ಆಳ್ವಾಸ್ ನುಡಿಸಿರಿ- ಅಪ್ರಮಾಣ ಭಾಷೆಗಳ ನೆಲಸಮ ಸಲ್ಲ

ಆಳ್ವಾಸ್ ನುಡಿಸಿರಿ- ಅಪ್ರಮಾಣ ಭಾಷೆಗಳ ನೆಲಸಮ ಸಲ್ಲ

ಬರಹ

ವಿದ್ಯಾಗಿರಿ ಮೂಡಬಿದ್ರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ೨೦೦೮ ಕಾರ್ಯಕ್ರಮದ ನವಂಬರ ೨೯ ರಂದು ನಡೆದ 'ಕನ್ನಡ ಮನಸ್ಸು, ಶಕ್ತಿ ಮತ್ತು ವ್ಯಾಪ್ತಿ' ಶೀರ್ಷಿಕೆಯ ಮೊದಲ ವಿಚಾರಗೋಷ್ಟಿ "ಕನ್ನಡ ಭಾಷೆಯು ಪ್ರಾದೇಶಿಕ ವೈವಿಧ್ಯ (ಕನ್ನಡದೊಳಗಿನ ಕನ್ನಡಂಗಳ್) ಎಂಬ ವಿಷಯದಲ್ಲಿ ಮಾತನಾಡಿದ ಪ್ರೊ| ಚಂದ್ರಶೇಖರ ಸಂಗಲಿ 'ಕನ್ನಡದಲ್ಲಿ ಉಪಭಾಷೆ ಎಂದರೆ ಒಂಥರಾ ಕೀಳರಿಮೆ, ಭೇದ ಭಾವ ಕಾಣ್ತಾ ಇದೆ. ಅದನ್ನೆಲ್ಲಾ ನೀಗಿಕೊಂಡು ಪ್ರಮಾಣ ಮತ್ತು ಅಪ್ರಮಾಣ ಭಾಷೆಗಳ ನಡುವೆ ಕೊಡುಪಡೆ ನಡೆಯಬೇಕಾಗಿದೆ' ಎಂದು ಹೇಳಿದರು. 'ವಿಧಾನಸೌಧ- ಸಾವಿರಕಂಬದ ಬಸದಿ-ಏಕರೂಪದ ಕನ್ನಡ (ಪ್ರಮಾಣ ಭಾಷೆ)ವೆಂದರೆ ಎಲ್ಲ ಕಂಬಗಳೂ ಸಮಾನವಾಗಿ ತೋರುವ ವಿಧಾನಸೌಧ ಇದ್ದಂತೆ. ಅದೇ ನೋಡಿ- ಮೂಡಬಿದ್ರೆಯ ಸಾವಿರ ಕಂಬದ ಬಸದಿಯಲ್ಲಿ ಒಂದು ಕಂಬದಂತೆ ಮತ್ತೊಂದಿಲ್ಲಾ. ಕನ್ನಡದ ಭಾಷಾ ವೈವಿಧ್ಯ ಹೀಗಾಗಬೇಕು.' ಎಂದರು ಸಂಗಲಿ
ಯಾವೂದೇ ಭಾಷೆಯನ್ನು ಕನ್ನಡದಲ್ಲಿ ಆಡಬಹುದು- 'ಕನ್ನಡ ಉಗಮವಾದುದೇ ೫೨ ಅಕ್ಷರ (ಲಿಪಿ) ಇರಿಸಿಕೊಂಡು, ವಿಸ್ತಾರ ಮನೋಭಾವದಿಂದ ರೂಪುಗೊಂಡಿರಬೇಕು. ಈ ವಿಶಾಲ ಗುಣದಿಂದಲೇ ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಸ್ವಾಗತಿಸಿತು. ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತಧರ್ಮಗಳು ಮಾತ್ರವಲ್ಲ ಮಾನವತಾವಾದ, ಪ್ರಜಾಪ್ರಭ್ತುತ್ವದ ಚಿಂತನೆಗಳೂ ಕನ್ನಡವನ್ನು ಪ್ರಭಾವಿಸಿದೆ. ಇವತ್ತು ಕನ್ನಡದ ಮೂಲಕ ಜಗತ್ತಿನ ಯಾವುದೇ ಭಾಷೆಯನ್ನು ಬರೆದುಕೊಳ್ಳಬಹುದು, ಓದಬಹುದು ಎಂಬುದು ಸಾಬೀತಾಗಿದೆ, ಭಾಷಾತಜ್ಞರೇ ಒಪ್ಪಿದ್ದಾರೆ...." ಎಂದರು ಹೊಸದಿಲ್ಲಿಯ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ನಿರ್ದೇಶಕ ಡಾ|ಪುರುಷೋತ್ತಮ ಬಿಳಿಮಲೆ. ಮುಂದುವರಿಯುತ್ತಾ 'ಕನ್ನಡ ಭಾಷೆಗೆ ೩೦೦೦ ವರುಷಗಳ ಇತಿಹಾಸವಿದೆ. ಈಗ ಉಳಿದಿರುವ ೧೨ ಭಾಷೆಗಳಲ್ಲಿ ಕನ್ನಡವೂ ಒಂದು' ಎಂದರು.
ತುಳುವಿನ ಬಗ್ಗೆ ನಮ್ಮ ಪ್ರಯತ್ನ ಸಾಲದು- ಅಫಘಾನಿಸ್ಥಾನದ ವರೆಗೂ ತನ್ನ ಹರವು ಹೊಂದಿರುವ ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಪ್ರಸ್ತಾಪ ಸಂಸತ್ ನೆದುರು ಬಂದಾಗ ಕೊಂಚ ಪ್ರಯತ್ನಿಸಿದ ಧನಂಜಯ ಕುಮಾರರನ್ನು ಬಾಯಿ ಮುಚ್ಚಿಸಿದರು. ಇತರ ಸಂಸದರೂ ಬಾಯಿ ಮುಚ್ಚಿದ್ದರು. ಆದರೇ, ಬೋಡೊ ಭಾಷೆ ಬಗ್ಗೆ ವಾಜಪೇಯಿ, ಡೋಗ್ರಿ ಬಗ್ಗೆ ಡಾ| ಕರಣಸಿಂಗ್, ಮೈಥಿಲಿ ಬಗ್ಗೆ ಅಡ್ವಾಣಿ ಎಲ್ಲರೂ ವಕಾಲತು ಮಾಡಿದರು. ನಮ್ಮ ತುಳುವಿನ ಬಗ್ಗೆ ನಮ್ಮ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿ ಇಲ್ಲದಿದ್ದರೆ ಏನು ಮಾಡೋಣ?' ಎಂದು ಬಿಳಿಮಲೆ ವಿಷಾದಿಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet