ಆಶಾವಾದಿ ಸಂಕೇತಗಳು

ಆಶಾವಾದಿ ಸಂಕೇತಗಳು

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಾಲಿನ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿರುವಂತೆಯೆ, ವಿತ್ತ ಸಮೀಕ್ಷೆಯು ದೇಶದ ಆರ್ಥಿಕ ಭವಿಷ್ಯದ ಕುರಿತಂತೆ ಆಶಾವಾದದ ಸಂಕೇತಗಳನ್ನು ನೀಡಿರುವುದು ಉಲ್ಲೇಖನೀಯವಾಗಿದೆ. ಜಾಗತಿಕ ಅನಿಶ್ಚಿತತೆ ಮತ್ತು ಹಿನ್ನಡೆಗಳ ಹೊರತಾಗಿಯೂ ಪ್ರಸಕ್ತ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ. ೬.೪ರಷ್ಟಿದೆ ಎಂದು ಸಮೀಕ್ಷೆಯು ನುಡಿದಿದ್ದು, ೨೦೨೫-೨೬ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇ. ೬.೩ರಿಂದ ಶೇ.೬.೮ರ ಅಭಿವೃದ್ಧಿ ಕಾಣಲಿದೆ ಎಂದು ಅಭಿಪ್ರಾಯ ಪಟ್ಟಿದೆ. ಸೇವಾ ಕ್ಷೇತ್ರದಲ್ಲಿನ ಪ್ರಗತಿ, ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆಗಳ ಹೆಚ್ಚಳ ಹಾಗೂ ಆರ್ಥಿಕ ಮೂಲಸೌಲಭ್ಯಗಳ ಸ್ಥಿರತೆಯ ಕಾರಣದಿಂದಾಗಿ ಇದು ಸಾಧ್ಯವಾಗಲಿದೆ ಎಂಬುದಾಗಿ ಹೇಳಲಾಗಿದೆ. ಉತ್ತಮ ಮಳೆ ಅತ್ತು ಖಾರಿಫ್ ಫಸಲಿನಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆಗಳಲ್ಲಿ ಹೆಚ್ಚಳವಾಗಿರುವುದು ಚೇತೋಹಾರಿ ಬೆಳವಣಿಗೆಯಾಗಿದೆ. ಸೇವಾ ಕ್ಷೇತ್ರವು ಶೇ. ೭.೧ ರ ಪ್ರಗತಿ ದಾಖಲಿಸಿರುವುದು ಕೂಡಾ ಅನುಕೂಲಕರವಾಗಿ ಪರಿಣಮಿಸಿದೆ.

ಇದೇ ವೇಳೆ, ವಿಶ್ವ ಬ್ಯಾಂಕಿನ ಜಾಗತಿಕ ಆರ್ಥಿಕ ಸಮೀಕ್ಷೆ ಕೂಡಾ ಭಾರತದ ಕುರಿತಂತೆ ಶ್ಲಾಘನೆಯ ಮಾತುಗಳನ್ನಾಡಿರುವುದು ಗಮನಾರ್ಹವಾಗಿದೆ. ಈ ಸಮೀಕ್ಷೆಯು, ಇತರ ಹಲವಾರು ದೇಶಗಳು ಆರ್ಥಿಕ ಹಿನ್ನಡೆ ಅನುಭವಿಸಿದ್ದರೂ ಭಾರತ ಮಾತ್ರ ತನ್ನ ಅಭಿವೃದ್ಧಿ ದರವನ್ನು ಕಾಪಾಡಿಕೊಂಡು ಬಂದಿರುವುದನ್ನು ಹೊಗಳಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತವು ಶೇ. ೬.೭ರ ಪ್ರಗತಿ ದರ ಕಾಪಾಡಿಕೊಂಡು ಬರುವ ಮೂಲಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಮೂಡಿಬರಲಿದೆ ಎಂಬುದಾಗಿಯೂ ವಿಶ್ವ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ. ಇದು ಜಾಗತಿಕ ಆರ್ಥಿಕ ಭೂಪಟದಲ್ಲಿ ಭಾರತವು ಪ್ರಮುಖ ಆಟಗಾರನ ಪಾತ್ರ ವಹಿಸಲಿದೆ ಎಂಬುದನ್ನು ಸಂಕೇತಿಸಿದೆ. ಸೇವಾ ಕ್ಷೇತ್ರವು ಭಾರತದ ಆರ್ಥಿಕತೆಯ ಅತಿ ಮುಖ್ಯ ಕ್ಷೇತ್ರವಾಗಿದ್ದು, ಜಿಡಿಪಿ ಪ್ರಗತಿಗೆ ಮತ್ತು ಉದ್ಯೋಗಾವಕಾಶಗಳಿಗೆ ಅತಿ ಮುಖ್ಯ ಕೊಡುಗೆ ನೀಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಇನ್ನಿತರ ಪ್ರಮುಖ ದೇಶಗಳ ಆರ್ಥಿಕತೆಯು ಹಿನ್ನಡೆ ಕಾಣುತ್ತಿರುವುದು ಗಮನಿಸಬಹುದಾಗಿದೆ. ಚೀನಾದ ವಿತ್ತ ಪ್ರಗತಿಯು ಮುಂದಿನ ವರ್ಷ ಶೇ. ೪ಕ್ಕೆ ಕುಸಿಯಲಿದೆ ಎಂದು ಹೇಳಲಾಗಿದೆ. ಜಪಾನಿನ ಆರ್ಥಿಕಸ್ಥಿತಿಯೂ ಹಿನ್ನಡೆ ಕಾಣುತ್ತಿದೆ.

ಆದರೆ ಇದೇ ವೇಳೆ, ಹಲವಾರು ಅಂತಾರಾಷ್ಟ್ರೀಯ ಹಾಗೂ ಇನ್ನಿತರ ಸವಾಲುಗಳು ದೇಶದ ಮುಂದಿರುವುದನ್ನು ಸಮೀಕ್ಷೆಯು ಕಡೆಗಣಿಸಿಲ್ಲ. ಅಂತಾರಾಷ್ಟ್ರೀಯ ವ್ಯಾಪಾರ ತೊಡಕುಗಳು, ವಿವಿದೆಡೆಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಗಳು, ದೇಶದ ಪ್ರಗತಿಗೆ ಕೆಲವು ಅಡ್ಡಿಗಳನ್ನು ಒಡ್ಡುವ ಸಾಧ್ಯತೆಗಳಿವೆ ಎಂಬುದನ್ನು ಮುಂಗಾಣಲಾಗಿದೆ. ಸದ್ಯಕ್ಕಂತೂ ದೇಶದ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಕೇಂದ್ರದ ಬಜೆಟ್ ಸ್ಥಿತಿಯನ್ನು ಇನ್ನಷ್ಟು ಉತ್ತೇಜಿಸುವ ಉಪಕ್ರಮ ಕೈಗೊಳ್ಳುವುದೆಂದು ಆಶಿಸಲಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೧-೦೨-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ