ಆಶಾಕಿರಣ… (ರೇ ಆಫ್ ಹೋಪ್) ಭಾಗ 1

ಕಿರು ಚಿತ್ರ. ದೃಶ್ಯ ಒಂದು
ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮಂಡೇಲಾ ಚಿತ್ರಗಳು ಇರುತ್ತದೆ. ಆ ದೃಶ್ಯಗಳನ್ನು ಒಬ್ಬ 18 ವರ್ಷದ ಯುವಕ ತದೇಕಚಿತ್ತದಿಂದ ನೋಡುತ್ತಿರುತ್ತಾನೆ.
ಈ ದೃಶ್ಯದಲ್ಲಿ ಆತನ ಮುಖದ ಮೇಲೆ ಮಾತ್ರ ದೀಪದ ಬೆಳಕು ಇರುತ್ತದೆ. ಆಗ ಒಂದು ಮಾರ್ಗದರ್ಶಕನ ಧ್ವನಿ ಆ ಹುಡುಗನನ್ನು ಪ್ರಶ್ನಿಸುತ್ತದೆ, " ಮಗು ಈ ಚಿತ್ರಗಳನ್ನು ನೋಡಿದೆಯಾ "
ಹುಡುಗ " ಎಸ್ " ಎಂದು ತಲೆ ಆಡಿಸುತ್ತಾನೆ.
ಮಾರ್ಗದರ್ಶಕ " ಅವರು ಯಾರು ಗೊತ್ತಾ "
ಹುಡುಗ " ಇಲ್ಲ " ಎಂದು ತಲೆಯಾಡಿಸುತ್ತಾನೆ.
ಮಾರ್ಗದರ್ಶಕ " ಅವರು ಈ ಜಗತ್ತು ಕಂಡ ಮಹಾನ್ ವ್ಯಕ್ತಿಗಳು"
ಹುಡುಗ ಸುಮ್ಮನೆ ತಲೆ ಆಡಿಸುತ್ತಾನೆ.
ಮಾರ್ಗದರ್ಶಕ " ಇವತ್ತು ಈ ಭೂಮಿಯ ಮೇಲೆ ಸುಮಾರು 750 ಕೋಟಿಯಷ್ಟು ಜನ ವಾಸವಿದ್ದಾರೆ. ಭೂಮಿಯಲ್ಲಿ ಸುಮಾರು 10,000 ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಮನುಷ್ಯ ಜೀವಿಗಳು ಜೀವಂತವಾಗಿದ್ದಾರೆ ಎಂದು ಭಾವಿಸಿದರೆ ಆ ಸಂಖ್ಯೆ ಟ್ರಿಲಿಯನ್ಗಟ್ಟಲೆಯಾಗುತ್ತದೆ. ಎಷ್ಟೋ ಜನ ಬಂದು ಹೋಗಿದ್ದಾರೆ. ಆದರೆ ನಾವು ಈಗಲೂ ನೆನಪಿಟ್ಟು ಕೊಂಡಿರುವುದು ಕೇವಲ ಕೆಲವೇ ಜನರನ್ನು ಮಾತ್ರ. ಈಗ ದೃಶ್ಯದಲ್ಲಿ ತೋರಿಸಿದ ಕೆಲವರು ಅದರಲ್ಲಿ ಸೇರಿದ್ದಾರೆ. ಇದು ಯಾಕೆ ಗೊತ್ತಾ?
ಹುಡುಗ ನಿರ್ಲಕ್ಷದಿಂದ ಸುಮ್ಮನೆ ನೋಡುತ್ತಿರುತ್ತಾನೆ.
ಮಾರ್ಗದರ್ಶಕ " ಹೋಗ್ಲಿ ನಿನಗೆ ನೆಪೋಲಿಯನ್ ಬೋನೊಪಾರ್ಟೆ ಗೊತ್ತಾ"
ಹುಡುಗ " ಇಲ್ಲ"
ಆಗ ಮಾರ್ಗದರ್ಶಕ " ಫ್ರೆಂಚ್ ಕ್ರಾಂತಿಯ ಮಹಾ ನಾಯಕ. ಆತ ಒಮ್ಮೆ ಹೇಳುತ್ತಾನೆ, ಹುಟ್ಟಿದ ಪ್ರತಿ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಒಂದು ಗುರುತನ್ನು ಬಿಟ್ಟು ಹೋಗಬೇಕು. ಆಗ ಮಾತ್ರ ಬದುಕು ಸಾರ್ಥಕ ಕಾಣುತ್ತದೆ. " ನೀನು ಸಾಧಿಸಲೇ ಹುಟ್ಟಿರುವೇ ' ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.
ಕಂದ ಈ ಅಪೂರ್ವ, ಅದ್ಬುತ ಜೀವನವನ್ನು ಸವಿಯುವುದು ಬಿಟ್ಟು ಅದನ್ನು ನೀನು ವ್ಯರ್ಥ ಮಾಡುತ್ತಿರುವೆ. ಸ್ವಾತಂತ್ರ್ಯಕ್ಕೆ ಬದಲಾಗಿ ಗುಲಾಮಿತನವನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಪ್ರೀತಿಗೆ ಬದಲಾಗಿ ದ್ವೇಷವನ್ನು, ತಾಳ್ಮೆಗೆ ಬದಲಾಗಿ ಕೋಪವನ್ನು ಮೇಲುಗೈ ಸಾಧಿಸಲು ಬಿಟ್ಟಿರುವೆ. ಸ್ವಲ್ಪ ಯೋಚಿಸಿ ನೋಡು. ಈಗ ನೀನು ಎಲ್ಲಿರುವೆ ಗೊತ್ತೇ?”
ಹುಡುಗ " ಗೊತ್ತು"
ಮಾರ್ಗದರ್ಶಕ "ಆದರೆ ನೀನು ಇಲ್ಲಿ ಇರಬಾರದಿತ್ತು”
ಹುಡುಗ "ಹೌದು"
ಮಾರ್ಗದರ್ಶಕ "ಆದರೆ ನಿನ್ನ ಜೀವನದ ಅಮೂಲ್ಯವಾದ ಆರು ತಿಂಗಳು ಈ ಕತ್ತಲ ಕೋಣೆಯಲ್ಲಿ ಕಳೆದಿರುವೆ"
ಹುಡುಗ " ಹೌದು "
ಮಾರ್ಗದರ್ಶಕ "ಒಮ್ಮೆ ನೀನು ಇಲ್ಲಿಗೆ ಬರಲು ಕಾರಣವಾದ ಘಟನೆಯನ್ನು ನೆನಪಿಸಿಕೋ"
***
ದೃಶ್ಯ ಎರಡು
ಅದೇ ಹುಡುಗ ಮನೆಯ ಒಂದು ಕೋಣೆಯಲ್ಲಿ ಅತ್ಯುತ್ಸಾಹದಿಂದ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ಅದನ್ನು ವಿವಿಧ ಕೋನಗಳಿಂದ ಚಿತ್ರಿಕರಿಸಬೇಕು. ಅದರಲ್ಲಿ ಕಾರ್ ರೇಸ್ ಮತ್ತು ಶೂಟಿಂಗ್ ಆಟದಲ್ಲಿ ಶತ್ರುಗಳನ್ನು ಗುಂಡಿಟ್ಟು ಕೊಲ್ಲುವ ದೃಶ್ಯಗಳನ್ನು ಹೆಚ್ಚಾಗಿ ಚಿತ್ರೀಕರಿಸಬೇಕು. ಆಗ ಅವನ ಆಕ್ರಮಣಕಾರಿ ಮನೋಭಾವ ಹೆಚ್ಚಾದಂತೆ ಅವನು ಕಿರುಚುತ್ತಾ, ಕೂಗುತ್ತಾ ಹುಚ್ಚನಂತೆ ಆಡುತ್ತಿರುತ್ತಾನೆ. ತಾಯಿ ಊಟ ಮಾಡಲು ಕರೆಯುತ್ತಾಳೆ. ಆತ ನಿರಾಕರಿಸುತ್ತಾನೆ. ಆಗ ತಾಯಿ ತಟ್ಟೆಯಲ್ಲಿ ಅನ್ನ ತಂದು ಕೈ ತುತ್ತು ನೀಡಲು ಹೋಗುತ್ತಾಳೆ. ಆಗ ಅವನು ಅದನ್ನು ದೂರ ತಳ್ಳಿ ಚೆಲ್ಲುತ್ತಾನೆ. ವಿಡಿಯೋ ಗೇಮ್ ಆಡುತ್ತಾ ಅಲ್ಲಿಯೇ ಮಲಗಿಕೊಳ್ಳುತ್ತಾನೆ. ಮಧ್ಯರಾತ್ರಿ ಮತ್ತೆ ಎದ್ದು ಆಡುತ್ತಾನೆ. ಸಂಪೂರ್ಣವಾಗಿ ವಿಡಿಯೋ ಗೇಮ್ ಗೆ ಅಡಿಕ್ಟ್ ಆಗಿರುತ್ತಾನೆ.
***
ದೃಶ್ಯ ಮೂರು
ಆ ಹುಡುಗನ ಅಪ್ಪ-ಅಮ್ಮ ಸಣ್ಣದಾಗಿ ಜಗಳವಾಡುತ್ತಿದ್ದಾರೆ. ತಾಯಿ "ನೀವು ಹೀಗೆ ಮಗನ ಬಿಹೇವಿಯರ್ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅವನು ನಮ್ಮನ್ನು ಕೈ ಬಿಟ್ಟು ಹೋಗುತ್ತಾನೆ. ಏಕೆಂದರೆ ಆತ ಸಂಪೂರ್ಣ ವಿಡಿಯೋ ಗೇಮ್ ಅಡಿಕ್ಟ್ ಆಗಿದ್ದಾನೆ"
ತಂದೆ " ಇಲ್ಲ ಅವನು ನನ್ನ ಮಗ ಹಾಗೆಲ್ಲ ಮಾಡುವುದಿಲ್ಲ. ಏನೋ ಈಗಿನ ಕಾಲದಲ್ಲಿ ಎಲ್ಲಾ ಮಕ್ಕಳ ಹಾಗೆ ಸುಮ್ಮನೆ ಆಟ ಆಡಿಕೊಳ್ಳುತ್ತಾನೆ. ಅಷ್ಟೇ"
ತಾಯಿ "ಇಲ್ಲಾರಿ ಅವನು ಅದರಲ್ಲಿ ತುಂಬಾ ಆಳಕ್ಕೆ ಹೋಗಿ ಡಿಪ್ರೆಶನ್ ಮಟ್ಟ ತಲುಪಿದ್ದಾನೆ. ಕಾಲೇಜಿಗೂ ಸರಿಯಾಗಿ ಹೋಗುತ್ತಿಲ್ಲ. ಊಟ ನಿದ್ದೆ ಮಾಡುತ್ತಿಲ್ಲ."
ತಂದೆ "ನೀನೇನು ತಲೆಕೆಡಿಸಿಕೊಳ್ಳಬೇಡ ಸುಮ್ನೆ ಇರು. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ"
ತಾಯಿ "ಆಯ್ತು ನಿಮ್ಮಿಷ್ಟ ಆದರೆ ಮುಂದೆ ಖಂಡಿತ ಪಶ್ಚಾತಾಪ ಪಡಬೇಕಾಗುತ್ತದೆ "
***
ದೃಶ್ಯ ನಾಲ್ಕು
ಅಪ್ಪ ಆ ಹುಡುಗನ ಪ್ರೈವೇಟ್ ರೂಂಗೆ ಬರುತ್ತಾನೆ. ಮಗ ಕೃತಕ ಬಂದೂಕು ಹಿಡಿದುಕೊಂಡು ಮಲಗಿರುತ್ತಾನೆ. ಅಪ್ಪ ಅವನ ತಲೆ ನೇವರಿಸುತ್ತಾ ನೋಡುತ್ತಾನೆ. ಮಗ ಎಚ್ಚರವಾಗಿ ಅಪ್ಪನನ್ನು ಒಮ್ಮೆ ನೋಡಿ ಮತ್ತೆ ವಿಡಿಯೋ ಗೇಮ್ ಆಡಲು ಶುರು ಮಾಡುತ್ತಾನೆ.
ಆಗ ಅಪ್ಪ ಹೇಳುತ್ತಾನೆ "ಮಗನೇ ಮುಂದಿನ ವಾರ ನಿನ್ನ ಸೆಕೆಂಡ್ ಪಿಯುಸಿ ಎಕ್ಸಾಮ್ ಇದೆ. ನಿನ್ನ ಭವಿಷ್ಯದ ದೃಷ್ಟಿಯಿಂದ ಇದು ಟರ್ನಿಂಗ್ ಪಾಯಿಂಟ್. ಬಹಳ ಮುಖ್ಯ. ಆದ್ದರಿಂದ ಈ ಪರೀಕ್ಷೆ ಮುಗಿಯುವವರೆಗೂ ವಿಡಿಯೋ ಗೇಮ್ ಬಿಟ್ಟು ಸ್ವಲ್ಪ ಓದುವ ಕಡೆ ಗಮನ ಕೊಡು"
ಆಗ ಮಗ " ಆಯ್ತು ಡ್ಯಾಡಿ ನೀವು ಹೋಗಿ, ನನಗೆ ಈಗ ಡಿಸ್ಟರ್ಬ್ ಮಾಡಬೇಡಿ" ಎಂದು ಮತ್ತೆ ವಿಡಿಯೋ ಗೇಮ್ಸ್ ಶುರು ಮಾಡುತ್ತಾನೆ.
***
ದೃಶ್ಯ ಐದು
ಎರಡನೇ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿರುತ್ತದೆ. ಇವರ ಮಗ ಫೇಲಾಗಿರುತ್ತಾನೆ. ತಂದೆ ಚಿಂತಾಕ್ರಾಂತವಾಗಿ ಕುಳಿತಿರುತ್ತಾರೆ. ತಾಯಿ ತಂದೆಯೊಂದಿಗೆ ಜಗಳವಾಡುತ್ತಿರುತ್ತಾರೆ.
ತಾಯಿ "ನೋಡಿದ್ರಾ? ನಾನು ಎಷ್ಟು ಸಾರಿ ಹೇಳಿದೆ. ನೀವು ಕೇಳಲಿಲ್ಲ. ಅವನು ತುಂಬಾ ಅಡಿಕ್ಟ್ ಆಗಿದ್ದ. ಡಿಪ್ರೆಶನ್ ಗೆ ಹೋಗಿದ್ದ. ಇದೆಲ್ಲ ಆಗಿದ್ದು ನಿಮ್ಮಿಂದಾನೆ. ಹೈಸ್ಕೂಲಿನಲ್ಲಿ ಎಂಥಾ ಬ್ರಿಲಿಯಂಟ್ ರ್ಯಾಂಕ್ ಸ್ಟೂಡೆಂಟ್ ಅವನು. ಆದರೆ ಈಗ ಹಾಳಾಗಿದ್ದಾನೆ. ಜೀವನವನ್ನು ಹೇಗೆ ಕಟ್ಟಿಕೊಳ್ಳುವುದು ಅವನು. ನನಗೆ ಸಮಾಜದಲ್ಲಿ ತಲೆಯೆತ್ತಿ ತಿರುಗೋಕೆ ಆಗುತ್ತಿಲ್ಲ" ಹೀಗೆ ಗಂಡನನ್ನು ತುಂಬಾ ಕೆಟ್ಟದಾಗಿ ಕೋಪದಿಂದ ನಿಂದಿಸುತ್ತಾಳೆ. ಅವನು ಹಾಳಾಗಲು ಪರೋಕ್ಷವಾಗಿ ನೀವೇ ಕಾರಣ ಎಂದು ದೂರುತ್ತಾಳೆ. ಜೋರಾಗಿ ಕೂಗಾಡುತ್ತಾಳೆ. ಕೊನೆಗೆ ದುಃಖದಿಂದ ಅಳುತ್ತಾಳೆ.
***
(ಇನ್ನೂ ಇದೆ)
ರಚನೆ: ವಿವೇಕಾನಂದ. ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ