಳಿಂದ .......... ಅಬ್ಬಬ್ಬ ಯಾವತ್ತೂ ಒಂದು ನರಿಯನ್ನು ಈ ರೀತಿ ಕಂಡದ್ದಿಲ್ಲ. ಅದರ ಪಕ್ಕದ ಸೀಟಿನಲಿ ಒಂದು ಹೆಬ್ಬಾವು. ತನ್ನ ಹಸಿರು ಮೈಯಲ್ಲಿ ಕಪ್ಪು ಪಟ್ಟೆಗಳೊಂದಿಗೆ ನಿಧಾನವಾಗಿ ಬಾಯಿ ಬಿಡುತ್ತಾ ಇದ್ದಲ್ಲಿಂದ ಮೇಜಿನ ಮೇಲಕ್ಕೇರಿ ನನ್ನ ಕಡೆಗೆ ಬಾಯ್ಬಿಟ್ಟು ಬರತೊಡಗಿತು.
ವೃತ್ತಿಪರತೆಗೆ ಹತ್ತಾರು ಪ್ರಶಸ್ತಿಗಳನ್ನು ಪಡೆದು ಪತ್ರಿಕೆಗಳ ಉದ್ದಕ್ಕೂ ಪ್ರಶಂಸೆಗಳಿಸಿದ ಇಂತಹ ಕಂಪನಿಯ ಮೀಟಿಂಗ್ ರೂಮಿನಲ್ಲಿ ಈ ಕಾಡು ಜಂತುಗಳು ಎಲ್ಲಿಂದ ಸೇರಿದವು? ಒಮ್ಮೆಲೇ ಮೈ ಜುಂ ಎಂದು ಹೆದರಿ ಕೈ ಕಾಲು ನಡುಗತೊಡಗಿತು. ಅಚಾನಕ್ಕಾಗೇ ನಡೆದ ಘಟನೆಯಿಂದ ಹೆದರಿ ಜೀವದ ಆಸೆಯಿಂದ ಕೋಣೆಯಿಂದ ಹೊರಕ್ಕೆ ಹೋಗಬೇಕೆಂದು ಅಡಿ ಇಡುವಷ್ಟರಲ್ಲೇ ಜೋರಾಗಿ ಘರ್ಜಿಸುತ್ತಾ ಸಿಂಹ ಮೈ ಮೇಲೆ ಹಾರಿತು. ಅದರ ಪಂಜುಗಳಿಂದ ಬಿದ್ದ ಪೆಟ್ಟಿಗೆ ’ಫಳ್..........’ ಎಂದು ಮುಖದಿಂದ ರಕ್ತ ಹಾರಿ ಎದುರಿಗಿದ್ದ ಮೇಜಿನ ಮೇಲಿನ ಬಟ್ಟೆಯನ್ನು ಕೆಂಪಾಗಿಸಿತು. ನೋವಿನಿಂದ ಜೋರಾಗಿ ಕಿರುಚುತ್ತಿರುವಾಗ ಮೇಜಿನ ಮೇಲೇರಿ ಬಂದ ಹೆಬ್ಬಾವು ಇಡಿಯಾಗಿ ನನ್ನನ್ನು ನುಂಗ ತೊಡಗಿತು. ಗಾಜಿನ ಗೋಡೆಯ ಹೊರಗಿಂದ ಗಾಜಿಗಂಟಿಕೊಂಡಂತೆ ಪರಿಚಿತ ಮುಖಗಳಲ್ಲಿ ಕೆಲವರು ಕೇಕೆ ಹಾಕಿ ನಗುತ್ತಿದ್ದರೆ ಇನ್ನು ಕೆಲವರು ನಿರ್ಲಿಪ್ತಭಾವದಿಂದ ನನ್ನನ್ನು ದಿಟ್ಟಿಸುತ್ತಿದ್ದರು. ಯಾರೊಬ್ಬನೂ ಒಳ ಬಂದು ಈ ಮೃಗಗಳಿಂದ ನನ್ನನ್ನು ರಕ್ಷಿಸಲು ಇಚ್ಛಿಸಿದಂತೆ ಕಾಣಲಿಲ್ಲ.
ಇದು ಅತ್ಯಂತ ಅನಿರೀಕ್ಷಿತ !! ಹೀಗಾಗಲು ಸಾಧ್ಯವೇ ಇಲ್ಲ. ಯಾರು ಬಂದರೂ ಬಾರದಿದ್ದರೂ ಸರಿ, ಈಗ ನನ್ನ ಆಲದ ಮರ ಬರುತ್ತದೆ... ಬಂದು ನನ್ನನ್ನು ಈ ಮರಣಾಂತಿಕ ಪರಿಸ್ಥಿತಿಯಿಂದ ಪಾರು ಮಾಡುತ್ತದೆ. ಇದು ಖಂಡಿತ. ಇದು ನಂಬಿಕೆ. ಜೀವನವಿಡೀ ನಂಬಿದ ಆಲದ ಮರ ಈಗ ಕೈ ಬಿಡದು. "ಹೇ ಮರವೇ ..., ಕಾಪಾಡು" ಎಂದು ಜೋರಾಗಿ ಒಮ್ಮೆ ಚೀರಿದೆ.
ಕಣ್ಣು ಕತ್ತಲೆ ಆವರಿಸತೊಡಗಿತು. ಮೈಕೈಗಳೆಲ್ಲ ರಕ್ತದಿಂದ ತೋಯ್ದು ನಿಧಾನವಾಗಿ ಹೆಬ್ಬಾವಿನ ಬಾಯೊಳಗೆ ಜಾರತೊಡಗಿತು. ಮೃಗಗಳ ಆರ್ಭಟೆ, ಸಹೋದ್ಯೊಗಿಗಳ ಕೇಕೆ ಕಿವಿ ಚುಚ್ಚುತ್ತಿತ್ತು. ನೋವು ಏರುತ್ತಿತ್ತು; ಮತ್ತೆ ಮರದ ಪ್ರಾರ್ಥನೆಯಲ್ಲೇ ತೊಡಗಿರುವಾಗ ಒಮ್ಮೆಗೇ ಎಲ್ಲಾ ಕತ್ತಲೆ,
ಒಮ್ಮೆಗೇ ಎಲ್ಲಾ ಕತ್ತಲೆ; ಏನೂ ಕಾಣಿಸದು. ನೋವು ಮಾಯವಾಯಿತು, ದೇಹ ಹಗುರವಾಯಿತು. ನಿಧಾನವಾಗಿ ಮೇಲೇರತೊಡಗಿದೆ - ಆಕಾಶದತ್ತ. ಮಧುರವಾದ ಅನುಭವವಾಗತೊಡಗಿತು. ಆಲದ ಮರದ ಶಕ್ತಿ ನನ್ನನ್ನು ಎಳೆಯುತ್ತಿರಬಹುದೆ? ತನ್ನ ರಕ್ಷಣಾ ಪರಿಧಿಯೊಳಗೆ ಮುಚ್ಚಿ ಕೊಂಡೊಯ್ಯುತ್ತಿರಬಹುದೆ?............
ತೇಲುತ್ತಾ ತೇಲುತ್ತಾ ಊರಿಗೆ ಬಂದೆ. ಊರ ಮಧ್ಯೆ ಬಸ್ ಸ್ಟಾಂಡ್, ಬಳಿಯಲ್ಲಿ ನನ್ನ ಮನೆ, ಹಿಂದೆ ಹಿತ್ತಿಲು; ಅದರಲ್ಲಿ ಪಾಗಾರಕ್ಕೆ ಅಂಟಿದಂತ ಪುರಾತನ ಆಲದ ಮರ. ನಿಧಾನವಾಗಿ ಮರದ ಮುಂದೆ ಬಂದಿಳಿದೆ. ಎದುರಿಗೇ ಇದೆ ನಾವು ತಲೆ ತಲಾಂತರದಿಂದ ನಂಬಿ ಪೂಜಿಸುತ್ತಾ ಬಂದ ಆಲದ ಮರ.
ಆದರೆ ಮರ ಎಂದಿನಂತಿಲ್ಲ. ಮರ ಸೊರಗಿದೆ. ಕಳೆಗೆಟ್ಟಿದೆ. ನೋಡ ನೋಡುತ್ತಿದ್ದಂತೆಯೇ ಎಲೆಗಳು ಉದುರತೊಡಗಿ ಕೊಂಬೆಗಳು ಬೋಳಾಗತೊಡಗಿದವು. ಬೀಳಲುಗಳು ಮರಕಳಚಿ ನೆಲಕ್ಕೆ ಬೀಳತೊಡಗಿದವು. ಕಾಂಡವು ಲಟ ಲಟನೆ ಕಳಚತೊಡಗಿದವು. ಮರವನ್ನು ಸಾವಿರಾರು ಸಿಂಹಗಳು, ನರಿಗಳು, ಹೆಬ್ಬಾವುಗಳು ಮುರಿದು ಭಕ್ಷಿಸತೊಡಗಿದವು. ಸ್ವಲ್ಪ ಹೊತ್ತಿನಲ್ಲೇ ಬೇರುಗಳು ಹರಿದು ಹೋಗಿ ಭೂಮಿಯೇ ಬಿರಿದು ಬುಡ ಮೇಲಾಗಿ ಭಯಂಕರ ಶಬ್ದದೊಂದಿಗೆ ಮಗುಚಿ ಬಿತ್ತು - ಮುತ್ತಜ್ಜನ ಮುತ್ತಜ್ಜ ನೆಟ್ಟ ಆಲದ ಮರ !!!
ಜೋರಾಗಿ ಬಂದ ಸುಂಟರಗಾಳಿ ನನ್ನನ್ನು ಎತ್ತಿ ಮೊದಲು ಮರವಿದ್ದ ಭಾರೀ ಹೊಂಡದೊಳಕ್ಕೆ ನನ್ನನ್ನು ಎಳೆದುಕೊಂಡು ಹೋಯಿತು. ನಾನು ಜೋರಾಗಿ " ಯಾಕೆ.................., ಯಾಕೆ...................., ಯಾಕೆ " ಎಂದು ಚೀರುತ್ತಾ ಭೂಗರ್ಭದಲ್ಲಿ ಮಾಯವಾದೆ.
* * *
ಮೀಟಿಂಗ್ ಬಳಿಕ ಆಫ಼ೀಸಿನಲ್ಲೊಂದು ಸರ್ಕ್ಯುಲರ್ ಇಶ್ಯೂ ಆಯಿತು.....................
"ದಿನಾಂಕ .............. ರಂದು ನಡೆದ ತನಿಖಾ ಸಮಿತಿಯ ಮೀಟಿಂಗಿನಲ್ಲಿ ಮಿ. ಭಟ್ ಅವರ ವಿರುದ್ಧ ತನಿಖೆ ನಡೆಸಲಾಯಿತು. ತನಿಖೆಯ ಕೊನೆಯಲ್ಲಿ ಮಿ. ಭಟ್ ಅವರು ತಮ್ಮ ರಾಜೀನಾಮೆಯನ್ನು ತತ್ಕ್ಷಣವೇ ಸಲ್ಲಿಸಿದ್ದಾರೆ."
ಸರ್ಕ್ಯುಲರ್ ಓದಿ ಕೆಲವರು ಸಂತಸಪಟ್ಟರು..., ಕೆಲವರು ಭಯಗೊಂಡರು.... ಆದರೆ ಯಾರೂ ದುಃಖಿಸಲಿಲ್ಲ !!
ಭಟ್ ಅವರ ಟೇಬಲಿನಲ್ಲಿ ಅಂಟಿದ್ದ ಕುಂಕುಮದ ಬಣ್ಣವನ್ನು ಟಿಷ್ಯೂ ಪೇಪರಿನಿಂದ ಅಂದವಾಗಿ ಕ್ಲೀನ್ ಮಾಡಿ ಆ ಕ್ಯುಬಿಕಲ್ಲನ್ನು ಬೇರೊಬ್ಬರಿಗೆ ಕೊಡಲಾಯಿತು.
* * *
ಈ ಕತೆ ಕೇಳಿ ಕೆಲವರು "ಕೈಲಾಗದ ಭಟ್ಟ, ಮೂರ್ಖ!" ಎಂದು ನಕ್ಕು ಬಿಟ್ಟರು.
ಇನ್ನು ಕೆಲವರು "ಕತೆ ಇಲ್ಲಿಗೆ ಮುಗಿಯುವುದಿಲ್ಲ; ಸತ್ಯಕ್ಕೆ ಎಂದೆಂದಿಗೂ ಜಯ ಇದ್ದೇ ಇದೆ" ಅಂತ ತಮ್ಮ ಗಟ್ಟಿ ನಂಬಿಕೆ ಸೂಚಿಸಿದರು.
ನೀವೇನು ಹೇಳುತ್ತೀರಿ ?
[ ಉದಯವಾಣಿ ಸಾಪ್ತಾಹಿಕ..................................................... 26.10.2008 ]
[ ಲಿಂಕ್: http://www.udayavani.com/special.asp?contentid=586868&lang=2 ]