ಆಳ ಕಡಲಿನ ಜಲಚರಗಳು - ಭಾಗ ೨

ಆಳ ಕಡಲಿನ ಜಲಚರಗಳು - ಭಾಗ ೨

೬. ದೈತ್ಯ ಸ್ಕ್ವಿಡ್ ಮೀನು (Giant Squid): ಈ ತೆವಳುವ ದೈತ್ಯ ಸ್ಕ್ವಿಡ್ ಸಮುದ್ರದಲ್ಲಿ ವಾಸಿಸುವ ಅತ್ಯಂತ ದೊಡ್ದ ಜೀವಿಗಳ ಪೈಕಿ ಒಂದು ಎಂದು ಗುರುತಿಸಲಾಗಿದೆ. ಇದು ಸುಮಾರು ೬೦ ಅಡಿ ಉದ್ದದವರೆಗೂ ಬೆಳೆಯಬಲ್ಲುದು ! ಇದು ಅತ್ಯಂತ ದೊಡ್ದ ಅಕಶೇರುಕ (ಬೆನ್ನೆಲುಬಿಲ್ಲದ) ಜಲಚರ. ಇದು ಅಷ್ತಪದಿಯ (ಆಕ್ಟೋಪಸ್) ಹತ್ತಿರದ ಸಂಬಂಧಿ. ಇದುವರೆಗೂ ಜೀವಂತವಾಗಿ ಹಾಗೂ ಚಟುವಟಿಕೆಗಳಿಂದ ಇರಬಹುದಾದ ದೈತ್ಯ ಸ್ಕ್ವಿಡ್ ಅನ್ನು ಯಾರೂ ಸರಿಯಾಗಿ ನೋಡಿಲ್ಲ. ಸತ್ತ ಅಥವಾ ಮೀನುಗಾರರಿಗೆ ಬಲೆಯಲ್ಲಿ ದೊರಕಿದ ಅಥವಾ ಸಮುದ್ರದ ದಡದಲ್ಲಿ ಶವವಾದ ಸ್ಥಿತಿಯಲ್ಲಿ ನೋಡಲು ಮಾತ್ರ ಸಾಧ್ಯವಾಗಿದೆ. ಇದಕ್ಕೆ ಎಂಟು ಹೀರುಕೊಳವೆಗಳಂತಹ ಸೊಂಡಿಲುಗಳಿದ್ದು, ಇವುಗಳಿಂದ ಬೇಟೆಯಾಡುತ್ತದೆ. ಅಂದಹಾಗೆ ಈ ಸ್ಕ್ವಿಡ್ ಮೀನು ತಿಮಿಂಗಿಲಗಳಿಗೆ ಬಹಳ ರುಚಿಯಾದ ಆಹಾರವಂತೆ. (ಚಿತ್ರ ೨)

೭. ದೈತ್ಯ ಐಸೋಪಾಡ್ (Giant Isopod) : ಇದೊಂದು ಸಮುದ್ರದ ಆಳವಾದ ಹಾಸಿನಲ್ಲಿ ಜೀವಿಸುವ ಮಾಂಸಹಾರಿ ಮೀನು. ಆಕಾರದಲ್ಲಿ ತಿಗಣೆಯನ್ನು ಹೋಲುತ್ತದೆ. ಇದೊಂದು ಸಮುದ್ರದ ತಳವನ್ನು ಗುಡಿಸಿ ಸ್ವಚ್ಛ ಮಾಡುವ ಜಾಡಮಾಲಿ ಇದ್ದಂತೆ. ಮೇಲಿನಿಂದ ಏನೇ ಬೀಳಲಿ, ಅದನ್ನು ತಿಂದು ಶುಚಿಗೊಳಿಸಿ ಬಿಡುತ್ತದೆ. ಸಮುದ್ರದ ತಳದಲ್ಲಿರುವ ಇತರ ಸಣ್ಣ ಜೀವಿಗಳೇ ಇವುಗಳ ಆಹಾರ. ಇವು ಗಟ್ಟಿಯಾದ ಚಿಪ್ಪಿನಂತಹ ದೇಹವನ್ನು ಹೊಂದಿದ್ದು ನೀರಿನಲ್ಲಿ ಸುಲಭವಾಗಿ ಉರುಳಬಲ್ಲವು, ಹೊರಳಾಡಬಲ್ಲವು. ಇವು ಸುಮಾರು ಎರಡು ಸಾವಿರ ಅಡಿ ಆಳದಲ್ಲಿ ಕಂಡು ಬರುತ್ತವೆ. (ಚಿತ್ರ ೧)

೮. ಕಾಫಿನ್ ಮೀನು (Coffinfish):  ಕಾಫಿನ್ ಮೃದುವಾದ ದೇಹವುಳ್ಳ ಜಲಚರ. ಇದರ ಮೈಮೇಲೆ ಹುರುಪೆಗಳಿದ್ದು, ಉದ್ದವಾದ ಬಾಲವನ್ನು ಹೊಂದಿದೆ. ಇವು ಅತ್ಯಂತ ಚಿಕ್ಕ ಮೀನುಗಳಾಗಿದ್ದು, ಕೇವಲ ೧೦ ಸೆಂ ಮೀ ಉದ್ದ ಮಾತ್ರ ಬೆಳೆಯಬಲ್ಲವು. ಈ ವಿಚಿತ್ರ ಆಕಾರದ ಮೀನುಗಳು ಸುಮಾರು ನಾಲ್ಕು ಸಾವಿರ ಅಡಿ ಆಳದಲ್ಲಿ ಜೀವಿಸುತ್ತವೆ. (ಚಿತ್ರ ೩)

೯. ವ್ಯಾಂಪೈರ್ ಸ್ಕ್ವಿಡ್ (Vampire Squid) : ಇದೊಂದು ದೊಡ್ದ ಕಣ್ಣಿನ ವಿಚಿತ್ರ ಮೀನು. ಇದರ ದೇಹದ ಅಕ್ಕಪಕ್ಕಗಳಲ್ಲಿ ಕಿವಿಗಳಂತಹ ದೊಡ್ಡ ಈಜು ರೆಕ್ಕೆಗಳಿವೆ. ಇದೊಂದು ಚಿಕ್ಕ ಮೀನಾಗಿದ್ದು ಕೇವಲ ಆರು ಇಂಚು ಮಾತ್ರ ಬೆಳೆಯಬಲ್ಲದು. ಇದರ ದುಂಡಾದ, ಹೊರಬಂದಂತೆ ಕಾಣುವ ಕಣ್ಣುಗಳು ನಾಯಿಯ ಅಥವಾ ಬೆಕ್ಕಿನ ಕಣ್ಣುಗಳಂತೆ ಕಾಣಿಸುತ್ತವೆ. ಇದರ ದೇಹದಲ್ಲಿ ಬೆಳಕನ್ನು ಹೊರಸೂಸುವ ಸೂಕ್ಷ್ಮ ಅಂಗಗಳಿದ್ದು, ಬೆಳಕು ಹೊರ ಸೂಸದಿದ್ದಾಗ ಬೇರೆ ಪ್ರಾಣಿಗಳಿಗೆ ಕಾಣಿಸುವುದೇ ಇಲ್ಲ ! ಇವು ಕೂಡ ಚೂಪಾದ ಹಲ್ಲುಗಳನ್ನು ಹೊಂದಿದ್ದು, ಬೇಟೆಯನ್ನು ಸುಲಭವಾಗಿ ಕಚ್ಚಿ ಹಿಡಿಯುತ್ತವೆ. ಇವು ಅತ್ಯಂತ ವೇಗವಾಗಿ ಚಲಿಸಬಲ್ಲವು. ಇವು ಸುಮಾರು ಮೂರು ಸಾವಿರ ಅಡಿ ನೀರಿನ ಆಳದಲ್ಲಿ ಜೀವಿಸುತ್ತವೆ. (ಚಿತ್ರ ೪)

೧೦. ಉದ್ದ ಮೂಗಿನ ಚಿಮೇರಾ (Long nosed Chimaera) : ಇದೊಂದು ವಿಶಿಷ್ಟ ಜಾತಿಯ ಉದ್ದ ಮೂಗಿನ ಮೀನು. ಇದು ಸುಮಾರು ೫ ಅಡಿಗಳವರೆಗೂ ಬೆಳೆಯಬಲ್ಲದು. ಈ ಮೀನು ಸೂಪರ್ ಸಾನಿಕ್ ಜೆಟ್ ವಿಮಾನವನ್ನು ಹೋಲುವಂತಿರುತ್ತದೆ. ಈ ಮೀನನ್ನು ದಕ್ಷಿಣ ಆಫ್ರಿಕಾದಲ್ಲಿ ಶಾರ್ಕ್ ಭೂತ ಎಂದು ಕರೆಯುತ್ತಾರೆ. ಇವು ದೂರದಿಂದ ಶಾರ್ಕ್ ನ ಸಂಬಂಧಿಗಳು. ಇದರ ಬೆನ್ನೆಲುಬಿನಲ್ಲಿರುವ ವಿಷಕಾರಿ ಈಜುರೆಕ್ಕೆಯ ಒಂದೇ ಹೊಡೆತಕ್ಕೆ ಮನುಷ್ಯ ವಿಷವೇರಿ ಸಾಯಬಲ್ಲ ! ಇದು ಸುಮಾರು ಎಂಟು ಸಾವಿರ ಅಡಿ ಆಳದಲ್ಲಿ ಜೀವಿಸುತ್ತದೆ. (ಚಿತ್ರ ೫)

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ