ಆಳ ಕಡಲಿನ ಜಲಚರಗಳು - ಭಾಗ ೧

ಆಳ ಕಡಲಿನ ಜಲಚರಗಳು - ಭಾಗ ೧

೧. ವೈಪರ್ ಮೀನು(ViperFish): ಸುಮಾರು ಒಂದು ಕಿ.ಮೀ. ಆಳದಲ್ಲಿ ವಾಸಿಸುವ ದೈತ್ಯ ಮೀನು ಇದು. ಈ ಮೀನುಗಳಲ್ಲಿ ಕೆಲವು ಕಪ್ಪು ಬಣ್ಣವನ್ನು ಹೊಂದಿದ್ದರೆ, ಇನ್ನು ಕೆಲವು ಪಾರದರ್ಶಕವಾಗಿರುತ್ತವೆ. ಇದರ ಆಕರ್ಷಕ ಈಜು ರೆಕ್ಕೆಯೇ ಉಳಿದ ಮೀನುಗಳನ್ನು ಆಕರ್ಷಿಸುತ್ತವೆ. ಇದರಿಂದಾಗಿ ಇದರ ಬೇಟೆ ಬಲು ಸುಲಭ! ಇದರ ದೇಹದಿಂದ ಹೊರಬಂದಂತಿರುವ ದೊಡ್ಡ ಕಣ್ಣುಗಳು ಹೆಚ್ಚು ಬೆಳಕನ್ನು ಸಂಗ್ರಹಿಸಿ ಕಡಿಮೆ ಬೆಳಕಿನಲ್ಲೂ ಸುಲಭವಾಗಿ ಬೇಟೆಯಾಡಿ ಬಿಡುತ್ತವೆ. ಇದರ ದೇಹದಲ್ಲಿರುವ ವಿಶೇಷ ಬೆಳಕನ್ನು ಹೊರಚೆಲ್ಲುವ ಸೂಕ್ಷ್ಮ ಅಂಗ ಫೋಟೋಫಾರ್ಸ್ ರಾಸಾಯನಿಕ ಕ್ರಿಯೆಗಳಿಂದ ಬೆಳಕನ್ನು ಹೊರಸೂಸುತ್ತವೆ. (ಚಿತ್ರ ೧)

೨. ವಿಷದ ಹಲ್ಲಿನ ಮೀನು (Fangtooth Fish) : ಹೆಸರೇ ಹೇಳುವಂತೆ ಇದೂ ಕೂಡ ಸಮುದ್ರದ ಆಳದಲ್ಲಿ ವಾಸಿಸುವ ವಿಷಪೂರಿತ ಹಲ್ಲಿನ ಮೀನು. ಇದರ ಉದ್ದ ಕೇವಲ ೬ ಇಂಚು ಅಷ್ಟೇ. ಇದು ಚಿಕ್ಕದಾದ ದೇಹ ಮತ್ತು ದೊಡ್ದ ತಲೆಯನ್ನು ಹೊಂದಿದೆ. ಇವುಗಳ ಬಣ್ಣ ಕಂದು ಹಾಗೂ ಕೆಲವು ಕಪ್ಪು. ಇದು ಸಮುದ್ರದಲ್ಲಿ ೧೬ ಸಾವಿರ ಅಡಿ ಆಳದಲ್ಲಿ ಜೀವಿಸಬಲ್ಲುದು. ಈ ಆಳದಲ್ಲಿ ನೀರಿನ ಉಷ್ಣತೆ ತುಂಬಾ ಕಡಿಮೆ ಇರುತ್ತದೆ. ಇದರ ಕಣ್ಣಿಗೆ ಬಿದ್ದ ಯಾವುದೇ ಜಲಚರ ಇವುಗಳ ವಿಶಿಷ್ಟ ಹಲ್ಲಿಗೆ ಬಲಿಯಾಗಿ ಬಿಡುತ್ತದೆ. (ಚಿತ್ರ ೨)

೩. ಡ್ರ್ಯಾಗನ್ ಮೀನು (Dragon Fish): ಡ್ರ್ಯಾಗನ್ ಮೀನು, ಚಿಕ್ಕದಾದರೂ ಅತ್ಯಂತ ಭಯಾನಕ ಹಾಗೂ ದಾಳಿಕೋರ ಮೀನು. ಇದೂ ಸಮುದ್ರದ ಆಳದಲ್ಲಿ ವಾಸಿಸುತ್ತದೆ. ಇದರ ಉದ್ದವೂ ಸುಮಾರು ಆರು ಇಂಚಷ್ಟೇ. ಇದರ ತಲೆ ಉದ್ದವಾಗಿದ್ದು, ಬಾಯಿಯಲ್ಲಿ ಮೊಳೆಗಳಂತಹ ವಿಷಪೂರಿತ ಹಲ್ಲುಗಳಿವೆ. ಇದರ ಕೆನ್ನೆಯ ಮೇಲೆ ಬಾಲದಂತಹ ರಚನೆ ಕಂಡುಬರುತ್ತದೆ. ಇದರಲ್ಲೂ ಬೆಳಕನ್ನು ಹೊರಸೂಸುವ ಸೂಕ್ಷ್ಮ ಅಂಗಗಳಿವೆ (Photophores). ಇವುಗಳಿಂದ ಬೆಳಕನ್ನು ಉಂಟು ಮಾಡಿ, ನಂತರ ನಿಲ್ಲಿಸಿ, ಮಿಣುಕು ದೀಪದಂತೆ ವರ್ತಿಸುತ್ತವೆ. ಇದರಿಂದ ಆಕರ್ಷಿತಗೊಂಡ ಮೀನುಗಳು ಈ ಡ್ರ್ಯಾಗನ್ ಗೆ ಆಹಾರವಾಗಿ ಬಿಡುತ್ತದೆ. ಇವು ಸುಮಾರು ೫೦೦೦ ಅಡಿ ಆಳದಲ್ಲಿ ಜೀವಿಸುತ್ತವೆ. (ಚಿತ್ರ ೩)

೪. ಆಂಗ್ಲರ್ ಮೀನು (Angler Fish): ಬಾಸ್ಕೆಟ್ ಬಾಲ್ ನಂತಹ ದುಂಡು, ಬೇಟೆಯನ್ನು ಸುಲಭವಾಗಿ ನುಂಗಬಲ್ಲಂಥ ಬಾಯಿ, ಜತೆಗೊಂದಿಷ್ಟು ಚೂಪುಚೂಪಾದ ಹಲ್ಲುಗಳು. ಇದೂ ಸಮುದ್ರದ ಆಳದಲ್ಲಿ ವಾಸಿಸುವ ಮೀನು. ಇದಕ್ಕೆ ‘ಕಪ್ಪು ದೆವ್ವ' ಎಂಬ ಇನ್ನೊಂದು ಹೆಸರಿದೆ. ಇದರ ಉದ್ದ ಕೇವಲ ೫ ಇಂಚು ! ಇದರ ಬೆನ್ನುಹುರಿ ಈಜು ರೆಕ್ಕೆಯಾಗಿ ಮಾರ್ಪಾಡು ಹೊಂದಿ ಇದರ ತುದಿಯಲ್ಲಿ ಬೆಳಕನ್ನು ಹೊರ ಸೂಸುವ ಸೂಕ್ಷ್ಮ ಅಂಗಗಳಿವೆ. ಈ ಬಾಲವೇ ಇದರೆ ಜಲಚರಗಳಿಗೆ ಪ್ರಮುಖ ಆಕರ್ಷಣೆ. ಇವು ಸುಮಾರು ೩೦೦೦ ಅಡಿ ಆಳದಲ್ಲಿ ಜೀವಿಸುತ್ತವೆ. (ಚಿತ್ರ ೪)

೫. ಗುಲ್ಪರ್ ಈಲ್ ಮೀನು (Gulper Eel Fish): ಇದೊಂದು ವಿಲಕ್ಷಣ ಆಕೃತಿಯ, ಸಮುದ್ರದ ಆಳದಲ್ಲಿ ಜೀವಿಸುವ ಮೀನು. ಇದರ ವಿಶೇಷ ಎಂದರೆ ಬಾಯಿಯ ವಿನ್ಯಾಸ. ಇದರಿಂದಾಗಿ ಇದು ತನಗಿಂತ ದೊಡ್ಡದಾದ ಬೇಟೆಯನ್ನು ಸುಲಭವಾಗಿ ನುಂಗಿ ಬಿಡಬಲ್ಲದು. ಈ ವಿಶೇಷ ಮೀನಿಗೆ ಕೆಳಭಾಗದ ದವಡೆ ತೆಳುವಾದ ಚೀಲದಂತಿದ್ದು, ನೀರು ಹಕ್ಕಿಯಂತೆ ಕಾಣಿಸುತ್ತದೆ. ಈ ಛತ್ರಿಯಂತಹ ಬಾಯಿಯನ್ನು ಹೊಂದಿರುವ ಈಲ್ ಮೀನು ಉದ್ದವಾದ ಹೊಟ್ಟೆ ಮತ್ತು ಅತ್ಯಂತ ಉದ್ದವಾದ ಬಾಲವೂ ಇದೆ. ಈ ಮೀನು ೨ ರಿಂದ ೬ ಅಡಿ ಉದ್ದವಿರುತ್ತದೆ. ಇದು ೩೦೦೦ ದಿಂದ ೬೦೦೦ ಅಡಿ ಆಳದವರೆಗೆ ಜೀವಿಸುತ್ತದೆ. (ಚಿತ್ರ ೫)

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ