ಆಶಾಕಿರಣ… (ರೇ ಆಫ್ ಹೋಪ್) ಭಾಗ 2

ದೃಶ್ಯ ಆರು
ಅದೇ ಕೋಪದ ಬರದಲ್ಲಿ ತಂದೆ ಮಗನಿದ್ದ ರೂಮಿಗೆ ಬರುತ್ತಾನೆ. ಮಗ ಎಂದಿನಂತೆ ಕಿರುಚುತ್ತಾ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ತಂದೆ ನಿಂತು ಅದನ್ನು ಸ್ವಲ್ಪ ಹೊತ್ತು ನೋಡಿ ಕೊನೆಗೆ ವಿಡಿಯೋ ಗೇಮ್ ಕರೆಂಟ್ ಸ್ವಿಚ್ ಆಫ್ ಮಾಡುತ್ತಾನೆ. ಮಾನಿಟರ್ ಆಫ್ ಆಗುತ್ತದೆ. ಅದನ್ನು ನೋಡಿ ಮಗ ಶಾಕ್ ಆಗುತ್ತಾನೆ. ಅಪ್ಪನನ್ನು ಕೋಪದಿಂದ ಪ್ರಶ್ನಿಸುತ್ತಾನೆ. ಅಪ್ಪ ಅದನ್ನು ನಿರ್ಲಕ್ಷಿಸಿ " ಮತ್ತೆ ಇನ್ನು ಮುಂದೆ ವಿಡಿಯೋ ಗೇಮ್ ಆಡಬಾರದು. ನಿನ್ನ ಭವಿಷ್ಯ ಹಾಳಾಗುತ್ತಿದೆ"
ಮಗ ಕೇರ್ ಮಾಡುವುದಿಲ್ಲ. ಮತ್ತೆ ಎದ್ದು ಹೋಗಿ ಕರೆಂಟ್ ಸ್ವಿಚ್ ಆನ್ ಮಾಡಿ ವಿಡಿಯೋ ಗೇಮ್ ಆಡತೊಡಗುತ್ತಾನೆ. ಸ್ವಲ್ಪ ಹೊತ್ತು ಇದನ್ನು ಗಮನಿಸಿದ ತಂದೆ ಕೋಪದಿಂದ ಅಲ್ಲಿದ್ದ ವಿಡಿಯೋ ಗೇಮ್ ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಒಡೆದು ಹಾಕುತ್ತಾನೆ, ಚೆಲ್ಲಾಪಿಲ್ಲಿ ಮಾಡುತ್ತಾನೆ. ಇದನ್ನು ನೋಡಿ ಮಗನಿಗೆ ತಡೆದುಕೊಳ್ಳಲು ಆಗುವುದಿಲ್ಲ. ಕೋಪದಿಂದ ಅಲ್ಲಿದ್ದ ಕೈಗೆ ಸಿಕ್ಕಿದ ಕಬ್ಬಿಣದ ರಾಡಿನಿಂದ ಅಪ್ಪನ ತಲೆಗೆ ಹೊಡೆಯುತ್ತಾನೆ." ಅಮ್ಮ" ಎಂದು ಕೂಗುತ್ತಾ, ಅಪ್ಪ ಕುಸಿಯುತ್ತಾನೆ.
***
ದೃಶ್ಯ ಏಳು
ಮತ್ತೆ ದೃಶ್ಯ ಒಂದರ ಸನ್ನಿವೇಶ ಪ್ರವೇಶ. ಮಾರ್ಗದರ್ಶಕ "ಅಂದು ನಿನ್ನನ್ನು ಪೊಲೀಸರು ಬಾಲ ಅಪರಾಧಿಯಾಗಿ ಕರೆದುಕೊಂಡು ಬಂದಾಗ ನಿನ್ನೊಳಗಿನ ರಾಕ್ಷಸತ್ವ ಸಂಪೂರ್ಣ ಬಯಲಾಗಿತ್ತು. ಇಲ್ಲಿನ ಎಲ್ಲಾ ಅಧಿಕಾರಿಗಳು, ನೌಕರರು ನಿನ್ನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಲು ರೆಕಮೆಂಡ್ ಮಾಡಿದರು. ಏಕೆಂದರೆ ನಿನ್ನನ್ನು ನಿಭಾಯಿಸುವುದು ತುಂಬಾ ಕಷ್ಟ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ನಾನು ನಿನ್ನನ್ನು ಸೂಕ್ಷ್ಮವಾಗಿ ಗಮನಿಸಿದೆ. ನಿನ್ನೊಳಗಿನ ಒಂದು ರೀತಿಯ ದಿವ್ಯ ತೇಜಸ್ಸು, ರಾಕ್ಷಸತ್ವದೊಳಗಿನ ದೈವಿಕ ಗುಣ ನನಗೆ ಕಾಣಿಸಿತು. ಆದ್ದರಿಂದ ನಾನೇ ನಿನ್ನ ವಿಷಯದಲ್ಲಿ ರಿಸ್ಕ್ ತೆಗೆದುಕೊಂಡೆ. ಪ್ರಾರಂಭದಲ್ಲಿ ತುಂಬಾ ಕಷ್ಟವಾಯಿತು. ನಿನ್ನ ಆ ಯೌವ್ವನದ ಆಕ್ರೋಶ ಮಿತಿಮೀರಿತ್ತು. ಆದರೆ ಈ ಆರು ತಿಂಗಳ ನಂತರದಲ್ಲಿ ನನಗೆ ಹೆಮ್ಮೆ ಇದೆ. ನಿನ್ನ ಮೌನ ನನಗೆ ಇಷ್ಟವಾಗಿದೆ. ಈಗ ನಿನ್ನನ್ನು ನೇರವಾಗಿ ಒಂದು ಪ್ರಶ್ನೆ ಕೇಳುತ್ತೇನೆ "ನೀನು ಅಂದು ನಿನ್ನ ತಂದೆಯನ್ನು ರಾಡಿನಿಂದ ಹೊಡೆದದ್ದಕ್ಕೆ ನಿನಗೆ ಏನಾದರೂ ಪಶ್ಚಾತಾಪವಾಗುತ್ತಿದೆಯೇ?”
ಯುವಕ ಸ್ವಲ್ಪ ಹೊತ್ತು ಯೋಚಿಸಿ ದೀರ್ಘವಾಗಿ ಉಸಿರೆಳೆದುಕೊಂಡು *yes i am feeling guilty " ( ಹೌದು ನನಗೆ ತಪ್ಪಿನ ಅರಿವಾಗಿದೆ ) ಎನ್ನುತ್ತಾನೆ. ಆ ಕ್ಷಣವೇ ಮಾರ್ಗದರ್ಶಕ ತುಂಬಾ ಖುಷಿಯಾಗಿ " ಎಸ್ " ಎಂದು ಗಾಳಿಯಲ್ಲಿ ಕೈಗುದ್ದುತ್ತಾನೆ.
***
ದೃಶ್ಯ ಎಂಟು
ಮಾಂಟೇಜ್ ದೃಶ್ಯಗಳು
ಮಾರ್ನಿಂಗ್ ಜಾಗಿಂಗ್, ರನ್ನಿಂಗ್, ಬಾಕ್ಸಿಂಗ್, ಜಿಮ್, ಸ್ವಿಮ್ಮಿಂಗ್, ಯೋಗ, ಧ್ಯಾನ, ಪ್ರಾರ್ಥನೆ ಎಕ್ಸೆಟ್ರಾ ಈ ಎಲ್ಲಾ ಚಟುವಟಿಕೆಗಳನ್ನು ಅವನಿಂದ ನಿರಂತರವಾಗಿ ಮಾಡಿಸಲಾಗುತ್ತದೆ. ಹಾಗೆಯೇ ಸಾಕಷ್ಟು ಪುಸ್ತಕಗಳನ್ನು ಓದಿಸಲಾಗುತ್ತದೆ. ಪರಿಣಿತರ ಕೌನ್ಸಿಲಿಂಗ್ ನೀಡಲಾಗುತ್ತದೆ.
***
ದೃಶ್ಯ ಒಂಬತ್ತು
ಇದು ಮುಗಿಯುತ್ತಿದ್ದಂತೆ ಒಂದು ದಿನ ಆ ಯುವಕ ಮಾರ್ಗದರ್ಶಕನ ಬಳಿ ನಾನು ನನ್ನ ಮನೆಗೆ ಹೋಗಬೇಕು ಎಂದು ಕೇಳುತ್ತಾನೆ. ಆಗ ಮಾರ್ಗದರ್ಶಕ "ಅದು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನೀನು ಮೇಜರ್ ಫ್ರೌಢ ಆಗುತ್ತೀಯಾ. ಆಗ ನಿನ್ನನ್ನು ಈ ರಿಮೆಂಡ್ ಹೋಂ ನಿಂದ ಜೈಲಿಗೆ ಕಳಿಸಲಾಗುತ್ತದೆ ಎನ್ನುತ್ತಾನೆ. ಯುವಕನಿಗೆ ಬೇಸರವಾಗುತ್ತದೆ." ಈಗ ನನ್ನ ತಂದೆ ಹೇಗಿದ್ದಾರೆ " ಎಂದು ಕೇಳುತ್ತಾನೆ. ಮಾರ್ಗದರ್ಶಕ "ನನಗೆ ಆ ಬಗ್ಗೆ ಮಾಹಿತಿ ಇಲ್ಲ . ಪೊಲೀಸರು ನಿನ್ನನ್ನು ಕರೆದುಕೊಂಡು ಬಂದಿದ್ದಾಗ ಕೊಟ್ಟ ಮಾಹಿತಿ ಮಾತ್ರ ತಿಳಿದಿದೆ ಅಷ್ಟೇ" ಎನ್ನುತ್ತಾನೆ.
ಆಗ ಯುವಕ "ಪ್ಲೀಸ್ ಒಂದು ದಿನವಾದರೂ ನನಗೆ ನನ್ನ ಮನೆಯವರನ್ನು ತೋರಿಸಿ ನಾನು ಇಡೀ ಜೀವನ ನಿಮ್ಮ ಋಣದಲ್ಲಿ ಇರುತ್ತೇನೆ" ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಆಗ ಮಾರ್ಗದರ್ಶಕ "ನೋಡೋಣ ವಾರ್ಡನ್ ಗೆ ಅಧಿಕೃತವಾಗಿ ಮನವಿ ಮಾಡಿಕೊಳ್ಳುತ್ತೇನೆ. ಆದರೆ ವಾರ್ಡನ್ ಮನವಿಯನ್ನು ರಿಜೆಕ್ಟ್ ಮಾಡುತ್ತಾರೆ.
ಕೊನೆಗೆ ಮಾರ್ಗದರ್ಶಕ "ನೋಡು ಮಗು, ನಾನು ಮತ್ತೊಮ್ಮೆ ನಿನ್ನ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೂ ತಿಳಿಯದಂತೆ ನಿನ್ನನ್ನು ಎರಡು ಗಂಟೆಗಳ ಅವಧಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ನಿಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚು ಸಾಧ್ಯವಿಲ್ಲ. ನಿನಗೆ ಒಪ್ಪಿಗೆಯೇ ಎಂದು ಕೇಳುತ್ತಾನೆ. ಯುವಕ ಒಪ್ಪಿಕೊಳ್ಳುತ್ತಾನೆ.
***
ದೃಶ್ಯ ಹತ್ತು
ತಂದೆ ತಲೆಗೆ ಪೆಟ್ಟಾದ ಕಾರಣ ನೆನಪಿನ ಶಕ್ತಿ ಕಳೆದುಕೊಂಡು ಶೂನ್ಯದತ್ತ ದೃಷ್ಟಿಯನ್ನು ನೋಡುತ್ತಿರುತ್ತಾನೆ. ತಾಯಿ ಅವರ ಆರೈಕೆಯಲ್ಲಿ ಇದ್ದಾರೆ. ತಂದೆಗೆ ಮಗನನ್ನು ಗುರುತಿಸುವ ಶಕ್ತಿಯು ಇರುವುದಿಲ್ಲ. ತಂದೆಯ ಈ ಪರಿಸ್ಥಿತಿಯನ್ನು ನೋಡಿ ಯುವಕ ಕುಸಿದು ಬೀಳುತ್ತಾನೆ. ತಾಯಿಯನ್ನು ತಬ್ಬಿಕೊಂಡು ದುಃಖಿಸುತ್ತಾನೆ. ಕಾಲು ಹಿಡಿಯುತ್ತಾನೆ. ತನ್ನನ್ನು ಕ್ಷಮಿಸಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ.
ವಿಡಿಯೋ ಗೇಮ್ ಎಂಬ ಚಟ ಹೇಗೆ ನಮ್ಮ ಇಡೀ ಕುಟುಂಬವನ್ನು ಹೇಗೆ ಸರ್ವನಾಶ ಮಾಡಿತು ಎಂದು ಮನಮುಟ್ಟುವಂತೆ ವಿವರಿಸುತ್ತಾನೆ. ಇಷ್ಟು ಸಂಭಾಷಣೆ ಮುಗಿಯುವ ಹೊತ್ತಿಗೆ ಸಮಯ ಮೀರಿರುತ್ತದೆ. ಆಗ ಮಾರ್ಗದರ್ಶಕ ಆತನನ್ನು ಹೊರಡಲು ಹೇಳುತ್ತಾನೆ. ಹುಡುಗನಿಗೆ ತುಂಬಾ ಬೇಸರವಾಗಿ "ಇಲ್ಲಾ, ಇನ್ನು ಸ್ವಲ್ಪ ಸಮಯ ಇರಬೇಕು" ಎನ್ನುತ್ತಾನೆ.
"ಇಲ್ಲ ಅದು ಸಾಧ್ಯವಿಲ್ಲ ನೀನೀಗ ಅಪರಾಧಿ. ಇನ್ನು ಜೈಲೇ ನಿನಗೆ ಗತಿ ಎಂದು ಹೇಳುತ್ತಾನೆ. ಹುಡುಗ ಮತ್ತೆ ಕುಸಿಯುತ್ತಾನೆ. ಮತ್ತೆ ಎಲ್ಲರಿಗೂ " ವಿಡಿಯೋ ಗೇಮ್ ಹೇಗೆ ಇಡೀ ಬದುಕನ್ನು ನಾಶ ಮಾಡುತ್ತದೆ. ಅದೇ ಶಕ್ತಿ ಸಮಯವನ್ನು ಕ್ರೀಡಾಂಗಣದ ಯಾವುದಾದರೂ ಕ್ರೀಡೆಯಲ್ಲಿ ಸಾಧಿಸಲು ಸಾಧ್ಯವಾದರೆ ನಮ್ಮ ಜೀವನ, ಆ ಮುಖಾಂತರ ಸಮಾಜ, ದೇಶ ಖಂಡಿತವಾಗಲೂ ಅಭಿವೃದ್ಧಿಯಾಗುತ್ತದೆ " ಎಂದು ಹೇಳಿ ಹೊರಡಲು ಶುರು ಮಾಡುತ್ತಾನೆ.
ಆಗ ಮತ್ತೆ ಕೌನ್ಸಿಲರ್ "ಇಲ್ಲ ನಿನ್ನ ಮೇಲೆ ಯಾವುದೇ ಕಂಪ್ಲೇಂಟ್ ಆಗಿಲ್ಲ. ನಿನ್ನ ತಾಯಿ ನಿನ್ನನ್ನು ಕ್ಷಮಿಸಿದ್ದಾರೆ. ನಿನ್ನನ್ನು ಪರಿವರ್ತನೆ ಮಾಡಲು ಅವರು ನನ್ನ ಬಳಿ ಕರೆದುಕೊಂಡು ಬಂದರು. ನನ್ನ ಈ ಪ್ರಯತ್ನ ಯಶಸ್ವಿಯಾಗಿದೆ, ಸಾರ್ಥಕವಾಗಿದೆ. ನೀನಿನ್ನು ನಿನ್ನ ತಂದೆಯನ್ನು ಚೆನ್ನಾಗಿ ನೋಡಿಕೊಂಡು, ತಾಯಿಯನ್ನೂ ನೋಡಿಕೊಂಡು ಸುಂದರ ಪ್ರಾಮಾಣಿಕ ಬದುಕು ಕಟ್ಟಿಕೋ" ಎಂದು ಹೇಳುತ್ತಾನೆ. ನಿಧಾನವಾಗಿ ದೃಶ್ಯ ಮುಕ್ತಾಯವಾಗುತ್ತದೆ..
ಮಕ್ಕಳಲ್ಲಿ ವಿಡಿಯೋ ಗೇಮ್ ಚಟ ಬಿಡಿಸಲು ಈ ಕಥೆಯನ್ನು ಉಪಯೋಗಿಸಿಕೊಳ್ಳಬಹುದು.
ರಚನೆ: ವಿವೇಕಾನಂದ. ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ