ಆವಿಷ್ಕಾರದ ಹರಿಕಾರ
ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ ಈ ಪುಸ್ತಕದ ಅನುವಾದ ಮಾಡಿದ ವಿಶ್ವೇಶ್ವರ ಭಟ್ ಇವರು. ಮೂಲತಃ ಉದ್ಯಮಿಯಾದ ಅವಿ ಯೋರಿಶ್ ಅವರ ಈ ಕೃತಿ ವಿಶ್ವದ ನಲ್ವತ್ತಕ್ಕೂ ಅಧಿಕ ಭಾಷೆಗೆ ಅನುವಾದವಾಗಿರುವುದು ಈ ಪುಸ್ತಕದ ಹೆಗ್ಗಳಿಕೆ.
ಈ ಪುಸ್ತಕವು ಇಸ್ರೇಲ್ ಎಂಬ ಪುಟ್ಟ ದೇಶದ ಬಗ್ಗೆ ಹಾಗೂ ಅಲ್ಲಾಗುವ ಆವಿಷ್ಕಾರಗಳ ಕುರಿತ ಸಮಗ್ರ ಮಾಹಿತಿ ನೀಡುತ್ತದೆ. ಅನುವಾದಕರಾದ ವಿಶ್ವೇಶ್ವರ ಭಟ್ ಇವರು ಹಲವಾರು ಸಲ ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವುದರಿಂದ ಈ ಪುಸ್ತಕದ ಅನುವಾದ ಮತ್ತಷ್ಟು ಆಪ್ತವೆನಿಸುತ್ತದೆ.
ಲೇಖಕರು ಇಸ್ರೇಲ್ ಬಗ್ಗೆ ರಕ್ಷಾಪುಟಗಳಲ್ಲಿ ತಮ್ಮದೇ ಆದ ಮಾತುಗಳಲ್ಲಿ ಹೀಗೆ ಬರೆದಿದ್ದಾರೆ “ಇಸ್ರೇಲ್ ಭಾಗದ ಅರವತ್ತೈದರಷ್ಟು ರಣರಣ ಮರುಭೂಮಿ. ಇಡೀ ದೇಶದಲ್ಲಿ ನದಿಮೂಲಗಳಿಲ್ಲ. ಮಳೆಯೂ ಬೀಳುವುದಿಲ್ಲ. ಬೆಂಗಳೂರಿನಲ್ಲಿ ಎರಡು ಗಂಟೆ ಮಳೆ ಸುರಿದಷ್ಟು ಇಸ್ರೇಲಿನಲ್ಲಿ ಒಂದು ವರ್ಷದಲ್ಲಿ ಸುರಿಯಬಹುದು. ಆದರೆ ಇಸ್ರೇಲ್, ನೀರಿನ ನಿರ್ವಹಣೆಯಲ್ಲಿ ಜಗತ್ತಿಗೇ ಮಾದರಿ. ಕೃಷಿ ಮತ್ತು ಕೃಷಿ ತಂತ್ರಜ್ಞಾನದ ಕುರಿತು ಪಾಠ ಮಾಡಿದರೆ, ಇಡೀ ಜಗತ್ತು ಕೇಳಿಸಿಕೊಳ್ಳುತ್ತದೆ. ಇನ್ನು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ಇಸ್ರೇಲ್ ದೊಡ್ಡ ದೊಡ್ಡ ದೇಶಗಳಿಗೆ ಸರಿಸಾಟಿಯಾಗಿ ನಿಂತಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶವೆಂದರೆ ಇಸ್ರೇಲ್. ಇವನ್ನೆಲ್ಲಾ ನೋಡಿದರೆ, ೮೫ ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡ ಸದೃಶ. ಕರ್ನಾಟಕದ ಆರು ಜಿಲ್ಲೆಗಳಷ್ಟು ಚಿಕ್ಕದಾಗಿರುವ ಇಸ್ರೇಲ್ ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ,
ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ-ಹೊರೆಗಳನ್ನು ಹೊಂದಿರುವ ಇಸ್ರೇಲ್, ಆವಿಷ್ಕಾರಗಳ ಹರಿಕಾರನಾದದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ ಗಳಿಗಿಂತ ಹೆಚ್ಚು ಸ್ಟಾರ್ಟ್ ಅಪ್ ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ? ಅದು ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೇ ಇಂದು ಇಸ್ರೇಲ್ ಸ್ವಾವಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ.”
ಪುಸ್ತಕದ ಬೆನ್ನುಡಿಯಲ್ಲಿ “ಹಸಿದವರ ಹೊಟ್ಟೆ ತುಂಬಿಸಲು, ಅನಾರೋಗ್ಯ ಗುಣಪಡಿಸಲು, ರಕ್ಷಣೆ ಇಲ್ಲದವರ ರಕ್ಷಿಸಲು ಹಾಗೂ ಮರುಭೂಮಿಯನ್ನು ಅರಳಿಸಲು ಇಸ್ರೇಲಿಗರು ಏನೆಲ್ಲಾ ಮಾಡುತ್ತಿದ್ದಾರೆ, ಗೊತ್ತಾ? ಇಸ್ರೇಲ್ ಎಂಬ ಪುಟ್ಟ ದೇಶದಲ್ಲಿರುವ ಎಲ್ಲಾ ಧರ್ಮಗಳ ಸೃಜನಶೀಲ ಮಿದುಳುಗಳೂ ಹಠಕ್ಕೆ ಬಿದ್ದವರಂತೆ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು ಈ ಕೃತಿ ಕಟ್ಟಿಕೊಡುತ್ತದೆ. ಜಗತ್ತನ್ನು ದುರಸ್ತಿ ಮಾಡುವ ಯಹೂದಿಗಳ ‘ಟಿಕ್ಕುನ್ ಓಲಮ್' ಎಂಬ ಚಿಂತನೆಯನ್ನು ಬಳಸಿ, ದೇಶದೇಶಗಳ ಆತ್ಮವನ್ನೇ ತಟ್ಟಿ, ಪ್ರಪಂಚದ ಬಹುದೊಡ್ಡ ಸವಾಲುಗಳನ್ನು ಮುಗುಮ್ಮಾಗಿ ಪರಿಹರಿಸಲು ಇಸ್ರೇಲ್ ತನ್ನ ಗಾತ್ರಕ್ಕೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದೆ.
ಇಸ್ರೇಲ್ ನಲ್ಲಿ ಪರಮಾದ್ಭುತ ಆವಿಷ್ಕಾರಿಗಳಿದ್ದಾರೆ. ಜನರನ್ನು ಉಳಿಸುವ ಹಾಗೂ ಬದುಕಿನ ಉನ್ನತ ಉದ್ದೇಶವನ್ನು ಕಂಡುಕೊಳ್ಳುವ ಸೂತ್ರಕ್ಕೆ ಅವರೆಲ್ಲ ಬಂಧಿಗಳು. ವೈಫಲ್ಯ ಹಾಗೂ ಅಡ್ಡಿ ಆತಂಕಗಳ ಮುಖಕ್ಕೆ ಹೊಡೆದಂತೆ ಈ ಸೃಜನಶೀಲ ಮನಸ್ಸುಗಳು ಅವಕಾಶ ಮತ್ತು ಧೈರ್ಯವನ್ನು ಹುಡುಹುಡುಕಿ ಬಾಚಿಕೊಳ್ಳುತ್ತವೆ. ತನ್ನ ಪಾಲಿಗಿಂತ ಹೆಚ್ಚು ಕತ್ತಲೆಯನ್ನು ಅನುಭವಿಸಿದ ದೇಶಕ್ಕೆ ಈ ಕತೆಗಳೇ ಬೆಳಕಿನ ಕಿರಣಗಳು. ಉದ್ಯಮಶೀಲರು, ಸ್ಟ್ರಾರ್ಟಪ್ ಗಳ ಬಗ್ಗೆ ಆಸಕ್ತಿ ಹೊಂದಿರುವವರು ಹಾಗೂ ಸೃಜನಶೀಲ ಆವಿಷ್ಕಾರಗಳ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.”
೨೬೬ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಲೇಖಕರು ಮನೋಹರ ಮಸ್ಕಿ ಅವರಿಗೆ ಅರ್ಪಿಸಿದ್ದಾರೆ. ಪುಟ್ಟ ದೇಶವಾದ ಇಸ್ರೇಲ್ ನ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಈ ಪುಸ್ತಕ ಬಹಳ ಸಹಕಾರಿ.