ಆಲೂಗಡ್ಡೆ,ಮೊಟ್ಟೆ ಮತ್ತು ಕಾಫಿ
ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನೂ ಆಗಿಲ್ಲವೆನ್ನುವಂತೆ.’ಅಪ್ಪನ ಬಳಿ ಹೇಳಲಾಗದ್ದಂಥದ್ದು ಏನಿದೆ ಮಗಳೇ ’ಎಂದು ಮತ್ತೊಮ್ಮೆ ಪ್ರಶ್ನಿಸಿದ್ದ ಅಪ್ಪನೆದುರು ತುಟಿಯೊಡೆದಿದ್ದಳು ಮಗಳು.’ಅದೇನೋ ಗೊತ್ತಿಲ್ಲ ಅಪ್ಪ,ಸಾಲು ಸಾಲು ಕಷ್ಟಗಳು ನನಗೆ. ಒಂದು ಸಮಸ್ಯೆ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಮಸ್ಯೆ ಧುತ್ತೆಂದು ಎದುರಿಗೆ ನಿಂತಿರುತ್ತದೆ. ಹೇಗೆ ಸಾಗುತ್ತದೋ ಬದುಕು ಗೊತ್ತಿಲ್ಲ.ದಿನವಿಡಿ ಕಷ್ಟಗಳೊಂದಿಗೆ ಹೆಣಗುತ್ತ,ಜೂಜುತ್ತ ಬದುಕು ನಡೆಸುವುದು ಕಷ್ಟವೆನ್ನಿಸುತ್ತಿದ್ದೆ ನನಗೆ’ಎಂದವಳ ಕಣ್ಣಂಚಲ್ಲಿ ಸಣ್ಣ ಪೊರೆ.
ಕ್ಷಣಕಾಲ ಮಗಳನ್ನು ದಿಟ್ಟಿಸಿದ್ದ ಅಪ್ಪ ಸಣ್ಣಗೆ ಮುಗುಳ್ನಕ್ಕಿದ್ದ.ವೃತ್ತಿಯಿಂದ ಬಾಣಸಿಗನಾಗಿದ್ದವನು ಅವನು.ಅಸಲಿಗೆ ಮಗಳಿಗಿದ್ದ ಕಷ್ಟವೇನು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಅವನು ಹೋಗಲಿಲ್ಲ.ಸುಮ್ಮನೇ ಮಗಳ ಕೈಹಿಡಿದವನು ಅವಳನ್ನು ಅಡುಗೆಮನೆಯತ್ತ ಕರೆದೊಯ್ದ.ಬೇಸರದಲ್ಲಿದ್ದ ಮಗಳು ಮರುಮಾತನಾಡದೇ ಅಡುಗೆಮನೆಯತ್ತ ನಡೆದಿದ್ದಳು.ಅಡುಗೆ ಮನೆಗೆ ತೆರಳಿದ್ದ ಅಪ್ಪ ಮೂರು ಬೋಗುಣಿಗಳಲ್ಲಿ ನೀರು ತುಂಬಿಸಿ ಅವುಗಳನ್ನು ಒಲೆಯ ಮೇಲಿಟ್ಟ.ಸಣ್ಣ ಉರಿಯಲ್ಲಿ ನಿಧಾನಕ್ಕೆ ನೀರು ಕುದಿಯಲಾರಂಭಿಸುತ್ತಿದ್ದಂತೆಯೇ ಒಂದು ಬೋಗುಣಿಗೆ ದೊಡ್ಡದ್ದೊಂದು ಆಲೂಗಡ್ಡೆಯನ್ನು ಹಾಕಿದ.ಅದರ ಪಕ್ಕದಲ್ಲಿದ್ದ ಬೋಗುಣಿಗೆ ಮೊಟ್ಟೆಯೊಂದನ್ನು ಹಾಕಿದ.ಕೊನೆಯ ಬೋಗುಣಿಯಲ್ಲಿ ಒಂದು ಚಮಚೆಯಷ್ಟು ಕಾಫಿಪುಡಿಯನ್ನು ಬೆರೆಸಿದ.ಹಾಗೆ ಮೂರು ಪಾತ್ರೆಗಳಲ್ಲಿ ಮೂರು ವಿಭಿನ್ನ ವಸ್ತುಗಳನ್ನು ಹಾಕಿದವನು ಸುಮ್ಮನೇ ಅವುಗಳನ್ನೇ ದಿಟ್ಟಿಸುತ್ತ ನಿಂತುಬಿಟ್ಟ.ಅಪ್ಪನ ಚರ್ಯೆಯನ್ನು ಕಂಡ ಮಗಳಲ್ಲೊಂದು ಸಣ್ಣ ಸಿಡಿಮಿಡಿ.ಅಪ್ಪ ತನ್ನನ್ನು ಅಡುಗೆ ಮನೆಗೆ ಕರೆತಂದದ್ದೇಕೆ..? ಹಾಗೆ ಕರೆತಂದವನು ಏನನ್ನೂ ಹೇಳದೆ ಅವನ ಪಾಡಿಗೆ ಅವನೆನ್ನುವಂತೆ ಏನೇನೋ ಮಾಡುತ್ತಿರುವುದೇಕೆ..?ಈಗ ಸುಮ್ಮನೇ ಮೌನವಾಗಿ ನಿಂತಿರುವುದೇಕೆ ..? ಎಂದು ಯೋಚಿಸುತ್ತಿದ್ದ ಮಗಳು ಅಸಹನೆಯಿಂದ ನಿಂತಲ್ಲಿಯೇ ನಿಧಾನಕ್ಕೆ ಸರಿದಾಡಿದಳು.ಮಗಳ ಅಸಹನೆಯನ್ನು ಕುಡಿಗಣ್ಣಿನಿಂದ ಗಮನಿಸಿಯೂ ಗಮನಿಸದಂತಿದ್ದ ಅಪ್ಪ ಮೌನವಾಗಿಯೇ ನಿಂತಿದ್ದ.ಕಾಲ ಸರಿಯುತ್ತಿತ್ತು.ಬರೊಬ್ಬರಿ ಇಪ್ಪತ್ತು ನಿಮಿಷಗಳ ನಂತರ ಆತ ಮೂರೂ ಒಲೆಗಳನ್ನು ಆರಿಸಿದ್ದ.ಮೊದಲ ಬೋಗುಣಿಯಲ್ಲಿದ್ದ ಆಲೂಗಡ್ಡೆಯನ್ನೆತ್ತಿ ತಟ್ಟೆಯೊಂದರ ಮೇಲಿಟ್ಟ.ಎರಡನೇ ಬೋಗುಣಿಯಲ್ಲಿದ್ದ ಮೊಟ್ಟೆಯನ್ನು ಮತ್ತೊಂದು ತಟ್ಟೆಗೆ ಹಾಕಿದ.ಕೊನೆಯ ಬೋಗುಣಿಯಲ್ಲಿದ್ದ ದ್ರಾವಣವನ್ನು ಸಣ್ಣದ್ದೊಂದು ಲೋಟಕ್ಕೆ ಬಗ್ಗಿಸಿಕೊಂಡು ಲೋಟವನ್ನು ಮೇಜಿನ ಮೇಲಿಟ್ಟ.ಎಲ್ಲವನ್ನೂ ಸುಮ್ಮನೇ ನೋಡುತ್ತಿದ್ದ ಮಗಳಿಗೆ ಅಪ್ಪನ ವರ್ತನೆ ಒಗಟಿನಂತಾಗಿತ್ತು.ಎಲ್ಲವನ್ನೂ ಮೇಜಿನ ಮೇಲೆ ಜೋಡಿಸಿಟ್ಟುಕೊಂಡ ಅಪ್ಪ ಮಗಳತ್ತ ತಿರುಗಿ,’ನಿನಗಿಲ್ಲಿ ಏನು ಗೋಚರಿಸುತ್ತಿದೆ ಮಗಳೇ..’? ಎಂದು ಪ್ರಶ್ನಿಸಿದ್ದ
’ಆಲೂಗಡ್ಡೆ,ಮೊಟ್ಟೆ ಮತ್ತು ಕಾಫಿ ’ಎನ್ನುತ್ತ ತಟ್ಟನೇ ಉತ್ತರಿಸಿದ್ದಳು ಮಗಳು.ಅಪ್ಪನ ಮುಖದಲ್ಲೊಂದು ಮಂದಹಾಸ.ಆಲೂಗಡ್ಡೆಯಿದ್ದ ತಟ್ಟೆಯನ್ನೆತ್ತಿ ಅವಳತ್ತ ಹಿಡಿದಿದ್ದ ಅಪ್ಪ.’ಇದನ್ನು ಮುಟ್ಟಿನೋಡು ಮಗಳೇ..’ಎಂದಾಗ ನಿಧಾನಕ್ಕೆ ಆಲೂಗಡ್ಡೆಯನ್ನು ಸ್ಪರ್ಶಿಸಿದ್ದಳು ಮಗಳು.ಗಟ್ಟಿಯಾಗಿದ್ದ ಆಲೂಗಡ್ಡೆ ಬೆಂದು ಮೃದುವಾಗಿತ್ತು.ಮಗಳ ಕೈಗಳು ಅಲೂಗಡ್ಡೆಯಿಂದ ಹಿಂದಕ್ಕೆ ಸರಿಯುತ್ತಲೇ ಅವಳತ್ತ ಮೊಟ್ಟೆಯಿದ್ದ ತಟ್ಟೆಯನ್ನು ಎತ್ತಿಹಿಡಿದಿದ್ದ ಅಪ್ಪ,ಮೊಟ್ಟೆಯನ್ನು ಸುಲಿದು ನೋಡುವಂತೆ ತಿಳಿಸಿದ್ದ.ಅಪ್ಪನ ಮಾತಿನಂತೆ ಮೊಟ್ಟೆಯನ್ನು ಸುಲಿದಿದ್ದಳು ಮಗಳು. ಅದು ಬೆಂದು ಗಟ್ಟಿಯಾಗಿ ಬೆಳ್ಳಗೆ ಗೋಚರಿಸುತ್ತಿತ್ತು.ಕೊನೆಯದಾಗಿ ಕಾಫಿಯಿದ್ದ ಲೋಟವನ್ನು ಮಗಳ ಕೈಗಿಟ್ಟ ಅಪ್ಪ ಗುಟುಕೇರಿಸುವಂತೆ ಕೇಳಿಕೊಂಡ.ಅಪ್ಪನ ಆಣತಿಯಂತೆ ಸಣ್ಣ ಗುಟುಕೇರಿಸಿದ್ದಳು ಮಗಳು. ಹಬೆಹಬೆ ಕಾಫಿಯ ಕಂಪು ಹದವಾಗಿ ಅವಳನ್ನು ಆವರಿಸಿ ಸಂತೃಪ್ತಿಯ ನಗು ಮೂಡಿಸಿತ್ತು ಅವಳ ಮುಖದಲ್ಲಿ.ಅಷ್ಟಾಗಿಯೂ ಅಪ್ಪನ ವರ್ತನೆಯಿನ್ನೂ ಅವಳಿಗೆ ಅರ್ಥವಾಗಿರಲಿಲ್ಲ.’ಇದನ್ನೆಲ್ಲ ಏಕೆ ಮಾಡಿದೀರಿ ಅಪ್ಪ,ಏನು ಹೇಳಬೇಕೆಂದಿದ್ದೀರಿ.’?ಎಂದು ಕೇಳಿದ್ದ ಮಗಳ ಮಾತಿಗೆ ಅಪ್ಪನ ಮುಖದಲ್ಲಿ ಮತ್ತದೇ ಮುಗುಳ್ನಗೆ.ಮಾತನಾಡಿದ್ದ ಅವನು
’ಈಗ ಮತ್ತೊಮ್ಮೆ ಮೂರು ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡು ಮಗಳೇ.ಕುದಿಯುವ ನೀರಿಗೆ ಬೀಳುವ ಮುನ್ನ, ಗಟ್ಟಿಯಾಗಿದ್ದ ಆಲೂಗಡ್ಡೆ ಕುದ್ದ ಮರುಕ್ಷಣವೇ ಮೆತ್ತಗಾಗಿ ಹೋಯಿತು.ಈಗ ಮೊದಲಿದ್ದ ಗಟ್ಟಿತನ ಅದಕ್ಕಿಲ್ಲ.ಆದರೆ ಮೊಟ್ಟೆಯ ಕತೆ ಹಾಗಿಲ್ಲ.ತೀರ ದುರ್ಬಲವಾಗಿದ್ದ ಕವಚದಡಿ ರಕ್ಷಿತವಾಗಿದ್ದ ಮೊಟ್ಟೆ ಕುದಿಗೆ ಬಿದ್ದು ಗಟ್ಟಿಯಾಗಿ ಹೋಯಿತು.ಮೊದಲಿದ್ದ ಮೃದುತ್ವ ಅದಕ್ಕೂ ಇಲ್ಲ.ಇವೆಲ್ಲಕ್ಕಿಂತ ಭಿನ್ನವಾದ ಕತೆ ಕಾಫಿಯ ಪುಡಿಯದ್ದು.ಕುದಿಯುವ ನೀರಿಗೆ ಬಿದ್ದ ತಕ್ಷಣ ನೀರನ್ನೇ ಆವರಿಸಿಕೊಂಡುಬಿಟ್ಟಿತು ಅದು.ಕೆಲಕಾಲ ಕುದ್ದು ಕಾಫಿಯಾಗಿ ಮಾರ್ಪಟ್ಟು ನೀರನ್ನೇ ರುಚಿಕರ ಪದಾರ್ಥವಾಗಿಸಿಬಿಟ್ಟಿತು’ಎನ್ನುತ್ತ ಮಗಳತ್ತ ನೋಡಿದ ಅಪ್ಪ.ಮಗಳ ಮುಖದಲ್ಲಿ ಏನೊಂದು ಅರ್ಥವಾಗದ ಭಾವ.ಮತ್ತೆ ಮತನಾಡಿದ್ದ ಅಪ್ಪ.
’ಕುದಿಯುವ ನೀರು ಬದುಕಿನ ಸಮಸ್ಯೆಯಂಥದ್ದು ಮಗಳೇ.ಅದರೊಳಗೆ ಬಿದ್ದ ವಸ್ತುಗಳು ಸಮಸ್ಯೆಯೆಡೆಗಿನ ನಮ್ಮ ಸ್ಪಂದನೆಯಂಥವು.ಸಮಸ್ಯೆಯ ಸುಳಿಗೆ ಸಿಕ್ಕ ಗಟ್ಟಿಗರು ತುಂಬ ಸಲ ಮೆತ್ತಗಾಗಿ ಹೋಗುತ್ತಾರೆ ಆಲೂಗಡ್ಡೆಯಂತೆ.ಮೊಟ್ಟೆಯಂತಹ ಮೃದು ಸ್ವಭಾವದವರು ಕುದಿಗೆ ಬಿದ್ದು ಕಠೋರ ಹೃದಯಿಗಳಾಗುತ್ತಾರೆ.ಎರಡೂ ಅರ್ಥಹೀನ ಸ್ಪಂದನೆಗಳೇ.ಬದುಕಿನ ಶಾಂತ ಕದಡಿಬಿಡುವ ಭಾವಗಳಿವು. ಆದರೆ ಕೆಲವರಿರುತ್ತಾರೆ ಮಗು,ಸಮಸ್ಯೆಗಳಿಗೆ ಅಂಜದೆ ಮೆಟ್ಟಿನಿಂತು ಗೆಲ್ಲುವವರು. ಅವರು ಮಾತ್ರ ಕುದ್ದು ತಯಾರಾದ ರುಚಿಕರ ಕಾಫಿಯಂತಾಗುತ್ತಾರೆ.ಜೀವನದ ರಹಸ್ಯವೇ ಇಷ್ಟು ಮಗಳೇ.ಇದು ಅರ್ಥವಾದರೆ ಬದುಕು ಸರಳ.ಈಗ ನೀನು ಹೇಳು,ನೀನು ಏನಾಗಬೇಕೆಂದು ಬಯಸಿರುವೆ..’? ಎಂದು ಕೇಳುತ್ತ ಮಾತು ಮುಗಿಸಿದ ಅಪ್ಪ ಮಗಳತ್ತ ನೋಡಿದ.ಮಗಳಿಗಾಗ ಜ್ಞಾನೋದಯದ ಕಾಲ.ಸುಮ್ಮನೇ ಅಪ್ಪನನ್ನು ಬಾಚಿ ತಬ್ಬಿಕೊಂಡಳು ಅವಳು.
(ಅನುವಾದ )