ಆಲ್ಟ್ ಮನ್ ಎನ್ನುವ ಬುದ್ದಿವಂತ ಸೆಲೆಬ್ರಿಟಿ

ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ ಎಂಜಿನಿಯರ್ಗಿಂತಲೂ ದೊಡ್ಡ ಕನಸುಗಾರ. ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರಿಂಗ್ ಓದಲು ಪ್ರವೇಶ ಪಡೆದರೂ, ಕಾಲೇಜಿನ ಗೋಡೆಗಳನ್ನು ಮೀರಿ, ತನ್ನ ಕೌಶಲದಿಂದಲೇ ಜಗತ್ತನ್ನು ಗೆದ್ದವನು. ಅಮೆರಿಕದಿಂದ ಆರಂಭವಾಗಿ, ಜಗತ್ತಿನಾದ್ಯಂತ ತನ್ನ ಹೆಸರನ್ನು ಮೆರೆಸಿದ ಈ ಯುವ ಉದ್ಯಮಿ, ಹೂಡಿಕೆದಾರ, ಮತ್ತು ಕನಸುಗಳ ಕಣಜವಾಗಿದ್ದಾನೆ.
೨೦೧೫ರಲ್ಲಿ ಕೃತಕ ಬುದ್ಧಿಮತ್ತೆಯ ಸಂಶೋಧನೆಗೆಂದೇ ಜನ್ಮತಾಳಿದ ಓಪನ್ ಎಐ ಕಂಪನಿಯಲ್ಲಿ ಆರಂಭದಿಂದಲೂ ಕೆಲಸ ಮಾಡಿದ ಸ್ಯಾಮ್, ಈಗ ಅದರ CEO. ೨೦೨೩ರ ನವೆಂಬರ್ನಲ್ಲಿ ಓಪನ್ ಎಐನ ಆಡಳಿತ ಮಂಡಳಿ ಆತನನ್ನು ಕೆಲಸದಿಂದ ತೆಗೆದುಹಾಕಿತು, ಆದರೆ ಎರಡೇ ದಿನಗಳಲ್ಲಿ ತನ್ನ ತಪ್ಪನ್ನು ಮನಗಂಡು ಮತ್ತೆ CEO ಆಗಿ ಮರುಸ್ಥಾಪಿಸಿತು! ಈ ಘಟನೆ ಜಗತ್ತಿನಾದ್ಯಂತ ಸುದ್ದಿಯಾಯಿತು. ಓಪನ್ ಎಐಗೆ ಸೇರುವ ಮೊದಲು, ಕೇವಲ ೧೯ನೇ ವಯಸ್ಸಿನಲ್ಲಿ ಲೂಫ್ಟ್ ಎಂಬ ಮೊಬೈಲ್ ಆಪ್ ಕಂಪನಿಯನ್ನು ಸ್ಥಾಪಿಸಿದ್ದ. ಆದರೆ ಅದು ಯಶಸ್ಸು ಕಾಣಲಿಲ್ಲ. ಬಳಿಕ, ವೈ ಕಾಂಬಿನೇಟರ್ ಎಂಬ ಕಂಪನಿಯ ಮೂಲಕ ಸಾವಿರಾರು ನವೋದ್ಯಮಗಳಿಗೆ ಜೀವ ತುಂಬಿದ. ಆದರೆ, ತನ್ನ ಕನಸಿನ ದಾರಿಯಲ್ಲಿ ಮುನ್ನಡೆಯಲು ಓಪನ್ ಎಐಗೆ ಒಲವು ತೋರಿದ.
ಯಹೂದಿ ಮೂಲದ ಸ್ಯಾಮ್, ಬಾಲ್ಯದಿಂದಲೂ ಸಸ್ಯಾಹಾರಿ. ಕೇವಲ ಎಂಟು ವರ್ಷದವನಿದ್ದಾಗ ಮೊದಲ ಕಂಪ್ಯೂಟರ್ ಕೈಗೆ ಸಿಕ್ಕಿತು. ಸ್ಟೀವ್ ಜಾಬ್ಸ್ನಂತಹ ದಿಗ್ಗಜ ಆತನಿಗೆ ಸ್ಫೂರ್ತಿಯಾಗಿದ್ದ. ಖಾಸಗಿ ಜೀವನದಲ್ಲಿ, ಸಲಿಂಗಕಾಮಿಯಾಗಿರುವ ಸ್ಯಾಮ್, ಒಂಬತ್ತು ವರ್ಷಗಳ ಕಾಲ ನಿಕ್ ಸಿವೊ ಎಂಬ ಎಂಜಿನಿಯರ್ನೊಂದಿಗೆ ಸಂಬಂಧ ಹೊಂದಿದ್ದ. ಈಗ ಆಸ್ಟ್ರೇಲಿಯಾದ ಎಂಜಿನಿಯರ್ ಆಲಿವರ್ ಮುಲೇರಿನ್ನೊಂದಿಗೆ ಸಹಜೀವನ ನಡೆಸುತ್ತಿದ್ದಾನೆ. ಆಲ್ಟ್ಮನ್ಗೆ ಭವಿಷ್ಯದ ವಿಪತ್ತುಗಳಿಗೆ ಸಿದ್ಧತೆ ಇದೆ! "ನನ್ನ ಬಳಿ ಗನ್ಗಳಿವೆ, ಚಿನ್ನವಿದೆ, ಪೊಟ್ಯಾಷಿಯಂ ಐಯೊಡೈಡ್, ಆಂಟಿಬಯೊಟಿಕ್ಸ್, ಬ್ಯಾಟರಿಗಳು, ಗ್ಯಾಸ್ ಮಾಸ್ಕ್ಗಳಿವೆ. ಅಮೆರಿಕದ ಬಿಗ್ ಸುರ್ ಪರ್ವತ ಶ್ರೇಣಿಯಲ್ಲಿ ಭೂಮಿಯೂ ಇದೆ," ಎಂದು ಆತ ಹೇಳಿಕೊಂಡಿದ್ದಾನೆ. ಇಂಥ ಪ್ರೆಪರ್ ಮನೋಭಾವ ಆತನ ವಿಶಿಷ್ಟತೆಗೆ ಮತ್ತೊಂದು ಆಯಾಮ.
ಚಾಟ್ಜಿಪಿಟಿಯಂತಹ ತಂತ್ರಜ್ಞಾನದ ರೂವಾರಿಯಾಗಿರುವ ಓಪನ್ ಎಐ, ಸ್ಯಾಮ್ನ ನಾಯಕತ್ವದಲ್ಲಿ ಜಗತ್ತನ್ನೇ ಬೆರಗಾಗಿಸಿದೆ. ಈ ಯಶಸ್ಸಿನ ಬಳಿಕ, ಆತ ಜಗತ್ತಿನ ೨೦ಕ್ಕೂ ಹೆಚ್ಚು ದೇಶಗಳ ರಾಷ್ಟ್ರನಾಯಕರನ್ನು ಭೇಟಿಯಾದ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೂ ಮಾತುಕತೆ ನಡೆಸಿದ. ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸದಿದ್ದರೂ, ಕೆಲವು ವಿಶ್ವವಿದ್ಯಾಲಯಗಳು ಆತನಿಗೆ ಗೌರವ ಪದವಿ ನೀಡಿವೆ.
ಕೊಡುಗೈ ದಾನಿಯಾಗಿಯೂ, ಸಾಮಾಜಿಕ ಸೇವೆಗಾಗಿ ದೊಡ್ಡ ಮೊತ್ತವನ್ನು ದಾನ ಮಾಡಿದ್ದಾನೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ಗೆ ಬೆಂಬಲವಾಗಿ ದೊಡ್ಡ ಮೊತ್ತ ಖರ್ಚು ಮಾಡಿದ. ಟೈಮ್ ಪತ್ರಿಕೆಯಿಂದ ಜಗತ್ತಿನ ೧೦೦ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ತಂತ್ರಜ್ಞಾನದ ಲೋಕದಲ್ಲಿ ಒಂದು ಹೊಸ ದಿಗಂತವನ್ನು ರೂಪಿಸುತ್ತಿರುವ ಸ್ಯಾಮ್ ಆಲ್ಟ್ಮನ್, ಇಂದಿನ ಯುವ ಜನತೆಗೆ ಒಂದು ದೊಡ್ಡ ಸ್ಫೂರ್ತಿಯಾಗಿದ್ದಾನೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ