ಆಳಕ್ಕಿಳಿದ ಬೇರೋ...ಮುಖವಾಡ ರಹಿತ ಬದುಕೋ...
ಪ್ರಕೃತಿಯಲ್ಲಿ ನೂರಾರು ಅಡಿ ಎತ್ತರದ ಮರಗಳು ಉರಿಬಿಸಿಲು - ಧಾರಾಕಾರ ಮಳೆ - ಅಪಾಯಕಾರಿ ಬಿರುಗಾಳಿ - ಚಂಡಮಾರುತ ಎಲ್ಲವನ್ನು ಎದುರಿಸಿ ನೂರಾರು ವರುಷ ಬದುಕಿರುವುದನ್ನು ನೋಡುತ್ತೇವೆ. ಅದಕ್ಕೆ ಮುಖ್ಯ ಕಾರಣ ಬಹಿರಂಗವಾಗಿ ಯಾರಿಗೂ ಕಾಣದೆ ಅಂತರಂಗವಾಗಿ ಭೂಮಿಯೊಳಗಡೆ ಆಳವಾಗಿ ಪಸರಿಸಿರುವ ಬೇರುಗಳ ಸಮೂಹ. ಬೇರು ಎಷ್ಟು ಆಳಕ್ಕೆ ಇಳಿದಿರುತ್ತದೊ ಅಷ್ಟೇ ಬಲಿಷ್ಠವಾಗಿ ತನಗೆದುರಾದ ಎಲ್ಲ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಮರವು ಧೈರ್ಯದಿಂದ ಬದುಕುತ್ತದೆ. ಬೇರು ಆಳಕ್ಕಿಳಿಯದೆ ಕಠಿಣತೆಯನ್ನು ಎದುರಿಸಲು ಮರಕ್ಕೆ ಸಾಧ್ಯವಾಗದು.
ನೂರಾರು ಅಡಿ ಎತ್ತರದ ಹತ್ತಾರು ಮಹಡಿಗಳ ಕಟ್ಟಡಗಳನ್ನು ನೋಡುತ್ತೇವೆ. ಅದರ ಎತ್ತರಕ್ಕನುಗುಣವಾಗಿ ಬುನಾದಿ (ಫೌಂಡೇಶನ್) ಕೂಡಾ ಅಷ್ಟೇ ಆಳದಿಂದ ಕಟ್ಟಲ್ಪಡುತ್ತದೆ. ಕಡಿಮೆ ಆಳದ ಬುನಾದಿಯಿಂದ ಬಹು ಮಹಡಿ ಕಟ್ಟಡಗಳನ್ನು ಕಟ್ಟಲಾಗದು.
ನಾವು ಎಷ್ಟು ಆಂತರಿಕವಾಗಿ ಗಟ್ಟಿಯಾಗಿರುತ್ತವೆಯೋ ಅಷ್ಟೇ ಧೈರ್ಯವಾಗಿ ಬಾಹ್ಯವಾಗಿ ಬರುವ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಬಹುದು. ಹಾಗಾಗಿ ಆಂತರಿಕವಾಗಿ ಗಟ್ಟಿಯಾಗುವುದನ್ನು ಕಲಿಯಬೇಕು. ಬದುಕಿನ ನೆಮ್ಮದಿ ಎಂಬುದು ಹೊರಗಿನ ಥಳಕು - ಬಳಕು, ಶ್ರೀಮಂತಿಕೆ, ಹಣ - ಆಸ್ತಿ, ಐಶಾರಾಮಿ ಸೌಲಭ್ಯಗಳು, ಪೊಳ್ಳು ಭರವಸೆಗಳು, ತೋರಿಕೆಯ ಮಾತುಗಳೆಂಬ ವಿವಿಧ ಮುಖವಾಡಗಳಿಂದ ನಿರ್ಧರಿತವಾಗುವುದಿಲ್ಲ. ಅದು ನಮ್ಮನ್ನು ನಾವು ಆಳವಾಗಿ ತಿಳಿದುಕೊಳ್ಳುವ ಸಹಜ ಮುಖದಿಂದ ಬರುತ್ತದೆ. ನದಿಯ ಅಗಲ ಕಿರಿದಾದಷ್ಟು ನೀರು ವೇಗವಾಗಿ ಹರಿದು ತನ್ನ ದಾರಿಯ ಸುತ್ತಮುತ್ತ ಹಾನಿಯನ್ನುಂಟು ಮಾಡುತ್ತದೆ. ನದಿಯ ಅಗಲ ಹೆಚ್ಚಾದಷ್ಟು ಶಾಂತವಾಗಿ ಹರಿದು ಹಾನಿ ರಹಿತವಾಗಿ ಗುರಿಯನ್ನು ಮುಟ್ಟುತ್ತದೆ. ಅಂದರೆ ವಿಶಾಲ ಭಾವವು ನಮ್ಮನ್ನು ಸದಾ ಶಾಂತಮಯವನ್ನಾಗಿಸುತ್ತದೆ ಹಾಗೂ ಹಾನಿರಹಿತರನ್ನಾಗಿಸುತ್ತದೆ. ನಮ್ಮನ್ನು ನಾವು ಅರಿಯದೆ ನಮ್ಮ ಸುತ್ತಮುತ್ತಲಿನವರ ಬಗ್ಗೆ ತಿಳಿಯಲು ಹೋಗುವ ಕಾರಣ ನಾವಿಂದು ಭ್ರಮನಿರಸನರಾಗುತ್ತೇವೆ. ಒಂದು ಕ್ಷಣದ ಮೌನದಲ್ಲಿ ಅಂತರಂಗದ ಕಣ್ಣನ್ನು ತೆರೆಯುವ ಮೂಲಕ ನಮ್ಮಲ್ಲಿರುವ ಶಕ್ತಿ..? ನಮ್ಮಲ್ಲಿರುವ ಪ್ರತಿಭೆ..? ನಾನು ಮಾಡಿದ ಸಾಧನೆ, ನಾನು ಯಾರು..? ನಾನು ಎಲ್ಲಿದ್ದೇನೆ..? ಎಲ್ಲಿಯವರೆಗೆ ಹೋಗಬಹುದು..? ನನ್ನ ನೆಮ್ಮದಿಗೆ ಏನು ಮಾಡಬಹುದು..? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿ, ಅದಕ್ಕೆ ನಾವೇ ಉತ್ತರವನ್ನು ಕಂಡುಕೊಂಡರೆ ನೆಮ್ಮದಿಯು ತನ್ನಿಂದ ತಾನಾಗಿ ದೊರೆಯುತ್ತದೆ. ಈ ನೆಮ್ಮದಿ ಕೂಡಾ ವೈವಿಧ್ಯಮಯ. ಒಬ್ಬರಿಂದ ಒಬ್ಬರಿಗೆ ಭಿನ್ನ. ನೆಮ್ಮದಿಯ ದಾರಿ ಕೂಡಾ ನೂರಾರು. ಅದರಲ್ಲಿ ನಾವು ಧನಾತ್ಮಕವಾಗಿ ನಡೆದರೆ ನನಗೂ... ನನ್ನ ಸುತ್ತಲಿರುವವರಿಗೂ... ನನ್ನ ಪರಿಸರಕ್ಕೂ ನೆಮ್ಮದಿ. ಆದರೆ ತನಗೊಬ್ಬನಿಗಾಗಿ... ತನ್ನ ಸ್ವಾರ್ಥಕ್ಕಾಗಿ ಋಣಾತ್ಮಕವಾಗಿ ನಡೆದರೆ ಎಲ್ಲರಿಗೂ ತೊಂದರೆ. ಹಾಗಾಗಿ ನಾವೆಲ್ಲರೂ ನಿಸ್ವಾರ್ಥವಾಗಿ, ನಮ್ಮನ್ನು ನಾವು ತಿಳಿಯುವ ಜ್ಞಾನದ ಬೇರನ್ನು ನಮ್ಮೊಳಗೆ ಆಳವಾಗಿ ಇಳಿಸುವ ಮೂಲಕ ನಮ್ಮನ್ನು ನಾವು ಧೃಢಗೊಳಿಸಬೇಕಾಗಿದೆ. ನಾನಾ ಮುಖವಾಡಗಳನ್ನು ಕಿತ್ತು ಸಹಜವಾಗಿ ಬದುಕನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗೆ ನಮ್ಮನ್ನು ನಾವು ಒಪ್ಪಿಕೊಳ್ಳೋಣ -ಒಡ್ಡಿಕೊಳ್ಳೋಣ. ಇದಕ್ಕೆ ಯಾರನ್ನೂ ಕಾಯದೇ ನಾವೇ ಮುನ್ನುಡಿ ಹಾಕೋಣ. ನಮ್ಮತನ ಅರಿಯುವ ಕಡೆ ಬದಲಾಗೋಣ. ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ.
-ಗೋಪಾಲಕೃಷ್ಣ ನೇರಳಕಟ್ಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ